ಶಿವಮೊಗ್ಗ: ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ವಿಮಾಣ ನಿಲ್ದಾಣಕ್ಕೆ ಭೂಮಿಯನ್ನು ನೀಡಿದ ಸಂತ್ರಸ್ತರು ತಮಗೆ ಶೀಘ್ರದಲ್ಲಿ ನಿವೇಶನ ನೀಡಬೇಕೆಮದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.
ವಿಮಾನ ನಿಲ್ದಾಣಕ್ಕಾಗಿ ರೈತರು ತಮ್ಮ ಜಮೀನುಗಳನ್ನು ನೀಡಿದ್ದರು. 2007ರ ಸಂದರ್ಭದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಬಿ ಎಸ್ ಯಡಿಯೂರಪ್ಪ ಅವರು ಭೂಮಿ ನೀಡಿದವರಿಗೆ ನಿವೇಶನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ, ಇದುವರೆಗೂ ನಿವೇಶನ ನೀಡಿಲ್ಲ ಎಂದು ಮುಖ್ಯಮಂತ್ರಿ ಬಳಿ ರೈತರು ತಮ್ಮ ನೋವನ್ನು ತೋಡಿಕೊಂಡರು.
ಇದನ್ನು ಓದಿ: ಶುಲ್ಕ ಪಾವತಿಸಿಲ್ಲವೆಂದು ತರಗತಿ ನಡೆಸದಿದ್ದರೆ ಕಾನೂನು ಕ್ರಮ: ಸುರೇಶ್ ಕುಮಾರ್
2020ರ ಆಗಸ್ಟ್ 24ರಂದು ಸಂತ್ರಸ್ತರೊಂದಿಗೆ ಸಭೆ ನಡೆಸಿದ್ದ ಜಿಲ್ಲಾಧಿಕಾರಿಗಳು ಎರಡು ತಿಂಗಳ ಒಳಗಾಗಿ ನಿವೇಶನದೊಂದಿಗೆ ಹಕ್ಕುಪತ್ರವನ್ನು ನೀಡಲಾಗುವುದಾಗಿ ಎಂದು ಹೇಳಿದ್ದರು. ಆದರೆ ಒಂಭತ್ತು ತಿಂಗಳು ಕಳೆದರೂ ಭರವಸೆ ಈಡೇರಲಿಲ್ಲ ಎಂದು ಮನವಿ ಮಾಡಿಕೊಂಡಿದ್ದಾರೆ.
ಸಂತ್ರಸ್ತರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನವರು ʻʻಅನ್ಯಾಯವನ್ನು ಸರಿಪಡಿಸಲಾಗುವುದು. ಯಾವುದೇ ಕಾರಣಕ್ಕೂ ನಿರಾಶರಾಗದಿರಿ. ನಿಮಗೆ ನಿವೇಶನ ನೀಡುವುದು ನನ್ನ ಜವಾಬ್ದಾರಿʼʼ ಎಂದು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನು ಓದಿ: ಸರಕಾರದ ಹೊಸ ಮಾರ್ಗಸೂಚಿಯಂತೆ ರಾತ್ರಿ ಮತ್ತು ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ
ಇದೇ ಸಂದರ್ಭದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯ ಬಗ್ಗೆ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ʻʻಬೆಂಗಳೂರು ವಿಮಾನ ನಿಲ್ದಾಣದ ಬಳಿಕ ಶಿವಮೊಗ್ಗದಲ್ಲಿಯೇ ಅಂತಹ ಸುಸಜ್ಜಿತವಾದ ವಿಮಾನ ನಿಲ್ದಾಣವಾಗಲಿದೆ. ಹಣಕಾಸು ಕೊರತೆ ಇದ್ದು ಅನುದಾನ ಬಿಡುಗಡೆಗೊಳಿಸ ಶೀಘ್ರದಲ್ಲಿ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುವುದು. ರನ್ ವೇ ಕಾಮಗಾರಿ, ಸಂಪರ್ಕ ರಸ್ತೆ, ಪೆರಿಮೀಟರ್ ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿವೆ” ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜೂನ್ ಒಳಗಾಗಿ ವಿಮಾನ ನಿಲ್ದಾಣಸ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಿದರು.
ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜು, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಅಶೋಕ ನಾಯ್ಕ್, ಅರಗ ಜ್ನಾನೇಂದ್ರ, ರುದ್ರೇಗೌಡ, ಆರ್ಯವೈಶ್ಯ ನಿಗಮ ಅಧ್ಯಕ್ಷ ಡಿ.ಎಸ್.ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೆಲ್ವಕುಮಾರ್, ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.