ಗುಂಡ್ಲುಪೇಟೆ: ಕೋವಿಡ್ ಪ್ರಕರಣಗಳು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಈ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಲಸಿಕೆಯೊಂದೇ ಪರಿಹಾರವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಜಾಗೃತಿ ಮೂಡಿಸಿ, ಎಲ್ಲರೂ ಲಸಿಕೆ ಹಾಕಿಕೊಳ್ಳಬೇಕೆಂದು ತಿಳಿಸಲಾಗುತ್ತಿದ್ದರು. ತಾಲ್ಲೂಕಿನ ಕೆಲವು ಗ್ರಾಮದ ಜನರು ʻಲಸಿಕೆ ಹಾಕಿಸಿಕೊಳ್ಳುವಂತೆ ಬಲವಂತ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆʼ ಎಂದು ಗುಂಡ್ಲುಪೇಟೆ ತಾಲೂಕಿನ ಶಿವಪುರದ ಗ್ರಾಮಸ್ಥರು ಆಶಾ ಕಾರ್ಯಕರ್ತೆಯರಿಗೆ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.
ಗುಂಡ್ಲುಪೇಟೆಯ ಶಿವಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಚಿವ ಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತಾನು ಅನುಭವಿಸುತ್ತಿರುವ ಸಂಕಷ್ಟಗಳನ್ನು ಆಶಾ ಕಾರ್ಯಕರ್ತೆಯೊಬ್ಬರು ಹೇಳಿಕೊಂಡರು.
ಇದನ್ನು ಓದಿ: ಸಿನಿಮಾ ಆಗುತ್ತಿದೆ ರೋಹಿಣಿ ಸಿಂಧೂರಿ ಬಯೋಪಿಕ್
ಲಸಿಕೆ ಹಾಕಿಸಿಕೊಳ್ಳಿ ಎಂದು ಬಲವಂತ ಮಾಡಿದರೆ ನಿಮಗೇನೋ ಇದರಲ್ಲಿ ಪ್ರಾಫಿಟ್ ಇರಬೇಕು ಅದಕ್ಕೆ ಬಲವಂತ ಮಾಡ್ತೀರಿ ಎಂದು ಕೆಲವರು ಹೇಳುತ್ತಾರೆ. ಇನ್ನೂ ಕೆಲವರು ಹೆಚ್ಚು ಒತ್ತಡ ಹೇರಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕುತ್ತಾರೆ. ಮತ್ತಿತ್ತರರು ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾದರೆ ಜವಾಬ್ದಾರಿ ಹೊರುತ್ತೇವೆ ಎಂದು ಬಾಂಡ್ ಪೇಪರ್ನಲ್ಲಿ ಬರೆದುಕೊಡಿ ಎನ್ನುತ್ತಾರೆಂದು ಅಳಲು ತೋಡಿಕೊಂಡರು.
ಗುಂಡ್ಲುಪೇಟೆ ತಾಲೂಕಿನ ಬರಗಿ ಕಾಲೋನಿಯಲ್ಲಿ ನಡೆದ ಘಟನೆ ಬಗ್ಗೆ ವಿವರ ನೀಡಿದ ಆಶಾ ಕಾರ್ಯಕರ್ತೆಯು ಲಸಿಕೆ ಪಡೆಯುವಂತೆ ಮನೆ ಬಾಗಿಲಿಗೆ ತೆರಳಲಾಗಿತ್ತು. ಈ ವೇಳೆ ಕೆಲವು ಅಸಭ್ಯವಾಗಿ ವರ್ತಿಸಿದ್ದರು. ಲಸಿಕೆ ಪಡೆಯುವಂತೆ ತಿಳಿಸಿದಾಗ ವಿಕಲ ಚೇತನರಾಗಿದ್ದ ಮುನಿಯಪ್ಪ ಎಂಬುವವರು ಕುಡಗೋಲು ಹಿಡಿದು ಹೊರಗೆ ಬಂದಿದ್ದರು. ಬಳಿಕ ಅವರ ಅಜ್ಜಿ ಮಧ್ಯ ಪ್ರವೇಶಿಸಿ ಕುಡಗೋಲನ್ನು ಕೈಯಿಂದ ಕಸಿದುಕೊಂಡಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಸರಕಾರ ವಿಫಲವಾಗಿದೆ-ನಾಯಕತ್ವ ಬದಲಾವಣೆಯಿಂದ ಏನು ಸಾಧ್ಯ: ಸಿದ್ದರಾಮಯ್ಯ
ಮತ್ತೋರ್ವ ಆಶಾ ಕಾರ್ಯಕರ್ತೆ ಮಾತನಾಡಿ, ಲಸಿಕೆ ಅಭಿಯಾನದಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಬಂದರೆ ಜನರ ಮನವೊಲಿಸಬಹುದು. ಮುಖ್ಯವಾಗಿ ಗ್ರಾಪಂ ಸದಸ್ಯರು ಲಸಿಕೆ ಹಾಕಿಸಿಕೊಳ್ಳಬೇಕೆಂದು ತಿಳಿಸಿದರು.
ಸಚಿವ ಸುರೇಶ್ ಕುಮಾರ್ ಅವರು ಗುಂಡ್ಲುಪೇಟೆ ತಾಲೂಕಿನ ಬಾಚಹಳ್ಳಿ, ಹುಂಡೀಪುರ, ಶಿವಪುರ, ಅಣ್ಣೂರು ಗ್ರಾಮಗಳಲ್ಲಿ ಕೋವಿಡ್ ನಿಯಂತ್ರಣ ಕುರಿತು ಸಮಿತಿ ಸಭೆಗಳನ್ನು ನಡೆಸಿದರು. ಸಾವಿನ ಪ್ರಮಾಣ ತಡೆಗೆ ಲಸಿಕೆ ಅಸ್ತ್ರವಾಗಿದ್ದು, ಲಸಿಕೆ ಬೇಡವೆಂದು ತಿರಸ್ಕರಿಸಿದರೂ ಸಹ ಅವರ ಮನವೊಲಿಸಿ ಲಸಿಕೆ ಹಾಕಿಸುವ ಕೆಲಸಕ್ಕೆ ಗ್ರಾಪಂ ಸದಸ್ಯರು, ಪಿಡಿಒಗಳು, ಸ್ಥಳೀಯ ಮುಖಂಡರು ಮುಂದಾಗಬೇಕು ಎಂದರು.