ಅಭ್ಯರ್ಥಿಗಳ ಅರ್ಹತೆಗಾಗಿ ಪರೀಕ್ಷೆ ನಡೆಸಿದ ಗ್ರಾಮಸ್ಥರು!

ಭುವನೇಶ್ವರ: ಚುನಾವಣೆಗೆ ನಿಲ್ಲಬೇಕಾದರೆ ಅಭ್ಯರ್ಥಿಗಳು ಅರ್ಹತೆ ಹೊಂದಿರಬೇಕು ಎಂಬ ಕಾರಣದಿಂದ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿದ ಘಟನೆ ಒಡಿಶಾ ರಾಜ್ಯದ ಮಲುಪದಾ ಗ್ರಾಮದಲ್ಲಿ ನಡೆದಿದೆ.

ಒಡಿಶಾದ ಗ್ರಾಮ ಪಂಚಾಯಿತಿ ಚುನಾವಣೆಯ ಎರಡನೇ ಹಂತ ಫೆ. 18ರಂದು ನಡೆಯಲಿದೆ. ಎರಡನೇ ಹಂತದ ಮತದಾನದಲ್ಲಿ ರೂರ್ಕೆಲಾ ಜಿಲ್ಲೆಯ ಕುತ್ರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲುಪದಾ ಗ್ರಾಮದಲ್ಲೂ ಮತದಾನ ನಡೆಯಲಿದೆ.

ಮತದಾನಕ್ಕೂ ಮೊದಲು ಗ್ರಾಮವೊಂದರಲ್ಲಿ ಚುನಾವಣಾ ಅಭ್ಯರ್ಥಿಗಳ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಪರೀಕ್ಷೆಗೆ ಒಳಪಟ್ಟಿದ್ದಾರೆ. ಆದರೆ ಅದು ಮತ ಪರೀಕ್ಷೆಯಲ್ಲ ಬದಲಾಗಿ ಗ್ರಾಮಸ್ಥರೇ ರೂಪಿಸಿರುವ ಲಿಖಿತ ಮತ್ತು ಮೌಖಿಕ ಪರೀಕ್ಷೆ! ಅಂದ್ರೆ, ಬರವಣಿಗೆ ಹಾಗೂ ಓರಲ್‌ ಪರೀಕ್ಷೆ ನಡೆಸಿದ್ದಾರೆ!

ಹೇಗೆ ನಡೀತು ಪರೀಕ್ಷೆ? : ತಮ್ಮ ಗ್ರಾಮ ಪಂಚಾಯಿತಿ ಸದಸ್ಯರಾಗಲು ಅಭ್ಯರ್ಥಿಗಳಾಗಿರುವ 9 ಮಂದಿಯನ್ನು ಗುರುವಾರ ಅದೇ ಊರಿನ ಶಾಲೆಗೆ ಕರೆಸಿದ್ದಾರೆ. ಅಲ್ಲಿ ಅವರಿಗೆ “ನೀವು ಏಕಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಬೇಕು?’, “ಸದಸ್ಯರಾದ ಮೇಲೆ ಏನು ಮಾಡುತ್ತೀರಿ’ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿದೆ ಹಾಗೂ ಅದೇ ರೀತಿಯ ಪ್ರಶ್ನೆ ಪತ್ರಿಕೆಯನ್ನೂ ಕೊಡಲಾಗಿದೆ. ಒಟ್ಟು ಕೇಳಲಾದ ಏಳು ಪ್ರಶ್ನೆಗಳು ಕೆಳಗಿನಂತಿವೆ.

  1. ನೀವು ಏಕೆ ನಿಲ್ಲುತ್ತೀರಿ ಎಂಬ ಐದು ಅಂಶಗಳನ್ನು ಬರೆಯಿರಿ?
  2. ನೀವು ಆಯ್ಕೆಯಾದರೆ ಮುಂಬರುವ ಐದು ವರ್ಷಗಳಲ್ಲಿ ನಿಮ್ಮ ಗುರಿ ಏನು?
  3. ನೀವು ಸಾಮಾಜಿಕ ಕಾರ್ಯಗಳನ್ನು ಮಾಡಲು ಸಿದ್ದರಿದ್ದರೆ,ಸಾಮಾಜಿಕ ಕಾರ್ಯಗಳನ್ನು ಮಾಡಿದ ನಿಮ್ಮ ಹಿಂದಿನ 5 ನಿದರ್ಶನಗಳನ್ನು ಉಲ್ಲೇಖಿಸಿ.
  4. ನೀವು ಚುನಾಯಿತರಾಗಿದ್ದರೆ, ವಿವಿಧ ಸಮಸ್ಯೆಗಳನ್ನು ಪರಿಹರಿಸಲು ನೀವು ಅದೇ ರೀತಿ ಮಾಡುತ್ತೀರಾ?
  5. ನಿಮ್ಮ ಕನಸಿನ ಗ್ರಾಮ ಪಂಚಾಯಿತಿ ಹೇಗಿದೆ? ನಿಮ್ಮ ಪಂಚಾಯಿತಿಯಲ್ಲಿ ಎಷ್ಟು ಗ್ರಾಮಗಳಿವೆ, ಎಷ್ಟು ವಾರ್ಡ್‌ಗಳಿವೆ ಮತ್ತು ಜನಸಂಖ್ಯೆ ಎಷ್ಟು?
  6. ನಿರ್ಗಮಿತ ಗ್ರಾಪಂ ಸದಸ್ಯರ ಬಗ್ಗೆ ಕೆಲವು ಮಾತುಗಳು.
  7. “ನೀವು ಏಕಾಗಿ ಗ್ರಾಮ ಪಂಚಾಯಿತಿ ಸದಸ್ಯರಾಗಬೇಕು?’, “ಸದಸ್ಯರಾದ ಮೇಲೆ ಏನು ಮಾಡುತ್ತೀರಿ’

ಈ ರೀತಿಯಾಗಿ ಒಟ್ಟು 7 ಪ್ರಶ್ನೆಗಳನ್ನು ಕೇಳಲಾಗಿತ್ತು. 9 ಅಭ್ಯರ್ಥಿಗಳ ಪೈಕಿ ಎಂಟು ಜನ ಪರೀಕ್ಷೆ ಬರೆದಿದ್ದಾರೆ. ಅಭ್ಯರ್ಥಿಗಳು ಮೌಖಿಕ ಮತ್ತು ಲಿಖಿತ ಪರೀಕ್ಷೆಗೆ ಉತ್ತರಿಸಿದ್ದು, ಅದರ ಫ‌ಲಿತಾಂಶ ಫೆ. 17ರಂದು ಹೊರಬೀಳಲಿದೆಯಂತೆ. ಚುನಾವಣಾ ಸಮಯದಲ್ಲಿ ಮಾತ್ರ ಅಭ್ಯರ್ಥಿಗಳು ಮತ ಕೇಳಲು ಬರುತ್ತಾರೆ ಮತ್ತು ನಂತರ ಅವರನ್ನು ಮರೆತುಬಿಡುತ್ತಾರೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಗ್ರಾಮಸ್ಥರು ವಿವರಿಸಿದ್ದಾರೆ.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲುವ ಅಭ್ಯರ್ಥಿಗಳಿಗೆ ಒಂದಿಷ್ಟು ಮಾನದಂಡ ಇರಬೇಕು ಎಂಬ ವಾದ ಇಂದು ನೆನ್ನೆಯದಲ್ಲ. ಪ್ರಜ್ಞಾವಂತರು, ಸಮಾಜ ಸೇವೆಯ ನೈಜ ಮನಸ್ಸಿರುವವರು, ಸಭ್ಯರು ಚುನಾವಣೆಗೆ ನಿಲ್ಲಬೇಕು ಎಂಬುದು ಇದರ ಹಿಂದಿನ ಕಾಳಜಿ. ವರ್ಷಗಳಿಂದ ಪರಿಕಲ್ಪನೆಯಾಗಿಯೇ ಉಳಿದಿರುವ ಇದನ್ನು ದೂರದ ಒಡಿಶಾದಲ್ಲಿರುವ ಗ್ರಾಮವೊಂದರ ನಿವಾಸಿಗಳು ಜಾರಿಗೊಳಿಸಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘನೆಗೆ ಕಾರಣವಾಗಿದೆ.

Donate Janashakthi Media

Leave a Reply

Your email address will not be published. Required fields are marked *