ವಿಜಯನಗರ: ರಾಜ್ಯಾದ್ಯಂತ ಎಡೆಬಿಡದ ಮಳೆಯಿಂದಾಗಿ ಜನರು ಹೈರಾಣಾಗಿದ್ದಾರೆ. ಹಲವೆಡೆ ಭಾರಿ ಮಳೆಯ ಆರ್ಭಟದಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ. ಕರೆ, ಹಳ್ಳ ಕಾಲುವೆಗಳು ತುಂಬಿ ಹರಿಯುತ್ತಿವೆ. ಹಲವೆಡೆ ರಸ್ತೆಗಳು ಕೂಡಾ ಜಲಾವೃತವಾಗಿದೆ. ಈ ನಡುವೆ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಮನಕಲಕುವ ದೃಶ್ಯ ಕಂಡುಬಂದಿದೆ. ಶವ
ಕೊಟ್ಟೂರಿನ ರಾಂಪುರ ಗ್ರಾಮದಲ್ಲಿ ಮೃತಪಟ್ಟ ಮಹಿಳೆಯ ಶವವನ್ನು ಗ್ರಾಮಸ್ಥರು ಆಗಸ್ಟ್ 16ರಂದು ಜಲಾವೃತವಾದ ರಸ್ತೆಯಲ್ಲಿ ಹರಸಾಹಸ ಪಟ್ಟು ಸಾಗಿಸಿದ್ದಾರೆ. ಮಹಿಳೆಯ ಶವವನ್ನು ಸ್ಮಶಾನಕ್ಕೆ ಮೆರವಣಿಗೆ ಮೂಲಕ ಕೊಂಡು ಹೋಗುವಾಗ ಕುಟುಂಬಸ್ಥರು ದೊಡ್ಡ ಪ್ರಯಾಸವನ್ನೇ ಪಟ್ಟಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಗ್ರಾಮದಲ್ಲಿ ಪ್ರತಿ ಬಾರಿ ಮಳೆ ಬಂದಾಗಲೂ ಇಲ್ಲಿನ ಜನರು ಇದೇ ಸಮಸ್ಯೆಯನ್ನು ಅನುಭವಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ಇಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಮೇಲ್ಸೇತುವೆ ನಿರ್ಮಾಣ ಮಾಡಿದರೆ ಮಾತ್ರ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಇಲ್ಲಿನ ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಮತ್ತು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರ ಮೇಘಸ್ಫೋಟ: ಮೃತಪಟ್ಟವರ ಸಂಖ್ಯೆ 60ಕ್ಕೆ ಏರಿಕೆ
ಇನ್ನು ಕರ್ನಾಟಕದಲ್ಲಿ ಮತ್ತೆ ಮಳೆ ಚುರುಕುಗೊಂಡಿದ್ದು, ಅಲ್ಲಲ್ಲಿ ಮಳೆಯಾಗುತ್ತಿದೆ. ಈ ಮಧ್ಯೆ ಮುಂದಿನ 4-5ದಿನ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ರೂಪುಗೊಂಡಿದ್ದು, ಅದರ ಪರಿಣಾಮ ಕರ್ನಾಟಕ ಸೇರಿ ಹಲವು ರಾಜ್ಯಗಳ ಮೇಲಾಗಲಿದ್ದು ಆಗಸ್ಟ್ 19ರಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಜಿಲ್ಲೆಗಳು ಮಾತ್ರವಲ್ಲದೆ ದಕ್ಷಿಣ ಒಳನಾಡಿನ ಕೆಲವೆಡೆ ಕೂಡ ಹೆಚ್ಚು ಮಳೆಯಾಗಲಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ದಾವಣಗೆರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ವಿಜಯನಗರ, ಯಾದಗಿರಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನು, ತುಮಕೂರು, ರಾಮನಗರ, ಮಂಡ್ಯ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಜಿಲ್ಲೆಗಳಲ್ಲೂ ಮಳೆಯಾಗಲಿದೆ. ವಿಜಯನಗರ, ಮೈಸೂರು, ಕೋಲಾರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ರಾಯಚೂರು, ಕೊಪ್ಪಳ, ಗದಗದಲ್ಲಿ ಕೂಡ ಉತ್ತಮ ಮಳೆಯಾಗಲಿದೆ.
ಭಾರೀ ಮಳೆಯಿಂದಾಗಿ ಶಿರಾಡಿಘಾಟ್ ನಲ್ಲಿ ಭೂ ಕುಸಿತ ಉಂಟಾಗಿದೆ. ಸಕಲೇಶಪುರ ತಾಲೂಕಿನ, ಮಾರನಹಳ್ಳಿ ಬಳಿ ಹಲವೆಡೆ ಭೂಕುಸಿತ ಆಗಿದ್ದು, ಹೆಚ್ಚು ಮಣ್ಣು ರಸ್ತೆಗೆ ಕುಸಿಯುತ್ತಿದೆ. ವೀಕೆಂಡ್ ಹಿನ್ನೆಲೆಯಲ್ಲಿ ವಾಹನಗಳ ಸಂಚಾರ ಹೆಚ್ಚಿದ್ದು, ಶಿರಾಡಿ ಘಾಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್‌ನಲ್ಲಿ ಜನರು ಸಿಲುಕಿದ್ದಾರೆ. ಸದ್ಯ ಶಿರಾಡಿ ಘಾಟ್ ರಸ್ತೆ ಸಂಚಾರ ಬಂದ್ ಆಗಿದ್ದು, ನೂರಾರು ವಾಹನಗಳು ರಸ್ತೆ ಮಧ್ಯೆ ನಿಂತಿದೆ. ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಟ್ರಾಫಿಕ್ ಜಾಮ್ ತೆರವುಗೊಳಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.
ಇದನ್ನೂ ನೋಡಿ: ʼಒಳಮೀಸಲಾತಿಯ ಕಿಚ್ಚು ನಿಮ್ಮ ಪಕ್ಷವನ್ನು ಸುಟ್ಟು ಹಾಕುತ್ತದೆʼ, ದಲಿತ ನಾಯಕರಿಂದ ಸರಕಾರಕ್ಕೆ ಎಚ್ಚರಿಕೆJanashakthi
