ವಿಕೃತ ಮನಸಿನ ಕುತ್ಸಿತ ಕನಸುಗಳು…!

ಟಿ. ಗುರುರಾಜ್, ಪತ್ರಕರ್ತರು

ಭಂಡತನ ಮತ್ತು ಲಜ್ಜೆಗೇಡಿತನಗಳನ್ನು ಭಿಡೆಯಿಲ್ಲದೆ ಪ್ರದರ್ಶಿಸಬಹುದು ಎಂಬುದಕ್ಕೆ ‘ ಟಿಪ್ಪು ನಿಜಕನಸುಗಳು’ ಎಂಬ ನಾಟಕವೇ ಜ್ವಲಂತ ಸಾಕ್ಷಿ.

ಚರಿತ್ರೆಗೆ ಚ್ಯುತಿ ತಂದಿರುವ ಅಪ್ಪಟ ಹಸಿ-ಹಸಿ ಸುಳ್ಳುಗಳ ‘ಟಿಪ್ಪುವಿನ ನಿಜ ಕನಸುಗಳು’ ಎಂಬ ಈ ನಾಟಕದಲ್ಲಿ ನಾಟಕೀಯ ಅಂಶಗಳು ಹುಡುಕಿದರೂ ಕಾಣಸಿಗುವುದಿಲ್ಲ. ಸಾಹಿತ್ಯಿಕವಾಗಿ ಗುರುತಿಸಬಹುದಾದ  ಒಂದೇ ಒಂದು ಸಾಲೂ ಇಲ್ಲಿ ಗೋಚರಿಸುವುದಿಲ್ಲ.

ಯಾವುದೋ ಹಠಕ್ಕೆ ಕಟ್ಟು ಬಿದ್ದಂತೆ, ಜಿದ್ದು ಸಾಧಿಸಲು ಅಕ್ಷರಗಳ ನೆರವು ಪಡೆದಂತೆ ಕಾಣುವ ಕೃತಿಯಲ್ಲಿ, ಚಾರಿತ್ರಿಕವಲ್ಲದ ಘಟನೆಗಳನ್ನು ಗಟ್ಟಿಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸಲಾಗಿದೆ. ರಸವಿಲ್ಲದ  ಸಂಭಾಷಣೆಗಳಲ್ಲಿ ಸುಳ್ಳನ್ನು ಸತ್ಯವನ್ನಾಗಿಸುವ ವ್ಯರ್ಥ ಪ್ರಯತ್ನ ಎದ್ದು ಕಾಣುತ್ತದೆ.

ಎರಡು ಶತಮಾನಗಳ ಹಿಂದೆ ಆಳಿ, ಅಳಿದುಹೋದ ಟಿಪ್ಪು ಎಂಬ ದೊರೆಯೊಬ್ಬನ ನಿಜ ಕನಸುಗಳು ಅಡ್ಡಡ್ಡ ಕಾರ್ಯಪ್ಪನವರಿಗೆ, ಈಗ ಕಾಣುತ್ತಿರುವುದರ ಹಿಂದೆ, ಅಡಗಿಸಿಡಲಾಗದ ದ್ವೇಷವೊಂದರ ಸೂಕ್ಷ್ಮಗಳು ಢಾಳಾಗಿಯೇ ಕಾಣಿಸುತ್ತವೆ.

ಚರಿತ್ರೆಯ ಯಾವ ಆಖರಗಳಲ್ಲಿಯೂ ಲಭ್ಯವಾಗದ ಸಂಗತಿಗಳನ್ನು, ಇದಮಿತ್ಥಮ್ ಎಂಬಂತೆ ಹೇಳಹೊರಟಿರುವುದೇ ಅಸಹ್ಯದ ಪರಮಾವಧಿ.

ಟಿಪ್ಪು ಎಂಬ ಸುಲ್ತಾನನ್ನು ಸಾರಾ ಸಗಟು ಒಪ್ಪಿಕೊಳ್ಳುವುದು ಮತ್ತು ಖುಲ್ಲಂಖುಲ್ಲಾ ದ್ವೇಷಿಸುವುದೆರಡೂ ಅಪಾಯಕಾರೀ ಸಂಗತಿಗಳೆ ಎಂಬ ಪರಮ ನಿಷ್ಟೂರ ಸತ್ಯವನ್ನು ಎರಡು ಬಣಗಳೂ ಒಪ್ಪಲೇಬೇಕು.

ಇಂದು-ನಿನ್ನೆ ಘಟಿಸಿದ ಸಂಗತಿಗಳನ್ನೇ ಕರಾರುವವಾಕ್ಕಾಗಿ ಹೇಳಲು ಅಸಾಧ್ಯವಾಗಿರುವಾಗ, ಒಂದಲ್ಲ, ಎರಡಲ್ಲ; ಹತ್ತಿರತ್ತಿರ ಇನ್ನೂರೈವತ್ತು ವರ್ಷಗಳ ಹಿಂದಿನ ಚರಿತ್ರೆಯನ್ನು ಅಂಗೈ ಮೇಲಿನ ಗೊಂಬೆಯಂತೆ ತೋರಿಸಲೆತ್ನಿಸುವುದೇ ಮೂರ್ಖತನ.

ಹಾಗೂ ಒಂದು ಸಂದರ್ಭದಲ್ಲಿ ಹೇಳಲೇಬೇಕೆನಿಸಿದರೆ ಲಭ್ಯವಿರುವ ಚರಿತ್ರೆಯ ಆಖರಗಳನ್ನು ಅಧರಿಸಿ, ಒಳಿತು- ಕೆಡುಕುಗಳೆರಡನ್ನೂ ನಿರ್ಮಮವಾಗಿ ಹೇಳುವ ತಾಕತ್ತನ್ನು ನಮ್ಮದಾಗಿಸಿಕೊಳ್ಳಬೇಕು.

ಇತಿಹಾಸದ ಗರ್ಭದಲ್ಲಿ ಇಲ್ಲವೇ ಇಲ್ಲದ ಸಂಗತಿಗಳನ್ನು, ಸತ್ಯ ಎಂಬಂತೆ ನಂಬಿಸುವ ಯತ್ನ ನಡೆಸುವುದು ದ್ರೋಹ  ಮಾತ್ರವಲ್ಲ; ಅಪಾಯಕಾರಿಯೂ ಹೌದು. ಇಂಥದ್ದೊಂದು ಮಹಾಪಾಪದ ಕೆಲಸವನ್ನು ಕಾರ್ಯಪ್ಪ ಮಾಡಿದ್ದಾರೆ.

ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ಡಾ. ಎಸ್.ಎಲ್. ಭೈರಪ್ಪನವರು ಈ ನಾಟಕಕ್ಕೆ ಬರೆದ ಮುನ್ನುಡಿಯೇ ಪೂರಾಪೂರ ಹುಸಿಯಾಗಿದೆ ಮಾತ್ರವಲ್ಲ; ತಮ್ಮದೇ ಮಾತುಗಳನ್ನು ತಾವೇ ಸುಳ್ಳಾಗಿಸಿದ್ದಾರೆ.

‘……ಐತಿಹಾಸಿಕ ವಸ್ತುವನ್ನು ಸಾಹಿತ್ಯವಾಗಿ ಪರಿವರ್ತಿಸವಾಗಲಂತೂ ಸಾಹಿತಿಗೆ ಸತ್ಯದ ಬಗೆಗೆ ಇರಬೇಕಾದ ಜವಾಬ್ದಾರಿ ಎಚ್ಚರಿಕೆಯನ್ನುಂಟುಮಾಡಬೇಕು. ಸಂಶೋಧನೆ ಮಾಡದೆಯೂ ಸಮಕಾಲೀನ ವಸ್ತುವನ್ನು ಕುರಿತು ಸಾಹಿತ್ಯ ರಚಿಸಬಹುದು. ಆದರೆ ಐತಿಹಾಸಿಕ ವಸ್ತುವನ್ನು ಆಧರಿಸಿ ಬರೆಯುವಾಗ ಪ್ರತಿಯೊಂದು ಸಂಶೋಧನೆಯ ಅಗತ್ಯವಿದೆ. ಸಾಹಿತಿಯ ಹೊಣೆ ಇರುವುದು ತಾನು ಬರೆಯುವ ವಸ್ತುವಿನ ಇತಿಹಾಸದ ಸತ್ಯಕ್ಕೆ. ಸತ್ಯ ಮತ್ತು ಸೌಂದರ್ಯಗಳಿಗೆ ತೋಲನವುಂಟಾದಾಗ ಸಾಹಿತಿಯ ಅಂತಿಮ ನಿಷ್ಠೆ ಇರಬೇಕಾದದ್ದು ಸತ್ಯಕ್ಕೆ. ಸತ್ಯವನ್ನು ಉಚಾಯಿಸಿ ತಾನು ಕೇವಲ ಕಲಾ ನಿರ್ಮಾಪಕ ಎನ್ನುವ ಅಧಿಕಾರ ಸಾಹಿತಿಗೆ ಇಲ್ಲ.’

– ಇವು ಶ್ರೀಯುತ ಭೈರಪ್ಪನವರ ಮುನ್ನುಡಿಯ ಶಬ್ದಗಳು.

– ಹದಿನಾಲ್ಕು ದೃಶ್ಯಗಳ ಈ ನಾಟಕ ಸತ್ಯಕ್ಕೆ ನೇರವಾಗಿ ಕನ್ನಡಿ ಹಿಡಿದಿದೆ ಎಂದು ಬರೆಯುವ ಮೂಲಕ ಭೈರಪ್ಪ ತಾವೇ ನಂಬಿದ ಸತ್ಯ ಮತ್ತು ಸೌಂದರ್ಯದ ಮೇಲೆ ಅತ್ಯಾಚಾರ ಮಾಡಿದ್ದಾರೆ.

‘ಇತಿಹಾಸದ ಸುಳ್ಳು ಚಿತ್ರಣದ ಮೇಲೆ ರಾಷ್ಟ್ರೀಯತೆಯನ್ನು ಗಟ್ಟಿಗೊಳಿಸಲಾಗುವುದಿಲ್ಲ’ ಎಂಬ ತಮ್ಮದೇ ಮಾತನ್ನು ಶ್ರೀಯುತ ಭೈರಪ್ಪನವರು ಸಾವಿರ ಬಾರಿಯಾದರೂ ತಾವೇ ಕೇಳಿಸಿಕೊಳ್ಳುವುದು ಒಳಿತು.

ನೂರು ಪುಟಗಳ ಈ ನಾಟಕದಲ್ಲಿ ಚರಿತ್ರೆಯ ಎಳೆ ಇದೆಯೇ ಹೊರತು, ಸತ್ಯದ ಸಾಂಗತ್ಯವಿಲ್ಲ. ಹೂಗಳ ಗಂಧವೇ ಇಲ್ಲದ ವ್ಯಕ್ತಿಯೊಬ್ಬ, ಪರಿಮಳದ ಬಗ್ಗೆ ಭಾಷಣ ಬಿಗಿದಂತೆ ತೋರುವ ಈ ನಾಟಕ, ಸತ್ಯದ ಪರಿಧಿಯ ಅಂಚನ್ನೂ ಮುಟ್ಟುವುದಿಲ್ಲ.

ಮೈಸೂರಿನ ಚರಿತ್ರೆಯನ್ನೇ ತಿಳಿಯದ, ಯಾರಿಂದಲೋ ಕೇಳಿದ್ದನ್ನಷ್ಟೇ ಚರಿತ್ರೆ ಎಂದು ನಂಬುವ ಓರ್ವ ತಲೆತಿರುಕ ಹೇಳಿದ ಕಟ್ಟು ಕಥೆಯಂತಿರುವ ಈ ನಾಟಕದ ಪ್ರತಿ ಪದ-ಪದವನ್ನೂ ಧ್ಯಾನವಿಟ್ಟು ಓದಿದ್ದೇನೆ.

ಸತ್ಯದ ನೆರಳೇ ಸೋಕದ, ಬೆಳಕಿನ ಕಿರಣಗಳನ್ನೇ ಕಾಣದ, ಕತ್ತಲೆಯಲ್ಲೇ ಬೆತ್ತಲಾದ ನಾಟಕಕಾರ, ಕೇವಲ ಇತಿಹಾಸಕ್ಕಷ್ಟೇ ಅಪಚಾರವೆಸಗಿಲ್ಲ; ಒಕ್ಕಲಿಗ ಸಮುದಾಯಕ್ಕೂ ಅಪಮಾನ ಮಾಡಿದ್ದಾರೆ.

ಟಿಪ್ಪುವನ್ನು ಉರಿಗೌಡ ಮತ್ತು ನಂಜೇಗೌಡರು ಕೊಂದು ಹಾಕಿದರೆಂಬ ವಾಟ್ಸ್ ಆಪ್ ಯೂನಿವೆರ್ಸಿಟಿಯ ಸಂಶೋಧನಾ  ಬರೆಹವನ್ನೇ ಚರಿತ್ರೆಯನ್ನಾಗಿ ಬಿಂಬಿಸಲು ಹೊರಟ ಇಂಥ ಕಡುಮೂರ್ಖರಿಂದ ಈ ಸಮಾಜ ಸುಳ್ಳನ್ನಲ್ಲದೆ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ ?

ಸತ್ಯದ ಪರದೆಯ ಮುಂದೆ ಸುಳ್ಳಿನ ಪರೇಡ್ ಮಾಡಿಸುವ ಡ್ರಿಲ್ ಮಾಸ್ಟರಿನ ಹಾಗೆ ಕಾಣುವ ಶ್ರೀಮಾನ್ ಅಡ್ದಡ್ಡ ಕಾರ್ಯಪ್ಪನವರಿಗೆ ತಾವು ಬರೆದ ಪ್ರತಿ ಶಬ್ದಕ್ಕೂ ಆಧಾರವಿದೆ ಎಂಬ ನೈತಿಕ ಬಲ ಇರುವುದೇ ಆದರೆ, ಅವರದ್ದೇ ನಾಟಕದಲ್ಲಿನ ಅಂಶಗಳಿಗೆ ದಾಖಲೆ ಒದಗಿಸಲಿ. ಇಲ್ಲವೇ ನೇರಾನೇರ  ಸಂವಾದಕ್ಕೆ ಸಿದ್ಧವಿದ್ದರೆ ವೇದಿಕೆಯನ್ನೂ ಸಿದ್ಧಪಡಿಸಲಿ.

ಸತ್ಯದ ಸಾರಣೆ ಮಾಡಿದ ಮಾತ್ರಕ್ಕೆ ಸುಳ್ಳು, ಬೆಳ್ಳಗಾಗುವುದಿಲ್ಲ. ಅಜೆಂಡಾಗಳೊಟ್ಟಿಗೆ ಬದುಕುತ್ತಿರುವ ಕಾರ್ಯಪ್ಪ, ಬೆನ್ನುಡಿ ಬರೆದ  ಸೂಲಿಬೆಲೆ, ನಾಟಕ ಪ್ರಕಟಿಸಿರುವ ಚಕ್ರತೀರ್ಥ, ಕಾರ್ಯಪ್ಪ ಬೆನ್ನಿಗೆ ನಿಂತಿರುವ  ಹುಲಿ ಕರಡಿ, ಸಿಂಹಗಳನ್ನು ಬಿಟ್ಟುಬಿಡಿ. ಪಾಪ ಅವುಗಳ ಪಾಡಿಗೆ ಅವು ಇದ್ದುಬಿಡಲಿ; ಆದರೆ ಈ ಭೈರಪ್ಪನವರಿಗಾದರೂ ಏನಾಗಿದೆ..?

ಕೊನೆಗೊಂದು ಮಾತು-ಈ  ಪದ ಬರೆಯುವುದು ದಾರ್ಷ್ಟ್ಯದ ಪರಮಾವಧಿ ಎನಿಸಿದರೂ ಅಡ್ಡಿಯಿಲ್ಲ.

ಕಾರ್ಯಪ್ಪನವರೇ ನೀವು ಬರೆದಿರುವ ಈ ನಾಟಕಕ್ಕೆ ಚರಿತ್ರೆಯ ಸಾಹಚರ್ಯವಿದೆ ಎಂಬುದನ್ನು ನೀವು ಒಪ್ಪುವುದೇ ಆದರೆ, ನಿಮ್ಮದೇ ಕೃತಿಗೆ ಸಂಬಂಧಿಸಿದಂತೆ ಹುಟ್ಟಿರುವ ಪ್ರಶ್ನೆಗಳಿಗೆ ದಾಖಲೆ ಸಹಿತ ಉತ್ತರ ಕೊಟ್ಟರೆ, ನನ್ನಿಡೀ ಶೇಷಾಯುಷ್ಯವನ್ನು ನಿಮ್ಮ ದಾಸನಾಗಿ ಕಳೆಯುತ್ತೇನೆ.

ಉತ್ತರ ಕೊಡಲಾಗದೆ ನೀವು ತಿಣುಕಾಡಿದರೆ, ಕನಿಷ್ಠ ಸೌಜನ್ಯದ ಸೋಲನ್ನಾದರೂ ಒಪ್ಪಿಕೊಳ್ಳಿ ಎಂದು ವಿನಂತಿಸುತ್ತೇನೆ.

Donate Janashakthi Media

Leave a Reply

Your email address will not be published. Required fields are marked *