ವಿಕಸಿತ ಭಾರತದ ಪುಂಗಿ : ಕಾರ್ಖಾನೆಗಳಲ್ಲಿ ಕಾಣದ ಮಹಿಳೆಯರು

ವಿಕಸಿತ ಭಾರತಕ್ಕೆ ಉತ್ಪಾದನೆ ಬಹಳ ಮುಖ್ಯ. ವಿಕಸಿತ ಭಾರತದ ಬೆನ್ನೆಲುಬು ನಾರಿ (ಮಹಿಳೆ). ಆದರೆ ಇಂದಿನ ಭಾರತದ ಕಾರ್ಖಾನೆಗಳ ನೆಲಗಳಲ್ಲಿ ಮಹಿಳೆಯರು ಕಾಣುವುದಿಲ್ಲ!! ನಿಮ್ಮ ತಕರಾರು ಗೊತ್ತಾಯಿತು. ಕಾಣಬೇಕಾದ ಪ್ರಮಾಣದಲ್ಲಿ ಕಾಣುವುದಿಲ್ಲ ಎನ್ನೋಣ. ಸರಿಯೇ? ಇನ್ನೂ ಇದನ್ನು ಸರಿಯಾಗಿ ಹೇಳುವುದಾದರೆ ನಮ್ಮ ಪಕ್ಕದ ಬಾಂಗ್ಲಾದೇಶ ಅಥವಾ ವಿಯೆಟ್ನಾಮ್ ದೇಶಗಳಲ್ಲಿ ಇರುವ ಪ್ರಮಾಣದಲ್ಲೂ ಭಾರತದಲ್ಲಿ ಇಲ್ಲ. ವಿಕಸಿತ
ಜಿ ಎಸ್ ಮಣಿ

ಅಂಕಿ ಸಂಖ್ಯೆ ನೋಡುವುದಾದರೆ, 2015 ರಲ್ಲಿ ಸಂಘಟಿತ ವಲಯದಲ್ಲಿ ಶೇ 20.9 ರಷ್ಟು ಮಹಿಳೆಯರು ಇದ್ದರು. 2022-23 ರಲ್ಲಿ ಈ ಪ್ರಮಾಣ ಶೇ 18.9ಕ್ಕೆ ಕುಸಿಯಿತು (8.34 ದಶಲಕ್ಷ ಕೆಲಸಗಾರರಲ್ಲಿ 1.57 ದಶಲಕ್ಷ ಅಷ್ಟೇ ಮಹಿಳೆಯರು). ಎದ್ದು ಕಾಣುವ ವಿಷಯ ಎಂದರೆ ಈ ಸಂಘಟಿತ ವಲಯದ ಮಹಿಳಾ ಕೆಲಸಗಾರರಲ್ಲಿ ಶೇ 41 ರಷ್ಟು ತಮಿಳುನಾಡಿನಲ್ಲಿ ಇರುವಂತಹದು.ಅಸಂಘಟಿತ ವಲಯದಲ್ಲಿ ಶೇ 43 ರಷ್ಟು ಮಹಿಳೆಯರು ಇದ್ದಾರೆ. ಇವರ ಸಂಬಳ ಮತ್ತು ಅನುಕೂಲತೆಗಳು ಗಮನಾರ್ಹವಾಗಿ ಕಡಿಮೆ ಇರುತ್ತದೆ. ದೇಶದ ಒಟ್ಟು ಉತ್ಪಾದನೆಯ ಶೇ 20 ರಷ್ಟು ಸರಕು ಉತ್ಪಾದನೆಯಿಂದ ಬರುತ್ತದೆ. ಭಾರತದ ಆರ್ಥಿಕತೆಗೆ ಇದು ಮುಖ್ಯ ವಲಯವಾಗಿ ಉದ್ಭವಿಸಿದೆ. ಆದರೂ ಮಹಿಳೆಯರ ಭಾಗವಹಿಸುವಿಕೆ ಬಹಳ ಕಡಿಮೆ ಇದೆ.

ತಮಿಳು ನಾಡು ಮತ್ತು ನಾಲ್ಕು ಇತರ ರಾಜ್ಯಗಳಾದ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಮತ್ತು ಗುಜರಾತ್ ಮುಕ್ಕಾಲು ಪಾಲು ಮಹಿಳೆಯರಿಗೆ ಸಂಘಟಿತ ವಲಯದಲ್ಲಿ ಉದ್ಯೋಗ ನೀಡಿವೆ. ಇದೆ ರೀತಿ ತಮಿಳುನಾಡು, ಪ ಬಂಗಾಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶ ಅಸಂಘಟಿತ ಉತ್ಪಾದನಾ ವಲಯದ ಶೇ 50 ರಷ್ಟು ಉದ್ಯೋಗಗಳನ್ನು ಮಹಿಳೆಯರಿಗೆ ನೀಡಿವೆ.

ಹೀಗೆ ಉದ್ಯೋಗ ನೀಡುವಲ್ಲಿನ ಲಿಂಗ ಅಸಮಾನತೆಯನ್ನು ನೋಡುವುದಾದರೆ, ಬಿಹಾರ, ಪ ಬಂಗಾಳ, ಛತ್ತೀಸ್ ಘಢ ಮತ್ತು ಹರಿಯಾಣ ಅತ್ಯಂತ ಹೆಚ್ಚಿನ ಲಿಂಗ ಅಸಮಾನತೆ ಹೊಂದಿವೆ. ಸಂಘಟಿತ ವಲಯದಲ್ಲಿ ಬರೀ ಶೇ 6 ರಷ್ಟು ಮಹಿಳೆಯರು ಇದ್ದಾರೆ. ಮಹಿಳೆಯರು ಎಂತಹ ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಾರೆಂದು ನೋಡಿದರೆ, ಶೇ 60 ರಷ್ಟು ಮಹಿಳೆಯರು ಜವಳಿ, ಸಿದ್ದ ಉಡುಪು, ಆಹಾರ ಸಂಸ್ಕರಣೆ ಉದ್ದಿಮೆಗಳಲ್ಲಿ ಇದ್ದಾರೆ. ಅಸಂಘಟಿತ ವಲಯ ನೋಡಿದರೆ ಮಹಿಳೆಯರು ಸಿದ್ದ ಉಡುಪು ಮತ್ತು ತಂಬಾಕು ಉದ್ದಿಮೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಂಬಾಕು ಉದ್ದಿಮೆಯಲ್ಲಿ ಮಹಿಳೆಯರೇ ದೊಡ್ಡ ಪ್ರಮಾಣದಲ್ಲಿ ಇದ್ದಾರೆ. ಸುಮಾರು ಶೇ 90 ರಷ್ಟು ಕೆಲಸಗಾರರು ಮಹಿಳೆಯರೇ ಆಗಿದ್ದಾರೆ. ಇದರ ಅರ್ಥ ತಂಬಾಕು ಉದ್ಯಮದಂತಹ ಕಡಿಮೆ ಸಂಬಳ ಮತ್ತು ಕಡಿಮೆ ಅನುಕೂಲತೆಗಳು ಇರುವ ಕೆಲಸಗಳಲ್ಲಿ ಮಹಿಳೆಯರು ದೊಡ್ಡ  ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದು.

ಇದನ್ನೂ ಓದಿ : ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಸರ್ಕಾರದಿಂದ ಜನಸಾಮಾನ್ಯರ ಆದಾಯ ಲೂಟಿ- ಎಚ್ ಆರ್ ನವೀನ್ ಕುಮಾರ್

ಮಹಿಳೆಯರಲ್ಲಿ ಕಡಿಮೆ ಕೌಶಲ್ಯವಿದೆ ಎಂಬುದೂ ಇಂಥ ಪರಿಸ್ಥಿತಿಗೆ ಒಂದು ಕಾರಣ. ಮಹಿಳೆಯರಿಗೆ ಕೌಶಲ್ಯ ತರಬೇತಿ ನೀಡುವ ಅವಶ್ಯಕತೆ ಇದೆ. ಪಿ ಎಲ್ ಎಫ್ ಎಸ್ ನ ಸಮೀಕ್ಷೆ ಪ್ರಕಾರ ಶೇ 6 ರಷ್ಟು ಮಹಿಳೆಯರಿಗೆ ಮಾತ್ರ ಕೌಶಲ್ಯ ತರಬೇತಿ ದೊರೆತಿದೆ. ಮಹಿಳೆಯರಲ್ಲಿ ಶಿಕ್ಷಣ ಕಡಿಮೆ ಇರುವುದೂ ಇನ್ನೊಂದು ಕಾರಣ. ಫ್ರೌಢ ಮತ್ತು ಅದರ ಮೇಲಿನ ಶಿಕ್ಷಣ ಪುರುಷರಲ್ಲಿ ಶೇ 47 ರಷ್ಟು ಜನರಿಗೆ ಸಿಕ್ಕಿದ್ದರೆ, ಮಹಿಳೆಯರಲ್ಲಿ ಶೇ 30 ರಷ್ಟು ಜನರಿಗೆ ಮಾತ್ರ ದೊರೆತಿದೆ. ವೈವಿಧ್ಯಮಯ ಉದ್ದಿಮೆಗಳಲ್ಲಿ ಮಹಿಳೆಯರಿಗೆ ಅವಕಾಶ ಕೊಡುವ ಅವಶ್ಯಕತೆಯೂ ಇದೆ. ಇನ್ನೊಂದು ಬಹುಮುಖ್ಯ ಅಂಶವೆಂದರೆ ಕೆಲಸದ ಸ್ಥಳವನ್ನು ಮಹಿಳೆಯರಿಗೆ ಸುರಕ್ಷಿತಗೊಳಿಸುವ ಕೆಲಸ ಎಲ್ಲ ಕಡೆಗಳಲ್ಲಿಯೂ ಅವಶ್ಯವಾಗಿ ಆಗಬೇಕಾಗಿದೆ. ತಮಿಳುನಾಡಿನಲ್ಲಿ ದುಡಿವ ಮಹಿಳೆಯರ ವಸತಿಗೃಹಗಳನ್ನು ಪ್ರಾರಂಬಿಸಲಾಗಿದೆ. ಇಂತಹ ಕ್ರಮಗಳು ಎಲ್ಲ ರಾಜ್ಯಗಳಲ್ಲೂ ಆಗಬೇಕಾಗಿದೆ.

ವಿಕಸಿತ ಭಾರತದ ಪುಂಗಿಯನ್ನು ಎಲ್ಲೆಂದರಲ್ಲಿ ಊದುವ “ವಿಶ್ವಗುರುಗಳಿಗೆ” ವಿಕಸಿತ ಭಾರತ ಕಟ್ಟಲು ಪುರುಷ ಮಹಿಳೆಯರಿಬ್ಬರೂ ಸಮನಾಗಿ ಕೆಲಸ ಮಾಡುವ ಮತ್ತು ಇರುವ ಪ್ರತಿಭೆಗಳನ್ನು ಸಮರ್ಥವಾಗಿ ಬಳಸಬೇಕು ಎಂಬ ಸಾಮಾನ್ಯ ತಿಳುವಳಿಕೆ ಇರಬೇಡವೆ? ಸದಾ ವಿಭಜನೆಯ ರಾಜಕಾರಣ ಮಾಡುತ್ತಾ ಬೇರೆಯವರಿಗೆ ಬುದ್ಧಿ ಹೇಳುವ ಈ ನಾಯಕರುಗಳಿಗೆ ದೇಶ ಕಟ್ಟಲು ಬೇಕಾದ ಸದ್ಬುದ್ದಿ ಇರಬೇಡವೆ?

(ದಿ ಹಿಂದು ಪತ್ರಿಕೆಯಲ್ಲಿ 16.04.25 ರಂದು ಪ್ರಕಟವಾದ ಶಭಾನ ಮಿತ್ರ, ಕ್ಲೇಡ್ವಿನ್ ಫೆರ್ನಾಂಡೇಜ್,ಅಂಝನಾ ರಮೇಶ್ ಅವರ ಲೇಖನದ ಸಂಗ್ರಹಾನುವಾದ)

ಇದನ್ನೂ ನೋಡಿ : “ಛಾವಾ” ಸಿನಿಮಾದಲ್ಲಿನ ಸುಳ್ಳುಗಳು! Janashakthi Media

 

Donate Janashakthi Media

Leave a Reply

Your email address will not be published. Required fields are marked *