ಬೆಂಗಳೂರು: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಪುತ್ರ ಬಿ ವೈ ವಿಜಯೇಂದ್ರ ಅವರು ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಆರೋಪದ ಬಗ್ಗೆ ಕೂಡಲೇ ರಾಜ್ಯ ಸರಕಾರ ವರದಿ ಸಲ್ಲಿಸಬೇಕೆಂದು ಕರ್ನಾಟಕ ಹೈಕೋರ್ಟ್ ಆದೇಶಿಸಿದೆ.
ಕರ್ನಾಟಕ ರಾಜ್ಯ ಸರಕಾವು ಕೋವಿಡ್ ನಿಯಂತ್ರಣದ ದೃಷ್ಠಿಯಿಂದ ರಾಜ್ಯವ್ಯಾಪಿ ಲಾಕ್‌ಡೌನ್ ನಿಯಮ ಜಾರಿಗೊಳಿಸಿದೆ. ಆದರೆ ಇದೇ ಸಂದರ್ಭದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ದೇವಸ್ಥಾನಕ್ಕೆ ಭೇಟಿ ನೀಡಿರುವುದರ ಬಗ್ಗೆ ಮೈಸೂರು ಜಿಲ್ಲಾಧಿಕಾರಿಗಳ ಮೂಲಕ ಪ್ರಾಥಮಿಕ ತನಿಖೆಯನ್ನು ನಡೆಸಿ ವರದಿ ಸಲ್ಲಿಸಬೇಕೆಂದು ಹೈಕೋರ್ಟ್ ತಿಳಿಸಿದೆ.
ಇದನ್ನು ಓದಿ: ವಿದ್ಯುತ್ ದರ ಹೆಚ್ಚಳಕ್ಕೆ ಕೆಇಆರ್ಸಿ ಅನುಮೋದನೆ
ಕೋವಿಡ್ ಎರಡನೇ ಅಲೆ ತೀವ್ರವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಏಪ್ರಿಲ್ ತಿಂಗಳಲ್ಲಿ ಲಾಕ್‌ಡೌನ್ ಘೋಷಿಸಿತ್ತು. ಅಗತ್ಯ ವಸ್ತುಗಳ ಸೇವೆ ಹೊರತುಪಡಿಸಿ ಬೇರೆಲ್ಲದಕ್ಕೂ ಸರ್ಕಾರ ನಿರ್ಬಂಧ ವಿಧಿಸಿತು. ದೇವಾಲಯ ದರ್ಶನಕ್ಕೂ ಅವಕಾಶವಿಲ್ಲವಿರಲಿಲ್ಲ.
ಬಿ ವೈ ವಿಜಯೇಂದ್ರ ವಿರುದ್ಧ ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕ ಜಿಲ್ಲಾಧಿಕಾರಿಗೆ ದೂರು ನೀಡಿತ್ತು. ಸರಕಾರದ ನಿಯಮಗಳು ಜನ ಸಾಮಾನ್ಯರಿಗೆ ಅನ್ವಯಿಸುವಂತೆಯೇ ಸಿಎಂ ಪುತ್ರನಿಗೂ ಅನ್ವಯಿಸುತ್ತವೆ. ಹೀಗಾಗಿ ವಿಜಯೇಂದ್ರ ವಿರುದ್ಧ ಎಫ್‍ಐಆರ್ ದಾಖಲಿಸಲು ಪೊಲೀಸರಿಗೆ ಸೂಚನೆ ನೀಡುವಂತೆ ಹಾಗೂ ದೇವಾಲಯದ ಆಡಳಿತ ಸಿಬ್ಬಂದಿ, ಪುರೋಹಿತರನ್ನು ಅಮಾನತು ಮಾಡುವಂತೆ ಲಿಖಿತವಾಗಿ ಒತ್ತಾಯಿಸಿತ್ತು.
ಇದನ್ನು ಓದಿ: ಮುಖ್ಯಮಂತ್ರಿ ಸ್ಥಾನ ಭದ್ರಪಡಿಸಿಕೊಂಡ ಬಿಎಸ್‌ವೈ
ಇದರ ಮಧ್ಯೆಯೇ ಬಿ ವೈ ವಿಜಯೇಂದ್ರ ಕಳೆದ ತಿಂಗಳು ತಮ್ಮ ಪತ್ನಿ ಜೊತೆ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನಕ್ಕೆ ಕಾರಿನಲ್ಲಿ ಹೋಗಿ ದರ್ಶನ ಪಡೆದಿದ್ದಲ್ಲದೆ ಪೂಜೆ ನೆರವೇರಿಸಿದ್ದರು, ಕಪಿಲಾ ನದಿ ದಡದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ್ದು, ಇದು ಎಷ್ಟು ಸರಿ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಜನಸಾಮಾನ್ಯರಿಗೊಂದು ನಿಯಮ, ಜನಪ್ರತಿನಿಧಿಗಳಿಗೊಂದು ನಿಯಮವೇ ಎಂದು ಪ್ರಶ್ನಿಸಿದ್ದರು.
ನ್ಯಾಯಪೀಠವು ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ-1987ರ ಪ್ರಕಾರ ಆರೋಪಿತರ ನಡೆ ಅಪರಾಧದಿಂದ ಕೂಡಿದೆ ಎಂದು ಅಭಿಪ್ರಾಯಪಟ್ಟಿತ್ತು. ಈ ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸರಕಾರಕ್ಕೆ ಸೂಚನೆ ನೀಡಿದೆ.