ಬಿ.ಎಂ.ಹನೀಫ್
ವಿಜಯಪುರದ ಮಹಾನಗರ ಪಾಲಿಕೆಯ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ಇಲ್ಲಿಯ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರ ಜನಸಂಖ್ಯೆ ಶೇಕಡಾ 40ಕ್ಕೂ ಹೆಚ್ಚಿದೆ. ಅದರೆ ಕಳೆದ ಸಲ ಶಾಸಕರಾಗಿ ಆಯ್ಕೆ ಆದವರು ಬಿಜೆಪಿ ಯ ಕಟ್ಟಾ ಹಿಂದುತ್ವವಾದಿ, ಮುಸ್ಲಿಂ ದ್ವೇಷಿ ಬಸವನಗೌಡ ಪಾಟೀಲ.
ಈಗ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ರಾಗಿ ಇರುವವರು ವಿಜಯಪುರದವರೇ ಆದ ಎಂ.ಬಿ.ಪಾಟೀಲ. ಈ ಪಾಲಿಕೆ ಚುನಾವಣೆ ಬಿಜೆಪಿ ಯ ಉಗ್ರ ಹಿಂದುತ್ವದ ಪರೀಕ್ಷಾ ಕಣವೂ ಆಗಿತ್ತು. ಎಂ.ಬಿ.ಪಾಟೀಲರ ಹೊಸ ನಾಯಕತ್ವದ ಪರೀಕ್ಷೆಯೂ ಆಗಿತ್ತು.
ಫಲಿತಾಂಶ ಹೀಗಿದೆ
ಒಟ್ಟು ಕ್ಷೇತ್ರಗಳು – 35
ಬಿಜೆಪಿ – 17
ಕಾಂಗ್ರೆಸ್ – 10
ಪಕ್ಷೇತರ – 5
ಒವೈಸಿ ಪಕ್ಷ ಎಂಐಎಂ- 2
ಜೆಡಿ(ಎಸ್) – 1
ಬಸವನಗೌಡ ಪಾಟೀಲರ ಚುನಾವಣೆ ಗೆಲ್ಲುವ ಸಾಮರ್ಥ್ಯದ ಮುಂದೆ ಎಂ.ಬಿ.ಪಾಟೀಲರ ಕಾಂಗ್ರೆಸ್ ಮುಗ್ಗರಿಸಿದೆ ಎನ್ನುವುದು ಸ್ಪಷ್ಟ!
ಮುಸ್ಲಿಂ ಬಾಹುಳ್ಯದ ಈ ಪಾಲಿಕೆಯಲ್ಲಿ ಇದೇ ಮೊದಲ ಸಲ ಎಂಐಎಂ ಸ್ಪರ್ಧಿಸಿ 2 ಸ್ಥಾನಗಳನ್ನು ಗೆದ್ದಿರುವುದು ಕಾಂಗ್ರೆಸ್ ಗೆ ಎಚ್ಚರಿಕೆಯ ಗಂಟೆ.
ಇಲ್ಲಿನ ಮುಸ್ಲಿಮರು ಯಾರಿಗೆ ಮತ ಹಾಕಿದ್ದಾರೆ? ಇದು ಕುತೂಹಲಕರ ಪ್ರಶ್ನೆ.
ಪಾಲಿಕೆಯಲ್ಲಿ ಮುಸ್ಲಿಮರು ಗೆದ್ದಿರುವ ವಾರ್ಡ್ ಗಳು ಒಟ್ಟು 11.
ಕಾಂಗ್ರೆಸ್ ಒಟ್ಟು 17 ಮಂದಿ ಮುಸ್ಲಿಮರಿಗೆ ಟಿಕೆಟ್ ಕೊಟ್ಟಿತ್ತು. ಆದರೆ ಅವರಲ್ಲಿ 7 ಮಂದಿ ಮುಸ್ಲಿಮರು ಮಾತ್ರ ಗೆದ್ದಿದ್ದಾರೆ. 10 ಮಂದಿ ಮುಸ್ಲಿಮರು ಸೋತಿದ್ದಾರೆ. ಅಂದರೆ ಕಾಂಗ್ರೆಸ್ ಅನ್ನು ನೀವು ಈಗ ಮುಸ್ಲಿಂ ಪಕ್ಷ ಎನ್ನುವಂತಿಲ್ಲ.
ಕಾಂಗ್ರೆಸ್ 12 ಮಂದಿ ಹಿಂದೂಗಳಿಗೆ ಟಿಕೆಟ್ ಕೊಟ್ಟಿತ್ತು. ಅದರಲ್ಲಿ 3 ಮಂದಿ ಮಾತ್ರ ಗೆದ್ದಿದ್ದಾರೆ. ಅಂದರೆ ಕಾಂಗ್ರೆಸ್ ಹಿಂದೂಗಳ ಪಕ್ಷ ಎಂದೂ ನೀವು ಹೇಳುವಂತಿಲ್ಲ.
35ರಲ್ಲಿ 6 ಕ್ಷೇತ್ರಗಳು ಎಸ್‌ಸಿ/ಎಸ್‌ಟಿ ಮೀಸಲು ಕ್ಷೇತ್ರಗಳು. ಇದರಲ್ಲಿ 3 ಸ್ಥಾನಗಳನ್ನು ಬಿಜೆಪಿ ಗೆದ್ದಿರುವುದು ಗಮನಾರ್ಹ. (ಪಕ್ಕದ ಗುಲ್ಬರ್ಗಾ ಜಿಲ್ಲೆಯ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್ ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ ಬಳಿಕ ಈ ಚುನಾವಣೆ ನಡೆದಿದೆ, ಗಮನಿಸಿ) ಕಾಂಗ್ರೆಸ್ 2 ಮೀಸಲು ಸ್ಥಾನಗಳನ್ನು ಗೆದ್ದರೆ, ಜೆಡಿಎಸ್ ಗೆದ್ದಿರುವ ಒಂದೇ ಕ್ಷೇತ್ರ ಮೀಸಲು ಕ್ಷೇತ್ರ.
ಬಿಜೆಪಿ ಯಲ್ಲಿ ಕಳೆದ ಸಲದ ಚುನಾವಣೆಯಲ್ಲಿ ಅಲ್ತಾಫ್ ಇಟಗಿ ಎನ್ನುವ ಮುಸ್ಲಿಂ ಒಬ್ಬರು ಗೆದ್ದಿದ್ದರು. ಈ ಸಲ ಪಕ್ಷ ಅವರಿಗೆ ಟಿಕೆಟ್ ನೀಡಿಲ್ಲ. ಈ ಸಲ ಒಬ್ಬ ಮುಸ್ಲಿಮರಿಗೂ ಟಿಕೆಟ್ ಕೊಡಲ್ಲ ಎಂದು ಶಾಸಕ ಬಸವನಗೌಡ ಪಾಟೀಲ ಸ್ಪಷ್ಟವಾಗಿ ಹೇಳಿದ್ದರು. ಆದರೆ ಅಲ್ತಾಫ್ ಇಟಗಿ ಕಳೆದ ಸಲ ಗೆದ್ದ ವಾರ್ಡಲ್ಲೇ ಈ ಸಲ ಪಕ್ಷೇತರರಾಗಿ ನಿಂತು ಬಿಜೆಪಿ ವಿರುದ್ಧ ಗೆದ್ದಿದ್ದಾರೆ.
ಬಿಜೆಪಿ ಒಟ್ಟು 29 ಹಿಂದೂಗಳಿಗೆ ಟಿಕೆಟ್ ನೀಡಿತ್ತು. ಅದರಲ್ಲಿ 14 ಜನ ಗೆದ್ದಿದ್ದಾರೆ. ಅಂದರೆ ಬಿಜೆಪಿ ಹಿಂದೂ ಪಕ್ಷ ಎಂದೂ ನೀವು ಹೇಳುವಂತಿಲ್ಲ!
ಎಂಐಎಂ ನಾಲ್ವರು ಮುಸ್ಲಿಮರನ್ನು ಕಣಕ್ಕೆ ಇಳಿಸಿತ್ತು. ಅದರಲ್ಲಿ ಇಬ್ಬರು ಗೆದ್ದಿದ್ದಾರೆ. ಮೊದಲ ಬಾರಿಗೆ ಇಲ್ಲಿ ಚುನಾವಣೆಗೆ ನಿಂತು 50% ಫಲಿತಾಂಶ ಪಡೆದಿರುವುದು ಗಮನಾರ್ಹ ಸಂಗತಿಯೇ.
ಗೆದ್ದ ಐವರು ಪಕ್ಷೇತರರಲ್ಲಿ ಇಬ್ಬರು ಮುಸ್ಲಿಮರು ಮತ್ತು ಮೂವರು ಹಿಂದೂಗಳು. ಗೆದ್ದ ಒಬ್ಬನೇ ಒಬ್ಬ ಜೆಡಿಎಸ್ ಅಭ್ಯರ್ಥಿ ಪರಿಶಿಷ್ಟ ಪಂಗಡದವರು.
ಕಾಂಗ್ರೆಸ್ ಹೀನಾಯ ಪ್ರದರ್ಶನಕ್ಕೆ ಕಾರಣಗಳೇನು?
ಸ್ಥಳೀಯರು ಹೇಳುವ ಪ್ರಕಾರ, “ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ಪಕ್ಷವು ಹಲವೆಡೆ ತಪ್ಪು ನಿರ್ಧಾರಗಳನ್ನು ಕೈಗೊಂಡಿದೆ. ಹೀಗಾಗಿ ಹಲವು ಕಡೆ ಪಕ್ಷದ ಸ್ಥಳೀಯ ನಾಯಕರಿಂದ ಒಳ ಏಟು ಬಿದ್ದಿದೆ. ಹಲವು ವಾರ್ಡ್ ಗಳಲ್ಲಿ ಕಾಂಗ್ರೆಸ್ ನ ಮುಸ್ಲಿಂ ಅಭ್ಯರ್ಥಿಗಳಿಗೆ ಕಾಂಗ್ರೆಸ್ ನ ಇತರ ಜಾತಿಯ ಮತದಾರರು ಮತ ಹಾಕಿಲ್ಲ.”
ವಿಜಯಪುರದಲ್ಲೇ ಪಕ್ಷದ ಪ್ರಚಾರ ಕಾರ್ಯ ಸರಿಯಾಗಿ ಮಾಡಲಾಗದ ಎಂ.ಬಿ.ಪಾಟೀಲರು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಉತ್ತರ ಕರ್ನಾಟಕದಲ್ಲಿ ಲಿಂಗಾಯತ ಮತಗಳನ್ನು ಎಷ್ಟರ ಮಟ್ಟಿಗೆ ಸೆಳೆಯುವ ಸಾಧ್ಯತೆ ಇದೆ? – ಎನ್ನುವ ಪ್ರಶ್ನೆಯೂ ಎದ್ದಿದೆ.
ಬಸವನಗೌಡ ಪಾಟೀಲ ಯತ್ನಾಳ ವಿಜಯನಗರ ಮಹಾನಗರ ಪಾಲಿಕೆಯಲ್ಲಿ ಪಕ್ಷವನ್ನು ಅಧಿಕಾರ ಹಿಡಿಯುವಂತೆ ಮಾಡಿ ಗೆಲುವಿನ ನಗೆ ಬೀರಿದ್ದಾರೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಎಂಐಎಂ ಕೂಡಾ ಕಣಕ್ಕಿಳಿದರೆ, ಮತ್ತೊಮ್ಮೆ ಯತ್ನಾಳರೇ ಶಾಸಕರಾಗುವ ಸಾಧ್ಯತೆಯೂ ಹೆಚ್ಚಿದೆ.
ಕಾಂಗ್ರೆಸ್ ನಾಯಕರಿಗೆ ವಸ್ತುಸ್ಥಿತಿಯ ಅರಿವಾಗುತ್ತಿದೆಯೆ?