ಗಾಂಧಿನಗರ: ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಗುಜರಾತಿನ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾಣಿ ರಾಜೀನಾಮೆ ಸಲ್ಲಿಸಿದ್ದಾರೆ. ಮುಂದಿನ ವರ್ಷ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ವಿಜಯ್ ರೂಪಾನಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದು ಕುತೂಹಲ ಮೂಡಿಸಿದೆ. ರಾಜೀನಾಮೆಗೆ ಕಾರಣವೇನು ಎಂಬುದನ್ನು ಬಹಿರಂಗಗೊಂಡಿಲ್ಲ.
ಗುಜರಾತ್ ಮಾದರಿ ಸಂಬಂಧ ಪಟ್ಟಂತೆ ಏರ್ಪಡಿಸಲಾಗಿದ್ದ ಸಭೆ ಬಳಿಕ ಈ ಘಟನೆ ನಡೆದಿದ್ದು, ರಾಜ್ಯಪಾಲರಾದ ಆಚಾರ್ಯ ದೆವ್ರತ್ ಅವರನ್ನು ಭೇಟಿ ಮಾಡಿದ ವಿಜಯ್ ರೂಪಾನಿ ರಾಜೀನಾಮೆ ಸಲ್ಲಿಸಿದ್ದಾರೆ.
ಇದನ್ನು ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಯಡಿಯೂರಪ್ಪ
ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ವಿಜಯ್ ರೂಪಾನಿ, ತಮಗೆ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಅವಕಾಶ ಮಾಡಿಕೊಟ್ಟ ಬಿಜೆಪಿ ಪಕ್ಷದ ನಾಯಕತ್ವಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಅನಿರೀಕ್ಷಿತವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಈಗಾಗಲೇ ಮುಖ್ಯಮಂತ್ರಿ ಸ್ಥಾನದಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ಬಿಜೆಪಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಶಾಸಕರೊಂದಿಗೆ ಚರ್ಚೆ ನಡೆಸಿದ್ದಾರೆ. ನೂತನ ಮುಖ್ಯಮಂತ್ರಿ ಆಯ್ಕೆ ಬಗ್ಗೆ ಮತ್ತೆ ಮಂಗಳವಾರದಂದು ಬಿಜೆಪಿ ಶಾಸಕರು ಸಭೆ ನಡೆಸಲಿದ್ದಾರೆ. ಅಂದು ನೂತನ ಸಿಎಂ ಆಯ್ಕೆ ಮಾಡಲಿದ್ದಾರೆ.
ಇದನ್ನು ಓದಿ: ಬಿಜೆಪಿ ಪಕ್ಷದಲ್ಲಿ ಮತ್ತೆ ಎದುರಾದ ನಾಯಕತ್ವ ಬಿಕ್ಕಟ್ಟು: ಉತ್ತರಾಖಂಡ ಮುಖ್ಯಮಂತ್ರಿ ರಾಜೀನಾಮೆ
ವಿಜಯ್ ರೂಪಾನಿ ಅವರ ಕಾರ್ಯ ವೈಖರಿಯ ಬಗ್ಗೆ ಕೇಂದ್ರದ ನಾಯಕರು ಅಸಮಾಧಾನಗೊಂಡಿದ್ದರು ಎನ್ನಲಾಗುತ್ತಿದೆ. ಅಲ್ಲದೆ, ರಾಜ್ಯದಲ್ಲೂ ಅವರ ನಾಯಕತ್ವದಲ್ಲಿ ಅನಿಶ್ಚಿತತೆ ತೋರುತ್ತಿದ್ದರು, ಇದೇ ಕಾರಣ ನಾಯಕತ್ವ ಬದಲಿಸಲು ನಾಯಕರು ಮುಂದಾಗಿದ್ದರು ಎನ್ನಲಾಗಿದೆ.
2016 ಆಗಸ್ಟ್ 7ರಿಂದ ಗುಜರಾತ್ ಮುಖ್ಯಮಂತ್ರಿದ್ದ ರೂಪಾನಿ ಪ್ರಸ್ತುತ ಪಶ್ಟಿಮ ರಾಜ್ ಕೋಟ್ ಕ್ಷೇತ್ರದಿಂದ ಗುಜರಾತ್ ವಿಧಾನಸಭೆಯ ಸದಸ್ಯರಾಗಿದ್ದಾರೆ.
ಕಳೆದ ಕೆಲವೇ ವಾರಗಳಲ್ಲಿ ಉತ್ತರಾಖಂಡದ ತಿರಾತ್ ಸಿಂಗ್ ರಾವತ್ , ಕರ್ನಾಟಕದ ಬಿ.ಎಸ್. ಯಡಿಯೂರಪ್ಪ ನಂತರ ಈಗ ಮೂರನೇ ಮುಖ್ಯಮಂತ್ರಿ ವಿಜಯ್ ರೂಪಾನಿ ಸಲ್ಲಿಸಿದ್ದಾರೆ.