– ವಸಂತರಾಜ ಎನ್.ಕೆ
ಎಪ್ರಿಲ್ 30, 1975ರಂದು, ಅಂದರೆ ಇಂದಿಗೆ 50 ವರ್ಷಗಳ ಹಿಂದೆ ಸೈಗಾನ್ ನಲ್ಲಿದ್ದ ಗೇಟ್ ಒಡೆದು ಗೆರಿಲ್ಲಾ ಸೈನ್ಯದ ಟ್ಯಾಂಕ್ ಯು.ಎಸ್ ರಾಯಭಾರ ಕಚೇರಿಯ ಆವರಣವನ್ನು ಪ್ರವೇಶಿಸಿತು. ಆಗ ಯು.ಎಸ್ ವೈಮಾನಿಕ ಹೆಲಿಕಾಪ್ಟರುಗಳು ಅಲ್ಲಿನ ಸಿಬ್ಬಂದಿ ಮತ್ತು ಬೆಂಭಲಿಗರನ್ನು ಹತ್ತಿರದ ಹಡಗುಗಳಿಗೆ ಒಯ್ಯುವ ದೃಶ್ಯ ಇಡಿ ಜಗತ್ತಿನ ಜನಕ್ಕೆ ರೋಮಾಂಚನ ತಂದಿತ್ತು. 20 ದೀರ್ಘ ವರ್ಷಗಳ ಕಾಲ ಗೆರಿಲ್ಲಾ ಯುದ್ಧದ ನಂತರ ಜಗತ್ತಿನ ಅತ್ಯಂತ ಪ್ರಬಲವಾದ ಮಿಲಿಟರಿ ಶಕ್ತಿ ಪರಾಭವ ಹೊಂದಿ ಪಲಾಯನ ಮಾಡಿದ ಅವಮಾನಕಾರಿ ಕ್ಷಣವಾಗಿತ್ತು. ಇಂದು ವಿಯೇಟ್ನಾಂ ದೇಶದ ಏಕೀಕರಣ ಮತ್ತು ದಕ್ಷಿಣ ವಿಯೇ್ಟನಾಮಿನ ಪೂರ್ಣ ವಿಮೋಚನೆಯ ಸುವರ್ಣೋತ್ಸವವನ್ನು ಆಚರಿಸಲಾಗುತ್ತಿದೆ.
ಇದು 1960-70ರ ದಶಕದಲ್ಲಿ ಭಾರತದಲ್ಲಿ ಕೇಳಿ ಬರುತ್ತಿದ್ದ ಘೋಷಣೆಯಾಗಿತ್ತು. ಇದು ವಿಯೇಟ್ನಾಂ ಜಗತ್ತಿನ ಅತ್ಯಂತ ಪ್ರಬಲವಾದ ಮಿಲಿಟರಿ ಶಕ್ತಿಯಾಗಿದ್ದ ಯು.ಎಸ್ ವಿರುದ್ಧ ನಡೆಸುತ್ತಿದ್ದ ಗೆರಿಲ್ಲಾ ಯುದ್ಧಕ್ಕೆ ಸೌಹಾರ್ದ ಬೆಂಬಲ ಸೂಚಿಸುವ ಘೋಷಣೆಯಾಗಿತ್ತು. ಎಲ್ಲಾ ದೇಶಗಳಲ್ಲೂ ಇಂತಹ ಘೋಷಣೆಗಳು ಇದ್ದವು. ಯು.ಎಸ್ ನಲ್ಲೂ ಸೇರಿದಂತೆ ಜಗತ್ತಿನಾದ್ಯಂತ ಪುಟ್ಟ ವಿಯೇ್ಟ್ನಾಂ ವಿರುದ್ಧ ಯು.ಎಸ್ ನ ಬರ್ಬರ ಯುದ್ಧದ ವಿರುದ್ಧ ತೀವ್ರ ಆಕ್ರೋಶ, ಜನಾಂದೋಲನ ಭುಗಿಲೆ್ದ್ದಿತ್ತು. ಯು.ಎಸ್ ನ ವಿ.ವಿ ವಿದ್ಯಾರ್ಥಿಗಳು ಇದರ ಮುಂಚೂಣಿಯಲ್ಲಿದ್ದು , ಅಲ್ಲಿಗೆ ತೆರಳಿದ ಭಾರತ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳನ್ನು ಎಡ ಸಮರಶೀಲ ರಾಜಕೀಯದತ್ತ ಸೆಳೆದ ಚಳುವಳಿಯಾಗಿತ್ತು.
ಎಪ್ರಿಲ್ 30, 1975ರಂದು, ಅಂದರೆ ಇಂದಿಗೆ 50 ವರ್ಷಗಳ ಹಿಂದೆ ಸೈಗಾನ್ ನಲ್ಲಿದ್ದ ಗೇಟ್ ಒಡೆದು ಗೆರಿಲ್ಲಾ ಸೈನ್ಯದ ಟ್ಯಾಂಕ್ ಯು.ಎಸ್ ರಾಯಭಾರ ಕಚೇರಿಯ ಆವರಣವನ್ನು ಪ್ರವೇಶಿಸಿತು. ಆಗ ಯು.ಎಸ್ ವೈಮಾನಿಕ ಹೆಲಿಕಾಪ್ಟರುಗಳು ಅಲ್ಲಿನ ಸಿಬ್ಬಂದಿ ಮತ್ತು ಬೆಂಭಲಿಗರನ್ನು ಹತ್ತಿರದ ಹಡಗುಗಳಿಗೆ ಒಯ್ಯುವ ದೃಶ್ಯ ಇಡಿ ಜಗತ್ತಿನ ಜನಕ್ಕೆ ರೋಮಾಂಚನ ತಂದಿತ್ತು. 20 ದೀರ್ಘ ವರ್ಷಗಳ ಕಾಲ ಗೆರಿಲ್ಲಾ ಯುದ್ಧದ ನಂತರ ಜಗತ್ತಿನ ಅತ್ಯಂತ ಪ್ರಬಲವಾದ ಮಿಲಿಟರಿ ಶಕ್ತಿ ಪರಾಭವ ಹೊಂದಿ ಪಲಾಯನ ಮಾಡಿದ ಅವಮಾನಕಾರಿ ಕ್ಷಣವಾಗಿತ್ತು. ಇಂದು ವಿಯೇಟ್ನಾಂ ದೇಶದ ಏಕೀಕರಣ ಮತ್ತು ದಕ್ಷಿಣ ವಿಯೇ್ಟನಾಮಿನ ಪೂರ್ಣ ವಿಮೋಚನೆಯ ಸುವರ್ಣೋತ್ಸವವನ್ನು ಆಚರಿಸಲಾಗುತ್ತಿದೆ. ಈಗ ಹೊ ಚಿ ಮಿನ್ ಎಂದು ಮರುನಾಮಕರಣ ಮಾಡಲಾದ (ಹಿಂದಿನ ಸೈಗಾನ್) ನಗರದಲ್ಲಿ ಸಾವಿರಾರು ಜನ ಭಾಗವಹಿಸಿದ ಭಾರೀ ಮಿಲಿಟರಿ ಪರೇಡ್ ಮತ್ತಿತರ ಮೆರವಣಿಗೆ ಸಂಭ್ರಮದಿಂದ ಜರುಗಿದೆ. ವಿಮೋಚನೆಯ ನಂತರ ಸಮಾಜವಾದಿ ವ್ಯವಸ್ಥೆ ಅಂಗೀಕರಿಸಿದ ವಿಯೇಟ್ನಾಂ ಆರ್ಥಿಕವಾಗಿ, ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಅಗಾಧ ಪ್ರಗತಿ ಸಾಧಿಸಿದ್ದು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಏಶ್ಯಾದ ದೇಶಗಳಲ್ಲೊಂದಾಗಿದೆ.
ಜಪಾನಿ, ಯು.ಎಸ್ ಸಾಮ್ರಾಜ್ಯಶಾಹಿಗಳ ವಿರುದ್ಧ ದಶಕಗಳ ಸತತ ಹೋರಾಟ
ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ಧೀರೋದ್ದಾತ್ತ ಹೋರಾಟದಲ್ಲಿ ಪುಟ್ಟ ವಿಯೇಟ್ನಾಂ ಗೆ ಶತಮಾನಗಳ ಇತಿಹಾಸವಿದೆ. ಐನೂರು ವರ್ಷಕ್ಕೂ ಹಿಂದೆ ಚೀನೀ ಸಾಮ್ರಾಜ್ಯಶಾಹಿ, ಕಳೆದ ಎರಡು ಶತಮಾನಗಳಲ್ಲಿ ಫ್ರೆಂಚ್ ವಸಾಹತುಶಾಹಿ, ಜಪಾನಿ ಮತ್ತು ಯು.ಎಸ್ ಸಾಮ್ರಾಜ್ಯಶಾಹಿ ವಿರುದ್ಧ ಅದು ಸತತವಾಗಿ ಹೋರಾಡಿದೆ. ಇವೆಲ್ಲದರಲ್ಲಿ ವಿಯೇಟ್ನಾಮಿ ರೈತರು ಪ್ರಮುಖ ಪಾತ್ರ ವಹಿಸಿದ್ದಾರೆ. 19ನೇ ಶತಮಾನದಲ್ಲಿ (1880ರ ಧಶಕದಲ್ಲಿ)ಫ್ರೆಂಚ್ ವಸಾಹತುವಾದ ವಿಯೇಟ್ನಾಂ ಅದರ ವಿರುದ್ಧ ಹೋರಾಢುತ್ತಲೇ ಬಂದಿತ್ತು. ಈ ಹೋರಾಟದಲ್ಲಿ ಹಲವು ಚಳುವಳಿಗಳು ಸಂಘಟನೆಗಳನ್ನು ವಿಯೇಟ್ನಾಮಿ ಜನ ಹುಟ್ಟು ಹಾಕಿದ್ದಾರೆ, ಬೆಂಬಲಿಸಿದ್ದಾರೆ. ಆದರೆ ಅದಕ್ಕೆ ದೀರ್ಘ ಪರಿಣಾಮಕಾರಿ ಅಪ್ರತಿಮ ನಾಯಕತ್ವ ಕೊಟ್ಟಿದ್ದು 1925ರಲ್ಲಿ ಯೂತ್ ಲೀಗ್ ಮೂಲಕ ವಿಮೋಚನಾ ಚಳುವಳಿ ಆರಂಭಿಸಿದ ಹೊ ಚಿ ಮಿನ್ ಮತ್ತು ಅವರ ನಾಯಕತ್ವದ ವಿಯೇಟ್ನಾಂ ಕಮ್ಯುನಿಸ್ಟ್ ಪಕ್ಷ.
ಹೊ ಚಿ ಮಿನ್ ಮತ್ತು ಕಮ್ಯುನಿಸ್ಟ್ ಪಕ್ಷದ ನಾಯಕತ್ವದಲ್ಲಿ ವಿಯೇಟ್ನಾಂ ರೈತರು ಹಲವು ದಶಕಗಳ ಕಾಲ ನಡೆಸಿದ ಹೋರಾಟಕ್ಕೆ ಸರಿಗಟ್ಟುವ ಹೋರಾಟ ಬಹುಶಃ ಜಗತ್ತಿನಲ್ಲೇ ಇಲ್ಲ. 1930ರ ದಶಕದಿಂದ 1944 ರ ವರೆಗೆ ಫ್ರೆಂಚ್ ವಸಾಹತುಶಾಹಿಯ ವಿರುದ್ಧ 1944-45ರಲ್ಲಿ ಜಪಾನಿ ಫ್ಯಾಸಿಸ್ಟರ ವಿರುದ್ಧ, 1945-54 ಅವಧಿಯಲ್ಲಿ ಮತ್ತೆ ಬಂದ ಫ್ರೆಂಚ್ ವಸಾಹತುಶಾಹಿ ವಿರುದ್ಧ, 1954ರಲ್ಲಿ ಉತ್ತರ ವಿಯೇಟ್ನಾಂ ಸ್ವತಂತ್ರವಾದರೂ ಯು.ಎಸ್ ಸಾಮ್ರಾಜ್ಯಶಾಹಿ ಬೆಂಬಲಿತ ದಕ್ಷಿಣ ವಿಯೇಟ್ನಾಂ ಕೈಗೊಂಬೆ ಸರ್ವಾಧಿಕಾರದ ವಿರುದ್ಧ ಸತತ ಹೋರಾಟದಲ್ಲಿ ತೊಡಗಿತ್ತು. 1955-75 ಅವಧಿಯಲ್ಲಿ ಎರಡು ದಶಕಗಳ ಕಾಲ ನಡೆದ ಭೀಕರ ಗೆರಿಲ್ಲಾ ಯುದ್ಧ ನಡೆಸಿದ ನಂತರವೇ ವಿಯೇಟ್ನಾಂ ನ ಪೂರ್ಣ ವಿಮೋಚನೆ ಸಾಧ್ಯವಾಯಿತು.
1941ರಲ್ಲಿ ಸ್ಥಾಪಿತವಾದ ಜನತಾ ವಿಮೋಚನಾ ಸೈನ್ಯ – ಫ್ರೆಂಚ್, ಜಪಾನೀ ಮತ್ತು ಯು.ಎಸ್ – ಈ ಮೂರೂ ಜಗತ್ತಿನ ಪ್ರಬಲ ಮಿಲಿಟರಿ ಬಲದ ವಿರುದ್ಧ ಮೂರುವರೆ ದಶಕಗಳ ಕಾಲ ಸಶಸ್ತ್ರ ಹೋರಾಟ ನಡೆಸಿತು. ಇದರ ಮಿಲಿಟರಿ ನಾಯಕತ್ವ ವಹಿಸಿದ್ದು ಜನರಲ್ ಗಿಯಾಪ್ ಎಂಬ ಪ್ರಸಿದ್ಧ ನಾಯಕ. 1954ರಲ್ಲಿ ಆದ ಪ್ಯಾರಿಸ್ ಒಪ್ಪಂದದ ನಂತರ ಉತ್ತರ ವಿಯೇ್ಟ್ನಾಮಿನಲ್ಲಿ ಹೊ ಚಿ ಮಿನ್ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸರಕಾರ ರಚನೆಯಾಯಿತು. ಆದರೆ ಯು.ಎಸ್ ಇದನ್ನು ಮಾನ್ಯ ಮಾಡದೆ ದಕ್ಷಿಣ ವಿಯೇ್ಟ್ನಾಮಿನಲ್ಲಿ ಕೈಗೊಂಬೆ ಸರಕಾರ ಸ್ಥಾಪಿಸಿ ಅದಕ್ಕೆ ಪೂರ್ಣ ರಾಜಕೀಯ, ಮಿಲಿಟರಿ, ಹಣಕಾಸಿನ ಬೆಂಬಲ ಕೊಟ್ಟಿತು.
ನಾವು ಸೋಲಿಸಿದ್ದು ನೆಲದ ಅಡಿಯಿಂದ
ಅದರಲ್ಲೂ ಕೊನೆಯ ಎರಡು ದಶಕಗಳಲ್ಲಿ ಯು.ಎಸ್ ದೈತ್ಯ ವೈಮಾನಿಕ ಪಡೆಗಳ ವಿರುದ್ಧ ಹೋರಾಡ ಗೆದ್ದಿದ್ದು ನಂಬಲಸಾಧ್ಯವಾದ ಚಮತ್ಕಾರ. 10 ಸಾವಿರಲ್ಲೂ ಹೆಚ್ಚು ಗೆರಿಲ್ಲಾಗಳು ಹಗಲಿನಲ್ಲಿ ಅಡಗಿರಬಹುದಾದ ಮೈಲಿಗಟ್ಟಲೆ ಸುರಂಗ ಮಾರ್ಗ ತೋಡಲಾಯಿತು. ದಕ್ಷಿಣ ಮತ್ತು ಉತ್ತರ ವಿಯೇಟ್ನಾಂ ನಡುವೆ ಆಹಾರ,, ಶಸ್ತ್ರಾಸ್ತ್ರ ಸಂಪರ್ಕ ಗಳಿಗೆ ಈ ಸುರಂಗ ಮಾರ್ಗಗಳನ್ನು ಬಳಸಲಾಯಿತು. ಸೇನಾ ಮುಖ್ಯಕಚೇರಿ ಎಲ್ಲವೂ ನೆಲಮಾಳಿಗೆಗಳಲ್ಲಿ ಇದ್ದವು. “ಅಮೆರಿಕನ್ನರನ್ನು ನಾವು ಸೋಲಿಸಿದ್ದು ಆಕಾಶದಲ್ಲಿ ಅಲ್ಲ, ನೆಲದ ಮೇಲೂ ಅಲ್ಲ. ನೀರಿನಲ್ಲೂ ಅಲ್ಲ. ಆಕಾಶ, ನೀರಿನಲ್ಲೂ ಮತ್ತು ನೆಲದಲ್ಲೂ ಅವರು ಅಜೇಯರಾಗಿದ್ದರು. ಅವರನ್ನು ನಾವು ಸೋಲಿಸಿದ್ದು ನೆಲದ ಅಡಿಯಿಂದ, ನಮ್ಮ ಸುರಂಗ ಮಾರ್ಗಗಳಿಂದ.” ಯೆಂದು ವಿಯೇಟ್ನಾಂ ನಾಯಕರು ಉದ್ಗರಿಸಿದ್ದಾರೆ. ಸಾವಿರಾರು ಗೆರಿಲ್ಲಾ ಸೈನಿಕರು ಹಗಲಲ್ಲಿ ಈ ಸುರಂಗ ಮಾರ್ಗಗಳಲ್ಲಿ ಅಡಗಿರುತ್ತಿದ್ದರು. ರಾತ್ರಿಯಾಗುತ್ತಿದ್ದಂತೆ ಯು.ಎಸ್ ಸೈನ್ಯ ತುಕಡಿಗಳ ಮೇಲೆ ಮಿಂಚಿನ ದಾಳಿ ನಡೆಸುತ್ತಿದ್ದರು. ಶಸ್ತ್ರಾಸ್ತ್ರಗಳ ತಯಾರಿಕೆ, ರಿಪೇರಿ, ಬಿದಿರಿನಿಂದ ಮಾಡಿದ ವಿಮಾನ-ವಿರೋಧಿ ತೋಪುಗಳು ಈ ಭೂಗತ ನೆಲೆಗಳಲ್ಲೇ ತಯಾರಾಗುತ್ತಿದ್ದವು. ನೆರೆಯ ರೈತರು ಅವರಿಗೆ ಅಗತ್ಯ ಆಹಾರ ಇತ್ಯಾದಿ ಪೂರೈಸುತ್ತಿದ್ದರು.
ಈ ಮೂರು ಪ್ರಬಲ ಮಿಲಿಟರಿಗಳ ವಿರುದ್ಧ ಹೋರಾಟದಲ್ಲಿ ಈ ವಿಮೋಚನಾ ಗೆರಿಲ್ಲಾ ಸೈನ್ಯದ ಜತೆ ಇಡೀ ವಿಯೇಟ್ನಾಂ ಜನತೆ ನಿಂತಿತ್ತು. ಗೆರಿಲ್ಲಾ ಸೈನಿಕರು ಮತ್ತು ವಿಯೇಟ್ನಾಮಿಗಳು ಈ ಮೂರು ಮಿಲಿಟರಿ ಶಕ್ತಿಗಳ ಭೀಕರ ಕೊಲೆ, ಚಿತ್ರಹಿಂಸೆ, ಅತ್ಯಾಚಾರ, ಹಿಂಸಾಚಾರಗಳನ್ನು ಸಹಿಸಿ ಧೃತಿಗೆಡದೆ ಹೋರಾಡಿದರು. ಕೊನೆಯ ಎರಡು ದಶಕಗಳಲ್ಲಿ (1955-75) 4 ರಿಂದ 6 ಲಕ್ಷ ಗೆರಿಲ್ಲಾ ಸೈನಿಕರು, 4ರಿಂದ 6 ಲಕ್ಷ ವಿಯೆಟ್ನಾಮಿ ಜನ ಸತ್ತರು. 2-3 ಲಕ್ಷ ಯು.ಎಸ್ ಸೈನಿಕರು ಸತ್ತರು. ಇದು ಬಹುಶಃ ಎರಡನೆ ಮಹಾಯುದ್ಧ ಬಿಟ್ಟರೆ ಅತಿ ವಿನಾಶಕಾರಿ ಯುದ್ಧವಾಗಿತ್ತು.
ಎರಡನೇ ಮಹಾಯುದ್ಧಕ್ಕಿಂತ ಹೆಚ್ಚು ಬಾಂಬ್ ಸುರಿಮಳೆ
ವಿಯೇಟ್ನಾಂ ಮೇಲೆ ಅಣ್ವಸ್ತ್ರ ಬಿಟ್ಟು ಎಲ್ಲಾ ರೀತಿಯ ಸಾಮೂಹಿಕ ವಿನಾಶದ ಮಾರಕಾಸ್ತ್ರಗಳನ್ನು ಬಳಸಲಾಯಿತು. ಕೊನೆಯ ದಶಕದಲ್ಲೇ (1965-75) ನಾಪಾಂ ಮುಂತಾದ ಭೀಕರ ಬಾಂಬುಗಳು ಸೇರಿದಂತೆ 75 ಲಕ್ಷ ಟನ್ ಬಾಂಬ್ ನ ಸುರಿಮಳೆ ಗೈಯ್ಯಲಾಯಿತು. ಈ ಯುದ್ಧ ವಿಯೇಟ್ನಾಂ ಮಾತ್ರವಲ್ಲದೆ ನೆರೆಯ (ಮತ್ತು ವಿಯೇಟ್ನಾಂ ಗೆರಿಲ್ಲಾ ನೆಲೆಗಳನ್ನು ಹೊಂದಿದ್ದ) ಲಾವೋಸ್, ಕೆಂಬೋಡಿಯಾಗಳ ಮೇಲೂ ಬಾಂಬ್ ದಾಳಿಗಳಾದವು. ನಾಪಾಂ ರಾಸಾಯನಿಕ ಬಾಂಬುಗಳಲ್ಲದೆ ಸಸ್ಯನಾಶ ಮಾಡುವ ಭೂಮಿ ಬಂಜರು ಮಾಡುವ ಏಜೆಂಟ್ ಆರೇಂಜ್ ವ್ಯಾಪಕವಾಗಿ ಸಿಂಪಡಿಸಲಾಯಿತು. ಈ ಮೂರು ದೇಶಗಳ ಮೇಲೆ ಯು.ಎಸ್ ನಡೆಸಿದ ಬಾಂಬ್ ದಾಳಿ ಒಟ್ಟು ಎರಡನೇ ಮಹಾಯುದ್ಧದಲ್ಲಿ ಹಾಕಲಾದ ಬಾಂಬುಗಳಿಗಿಂತ ಹೆಚ್ಚು ಎಂಬುದೇ ಈ ಯು.ಎಸ್ ಯುದ್ಧದ ಕ್ರೌರ್ಯ, ಭೀಕರತೆಯನ್ನು ಸ್ಪಷ್ಟಪಡಿಸುತ್ತದೆ.
ಇಂತಹ ಭೀಕರ ದಾಳಿಯನ್ನು ಎದುರಿಸಿ ಗೆಲ್ಲಲೂ ಸಾಧ್ಯವಾದ್ದು ವಿಯೇಟ್ನಾಮಿಗಳ ಸ್ವಾತಂತ್ರ್ಯ ಮತ್ತು ಸಮಾನತೆಗಳ ಹಂಬಲ, ಅಪತ್ರಿಮ ಕೆಚ್ಚು ಮತ್ತು ಐಕ್ಯತೆಗಳಿಂದ. ಇದರಿಂದ ಹುಟ್ಟಿದ ಹೊ ಚಿ ಮಿನ್, ಕಮ್ಯುನಿಸ್ಟ್ ಪಕ್ಷ, ವಿಯೆಟ್ ಮಿನ್ ಎಂಬ ರಾಷ್ಟ್ರೀಯ ಐಕ್ಯರಂಗ ಈ ಹೋರಾಟದ ಸಮರ್ಥ ನಾಯಕತ್ವ ನಿಭಾಯಿಸಿತು.
ರಶ್ಯನ್, ಚೀನಾ ಕ್ರಾಂತಿಗಳ ನಂತರ ವಿಯೇಟ್ನಾಮ್ ನ ಸಮಾಜವಾದಿ ವ್ಯವಸ್ಥೆಯತ್ತ ನಡೆದ ರಾಷ್ಟ್ರೀಯ ವಿಮೋಚನಾ ಹೋರಾಟ ವಾಗಿ ಇಡೀ ಜಗತ್ತಿನ ಮೇಲೆ ತೀವ್ರ ಪರಿಣಾಮ ಬೀರಿತು. 1975ರಲ್ಲಿ ಈ ಪರಾಭವದ ನಂತರ ಯು.ಎಸ್ ಸಾಮ್ರಾಜ್ಯಶಾಹಿ 2003 ಇರಾಕ್ ಯುದ್ಧದ ವರೆಗೆ ದೊಡ್ಡ ಮಿಲಿಟರಿ ಮಧ್ಯಪ್ರವೇಶಕ್ಕೆ ಹಿಂಜರಿಯುವಂತೆ ಮಾಡಿತು. ಜಾಗತಿಕ ದಕ್ಷಿಣದ ಬಡದೇಶಗಳಲ್ಲಿ ಸಾಮ್ರಾಜ್ಯಶಾಹಿ-ವಿರೋಧಿ ಹೋರಾಟಕ್ಕೆ ಅದಮ್ಯ ಸ್ಥೈರ್ಯ, ಆತ್ಮವಿಶ್ವಾಸ ಮೂಡಿಸಿತು. 1960-80ರ ದಶಕದ ವರೆಗೂ ಅಭಿವೃದ್ಧ ಪಾಶ್ಚಿಮಾತ್ಯ ದೇಶಗಳಲ್ಲೂ ಅವರ ಆಳುವ ವರ್ಗಗಳ ‘ಸಾಮ್ರಾಜ್ಯಶಾಹಿ ಮುಖದ ಬಗ್ಗೆ ಪ್ರಜ್ಞೆ ಮೂಡಿಸಿತ್ತು.
ಕಳೆದ ಕೆಲವು ದಶಕಗಳಿಂದ ಮಾರುಕಟ್ಟೆ ಸಮಾಜವಾದಿ ವ್ಯವಸ್ಥೆ ನೀತಿ ಪಾಲಿಸುತ್ತಿದ್ದು ವಿಯೇಟ್ನಾಂ ಕೃಷಿ, ಕೈಗಾರಿಕೆಗಳಲ್ಲಿ ಮಾನವ ಅಭಿವೃದ್ಧಿ ಸೂಚಕದಲ್ಲಿ ಉತ್ತ ಮ ಪ್ರಗತಿ ಸಾಧಿಸಿದೆ. ಕೊವಿಡ್ ಮಹಾ ಸಾಂಕ್ರಾಮಿಕವನ್ನು ಉತ್ತಮವಾಗಿ ನಿಭಾಯಿಸಿತು. ವಿಯೇಟ್ನಾಂ ಸಾಮ್ರಾಜ್ಯಶಾಹಿ ಹೋರಾಟ ಮತ್ತು ಸಮಾಜವಾದಿ ವ್ಯವಸ್ಥೆ ಕಟ್ಟುವ ಕಾಯಕ ಈಗಲೂ ಮೂರನೇ ಜಗತ್ತಿನ ದೇಶಗಳ ಜನತೆಗೆ ಸ್ಫೂರ್ತಿದಾಯಕವಾಗಿದೆ.