ವಿದ್ಯುತ್ ನೌಕರರ ಮುಷ್ಕರಕ್ಕೆ ಸಂಯುಕ್ತ ಹೋರಾಟ-ಕರ್ನಾಟಕದ ಬೆಂಬಲ

ಬೆಂಗಳೂರು: ವಿದ್ಯುತ್ ತಿದ್ದುಪಡಿ ಮಸೂದೆ-2021 ನ್ನು ಪ್ರತಿರೋಧಿಸಿ ಅಖಿಲ ಭಾರತ ವಿದ್ಯುತ್ ನೌಕರರ ಹಾಗೂ ಇಂಜಿನೀಯರುಗಳ ಸಂಘಗಳ ಸಮನ್ವಯ ಸಮಿತಿ (NCCOEEE) ಕರೆಯ ಮೇರೆಗೆ, ದೇಶದ್ಯಾಂತ ಎಲ್ಲಾ ವಿದ್ಯುತ್ ಕಂಪನಿ ಹಾಗೂ ಸಂಸ್ಥೆಗಳ ನೌಕರರು ಮತ್ತು ಇಂಜಿನೀಯರುಗಳು ಆಗಸ್ಟ್‌ 10, 2021ರಂದು 24 ತಾಸುಗಳ ಕಾಲ ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ ಮುಷ್ಕರ ನಡೆಸಲಿದ್ದಾರೆ.

ಸದರಿ ಮುಷ್ಕರಕ್ಕೆ ಸಂಯುಕ್ತ ಹೋರಾಟ- ಕರ್ನಾಟಕ ರಾಜ್ಯ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಸಂಯುಕ್ತ ಹೋರಾಟ – ಕರ್ನಾಟಕ ದ ರಾಜ್ಯ ಘಟಕದ ಸಮಿತಿ ಸಭೆಯು ಶ್ರೀ ಬಡಗಲಪುರ ನಾಗೇಂದ್ರರವರ ಅಧ್ಯಕ್ಷತೆಯಲ್ಲಿ ನಡೆದು ಮುಷ್ಕರಕ್ಕೆ ಬೆಂಬಲ ಘೋಷಿಸಿದೆ.

ಕಳೆದ ಆಗಸ್ಟ್‌–ಸೆಪ್ಟಂಬರ್ ತಿಂಗಳಿನಿಂದಲೂ ದೇಶದಾದ್ಯಂತ ರೈತರು ಹಾಗೂ ಕಾರ್ಮಿಕರು, ನಾಗರೀಕರು  ಕಾರ್ಪೋರೇಟ್ ಕಂಪನಿಗಳ ಲೂಟಿಗೆ ದೇಶದ ವಿದ್ಯುತ್ ಕ್ಷೇತ್ರವನ್ನು ತೆರೆಯುವ ಈ ಕರಾಳ ಮಸೂದೆಯನ್ನು ಕೇಂದ್ರ ಸರಕಾರ ವಾಪಾಸು ಪಡೆಯುವಂತೆ ಹೋರಾಟದಲ್ಲಿ ತೊಡಗಿದ್ದಾರೆ. ಇದೀಗ ವಿದ್ಯುತ್ ಕಂಪನಿಗಳು ಹಾಗೂ ನಿಗಮ ಮುಂತಾದ ಸಂಸ್ಥೆಗಳ ನೌಕರರು ಮತ್ತು ಇಂಜಿನೀಯರುಗಳು ದೇಶವ್ಯಾಪಿಯಾಗಿ ಕರಾಳ ಕಾಯ್ದೆಗೆ ತೀವ್ರ ಪ್ರತಿರೋಧ ಒಡ್ಡಲು ಮುಂದಾಗಿರುವುದು ರೈತ ಚಳುವಳಿಗೆ ಆನೆ ಬಲ ಬಂದಂತಾಗಿದೆ ಎಂದು ಸಂಯುಕ್ತ ಹೋರಾಟ-ಕರ್ನಾಟಕ ಸಂಘಟನೆಯು ತಿಳಿಸಿದೆ.

ರೈತ ವಿರೋಧಿಯಾದ ಕೇಂದ್ರ ಸರಕಾರದ ಕೃಷಿ ಹಾಗೂ ಕೈಗಾರಿಕಾಭಿವೃದ್ಧಿಯ ವಿರೋಧಿಯಾದ ಮತ್ತು ಸಾರ್ವಜನಿಕ ರಂಗದ ವಿದ್ಯುತ್ ಕಂಪನಿಗಳ ಖಾಸಗೀಕರಣವನ್ನು ಮತ್ತು ರೈತರ ಪಂಪ್ ಸೆಟ್ ಹಾಗೂ ಭಾಗ್ಯ ಜ್ಯೋತಿ ಮತ್ತು ಮನೆಗಳ ವಿದ್ಯುತ್‌ಗೆ  ಮುಂಗಡ ಹಣ ಪಡೆಯುವ ಮೀಟರ್ ಅಳವಡಿಕೆಯ ಪ್ರಸ್ತಾಪಗಳಿರುವ ಕರಾಳ ವಿದ್ಯುತ್ ಮಸೂದೆಯನ್ನು ವಾಪಾಸು ಪಡೆಯುವಂತೆ ಸಂಯುಕ್ತ ಹೋರಾಟ-ಕರ್ನಾಟಕ ಆಗ್ರಹಿಸಿದೆ.

ಈ ಕಾಯ್ದೆ ಜಾರಿಯಾದಲ್ಲಿ ಇದು ದೇಶದ ಕೃಷಿಯನ್ನು ಸರ್ವನಾಶ ಮಾಡಲಿದೆ, ಭಾಗ್ಯಜ್ಯೋತಿ ಬಳಕೆದಾರರನ್ನು ಕತ್ತಲಲ್ಲಿಡುತ್ತದೆ. ಸಣ್ಣ ಕೈಗಾರಿಕೆಗಳನ್ನು ಹೊಸಕಿ ಹಾಕುತ್ತದೆ ಅದೇ ರೀತಿ ಗ್ರಾಹಕರನ್ನು ಲೂಟಿಗೊಳಪಡಿಸಲಿದೆ ಎಂದು ಸಂಘಟನೆಯು ತಿಳಿಸಿದೆ.

ಸಂಯುಕ್ತ ಹೋರಾಟ-ಕರ್ನಾಟಕ ಪರವಾಗಿ ರಾಜ್ಯ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಸಂಯೋಜಕರುಗಳಾದ ಬಡಗಲಪುರ ನಾಗೇಂದ, ಜಿ.ಸಿ. ಬಯ್ಯಾರೆಡ್ಡಿ, ಗುರುಪ್ರಸಾದ್ ಕೆರೆಗೋಡು, ಕೆ.ವಿ. ಭಟ್, ದೇವಿ, ವಾಸುದೇವ ರೆಡ್ಡಿ, ಜಯಣ್ಣ, ಹಾಗೂ ರಾಜ್ಯ ಮುಖಂಡರಾದ ವಿಕಾಸ್ ಸೋಪ್ಪಿನ್,

ಪ್ರಕಟಣೆ ನೀಡಿದ್ದಾರೆ. ಅಲ್ಲದೆ, ಎಲ್ಲಾ ಅಂಗ ಸಂಘಟನೆಗಳು ಮತ್ತು ಜಿಲ್ಲಾ ಹಾಗೂ ತಾಲೂಕಾ ಘಟಕಗಳು ವಿದ್ಯುತ್ ನೌಕರರ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *