ಸದ್ಯಕ್ಕೆ ವಿದ್ಯುತ್ ದರ ಹೆಚ್ಚಳವಿಲ್ಲ-ವರ್ಷದಲ್ಲಿ ಒಮ್ಮೆ ಮಾತ್ರ ಪರಿಷ್ಕರಣೆ: ಸಚಿವ ಸುನೀಲ್‌ ಕುಮಾರ್‌

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಹೆಚ್ಚಿಸುವ ಕುರಿತು ವಿದ್ಯುತ್‌ ಮಂಡಳಿ ಹೇಳಿಕೆ ಹೊರಬಿದ್ದ ಕೂಡಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಧನ ಸಚಿವ ಸುನೀಲ್‌ ಕುಮಾರ್, ವಿದ್ಯುತ್ ದರ ಹೆಚ್ಚಳಕ್ಕೆ ರಾಜ್ಯ ಸರಕಾರ ಯಾವುದೇ ಸೂಚನೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿದ್ಯುತ್ ದರ ಹೆಚ್ಚಿಸಿರುವ ಕುರಿತು ರಾಜ್ಯದ ಕೆಲವೆಡೆ ತಪ್ಪು ಸಂದೇಶ ರವಾನೆಯಾಗಿದೆ. ಆದರೆ ರಾಜ್ಯ ಸರಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾಪವಿಲ್ಲ.‌ ವಿದ್ಯುತ್ ದರವನ್ನು ವರ್ಷದಲ್ಲಿ ಒಮ್ಮೆ ಮಾತ್ರ ಪರಿಷ್ಕರಿಸುವ ನಿಯಮವಿದೆ. ಹೀಗಾಗಿ ದರ ಹೆಚ್ಚಳದ ವದಂತಿ ಬಗ್ಗೆ ಸಾರ್ವಜನಿಕರು ಕಿವಿಗೊಡದಿರಿ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ 13 ಉಷ್ಣ ವಿದ್ಯುತ್ ಸ್ಥಾವರಗಳಿವೆ. ಇವುಗಳ ಕಾರ್ಯ ನಿರ್ವಹಣೆಗೆ ಅಗತ್ಯವಾದ ಕಲ್ಲಿದ್ದಲು ಹಾಗೂ ಪೆಟ್ರೋಲಿಯಂ ಉತ್ಪನ್ನಗಳ ಅಗತ್ಯವಿರುತ್ತದೆ. ಇವುಗಳ ಮಾರುಕಟ್ಟೆ ದರದ ಏರಿಳಿತ ಆಧರಿಸಿ ವಿದ್ಯುತ್ ಸರಬರಾಜು‌‌ ಕಂಪನಿಗಳ ವ್ಯಾಪ್ತಿಯಲ್ಲಿ‌ ಪ್ರತಿ ಮೂರು ತಿಂಗಳಿಗೊಮ್ಮೆ ಹೊಂದಾಣಿಕೆ ವೆಚ್ಚ ಪರಿಷ್ಕರಣೆ ನಡೆಸುವುದು ನಿರಂತರ ಪ್ರಕ್ರಿಯೆ ಆಗಿರುತ್ತದೆ. ಈ ಸಂಬಂಧ ಎಸ್ಕಾಂಗಳು ಸಲ್ಲಿಸಿದ ಹೊಂದಾಣಿಕೆ ವೆಚ್ಚ ಪ್ರಸ್ತಾಪ ಹಿನ್ನೆಲೆಯಲ್ಲಿ‌ ಕೆಇಆರ್‌ಸಿ ಈ ಹಿಂದೆ ದರ ಪರಿಷ್ಕರಿಸಿದೆ ಎಂದರು.

ಹೊಂದಾಣಿಕೆ ವೆಚ್ಚ ಪರಿಷ್ಕರಣೆ ಕೆಇಆರ್‌ಸಿ ವಿವೇಚನಾಧಿಕಾರವಾಗಿದ್ದು‌‌ ಕಲ್ಲಿದ್ದಲು ದರ ಆಧರಿಸಿ ಈ ಹೊಂದಾಣಿಕೆ ವೆಚ್ಚ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು. ಹೀಗಾಗಿ ಈ ಪ್ರಕ್ರಿಯೆಯನ್ನು ವಾರ್ಷಿಕ ದರ ಪರಿಷ್ಕರಣೆ ಜತೆ ಥಳುಕು ಹಾಕುವ ಅಗತ್ಯವಿಲ್ಲ ಎಂದು ಸುನೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *