ಮಂಗಳೂರು ಫೆ 20: 2021-22 ಆರ್ಥಿಕ ವರ್ಷದಲ್ಲಿ ಮೆಸ್ಕಾಂಗೆ 943.26 ಕೋಟಿ ರೂ ಆದಾಯದ ಕೊರತೆ ನಿಭಾಯಿಸುವ ಉದ್ದೇಶದಿಂದ ವಿದ್ಯುತ್ ಪ್ರತಿ ಯೂನಿಟ್ ಗೆ ಸರಾಸರಿ 1.67 ರೂ ಸುಂಕ ಹೆಚ್ಚಿಸುವ ಪ್ರಸ್ತಾಪಕ್ಕೆ ಡಿವೈಎಫ್ಐ ದ.ಕ ಜಿಲ್ಲಾ ಸಮಿತಿ ವಿರೋಧ ವ್ಯಕ್ತಪಡಿಸುತ್ತದೆ ಮತ್ತು ಈ ಪ್ರಸ್ತಾಪವನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದ.
ನಿನ್ನೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣಾ ಆಯೋಗ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ವಿಚಾರಣಾ ಸಭೆಯಲ್ಲಿ ಈ ಪ್ರಸಾಪವನ್ನು ಮಂಡಿಸಿದೆ ಈ ಪ್ರಸ್ತಾಪಕ್ಕೆ ಈಗಾಗಲೇ ಸಾರ್ವಜನಿಕರಿಂದ ವಿರೋಧ ವ್ಯಕ್ತವಾಗಿದೆ. ಕೋರೋನಾ ಕಾಲದ ಈ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆಯನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾದ್ಯವಿಲ್ಲ. ಈಗಾಗಲೇ ಕೋರಾನಾದ ಕಾಲದಲ್ಲಿ ಉದ್ಯೋಗ ನಷ್ಟ, ಆರ್ಥಿಕ ಕುಸಿತ, ಪೆಟ್ರೋಲ್ ದರ ಏರಿಕೆ, ಗ್ಯಾಸ್ ದರ ಏರಿಕೆ ಮತ್ತು ಸಬ್ಸಿಡಿ ಕಡಿತಗಳು ಜನ ಸಾಮಾನ್ಯರ ಬದುಕಿನ ಮೇಲೆ ದೊಡ್ಡ ಹೊಡೆತ ನೀಡಿದೆ. ಇನ್ನು ಸಣ್ಣ ಪುಟ್ಟ ಕೈಗಾರಿಕೆಗಳು ಮತ್ತು ಉದ್ದಿಮೆಗಳು ಆರ್ಥಿಕ ಸಂಕಷ್ಟದಲ್ಲಿ ಬಹುತೇಕ ನಷ್ಟದಲ್ಲಿವೆ ಮತ್ತು ಹಲವು ಕೈಗಾರಿಕೆಗಳು ಮುಚ್ಚಿವೆ. ಇಂತಹ ಸಂದರ್ಭದಲ್ಲಿ ಮತ್ತೆ ವಿದ್ಯುತ್ ದರ ಏರಿಕೆಯ ಹೊರೆಯು ಇದು ಗಾಯದ ಮೇಲೆ ಬರೆ ಎಳೆದಂತೆ. ಈ ಹಿಂದೆ ನವಂಬರ್ ತಿಂಗಳಲ್ಲಿ ರಾಜ್ಯದ ಎಲ್ಲಾ ವಿದ್ಯುತ್ ಕಂಪೆನಿಗಳು ವಿದ್ಯುತ್ ದರವನ್ನು ಶೇ 5.4 ರಂತೆ ಸರಾಸರಿ 40 ಪೈಸೆ ಏರಿಕೆ ಮಾಡಿ ಈಗ ಮೂರು ತಿಂಗಳ ಅವಧಿಯಲ್ಲಿ ಮತ್ತೆ ಏರಿಕೆ ಮಾಡುತ್ತಿರುವುದು ಖಂಡನೀಯ.
ಆದ್ದರಿಂದ ಯಾವುದೇ ಕಾರಣಕ್ಕೂ ವಿದ್ಯುತ್ ದರ ಏರಿಕೆಯನ್ನು ಮಾಡದೆ ಸಾರ್ವಜನಿಕರ ಮುಂದಿಟ್ಟ ಪ್ರಸ್ತಾಪವನ್ನು ಮೆಸ್ಕಾಂ ಕಂಪನಿ ಕೂಡಲೇ ಕೈಬಿಡಬೇಕೆಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.