ಬೆಂಗಳೂರು; ಫೆ. 05 : ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭಗೊಂಡಿದ್ದು ವಿದ್ಯಾರ್ಥಿ ಸಮುದಾಯ ಬಸ್ ಪಾಸ್, ಹಾಸ್ಟೆಲ್, ವಿದ್ಯಾರ್ಥಿ ವೇತನ, ಸಾರಿಗೆ ಸಮಸ್ಯೆ ಹಾಗೂ ಶಿಕ್ಷಕ-ಉಪನ್ಯಾಸಕರ ನೇಮಕಾತಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಈಡೇರಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಜಿಲ್ಲಾ ಸಮಿತಿಯಿಂದ ಇಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಪೋಸ್ಟರ್ ಪ್ರದರ್ಶನ ಮತ್ತು ಪ್ರತಿಭಟನೆ ನಡೆಸಿದರು.
ಕಳೆದ ಪ್ರಸಕ್ತ ಸಾಲಿನಿಂದ ರಾಜ್ಯದ ವಿದ್ಯಾರ್ಥಿ ಸಮುದಾಯ ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ವಿದ್ಯಾರ್ಥಿ ಸಂಘಟನೆಗಳು ರಾಜ್ಯದೆಲ್ಲೆಡೆ ಹಲವು ಶೈಕ್ಷಣಿಕ ಬೇಡಿಕೆಗಳಿಗಾಗಿ ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ, ಆಳುವ ಸರ್ಕಾರಗಳು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಕೆಲಸ ಇಲ್ಲಿಯವರೆಗೆ ಯಾವುದೇ ದೊಡ್ಡ ಪ್ರಮಾಣದ ಪ್ರಯತ್ನ ಮಾಡಿಲ್ಲ. ಕೇವಲ ನೆಪ ಮಾತ್ರಕ್ಕೆ ಸ್ಪಂದಿಸಿದ್ದಂತೆ ಮಾಡಿ, ಪೂರ್ಣ ಪ್ರಮಾಣದಲ್ಲಿ ನುಣಚಿಕೊಂಡಿದೆ. ಇದು ಸರ್ಕಾರಗಳ ವಿದ್ಯಾರ್ಥಿ ವಿರೋಧಿದ್ರೋಹದ ನೀತಿಯನ್ನು ಎತ್ತಿತೋರಿಸುತ್ತದೆ ಎಂದು ಎಸ್ ಎಫ್ ಐ ರಾಜ್ಯ ಸಮಿತಿಯು ಅಸಮಾಧನವನ್ನು ವ್ಯಕ್ತಪಡಿಸಿದೆ.
ರಾಜ್ಯದ ಪ್ರತಿಷ್ಠಿತ ಕನ್ನಡ ವಿವಿ ಸೇರಿದಂತೆ ಯಾವ ವಿಶ್ವವಿದ್ಯಾಲಯಗಳಿಗೂ ಅಭಿವೃದ್ಧಿಗೆ ಹಣ ನೀಡಿದೇ, ಖಾಸಗಿ ವಿ.ವಿ ಗಳಿಗೆ ಉತ್ತೇಜನ ನೀಡುತ್ತಿದೆ. ಇದಕ್ಕೆ ಪುಷ್ಟಿಕರಿಸುವಂತೆ ಈಗಾಗಲೇ ರಾಜ್ಯ ಸರ್ಕಾರ ಇತ್ತೀಚೆಗೆ 3 ಖಾಸಗಿ ವಿ.ವಿ ಗಳಿಗೆ ಅನುಮೋದನೆ ನೀಡಿ ಶಿಕ್ಷಣದ ಖಾಸಗಿಕರಣಕ್ಕೆ ನೇರವಾಗಿ ವೇದಿಕೆಯನ್ನು ಒದಗಿಸಿಕೊಟ್ಟಿದೆ, ಇದು ಖಂಡನೀಯ ಎಂದು ಸಂಘಟನೆ ಆಗ್ರಹಿಸಿದೆ.
ರಾಜ್ಯದಲ್ಲಿ ಶಾಲಾ-ಕಾಲೇಜುಗಳು, ಹಾಸ್ಟೆಲ್ ಆರಂಭವಾಗಿರುವುದ್ದರಿಂದ ವಿದ್ಯಾರ್ಥಿ ಸಮುದಾಯ ಬಸ್ ಪಾಸ್, ಹಾಸ್ಟೆಲ್, ವಿದ್ಯಾರ್ಥಿ ವೇತನ, ಸಾರಿಗೆ ಸಮಸ್ಯೆ ಹಾಗೂ ಶಿಕ್ಷಕ-ಉಪನ್ಯಾಸಕರ ನೇಮಕಾತಿ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಅನುಭವಿಸುತ್ತಿದೆ. ಆನ್‌ಲೈನ್ ತರಗತಿ ನಡೆದಿವೆ ಎನ್ನುವ ಕಾರಣ ನೀಡಿ, ಪ್ರಾಕ್ಟಿಕಲ್ ತರಗತಿಗಳು ಇಲ್ಲದೆಯೂ ಪರೀಕ್ಷೆಗಳನ್ನು ನಡೆಸುವ ಕೆಲಸಕ್ಕೆ ಸರ್ಕಾರ ಮತ್ತು ವಿವಿ ಗಳು ಮುಂದಾಗಿವೆ. ಆನ್‌ಲೈನ್‌ತರಗತಿಗಳಿಂದ ವಂಚಿತರಾದ ವಿದ್ಯಾರ್ಥಿಗಳು ಈಗ ಪರೀಕ್ಷೆಗಳನ್ನು ಹೇಗೆ ತಾನೇ ಎದುರಿಸುತ್ತಾರೆ ಎಂಬುದನ್ನು ಸರ್ಕಾರ ಮತ್ತು ಇಲಾಖೆ ಮನಗಾಣಬೇಕು, ಪರಿಶಿಷ್ಟ ಜಾತಿ-ಪರಿಶಿಷ್ಟ ಪಗಂಡ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿ ವೇತನ ಕಡಿತ ಮಾಡಿರುವುದು ಈ ಸಮುದಾಯದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ದೂರವಿಡುವ ಹುನ್ನಾರವಾಗಿದೆ. ಇದನ್ನು ಕೈಬಿಟ್ಟು ಮುಂದಿನ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕು. ವಿದ್ಯಾರ್ಥಿ ವಿರೋಧಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಜಾರಿಯನ್ನು ಸರ್ಕಾರ ಕೈಬಿಡಬೇಕು ಜೊತೆಗೆ ಕೇಂದ್ರ ಬಜೆಟ್ ಶಿಕ್ಷಣದ ಖಾಸಗಿಕರಣ ಕೇಂದ್ರೀಕರಣವನ್ನು ತೀವ್ರಗೊಳಿಸುವ ಈ ಬಜೆಟ್ ವಿದ್ಯಾರ್ಥಿ ವಿರೋಧಿ ಬಜೆಟ್ ಎಂದು ಎಸ್.ಎಫ್.ಐ ನ ಕಾರ್ಯಕರ್ತರು ವಿರೋಧಿಸಿದ್ದಾರೆ.
ಈ ಪೋಸ್ಟರ್ ಪ್ರತಿಭಟನೆಯಲ್ಲಿ ಎಸ್ ಎಫ್ ಐ ನ ರಾಜ್ಯಾಧ್ಯಕ್ಷರಾದ ಅಮರೇಶ್ ಕಡಗದ್, ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ, ಜಿಲ್ಲಾಧ್ಯಕ್ಷ ಅಂಜಿ, ಜಿಲ್ಲಾ ಕಾರ್ಯದರ್ಶಿ ದಿಲೀಪ್ ಶೆಟ್ಟಿ, ರಾಜ್ಯ ಜಂಟಿ ಕಾರ್ಯದರ್ಶಿ, ಭೀಮನಗೌಡ, ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ಗಾಯತ್ರಿ, ಬೆಂಗಳೂರು ಜಿಲ್ಲಾ ಮುಖಂಡರಾದ ಪ್ರಜ್ವಲ್, ಅಭಿ, ಸಾಗರ್, ದಿಲ್ಶಾದ್, ರಾಮು, ಮಾದೇಶ್, ಯಶಸ್ಸ, ಐಶ್ವರ್ಯ, ಸೇರಿದಂತೆ ಮತ್ತಿತ್ತರರು ಭಾಗವಹಿಸಿದ್ದರು.