ಉಡುಪಿ: ಹಿಜಾಬ್ ಸಂಬಂಧ ಪಟ್ಟಂತೆ ವಿವಾದವು ಹೈಕೋರ್ಟಿನಲ್ಲಿ ವಿಚಾರಣೆಯ ಹಂತದಲ್ಲಿರುವ ಸಂದರ್ಭದಲ್ಲಿ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರ ಪೈಕಿ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಮೂವರು ವಿದ್ಯಾರ್ಥಿನಿಯರಿಗೆ ಇಂದಿನ ಪರೀಕ್ಷೆಗೆ ಹಾಜರಾಗಲು ಅವಕಾಶ ನಿರಾಕರಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ವಿದ್ಯಾರ್ಥಿನಿ ಅಲ್ಮಾಸ್ ಎ.ಎಚ್., ನಮ್ಮ ಪೈಕಿ ನಾನು ಸೇರಿದಂತೆ ಮೂವರು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ ಇಂದಿನ ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಪ್ರಾಂಶುಪಾಲರು ಅವಕಾಶ ನೀಡಿಲ್ಲ ಹಾಗೂ ಪೊಲೀಸ್ ದೂರು ನೀಡುವುದಾಗಿ ಬೆದರಿಕೆ ಹಾಕಿ ಕಳುಹಿಸಿರುವುದಾಗಿ ತಿಳಿಸಿದ್ದಾರೆ.
“ನಾವು ರೆಕಾರ್ಡ್ಸ್ ಪುಸ್ತಕಗಳನ್ನು ಪೂರ್ಣಗೊಳಿಸಿದ್ದೇವೆ ಮತ್ತು ಪ್ರಾಕ್ಟಿಕಲ್ ಪರೀಕ್ಷೆಗೆ ಹಾಜರಾಗಲು ಬಹಳ ಉತ್ಸುಕರಾಗಿ ಹೋಗಿದ್ದೆವು. ಆದರೆ ಕಾಲೇಜು ತಲುಪಿದಾಗ ನಮ್ಮ ಪ್ರಾಂಶುಪಾಲರು “ನೀವು ಇಲ್ಲಿಂದ ಐದು ನಿಮಿಷದಲ್ಲಿ ಹೊರಡಬೇಕು. ಇಲ್ಲವಾದಲ್ಲಿ ನಾನು ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ನಮಗೆ ಬೆದರಿಕೆ ಹಾಕಿದಾಗ ತುಂಬಾ ಬೇಸರವಾಯಿತು” ಎಂದು ಅಲ್ಮಾಸ್ ಹೇಳಿದ್ದಾರೆ.
ಟ್ವೀಟ್‍ನಲ್ಲಿ ವಿದ್ಯಾರ್ಥಿನಿ ಅಲ್ಮಾಸ್ ಅಂತಾರಾಷ್ಟ್ರೀಯ ಮಾಧ್ಯಮಗಳಿಗೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯ, ಡಿಜಿಪಿ, ಉಡುಪಿ ಜಿಲ್ಲಾಧಿಕಾರಿ, ಉಡುಪಿ ಎಸ್‍ಪಿಗೆ ಅವರುಗಳಿಗೆ ಟ್ಯಾಗ್ ಮಾಡಿದ್ದಾಳೆ.
ಅಂದುಕೊಂಡಂತೆ ನಡೆದಿದ್ದರೆ ನಾವು ಲ್ಯಾಬ್ ಪರೀಕ್ಷೆ ಬರೆದು ಮುಗಿಸಬೇಕಿತ್ತು. ಹಿಜಬ್ ಕುರಿತಾದ ದ್ವೇಷದಿಂದ ಈ ಪರಿಸ್ಥಿತಿ ನಮಗೆ ಬಂದೊದಗಿದೆ. ಕಾಲೇಜಿನಿಂದ ನಾನು ಹೊಂದಿದ್ದ ಭರವಸೆಗಳು ಮತ್ತು ನನ್ನ ಕನಸುಗಳು ಛಿದ್ರವಾಗುತ್ತಿವೆ ಎಂದು ಅಲ್ಮಾಸ್ ಟ್ವೀಟ್ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಹಾಕಿಕೊಂಡು ತರಗತಿಗೆ ಹಾಜರಾಗಲು ಅವಕಾಶ ನೀಡಬೇಕೇಂದು ಕೋರಿ ಹೈಕೊರ್ಟ್ ಗೆ ಅರ್ಜಿ ಸಲ್ಲಿಸಿದವರ ಪೈಕಿ ಉಡುಪಿ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಅಲ್ಮಾಝ್, ಹಝ್ರ ಶಿಫಾ ಹಾಗೂ ಬೀಬಿ ಆಯಿಶ ಅವರು ದ್ವಿತೀಯ ಪಿಯು ವಿದ್ಯಾರ್ಥಿನಿಯರಾಗಿದ್ದಾರೆ.