ಶ್ರೀನಿವಾಸಪುರ: ತಾಲ್ಲೂಕಿನ ತಾಡಿಗೊಳ್ ಕ್ರಾಸ್ನಲ್ಲಿ ಇತ್ತಿಚೆಗೆ ನಡೆದ ವಿದ್ಯಾರ್ಥಿನಿಯರ ಮೇಲಿನ ದೌರ್ಜನ್ಯ ಖಂಡಿಸಿ ಎಸ್ಎಫ್ಐ, ಜೆಎಂಎಸ್, ಡಿಹೆಚ್ಎಸ್ ಮತ್ತು ಜನಪರ ಸಂಘಟನೆಗಳ ನೂರಾರು ವಿದ್ಯಾರ್ಥಿಗಳು, ಮಹಿಳೆಯರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಬಸ್ ನಿಲ್ದಾಣದ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು. ನಂತರ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕೆಂದು ಮನವಿ ಸಲ್ಲಿಸಿದರು.
ಇದನ್ನು ಓದಿ: ವಿದ್ಯಾರ್ಥಿನಿಯರ ಮೇಲೆ ಗುಂಪು ಹಲ್ಲೆ ಖಂಡಿಸಿ ಪ್ರತಿಭಟನೆ: ಧಾಳಿಕೋರರಿಗೆ ಶಿಕ್ಷಿಸಲು ಆಗ್ರಹ
ಪ್ರತಿಭಟನೆಯನ್ನು ಉದ್ದೇಶಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ರಾಜ್ಯ ಕಾರ್ಯದರ್ಶಿ ಕೆ.ವಾಸುದೇವರೆಡ್ಡಿ ಮಾತನಾಡಿ ʻʻಈ ಘಟನೆ ನಡೆದು ವಾರ ಕಳೆದರೂ ಪ್ರಮುಖ ಆರೋಪಿಗಳನ್ನು ಪೋಲಿಸರು ಬಂಧಿಸದೇ ಇರುವುದು ಖಂಡನೀಯ. ವಿದ್ಯಾರ್ಥಿನೀಯರ ಮೇಲಿನ ಮಾರಣಾಂತಿಕ ಹಲ್ಲೆಯನ್ನು ನಾವೆಲ್ಲ ಒಟ್ಟಾಗಿ ವಿರೋಧಿಸುತ್ತೇವೆ. ಪೊಲೀಸರು ವಿಳಂಬಧೋರಣೆಯನ್ನು ಅನುಸರಿಸದೆ ಕೂಡಲೇ ಆರೋಪಿಗಳನ್ನು ಬಂಧಿಸಿ ಕ್ರಮಜರುಗಿಸಬೇಕೆಂದುʼʼ ಆಗ್ರಹಿಸಿದರು.
ಜನವಾದಿ ಮಹಿಳಾ ಸಂಘಟನೆ(ಜೆಎಂಎಸ್)ಯ ಜಿಲ್ಲಾಧ್ಯಕ್ಷರಾದ ಸೌಭಾಗ್ಯಮ್ಮ ಮಾತನಾಡಿ ʻʻದೌರ್ಜನ್ಯಕ್ಕೆ ಒಳಗಾದ ವಿದ್ಯಾರ್ಥಿನಿಯರು, ಅವರ ಪೋಷಕರ ಮೇಲೆಯೇ ಪೊಲೀಸರು ಕೇಸು ದಾಖಲಿಸಿರುವುದು ಅಮಾನವೀಯ, ಕೂಡಲೇ ಕೇಸು ವಾಪಸ್ ಪಡೆದು ಗೂಂಡಾಗಿರಿ ಹಲ್ಲೆ ದೌರ್ಜನ್ಯ ನಡೆಸಿದವರನ್ನು ಬಂಧಿಸಬೇಕುʼʼ ಎಂದು ಆಗ್ರಹಿಸಿದರು.
ರಾಜ್ಯ ಗೃಹಮಂತ್ರಿಗಳಿಗೆ ಸಲ್ಲಿಸಲಾಗುವ ಮನವಿ ಪತ್ರವನ್ನು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ಅವರ ಮೂಲಕ ಸಲ್ಲಿಸಿ ಕೂಡಲೇ ಕ್ರಮವಹಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಸ್.ಎಫ್.ಐ. ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ್, ಅಂಕಿತಾ, ತಾಲೂಕು ಅಧ್ಯಕ್ಷ ಉದಯ್ ಕುಮಾರ್, ಸಿಪಿಐ(ಎಂ) ತಾಲ್ಲೂಕು ಕಾರ್ಯದರ್ಶಿ ನವೀನ್ ಕುಮಾರ್, ಜೆಎಂಎಸ್ ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ, ಮುಖಂಡರಾದ ಸುಜಾತಾ, ಸುರೇಶ್ಬಾಬು, ಮೇನಶ್ರೀ, ದಲಿತ ಹಕ್ಕುಗಳ ಸಮಿತಿ(ಡಿ.ಎಚ್.ಎಸ್.) ಸಂಘಟನೆಯ ಪಿ.ತಂಗರಾಜ್, ವೆಂಕರಮಣ, ಡಿ.ವಿ.ಅಮರ್ ಇತರರು ಭಾಗವಹಿಸಿದ್ದರು.