ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೊಳ್ ಕ್ರಾಸ್ ಬಳಿ ದಲಿತ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿ, ಹಲ್ಲೆ ಮಾಡಿರುವ ಘಟನೆಯನ್ನು ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್.ಎಫ್.ಐ) ತಾಲ್ಲೂಕು ಸಮಿತಿ ವತಿಯಿಂದ ತಾಲ್ಲೂಕು ಕಛೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿಯರನ್ನು ಬಸ್ಸಿನಿಂದ ಕೆಳಗಿಳಿಸಿ ಅವರ ಮೇಲೆ ದೌರ್ಜನ್ಯ ನಡೆಸಿ, ರಕ್ಷಣೆಗೆ ಬಂದ ಪೋಷಕರ ಮೇಲೂ ದೊಣ್ಣೆಗಳಿಂದ ಹಲ್ಲೆ ನಡೆಸಿರುವ ಪುಂಡರ ಮೇಲೆ ಕಾನೂನು ಕ್ರಮಜರುಗಿಸಬೇಕು ಮತ್ತು ನಗರದ ಶಾಲಾ-ಕಾಲೇಜುಗಳಿಗೆ ಬರುವ ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿ: ಹಾಸ್ಟೆಲ್ ವಿದ್ಯಾರ್ಥಿಗಳ ಸೌಲಭ್ಯದ ಹೆಸರಲ್ಲಿ ಕೋಟಿ ಕೋಟಿ ಹಣ ಗುಳಂ ಮಾಡಿದ ಅಧಿಕಾರಿಗಳು
ಪ್ರತಿಭಟನೆಯಲ್ಲಿ ಎಸ್.ಎಫ್.ಐ ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶ್ರೀಕಾಂತ್, ತಾಲ್ಲೂಕು ಅಧ್ಯಕ್ಷ ಉದಯ್, ಜಂಟಿ ಕಾರ್ಯದರ್ಶಿ ಚೈತ್ರ ಮತ್ತು ನೂರಾರು ವಿಧ್ಯಾರ್ಥಿನಿಯರು ಭಾಗವಹಿಸಿದ್ದರು.
ದಲಿತ ಸಂಘರ್ಷ ಸಮಿತಿ ಪ್ರತಿಭಟನೆ: ದಲಿತ ಹೆಣ್ಣು ಮಕ್ಕಳ ಮೇಲೆ ಹಲ್ಲೆ ದೌರ್ಜನ್ಯದ ವಿರುದ್ಧ ಕ್ರಮಜರುಗಿಸಬೇಕೆಂದು ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡೆಕ್ಕಾ ಸುರೇಶ್‌ಬಾಬು ಅವರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ಹಲ್ಲೆ ಎಸಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದ್ದಾರೆ.
‘ಶ್ರೀನಿವಾಸಪುರ ಶಾಸಕ ಕೆ.ಆರ್.ರಮೇಶ್‌ಕುಮಾರ್ ಹಾಗೂ ಸಂಸದ ಎಸ್.ಮುನಿಸ್ವಾಮಿ ಅವರು ಮಧ್ಯಪ್ರವೇಶಿಸಿ ದೌರ್ಜನ್ಯಕ್ಕೆ ಒಳಗಾಗಿರುವ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿ ಕೊಡಬೇಕು. ಹಲ್ಲೆಗೊಳಗಾಗಿರುವ ಹೆಣ್ಣು ಮಕ್ಕಳ ಕುಟುಂಬ ಸದಸ್ಯರಿಗೆ ಪರಿಹಾರ ಘೋಷಿಸಬೇಕು. ಇಲ್ಲವಾದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಮಿತಿ ಸದಸ್ಯರು ಎಚ್ಚರಿಕೆ ನೀಡಿದರು.
ದಲಿತ ಸಮುದಾಯದ ಜನರು ವಿದ್ಯಾಭ್ಯಾಸ ಕಲಿಯದಂತೆ ತಡೆಯಲು ಸ್ವಾತಂತ್ರ್ಯ ಪೂರ್ವದಲ್ಲಿ ಇಂತಹ ಘಟನೆಗಳು ವ್ಯಾಪಕವಾಗಿ ನಡೆಯುತ್ತಿತ್ತು. ಸಂವಿಧಾನ ಜಾರಿ ಬಂದ ನಂತರವೂ ಮುಂದುವರಿದ ಸಮಾಜದಿಂದ ಇಂತಹ ಕೃತ್ಯಗಳು ನಡೆಯುತ್ತಿತ್ತಾದರೂ ಕಾಲಕ್ರಮೇಣ ನಿಧಾನವಾಗಿ ಕಡಿಮೆಯಾಗಿತ್ತು. ಇದೀಗ ಮತ್ತೆ ಅಂತಹದೇ ಕೃತ್ಯ ಕೋಲಾರದಲ್ಲಿ ನಡೆದಿದ್ದು, ಹಿಂದಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ ಪಡೆಯದಂತೆ ಅಡ್ಡಗಾಲು ಹಾಕುತ್ತಿದ್ದ ಮನಸ್ಥಿತಿಗಳೇ ಈಗಲೂ ಕೃತ್ಯ ಎಸಗಿವೆ ಎಂದು ದಲಿತ ಸಂಘಟನೆಗಳು, ಎಸ್‌ಎಫ್‌ಐ ಸೇರಿದಂತೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ವಿವರ
ನಿತ್ಯ ಶಾಲೆಗೆ ತೆರಳುತ್ತಿರುವ ದಲಿತ ವಿದ್ಯಾರ್ಥಿನಿಯರ ಮೇಲೆ ಕಾಮುಕ ಪುಂಡರ ಗುಂಪೊಂದು ಚುಡಾಯಿಸುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ವಿದ್ಯಾರ್ಥಿನಿಯರು ಮತ್ತು ಅವರ ಪೋಷಕರ ನಡುವೆ ತೀವ್ರತರವಾದ ಹಲ್ಲೆ ನಡೆದಿವೆ. ತಾಡಿಗೋಳ್ ಗ್ರಾಮದಿಂದ ಚಿಂತಾಮಣಿಗೆ ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರಿಗೆ ಮೇಲ್ವರ್ಗದ ಪುಂಡರ ಗುಂಪು ಕಿರುಕುಳ ನೀಡುತ್ತಿತ್ತು. ಯುವಕರ ವರ್ತನೆ ಮಿತಿ ಮೀರಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರಿಗೆ ಯುವಕರು ರೇಗಿಸುತ್ತಿರುವ ವಿಚಾರವನ್ನು ಪೋಷಕರು ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು.
ವಿದ್ಯಾರ್ಥಿನಿಯರಿಗೆ ತೀವ್ರ ತೊಂದರೆ ನೀಡುತ್ತಿದ್ದ ಯುವಕರನ್ನು ವಿದ್ಯಾರ್ಥಿನಿಯೊಬ್ಬರ ಕಡೆಯವರು ಥಳಿಸಿದ್ದರು ಎಂದು ಕೋಪಗೊಂಡ ಯುವಕರಿದ್ದ ಗುಂಪು ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರು ಹಾಗೂ ಸಂಬಂಧಿಕರ ಮೇಲೆ ಸೆಪ್ಟಂಬರ್ 4ರಂದು ದೊಣ್ಣೆಗಳಿಂದ ದಾಳಿ ನಡೆಸಿತ್ತು. ದಿನ ಶಾಲೆಗೆ ಹೋಗಿ ಬರುತ್ತಿದ್ದ ದಲಿತ ವಿದ್ಯಾರ್ಥಿನಿಯರಿಗೆ ಕೆಲ ಪುಂಡರು ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಪೋಷಕರು ಯುವಕರಿಗೆ ಬುದ್ಧಿ ಮಾತು ಹೇಳಿದರೂ ಪ್ರಯೋಜನವಾಗಿರಲಿಲ್ಲ.
ಇದನ್ನೂ ಓದಿ : ಜೀತವಿಮುಕ್ತ ದಲಿತರಿಗೆ ಭೂ ಸಾಗುವಳಿಗೆ ಜಮೀನು ಮಂಜೂರು ಮಾಡಬೇಕೆಂದು ಪ್ರತಿಭಟನೆ
ಮಾತಿಗೆ ಮಾತು ಬೆಳೆದು ಪುಂಡರ ಗುಂಪು ವಿದ್ಯಾರ್ಥಿನಿ ಸಹಿತ ಪೋಷಕರ ಮೇಲೆ ಹಲ್ಲೆ ನಡೆಸಿದ್ದು, ವಿಪರ್ಯಾಸ ಅಂದರೆ ವಿದ್ಯಾರ್ಥಿನಿಯರಿಗೆ ಹಲ್ಲೆ ನಡೆಸಿದ ಗುಂಪಿನಲ್ಲಿ ಮಹಿಳೆಯರು ಇದ್ದರು. ಘಟನೆಯಲ್ಲಿ ವಿದ್ಯಾರ್ಥಿನಿಯರು ಹಾಗೂ ಸಂಬಂಧಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ಆರು ಮಂದಿ ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ಸೇರಿದಂತೆ ಒಟ್ಟು ಒಂಭತ್ತು ಮಂದಿಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ದೂರದ ಉತ್ತರಪ್ರದೇಶ-ಬಿಹಾರದಲ್ಲಿ ವರದಿಯಾಗುತ್ತಿದ್ದಂತಹ ಇಂತಹ ಘಟನೆಗಳು ಇದೀಗ ಕರ್ನಾಟಕದಲ್ಲೂ ಸಾಮಾನ್ಯ ಅನ್ನುವಂತಹ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಇಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ತಾಡಿಗೋಳ್ ಗ್ರಾಮದ ಬಳಿ ನಡೆದಿದೆ.
ಪುಂಡರ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ನಂತರವಷ್ಟೇ ಶ್ರೀನಿವಾಸಪುರ ಪೊಲೀಸರು ದೌರ್ಜನ್ಯ ಹಾಗೂ ಕೊಲೆಯತ್ನ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಿದ್ದಾರೆ.