ವಿದ್ಯಾರ್ಥಿ ವಿರೋಧಿ ಕಾನೂನನ್ನು ಹಿಮ್ಮೆಟ್ಟಿಸಲು ಎಸ್ಎಫ್ಐಯೊಂದಿಗೆ ಸಂಘಟಿತರಾಗಿ: ಮಾರುತಿ ತಳವಾರ

ರಾಣೇಬೆನ್ನೂರ: ಭಾರತ ವಿದ್ಯಾರ್ಥಿ ಫೆಡರೇಷನ್‌ (ಎಸ್ಎಫ್ಐ) 53ನೇ ಸಂಸ್ಥಾಪನಾ ದಿನದ ಅಂಗವಾಗಿ “ಸ್ವಾತಂತ್ರ್ಯ ಚಳುವಳಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಹಾಗೂ ವಿದ್ಯಾರ್ಥಿ ಚಳುವಳಿಯ ಮಹತ್ವ” ಕುರಿತು ಎಸ್ಎಫ್ಐ ರಾಣೇಬೆನ್ನೂರ ತಾಲ್ಲೂಕು ಸಮಿತಿಯು ಮಾರುತಿ ನಗರದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಂದು ವಿಚಾರ ಸಂಕಿರಣ ಏರ್ಪಡಿಸಿತ್ತು.

ಈ ಸಂದರ್ಭದಲ್ಲಿ ಮೆಡ್ಲೇರಿ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಗ್ರಾಮ ಘಟಕ ಅಧ್ಯಕ್ಷ ಮಾರುತಿ ತಳವಾರ ಮಾತನಾಡಿ, ಎಸ್ಎಫ್ಐ ಸಂಘಟನೆ 53ನೇ ವರ್ಷಾಚರಣೆ ಮಾಡುತ್ತಿದೆ ಅಂದರೆ ಒಂದು ಸುವರ್ಣ ಮಹೋತ್ಸವವನ್ನು ಮುಗಿಸಿ ಇಲ್ಲಿಗೆ ಮೂರು ವರ್ಷ ಕಳೆದಿವೆ. ಎಸ್ಎಫ್ಐ ಪ್ರಾರಂಭದಿಂದಲೂ ವಿದ್ಯಾರ್ಥಿ ಮತ್ತು ಯುವಜನತೆಗೆ ಶಿಕ್ಷಣ ಮತ್ತು ಉದ್ಯೋಗ ಒದಗಿಸಿಕೊಡುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. ಶಾಲಾ-ಕಾಲೇಜುಗಳಲ್ಲಿ ಮತ್ತು ವಸತಿ ನಿಲಯಗಳಲ್ಲಿ ಸಮಸ್ಯೆ ಏನಾದರೂ ಬಂದರೆ ಅಲ್ಲಿ ಮೊದಲು ಹೋಗಿ ನಿಲ್ಲುವ ಸಂಘಟನೆ ಯಾವುದೆಂದರೆ ಅದು ಎಸ್ಎಫ್ಐ ಸಂಘಟನೆ ಮಾತ್ರ ಎಂದು ತಿಳಿಸಿದರು.

ಈ ದೇಶದಲ್ಲಿ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾಗಿವೆ. ಭಾರತ ಪ್ರಜಾಸತ್ತಾತ್ಮಕ ರಾಷ್ಟ್ರ, ಪ್ರಜಾಪ್ರಭುತ್ವ  ರಾಷ್ಟ್ರವಾದರೂ ಇನ್ನೂ ಹಲವಾರು ಸಮಸ್ಯೆಗಳಿವೆ. ದೇಶದಲ್ಲಿ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಎಲ್ಲವೂ ಇದೆ ಆದರೂ ಕೂಡ ಇಷ್ಟೆಲ್ಲಾ ಸಮಸ್ಯೆಗಳಿವೆ. ನಾವು ಚಂದ್ರಗ್ರಹಕ್ಕೆ ಹೋಗಿ ಬಂದೆವು, ಮಂಗಳ ಗ್ರಹಕ್ಕೆ ಹೋಗಿ ಬಂದೆವು. ಆದರೂ ಕೂಡ ನಮ್ಮಲ್ಲಿರುವ ಜಾತಿವ್ಯವಸ್ಥೆ ಇನ್ನೂ ತೊಲಗಲಿಲ್ಲ. ಎಲ್ಲಾ ಹಂತಗಳಲ್ಲಿ, ಹಳ್ಳಿಯಿಂದ ದಿಲ್ಲಿಯವರೆಗೆ ಸಾಮಾಜಿಕ ಬದಲಾವಣೆಯಾಗಬೇಕು. ಸಾಮಾಜಿಕ ಬದಲಾವಣೆಯಾಗಬೇಕಾದರೆ ಅದರ ಮಹತ್ವದ ಜವಾಬ್ದಾರಿ ಯುವಕರ ಮೇಲಿದೆ. ಮುಂದೆ ಒಂದು ದಿನ ನೀವು ಡಾಕ್ಟರ್, ಇಂಜಿನಿಯರ್, ಲಾಯರ್, ಶಿಕ್ಷಕರು, ಸಾಹಿತಿ, ಬರಹಗಾರರು ಆಗಬಹುವುದು ಎಂದು ವಿವರಿಸಿದರು.

ಇದನ್ನು ಓದಿ: ಗಂಗಾವತಿ ಕಾನೂನು ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ವ್ಯವಸ್ಥೆಗೊಳಿಸಲು ಎಸ್‌ಎಫ್‌ಐ ಪ್ರತಿಭಟನೆ

ಗಾಂಧೀಜಿಯವರು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು, ಶಿಕ್ಷಣ ತಜ್ಞರು ಭಾಗವಹಿಸಿದ್ದರು. ಆದರೆ  ವಿಧ್ಯಾರ್ಥಿಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು ಎಂದು ಎಲ್ಲಿ ಕೂಡ ಉಲ್ಲೇಖವಿಲ್ಲ. ಅಂದು ಭಗತ್ ಸಿಂಗ್ ಜೊತೆಗೆ ಅದೆಷ್ಟೋ ವಿದ್ಯಾರ್ಥಿಗಳು ಚಳುವಳಿಯಲ್ಲಿ ಭಾಗಿಯಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂಬುವುದನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದಾಗಲೇ ಗೊತ್ತಾಗುತ್ತೆ. ಹಾಗಾಗಿ ಸ್ವಾತಂತ್ರ್ಯ ಚಳುವಳಿಯಲ್ಲಿ ಕೂಡ ವಿದ್ಯಾರ್ಥಿಗಳು ಭಾಗಿಯಾಗಿದ್ದರು ಎಂಬುದು ಅತ್ಯಂತ ಮಹತ್ವವಾದ ಅಂಶವಾಗಿದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಉಪನ್ಯಾಸಕ ಚಂದು ನಾಯಕ ಮಾತನಾಡಿ, ಸರ್ಕಾರದ ವಿದ್ಯಾರ್ಥಿ ವಿರೋಧಿ ನೀತಿಗಳ ವಿರುದ್ಧ ದೇಶದ ಉದ್ದಗಲಕ್ಕೂ ಎಸ್ಎಫ್ಐ ಐದು ದಶಕಗಳ ಕಾಲ ನಿರಂತರ ಹೋರಾಡುತ್ತಿರುವ ಏಕೈಕ ವಿದ್ಯಾರ್ಥಿ ಸಂಘಟನೆಯಾಗಿದೆ. ವಿದ್ಯಾರ್ಥಿ ಚಳುವಳಿ ಹರಿಯುತ್ತಿರುವ ನದಿ ಇದ್ದಂತೆ ಹೀಗೆ ಸದಾಕಾಲವೂ ಚಳುವಳಿಯು ದೇಶಾದ್ಯಂತ ವಿಸ್ತರಿಸಲಿ ಎಂದು ಶುಭ ಹಾರೈಸಿದರು.

ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ವಿದ್ಯಾರ್ಥಿ – ಯುವಜನರು ದೇಶದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ. ದೇಶ ಕಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ಓದಿನ ಕಡೆ ಹೆಚ್ಚು ನಿಗವಹಿಸಬೇಕು. ಪಠ್ಯ ಪುಸ್ತಕಗಳನ್ನು ಅಭ್ಯಾಸ ಮಾಡುವ ಜೊತೆಗೆ ಸಾಮಾಜಿಕ ಚಿಂತನೆಯಲ್ಲಿಯೂ ತೊಡಗಿಸಿಕೊಳ್ಳಬೇಕು. ಅನ್ಯಾಯದ ವಿರುದ್ಧ ಹೋರಾಡಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಹಾಗೂ ಭಗತ್ ಸಿಂಗ್ ರ ಜೀವನ ಚರಿತ್ರೆ ಅರಿಯಬೇಕು. ಹೋರಾಟ ಮಾಡದೆ ಯಾವುದೇ ಸೌಲಭ್ಯಗಳು ನಮಗೆ ದೊರಕುವುದಿಲ್ಲ ಹಾಗಾಗಿ ಅಭ್ಯಾಸ ಮತ್ತು ಹೋರಾಟವನ್ನು ಮುಂದುವರಿಸಲು ವಿದ್ಯಾರ್ಥಿಗಳು ಎಸ್ಎಫ್ಐ ಸೇರಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನು ಎಸ್ಎಫ್ಐ ತಾಲ್ಲೂಕು ಕಾರ್ಯದರ್ಶಿ ಗುಡ್ಡಪ್ಪ ಮಡಿವಾಳರ, ಅಧ್ಯಕ್ಷತೆಯನ್ನು ಎಮ್. ವಿ.ಗಡಾದ ವಹಿಸಿ ಮಾತನಾಡಿದರು. ವೇದಿಕೆ ಮೇಲೆ ಉಪನ್ಯಾಸಕರಾದ ರವಿಕುಮಾರ್, ಗಿರಿಜಾ ಮುಳಗುಂದ, ಮಂಜುನಾಥ್, ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ಶ್ರೀಧರ ಛಲವಾದಿ, ಉಪಾಧ್ಯಕ್ಷೆ ವೀಣಾ ಘಂಟೆರ್, ಮಲ್ಲಿಗೆ ಜಟ್ಟೆಣ್ಣನವರ, ನೇಹಲ್ ಖಾನ್ ಇದ್ದರು. ಮಹೇಶ್ ಮರೋಳ ಕಾರ್ಯಕ್ರಮವನ್ನು ನಿರೂಪಿಸಿದರು, ಹರ್ಷ ಹೊಂಗಲ್ ವಂದಿಸಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *