ಫೆಲೋಶಿಪ್‍ಗೆ ಒತ್ತಾಯಿಸಿ ಕನ್ನಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

ವಿಜಯನಗರ: 36 ತಿಂಗಳಿಂದ ತಡೆಹಿಡಿದಿರುವ ವಿದ್ಯಾರ್ಥಿ ಸಹಾಯಧನವನ್ನು (ಫೆಲೋಶಿಪ್‍) ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿದರು.

ನಗರದ ತಹಶೀಲ್ದಾರ್ ಕಚೇರಿಯಿಂದ ಕಾಲ್ನಡಿಗೆ ಮೂಲಕ ಸಾಗಿದ ಜಾಥಾದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ‘ಫೆಲೋಶಿಪ್ ಕೊಡಿ ಇಲ್ಲ, ವಿಷ ಕೊಡಿ’ ಎಂದು ಘೋಷಣೆ ಕೂಗುತ್ತಾ ಜಿಲ್ಲಾಧಿಕಾರಿ ಕಚೇರಿಗೆ ಬಂದರು. ಅಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಮಹೇಶ್ ಬಾಬು ಅವರಿಗೆ ಮನವಿ ಪತ್ರ ಸಲ್ಲಿಸಿ ‘ಕನ್ನಡ ವಿಶ್ವವಿದ್ಯಾಲಯವು ಮೂರು ವರ್ಷಗಳ (36 ತಿಂಗಳು) ವಿದ್ಯಾರ್ಥಿ ಸಹಾಯಧನವನ್ನು ಬಾಕಿ ಉಳಿಸಿಕೊಂಡಿದೆ. ಶೈಕ್ಷಣಿಕವಾಗಿ ವಿಶ್ವವಿದ್ಯಾಲಯ ನಿಯಮದ ಪ್ರಕಾರ, ಆರು ತಿಂಗಳಿಗೊಮ್ಮೆ ನಡೆಯುವ ಅರ್ಧವಾರ್ಷಿಕ ಪ್ರಗತಿ ಪರಿಶೀಲನಾ ವರದಿ ಸಲ್ಲಿಸುವ ಜೊತೆಗೆ ಅರ್ಧವಾರ್ಷಿಕ ಪ್ರಗತಿ ವರದಿ ಶುಲ್ಕಗಳನ್ನು ಸಂದಾಯ ಮಾಡಿರುತ್ತೇವೆ. ಆದರೂ, ಯಾವುದೇ ಸಹಾಯಧನವಿಲ್ಲದೆ ಗುಣಮಟ್ಟದ ಸಂಶೋಧನಾ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಗೋಳು ತೋಡಿಕೊಂಡರು.

‘ಸರ್ಕಾರ ಕಾಲಕಾಲಕ್ಕೆ ಎಸ್‌ಸಿಪಿ ಮತ್ತು ಟಿಎಸ್‌ಪಿ ಯೋಜನೆಯಿಂದ ಹಣವನ್ನು ಬಿಡುಗಡೆ ಮಾಡಿದೆ. ಸಂವಿಧಾನ ಬದ್ಧ ಸಾಮಾಜಿಕ ನ್ಯಾಯದಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸಹಾಯಧನ ನೀಡಬೇಕಿತ್ತು. ಆದರೆ, ದಲಿತ ವಿದ್ಯಾರ್ಥಿಗಳನ್ನು ಶೋಷಿಸುವ ಮೂಲಕ ನಮ್ಮನ್ನು ಉನ್ನತ ಶಿಕ್ಷಣದಿಂದ ವಂಚಿಸುವ ಹುನ್ನಾರ ನಡೆಯುತ್ತಿದೆ’ ಎಂದು ಆರೋಪಿಸಿದರು.

‘2018-19ನೇ ಸಾಲಿನಲ್ಲಿ ಪ್ರವೇಶ ಪಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನಾ ವಿದ್ಯಾರ್ಥಿಗಳಿಗೆ ಬಾಕಿ ಉಳಿಸಿಕೊಂಡಿರುವ ಮಾಸಿಕ ಸಹಾಯಧನ ನೀಡಬೇಕು. ಸಂಶೋಧನಾ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಆರ್ಥಿಕ ಸಹಾಯಧನವನ್ನು ಸಮಾಜ ಕಲ್ಯಾಣ ಇಲಾಖೆಯ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದಡಿಯಲ್ಲಿ ಇಲಾಖೆ ಪೋರ್ಟಲ್ ಮುಖಾಂತರ ನೀಡಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ದೊಡ್ಡ ಬಸವರಾಜ್, ಮಣಿಕಂಠ, ರಾಜೇಶ್, ಅಭಿಲಾಷ, ರಾಗಿಣಿ, ಮಲ್ಲೇಶ್, ಎಸ್.ಎಫ್.ಐ ಸಂಘಟನೆಯ ತಾಲ್ಲೂಕು ಅಧ್ಯಕ್ಷ ಜೆ.ಶಿವುಕುಮಾರ್ ಇದ್ದರು.

ಧರಣಿ ನಿರತ ವಿದ್ಯಾರ್ಥಿ ಅಸ್ವಸ್ಥ

ಜಿಲ್ಲಾಧಿಕಾರಿ ಕಚೇರಿ ಎದುರೆ ಮೊಕ್ಕಾಂ ಹೂಡಿದ್ದ ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಹೋರಾಟ ನಿರತ ಸಂಶೋಧನಾ ವಿದ್ಯಾರ್ಥಿಯೊಬ್ಬ ಅಸ್ವಸ್ಥಗೊಂಡಿದ್ದಾನೆ. ಆತನನ್ನು ಬುಡಕಟ್ಟು ವಿಭಾಗದ ಅಂಜಿನಪ್ಪ ಗಡಾದ್ ಎಂದು ಗುರುತಿಸಲಾಗಿದೆ. ಅಸ್ವಸ್ಥಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಡು ಚಿಕಿತ್ಸೆ ನೀಡಲಾಗಿದೆ.

ಕಚೇರಿಗೆ ನುಗ್ಗಲು ಯತ್ನ

ಪ್ರತಿಭಟನಾಕಾರರು ಕುಲಪತಿ, ಕುಲಸಚಿವರ ವಿರುದ್ಧ ಆಕ್ರೋಶವ್ಯಕ್ತಪಡಿಸಿದರು. ಅಲ್ಲದೆ, ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಪೊಲೀಸರು ಅವರನ್ನು ತಡೆದರು. ಕೂಡಲೇ ಸ್ಥಳಕ್ಕೆ ಹಂಪಿ ಕನ್ನಡ ವಿವಿಯ ಕುಲಸಚಿವರು ಜಿಲ್ಲಾಧಿಕಾರಿಗಳು ಬರುವಂತೆ ಒತ್ತಾಯಪಡಿಸಿದರು. ಸ್ಥಳಕ್ಕೆ  ಬಂದ ವಿಜಯನಗರ ಡಿಸಿ ಅನಿರುದ್ಧ್ ಶ್ರವಣ್, ಹಂಪಿ ಕನ್ನಡ ವಿವಿ ಕುಲಸಚಿವ ಡಾ‌. ಸುಬ್ಬಣ್ಣ ರೈ ಮತ್ತು ಹಣಕಾಸು ಅಧಿಕಾರಿ ಡಾ. ರಮೇಶ್ ಬಾಬು ಮಾತುಕತೆ ನಡೆಸಿದರು.

ವಾರದೊಳಗೆ ಸಮಸ್ಯೆ ಇತ್ಯರ್ಥ

ಕುಲಸಚಿವ ಸುಬ್ಬಣ್ಣ ರೈ ಹಾಗೂ ವಿವಿಯ ಹಣಕಾಸು ಅಧಿಕಾರಿ ರಮೇಶ್ ನಾಯಕ್ ಅವರು 2018-19ನೇ ಸಾಲಿನ ವಿದ್ಯಾರ್ಥಿ ಸಹಾಯಧನ  ನೀಡಲು 12.5 ಲಕ್ಷ ಹಣವಿದ್ದು, ವಾರದೊಳಗೆ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ಕುಲಸಚಿವರು ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದ ನಂತರ ಕಳೆದ ಎರಡು ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯು ಬುಧವಾರ ರಾತ್ರಿ ಕೊನೆಗೊಂಡಿತು.

Donate Janashakthi Media

2 thoughts on “ಫೆಲೋಶಿಪ್‍ಗೆ ಒತ್ತಾಯಿಸಿ ಕನ್ನಡ ವಿವಿ ವಿದ್ಯಾರ್ಥಿಗಳ ಪ್ರತಿಭಟನೆ

Leave a Reply

Your email address will not be published. Required fields are marked *