ರಾಣೆಬೇನ್ನೂರ: ಇತ್ತೀಚೆಗೆ ತಾಲ್ಲೂಕಿನ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಾದ ಅರುಣ್ ದೇವರಗುಡ್ಡ ಮತ್ತು ರವಿ ತಳವಾರ ಅನುಮಾನಾಸ್ಪದ ಆತ್ಮಹತ್ಯೆ ಸಾವಿನ ಕುರಿತು ಸೂಕ್ತ ತನಿಖೆಗೆ ಒತ್ತಾಯಿಸಿ ನಗರದ ತಹಶೀಲ್ದಾರರ ಕಚೇರಿ ಎದುರು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್ಎಫ್ಐ) ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಮೃತ ವಿದ್ಯಾರ್ಥಿ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗುಡಿಹೊನ್ನತಿ ವಸತಿ ನಿಲಯದಲ್ಲಿ ಅರುಣ್ ಮಾಲತೇಶ್ ದೇವರಗುಡ್ಡ ಹಾಗೂ ತಿಂಗಳ ಹಿಂದೆ ನಗರದ ನಂ. 2 ವಸತಿ ನಿಲಯದಲ್ಲಿ ರವಿ ತಳವಾರ ನೇಣು ಹಾಕಿಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು ಸಾರ್ವಜನಿಕರಲ್ಲಿ ಹಲವು ಅನುಮಾನ ಹುಟ್ಟುಹಾಕಿವೆ. ಈ ಎರಡೂ ಪ್ರಕರಣಗಳನ್ನು ರಾಜ್ಯ ಸರ್ಕಾರ, ಮಕ್ಕಳ ಕಲ್ಯಾಣ ಇಲಾಖೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಇಲಾಖೆ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು.
ಈ ಎರಡೂ ವಸತಿ ನಿಲಯಗಳಲ್ಲಿ ಇರುವ ಸಿಸಿಟಿವಿ ಕ್ಯಾಮರಾ ನಿರ್ವಹಣೆ ಮಾಡದೆ ಇರುವುದು ಮತ್ತಷ್ಟ ಅನುಮಾನಕ್ಕೆ ಕಾರಣವಾಗಿದೆ. ಕನಿಷ್ಠ ಪಕ್ಷ ಸಿಸಿಟಿವಿಯಲ್ಲಿ ಸೆರೆಯಾಗಿರುವ ವಿದ್ಯಾರ್ಥಿಗಳ ಚಲನ ವಲನಾ ಆಧಾರದಲ್ಲಿ ವಿದ್ಯಾರ್ಥಿ ಅರುಣ್ ದೇವರಗುಡ್ಡ ಸಾವಿನ ತನಿಖೆ ನಡೆಸಬಹುದಿತ್ತು. ಸಿಸಿಟಿವಿ ಸರಿಯಾಗಿ ನಿರ್ವಹಣೆ ಮಾಡದೆ ಇರುವ ಸಮಾಜ ಕಲ್ಯಾಣ ಇಲಾಖೆ ಬೇಜವಾಬ್ದಾರಿತನ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಹಾಗೂ ರವಿ ತಳವಾರ ಆತ್ಮಹತ್ಯೆ ಪ್ರಕರಣವು ಸೂಕ್ತ ತನಿಖೆ ಮಾಡಬೇಕು ಹಣದ ಆಮಿಷ ಒಡ್ಡಿ ಪ್ರಕರಣ ಮುಚ್ಚಲು ಷಡ್ಯಂತರ ನಡೆದಿರುವುದು ಗಮನಕ್ಕೆ ಬಂದಿದೆ. ಈ ವಿಚಾರದಲ್ಲಿ ಮೃತ ವಿದ್ಯಾರ್ಥಿ ಪೋಷಕರಿಗೆ ಮಹಾ ಮೋಸ ಮಾಡಲಾಗಿದೆ ಇದನ್ನು ಸಂಘಟನೆಯು ತೀವ್ರವಾಗಿ ಖಂಡಿಸುತ್ತದೆ ಎಂದರು.
ಇದನ್ನು ಓದಿ: ಮೃತ ಅರುಣ್ ದೇವರಗುಡ್ಡ ಮನೆಗೆ ಎಸ್ಎಫ್ಐ ನಿಯೋಗ ಭೇಟಿ: ಸರ್ಕಾರಿ ಉದ್ಯೋಗ, 10 ಲಕ್ಷ ಪರಿಹಾರಕ್ಕೆ ಆಗ್ರಹ
ಈ ಎರಡೂ ಕುಟುಂಬಗಳೊಂದಿಗೆ ಸಂಪರ್ಕಿಸಲಾಗಿದ್ದು, ಸರಿಯಾದ ಕಾನೂನಿನ ಅರಿವು ನೀಡಿ ಪ್ರಕರಣಗಳನ್ನು ತನಿಖೆಗೆ ಒತ್ತಾಯಿಸಲಾಗುವುದು. ತಲಾ ಕುಟುಂಬಕ್ಕೆ ಹತ್ತು ಲಕ್ಷ ಪರಿಹಾರ, ಸರ್ಕಾರಿ ಉದ್ಯೋಗ ನೀಡಬೇಕು ಹಾಗೂ ತಪ್ಪಿತಸ್ಥ ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಸ್ಎಫ್ಐ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಅರುಣೋದಯ ಶಿಕ್ಷಣ, ಆರೋಗ್ಯ ಸಂಸ್ಥೆಯ ಹೊನ್ನಮ್ಮ ಎನ್ ಎಸ್ ಮಾತನಾಡಿ, ಮೃತ ವಿದ್ಯಾರ್ಥಿ ಅರುಣ್ ದೇವರಗುಡ್ಡ ಕುಟುಂಬಕ್ಕೆ ನ್ಯಾಯ ಸಿಗಬೇಕು, ಅನುಮಾನಾಸ್ಪದ ಸಾವಿನ ಸತ್ಯಾಸತತೆ ಬಹಿರಂಗಪಡಿಸಬೇಕು , ಬಡ ಕುಟುಂಬಕ್ಕೆ ದಾರಿ ದೀಪವಾಗಿದ ವಿದ್ಯಾರ್ಥಿ ಅರುಣ್ ಮನೆಗೆ ಸೂಕ್ತ ಪರಿಹಾರ ಕೊಡಬೇಕು. ಐದಾರು ದಿನಗಳು ಕಳೆದರು ಶಾಸಕರು ಸೇರಿದಂತೆ ಅನೇಕ ಜನಪ್ರತಿನಿಧಿಗಳು, ಅಧಿಕಾರಿಗಳು ಭೇಟಿ ನೀಡದಿರುವುದು, ಪ್ರಕರಣದ ಗಂಭೀರತೆ ಅರಿಯದಿರುವುದು ಜಾತಿ ತಾರತಮ್ಯ ಎದ್ದು ಕಾಣಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದನ್ನು ಓದಿ: ಎಲ್ಲಾ ಹಳ್ಳಿಗಳಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲು ಎಸ್ಎಫ್ಐ ಹೋರಾಟ
ಸಾಮಾಜಿಕ ಹೋರಾಟಗಾರ, ಕಲಾವಿದ ಬಸವರಾಜ ಸಾವಕ್ಕನವರ ಮಾತನಾಡಿ, ಶ್ರೀಮಂತ ಮಕ್ಕಳಿಗೂ ಬಡವರ ಮಕ್ಕಳಿಗೂ ಇರುವ ತಾರತಮ್ಯ ನೋಡಿ ತುಂಬಾ ಬೇಸರವಾಗುತ್ತಿದೆ. ಎಸ್ಸಿ/ಎಸ್ಟಿ ವಿದ್ಯಾರ್ಥಿ ನಿಲಯಗಳಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ. ಸರ್ಕಾರ ಇತ್ತ ಗಮನಹರಿಸಿ ಸಾವಿನ ತನಿಖೆ ಮಾಡಬೇಕು. ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷ ಶ್ರೀಧರ ಛಲವಾದಿ, ಉಪಾಧ್ಯಕ್ಷೆ ವೀಣಾ ಘಂಟೆರ್, ಅರುಣೋದಯ ಸಂಸ್ಥೆಯ ಗಿರೀಶ್ ಎನ್ ಎಸ್, ಎಸ್ಎಫ್ಎ ಮುಖಂಡರಾದ ಚೇತನ ಕೊರವರ, ಸಂತೋಷ ಎನ್, ಕರ್ಣ ಚಿಕ್ಕಣ್ಣನವರ, ಸಂಗಮೇಶ ಎಚ್, ಮಲ್ಲಿಕಾ ಎಸ್ ಆರ್, ಹರ್ಷ ಕೆ ಆರ್ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ