ವಿದ್ಯುತ್ ಕಾಯ್ದೆ (ತಿದ್ದುಪಡಿ)-2020 ರೈತಾಪಿ ಕೃಷಿಯನ್ನು ಸರ್ವನಾಶ ಮಾಡುವ ಹುನ್ನಾರ

– ಜಿ.ಸಿ. ಬಯ್ಯಾರೆಡ್ಡಿ

ಕೃಷಿ ಭೂಮಿ, ಕೃಷಿ ಉತ್ಪಾದನೆ, ಕೃಷಿ ಮಾರುಕಟ್ಟೆ, ಚಿಲ್ಲರೆ ವ್ಯಾಪಾರ ಮಾತ್ರವಲ್ಲ ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ವಿದ್ಯುತ್, ನೀರನ್ನೂ ಸಹ ಕಾರ್ಪೋರೇಟ್ ಕಂಪನಿಗಳಿಗೆ ಒಪ್ಪಿಸುವುದರ ಮೂಲಕ ದೇಶದ ಬಹುಸಂಖ್ಯಾತ ಗ್ರಾಮೀಣಾ ಜನತೆಯ ಜೀವನಾಧಾರವಾಗಿರುವರೈತಾಪಿ ಕೃಷಿಯನ್ನು ಸರ್ವನಾಶ ಮಾಡಿ, ಕಾರ್ಪೋರೇಟ್ ಕೃಷಿಗೆ ಪಟ್ಟವನ್ನು ಕಟ್ಟುವುದರ ಜೊತೆಗೆ ಸಾರ್ವಜನಿಕರ ಶ್ರಮದ ಫಲವಾಗಿ ಲಕ್ಷ ಲಕ್ಷ ಕೋಟಿ ರೂಗಳ ಆಸ್ತಿಯೂ ವಿದ್ಯುತ್ ಕ್ಷೇತ್ರದಲ್ಲಿ ಕ್ರೋಡಿಕರಣಗೊಂಡಿದ್ದು, ಕಾಪೋರೇಟ್ ಕಂಪನಿಗಳು ಲಪಾಟಾಯಿಸಲು ಅನುಕೂಲ ಮಾಡುವ ಹುನ್ನಾರವೇ ಕೇಂದ್ರ ಸರ್ಕಾರದವಿದ್ಯುತ್ ಕಾಯ್ದೆ (ತಿದ್ದುಪಡಿ)-2020’ ಎನ್ನುವುದರಲ್ಲಿ ಸಂಶಯವೇ ಇಲ್ಲ.

 

‘ಸೇವಾ ಕ್ಷೇತ್ರವಾಗಿದ್ದ ವಿದ್ಯುತ್ ಕ್ಷೇತ್ರ:

ದೇಶದಲ್ಲಿ ವಿದ್ಯುತ್ ಕ್ಷೇತ್ರಕ್ಕೆ ದೊಡ್ಡ ಇತಿಹಾಸವಿದೆ. ವಿಶೇಷವಾಗಿ ನಮ್ಮ ರಾಜ್ಯಕ್ಕೆ ವಿದ್ಯುತ್ ಉತ್ಪಾದನೆಯಲ್ಲಿ ಬಾರಿ ವಿಶಿಷ್ಠವಾದ ಸ್ಥಾನವಿದೆ. 1902 ರಲ್ಲಿಯೇ ಏಷ್ಯಾದಲ್ಲಿಯೇ ಮೊಟ್ಟ ಮೊದಲನೇಯ ‘ಜಲ ವಿದ್ಯುತ್ ಘಟಕ’ ಆರಂಭವಾಗಿದ್ದು ನಮ್ಮ ರಾಜ್ಯದಲ್ಲಿ. ಮೈಸೂರು ಮಹಾರಾಜರು ಮತ್ತು ಎಂ. ವಿಶ್ವೇಶ್ವರಯ್ಯನವರ ಪರಿಶ್ರಮದಿಂದ ಇವತ್ತಿನ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಶಿವನಸಮುದ್ರದಲ್ಲಿ “ಜಲ ವಿದ್ಯುತ್ ಘಟಕ” ವನ್ನು ಆರಂಭ ಮಾಡಿ, ಇಲ್ಲಿ ಉತ್ಪಾದನೆಯಾದ ವಿದ್ಯುತ್‌ನ್ನು ಕೋಲಾರ ಜಿಲ್ಲೆಯ “ಕೋಲಾರ ಚಿನ್ನದ ಗಣಿ (ಕೆಜಿಎಫ್) ಗೆ ಸರಬರಾಜು ಮಾಡಲಾಗುತ್ತಿತ್ತು. ಸುಮಾರು 120 ವರ್ಷಗಳ ಹಿಂದೆ ಆರಂಭವಾದ ಜಲ ವಿದ್ಯುತ್ ಇವತ್ತಿಗೂ ಅತ್ಯಂತ ಕಡಿಮೆ ದರದ ವಿದ್ಯುತ್ ಆಗಿದೆ. ಒಂದು ಯೂನಿಟ್ ವಿದ್ಯುತ್ ದರ ಕೇವಲ 10-20 ಪೈಸೆ ಎಂದರೆ ನಮ್ಮೆಲ್ಲರಿಗೂ ಅಚ್ಚರಿಯವಾಗಬಹುದು. ಆದರೆ ಇದು ಸತ್ಯ. ಶಿವನಸಮುದ್ರದಲ್ಲಿ ಮಾತ್ರವಲ್ಲ ರಾಜ್ಯದ ಇತರೆ ‘ಜಲ ವಿದ್ಯುತ್ ಘಟಕ”ಗಳಲ್ಲಿ ತಯಾರಾಗುವ ವಿದ್ಯುತ್‌ನ ದರವೂ ಸರಿಸುಮಾರು ಇಷ್ಠೆ. ಹೀಗೆ ಆರಂಭವಾದ ವಿದ್ಯುತ್ ಉತ್ಪಾದನಾ ಕ್ಷೇತ್ರ ‘ಭಾರತೀಯ ವಿದ್ಯುತ್ ಕಾಯ್ದೆ -1910 ಮತ್ತು ‘ವಿದ್ಯುತ್ (ಸರಬರಾಜು) ಕಾಯ್ದೆ-1948’ ರ ಅನ್ವಯ ಕೆಲಸವನ್ನು ಮಾಡುತ್ತಾ ಮುನ್ನೆಡೆಯಿತು. ಈ ದಿನಗಳಲ್ಲಿ ‘ವಿದ್ಯುತ್’ನ್ನು ಕೃಷಿ ಮತ್ತು ಕೈಗಾರಿಕಾ ಅಭಿವೃದ್ಧಿಯ ಒಟ್ಟಾರೆ ಸಮಾಜದ ಸಮಗ್ರ ಅಭಿವೃದ್ಧಿಯ “ಸಾಧನ”ವಾಗಿ ಪರಿಗಣಿಸಲಾಗಿತ್ತು. ವಿದ್ಯುತ್ ಉತ್ಪಾದನೆ ಮತ್ತು ಸರಬರಾಜು ಮಹತ್ತರ ‘ಸೇವಾ ಕ್ಷೇತ್ರ’ವಾಗಿ ಸರಿ ಸುಮಾರು 1990 ಆರಂಭದವರೆಗೆ ಬೆಳೆಯ ತೊಡಗಿತ್ತು.

ಹೀಗೆ ಸಾರ್ವಜನಿಕ ಬಂಡವಾಳ ಹೂಡಿಕೆಯಿಂದ “ಸಾರ್ವಜನಿಕ ಉದ್ದಿಮೆ”ಯಾಗಿ ದೇಶದ `ಕೃಷಿ’ ಮತ್ತು `ಕೈಗಾರಿಕೆ’ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾ, ದೇಶದ ಆರ್ಥಿಕ, ರಾಜಕೀಯ ಸ್ವಾವಲಂಬನೆಯನ್ನು ಸಾಧಿಸಲು ಸಹಕಾರಿಯಾಗಿದ್ದು ಮಾತ್ರವಲ್ಲದೆ ಲಕ್ಷ ಲಕ್ಷ ಕೋಟಿಗಳ ಆಸ್ತಿಯಾಗಿ ವಿದ್ಯುತ್ ಕ್ಷೇತ್ರವು ಜನತೆಯ ಬೆವರಿನಿಂದ ಬೆಳೆದು ನಿಂತಿದೆ. ಸಾರ್ವಜನಿಕ ಉದ್ದಿಮೆಯಾಗಿರುವ ಈ ವಿದ್ಯುತ್ ಕ್ಷೇತ್ರ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಪ್ರದೇಶಗಳಿಗೆ ವಿಸ್ತರಣೆಯಾಗಿ ಸಾಮಾನ್ಯ ಜನರ ಬದುಕಿನಲ್ಲಿ `ಬೆಳಕು’ ನೀಡಿದ್ದು ಮಾತ್ರವಲ್ಲ ಕೃಷಿ ಮತ್ತು ಕೈಗಾರಿಕಾ ರಂಗದಲ್ಲಿ ತೀರ ಅಗತ್ಯವಿರುವ ವಿಭಾಗದ ಜನರಿಗೆ ಉಚಿತ, ಸಬ್ಸಿಡಿ ದರದ ವಿದ್ಯುತ್‌ನ್ನು ಸರಬರಾಜು ಮಾಡುತ್ತಾ ಸಾಗಿದೆ. ಇದರಿಂದ ಲಕ್ಷಾಂತರ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು, ಸಣ್ಣ ಪುಟ್ಟ ಕೈಗಾರಿಕಾ ಮಾಲೀಕರು ತಮ್ಮ ವೃತ್ತಿಗಳನ್ನು ಮುಂದುವರಿಸಲು ಸಹಾಯವಾಗುತ್ತಿದೆ. ಉದಾಹರಣೆಗೆ ರಾಜ್ಯದ ಸುಮಾರು 25.90 ಲಕ್ಷ ನೀರಾವರಿ ಪಂಪಸೆಟ್ ವಿದ್ಯುತ್ ಬಳಕೆದಾರ ರೈತರು, ಲಕ್ಷಾಂತರ ಭಾಗ್ಯ ಜ್ಯೋತಿ / ಕುಟೀರ ಜ್ಯೋತಿ ಬಡವರು ಗೃಹ ಬಳಕೆಗೆ ವಿದ್ಯುತ್‌ನ್ನು ಉಚಿತವಾಗಿ ಪಡೆಯುತ್ತಿದ್ದಾರೆ.

ವಿದ್ಯುತ್ ಖಾಸಗಿಕರಣದ ಪರ್ವ

1991 ರಿಂದ ಆರಂಭವಾದ ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ, ಗ್ಯಾಟ್ ಒಪ್ಪಂದ, ವಿಶ್ವ ವ್ಯಾಪಾರಿ ಸಂಘಟನೆಯ ಷರತ್ತುಗಳ ಫಲವಾಗಿ ದೇಶದ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುವ ಧೋರಣೆಯ ಭಾಗವಾಗಿ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ಶುರು ಮಾಡಲಾಯಿತು. ಈ ಪ್ರಕ್ರಿಯೆಯ ಭಾಗವಾಗಿ ವಿದ್ಯುತ್ ಕ್ಷೇತ್ರದ ಸಬ್ಸಿಡಿಗಳ ಕುರಿತು ಪಾರದರ್ಶಕತೆ, ಈ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸುವ ಹೆಸರಿನಲ್ಲಿ ‘ವಿದ್ಯುತ್ ನಿಯಂತ್ರಣ ಕಾಯ್ದೆ-1998’ ನ್ನು ಜಾರಿಗೆ ತರಲಾಯಿತು. ಈ ಕಾಯ್ದೆಯ ಜಾರಿಯ ಭಾಗವಾಗಿಯೇ ದೇಶಾದ್ಯಂತ ವಿದ್ಯುತ್ ಕ್ಷೇತ್ರವನ್ನು “ವಿದ್ಯುತ್ ಉತ್ಪಾದನೆ” ವಿದ್ಯುತ್ ಸರಬರಾಜು” ಮತ್ತು “ವಿದ್ಯುತ್ ಪ್ರಸರಣೆ” ಗಾಗಿ ಪ್ರತ್ಯೇಕ ಕಂಪನಿಗಳನ್ನು ರಚಿಸಲು ರಾಜ್ಯ ಸರ್ಕಾರಗಳು ತಮ್ಮ ಕಾಯ್ದೆಗಳಿಗೆ ತಿದ್ದುಪಡಿಗಳನ್ನು ತಂದವು ಮಾತ್ರವಲ್ಲ ಪ್ರಪ್ರಥಮ ಬಾರಿಗೆ “ವಿದ್ಯುತ್ ದರ” ನಿಗದಿ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರದ ಅಧಿಕಾರದಿಂದ ಬೇರ್ಪಡಿಸಿ ಈ ಉದ್ದೇಶಕ್ಕಾಗಿ ‘ವಿದ್ಯುತ್ ನಿಯಂತ್ರಣಾ ಆಯೋಗ’ಗಳನ್ನು ರಚಿಸಲಾಯಿತು. ಈ ಒಟ್ಟಾರೆ ಧೋರಣೆಗಳ ಫಲವಾಗಿಯೇ ನಮ್ಮ ರಾಜ್ಯದಲ್ಲಿಯು 1999 ರಲ್ಲಿ ‘ಕರ್ನಾಟಕ ವಿದ್ಯುತ್ ನಿಯಂತ್ರಣಾ ಆಯೋಗ (ಕೆಇಆರ್‌ಸಿ) ರಚನೆಯಾಯಿತು. 2002 ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ (ಕೆಇಬಿ) ಯನ್ನು ಒಡೆದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ (ಸೆಸ್ಕಂ), ಹುಬ್ಬಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಂ), ಮಂಗಳೂರು ವಿದ್ಯುತ್ ಸರಬರಾಜು ಕಂಪನಿ (ಮೆಸ್ಕಾಂ), ಗುಲ್ಬಾರ್ಗ ವಿದ್ಯುತ್ ಸರಬರಾಜು ಕಂಪನಿ (ಗೆಸ್ಕಂ) ಗಳನ್ನು ವಿದ್ಯುತ್ ಸರಬರಾಜುಗಾಗಿ ಕಂಪನಿಗಳಾಗಿ ರಚಿಸಲಾಯಿತು. ಇನ್ನಷ್ಟು ಮುಂದುವರಿದು ‘ವಿದ್ಯುತ್ ಪ್ರಸರಣೆ’ಗಾಗಿ ಕರ್ನಾಟಕ ವಿದ್ಯುತ್ ಪ್ರಸರಣೆ ನಿಗಮ ನಿಯಮಿತ (ಕೆಪಿಟಿಸಿಎಲ್) ನ್ನು ಸಹ ಹುಟ್ಟು ಹಾಕಲಾಯಿತು. 1970 ರಲ್ಲಿಯೇ ವಿದ್ಯುತ್ ಉತ್ಪಾದನೆಗೆಂದು ರಾಜ್ಯದಲ್ಲಿ ‘ಕರ್ನಾಟಕ ವಿದ್ಯುತ್ ನಿಗಮ ನಿಯಮಿತ (ಕೆಪಿಸಿಎಲ್)ವನ್ನು ರಚಿಸಲಾಗಿತ್ತು.

ವಿದ್ಯುತ್ ಉತ್ಪಾದನೆ, ಪ್ರಸರಣೆ, ಸರಬರಾಜು ಮತ್ತು ವಿದ್ಯುತ್ ದರ ನಿಗದಿ ಮಾಡುವಲ್ಲಿ ಪಾರದರ್ಶಕತೆ, ಸಾಮರ್ಥ್ಯ ಹೆಚ್ಚಳ, ಉತ್ತಮ ಸೇವೆ ಇತ್ಯಾದಿ ಆಕರ್ಷಕ ಉದ್ದೇಶಗಳನ್ನು ಬಹಿರಂಗವಾಗಿ ಸರ್ಕಾರಗಳು ಪ್ರಚುರಪಡಿಸಿದರೂ, ಮೂಲ ಉದ್ದೇಶ, ಈ ಎಲ್ಲಾ ಹಂತದಲ್ಲಿ ಖಾಸಗಿ ಕಂಪನಿಗಳಿಗೆ ಪ್ರವೇಶ ನೀಡುವುದು, ನಿಧಾನವಾಗಿ ಇಡೀ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವುದೇ ಆಗಿತ್ತು.

ಈ ಒಟ್ಟು ಪ್ರಕ್ರಿಯೆಯನ್ನು ಮತ್ತಷ್ಟು ಸುಲಭಗೊಳಿಸಲು ಮತ್ತು ಸಮರ್ಥವಾಗಿ ಜಾರಿ ಮಾಡುವ ಉದ್ದೇಶದಿಂದಲ್ಲೇ ‘ವಿದ್ಯುತ್ ಕಾಯ್ದೆ-2003’ ಕೇಂದ್ರ ಸರ್ಕಾರ ಹೊಸದಾಗಿ ಜಾರಿ ಮಾಡಿತ್ತು.

ವಿದ್ಯುತ್ ಮೀಟರೀಕರಣ ಮತ್ತು ಖಾಸಗೀಕರಣದ ವಿರುದ್ಧ ಕರ್ನಾಟಕದಲ್ಲಿ ಭುಗಿಲೆದ್ದ ರೈತ ಹೋರಾಟಗಳು:

‘ವಿದ್ಯುತ್ ಕಾಯ್ದೆ – 2003’ ರ ಅನ್ವಯ ‘ಬೆಸ್ಕಾಂ’ ನ್ನು ಮಾರಾಟ ಮಾಡುವ ಚರ್ಚೆಗಳು ಶುರುವಾದವು. ಇದಕ್ಕೆ ಪೂರಕವಾಗಿಯೇ ರೈತರ ಎಲ್ಲಾ ನೀರಾವರಿ ಪಂಪಸೆಟ್‌ಗಳಿಗೆ ಕಡ್ಡಾಯ ಮೀಟರೀಕರಣವನ್ನು ಮಾಡಿಯೇ ತೀರುವುದಾಗಿ ಕಾಂಗ್ರೇಸ್‌ನ ಎಸ್.ಎಂ. ಕೃಷ್ಣ ಸರ್ಕಾರ ಘೋಷಣೆ ಮಾಡಿ ಮೀಟರೀಕರಣವನ್ನು ಶುರು ಮಾಡಿದರು. ವಿದ್ಯುತ್ ಉತ್ಪಾದನೆಗೆ ವಿವಿಧ ಖಾಸಗಿ ಕಂಪನಿಗಳಿಗೆ ಹೇರಳ ಅವಕಾಶ, ವಿಪರೀತ ದುಬಾರಿ ದರಗಳಲ್ಲಿ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿ ಒಪ್ಪಂದಗಳು, ಅವುಗಳಲ್ಲಿ ವ್ಯಾಪಕ ಭ್ರಷ್ಟಾಚಾರದ ಪ್ರಕರಣಗಳು ಸ್ಫೋಟಗೊಂಡವು. 0.20 ಪೈಸೆ, 0.30 ಪೈಸೆಯ ವಿದ್ಯುತ್ ಯೂನಿಟ್ ದರಗಳ 2-00, 300, 7-00, 8-00 ರೂ. ವರೆಗೆ ಧೀಡಿರನೆ ಏರತೊಡಗಿದವು.

ಇಂತಹ ಸನ್ನಿವೇಶದಲ್ಲಿಯೇ ರಾಜ್ಯದ ರೈತರು, ಕೃಷಿ ಕೂಲಿಕಾರರು, ಕಾರ್ಮಿಕರು, ಸಾಮಾನ್ಯ ಜನರು ಬೀದಿಗೆ ಬಂದು ಪ್ರತಿಭಟನೆಗಳಲ್ಲಿ ಧುಮುಕಿದರು. ಕರ್ನಾಟಕ ಪ್ರಾಂತ ರೈತ ಸಂಘ (ಕೆಪಿಆರ್‌ಎಸ್), ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯುಯು), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಂಘಟನೆಗಳು, ವಿವಿಧ ವಿಭಾಗದ ವಿದ್ಯುತ್ ಬಳಕೆದಾರರ ಹೋರಾಟ ಸಮಿತಿಗಳನ್ನು ರಚಿಸಿಕೊಂಡು ರಾಜ್ಯದ್ಯಂತ ವ್ಯಾಪಕವಾದ ಸಮರಶೀಲ ನಿರಂತರ ಹೋರಾಟಗಳನ್ನು ಸಂಘಟಿಸುವಲ್ಲಿ ಮುಂಚೂಣಿ ಪಾತ್ರವನ್ನು ನಿರ್ವಹಿಸಿದವು. ಇಂತಹ ಚಳುವಳಿಗಳ ಭಾಗವಾಗಿ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನು ಕೈ ಬಿಟ್ಟಿತು. ನೀರಾವರಿ ಪಂಪ್‌ಸೆಟ್‌ಗಳು ಮೀಟರ್ ಮತ್ತು ಬಡವರ ಮನೆಗಳಿಗೆ ಬಲಾತ್ಕಾರದಿಂದ ಮೀಟರ್‌ಗಳನ್ನು ಅಳವಡಿಸುವ ಸರ್ಕಾರದ ಕ್ರಮ ವಿರುದ್ಧ ನಡೆದ ಸಮರ ಶೀಲ ಚಳುವಳಿ, ರಾಜ್ಯದ ವಿದ್ಯುತ್ ಕ್ಷೇತ್ರದ ಖಾಸಗೀಕರಣವನ್ನು ಒಂದು ಹಂತದಲ್ಲಿ ತಡೆಯಲು ಯಶಸ್ವಿಯಾಯಿತೆಂದು ಹೇಳಬಹುದು.

ಆದರೆ ಖಾಸಗಿ ಕಂಪನಿಗಳ ವಿದ್ಯುತ್ ಉತ್ಪಾದನೆ ಮತ್ತು ಖಾಸಗಿ ಕಂಪನಿಗಳಿಂದ ವಿಪರೀತ ದರದಲ್ಲಿ ಖರೀದಿ ಮಾಡುವ ಕಾರ್ಯ ಮುಂದುವರಿಯಿತು. ಇದರ ಫಲವಾಗಿ ಇವತ್ತು ಒಟ್ಟಾರೆ ವಿದ್ಯುತ್ ದರಗಳು ಅಭಿವೃದ್ಧಿಗೆ ಮಾರಕವಾಗಿ ನಿಂತಿವೆ.

ರೈತರ ಮರಣ ಶಾಸನ

‘ವಿದ್ಯುತ್ ನಿಯಂತ್ರಣ ಕಾಯ್ದೆ 1998’ ಮತ್ತು ‘ವಿದ್ಯುತ್ ಕಾಯ್ದೆ 2003’ಗಳನ್ನು ಜಾರಿಗೆ ತಂದು ವಿದ್ಯುತ್ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣ ಗೊಳಿಸಬೇಕೆಂಬ ಕೇಂದ್ರ ಸರ್ಕಾರಗಳ ಉದ್ದೇಶವನ್ನು ಈಡೇರಿಸಲು ಸಾಧ್ಯವಾಗಲ್ಲಿಲವೆಂದು ಹಾಗು ಇದಕ್ಕೆ ಕೆಲವು ರಾಜ್ಯ ಸರ್ಕಾರಗಳು, ರೈತರು, ಕೃಷಿಕೂಲಿಕಾರರ ದುರ್ಬಲ ವರ್ಗದವರಿಗೆ ಉಚಿತ, ಸಬ್ಸಿಡಿ ದರಗಳಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿರುವುದು ಈ ಖಾಸಗೀಕರಣ ಪ್ರಕ್ರಿಯೆ ಅಡ್ಡಿ ಉಂಟಾಗಿದೆಯೆಂದು ತೀರ್ಮಾನಿಸಿ, ಈ ಬಾರಿ ರಾಜ್ಯಗಳನ್ನು ಹಿಂದಕ್ಕೆ ಸರಿಸಿ, ತಾನೇ ಸಂಪೂರ್ಣ ಹಿಡಿತವನ್ನು ಸಾಧಿಸಿ, ರೈತರು, ಕೃಷಿಕೂಲಿಕಾರರ ಇತ್ಯಾದಿ ದುರ್ಬಲ ವರ್ಗದವರಿಗೆ ನೀಡುತ್ತಿರುವ ಉಚಿತ, ಸಬ್ಸಿಡಿ ದರದ ವಿದ್ಯುತ್‌ವನ್ನು ನಿಲ್ಲಿಸುವುದು. ಕಾಲಾಮಿತಿಯಲ್ಲಿ ಖಾಸಗೀಕರಣ ಗೊಳಿಸುವ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲು ‘ವಿದ್ಯುತ್ ಕಾಯ್ದೆ 2003’ಕ್ಕೆ ತಿದ್ದುಪಡಿಗಳನ್ನು ತಂದು ಕೊರೊನಾ ಕಾಲದಲ್ಲಿ `ವಿದ್ಯುತ್ ಕಾಯ್ದೆ (ತಿದ್ದುಪಡಿ)-2020’ನ್ನು ಬಿಜೆಪಿಯ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

ಈ ಕಾಯ್ದೆ ಜಾರಿಯ ಮೂರು ವರ್ಷಗಳಲ್ಲಿ ಉಚಿತ, ಸಬ್ಸಿಡಿ ದರದಲ್ಲಿ ನೀಡುತ್ತಿರುವ ವಿದ್ಯುತ್ ನಿಲ್ಲಿಸಬೇಕು. ಪ್ರತಿವರ್ಷ ಶೇ 6 ಕ್ಕಿಂತ ಕಡಿಮೆಯಾಗದಂತೆ ಸಬ್ಸಿಡಿಗಳನ್ನು ಕಡಿತ ಮಾಡಬೇಕು. ವಿದ್ಯುತ್ ದರದ ಶೇ 20 ಕ್ಕಿಂತ ಹೆಚ್ಚಿಗೆ ಸಬ್ಸಿಡಿಗಳ ಇರಬಾರದು, ಒಂದು ವೇಳೆ ರಾಜ್ಯ ಸರ್ಕಾರಗಳ ಈ ಎಲ್ಲಾ ಶರತ್ತ್ಗಳ ಅನ್ವಯ ಸಬ್ಸಿಡಿಗಳನ್ನು ನೀಡುವುದಾದರೆ, ರೈತರು, ಕೂಲಿಕಾರರು ವಿದ್ಯುತ್ ದರಗಳನ್ನು ಪಾವತಿಸಿದ ನಂತರ ಅವರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗವಣೆ (DBT) ಮಾಡುವುದು. ಇತ್ಯದಿ ಹತ್ತು ಹಲವು ಅಂಶಗಳನ್ನು ಒಳಗೊಂಡಿದೆ. ‘ವಿದ್ಯುತ್ ಕಾಯ್ದೆ (ತಿದ್ದುಪಡಿ)2020. ಈ ಉದ್ದೇಶದಿಂದಲೇ ಅಖಿಲ ಭಾರತ ಕಿಸಾನ್ ಸಭಾ (ಂIಏS), ಕೇಂದ್ರ ಸರ್ಕಾರಕ್ಕೆ ತನ್ನ ಅಭಿಪ್ರಾಯವನ್ನು ನೀಡುವ ಸಂದರ್ಭದಲ್ಲಿ “ಈ ಕಾಯ್ದೆ ರೈತರ ಮರಣ ಶಾಸನ” ವೆಂದು ಅದನ್ನು ಜಾರಿ ಮಾಡಬಾರದೆಂದು ಆಗ್ರಹಿಸಿದ್ದು.

ಈ ‘ವಿದ್ಯುತ್ ಕಾಯ್ದೆ (ತಿದ್ದುಪಡಿ)-2020’ ಕೇವಲ ಈ ಸಬ್ಸಿಡಿಗಳನ್ನು ರದ್ದು ಮಾಡುವುದಕ್ಕೆ ಸಂಬಂಧಿಸಿದ್ದು ಮಾತ್ರವಲ್ಲ. ಇದಕ್ಕೂ ಗಂಭೀರವಾದ ಅಂಶಗಳನ್ನು ಒಳಗೊಂಡಿದೆ. ನಿಜ, ಕಾರ್ಷಿಕ ಬಿಕ್ಕಟ್ಟು ಕೊರೊನಾ-ಲಾಕ್‌ಡೌನ್, ಈ ಕಾಲಾವಧಿಯ ಕೇಂದ್ರ, ರಾಜ್ಯ ಸರ್ಕಾರಗಳ ಇತರೆ ನಿರ್ಧಾರಗಳು ರೈತರು, ಕೃಷಿ ಕೂಲಿಕಾರರು ಒಟ್ಟಾರೆ ದುಡಿಯುವ ಜನರನ್ನು ಗಂಭೀರವಾದ ಬಿಕ್ಕಟ್ಟಿಗೆ ತಳ್ಳಿವೆ. ಇಂತಹ ಸ್ಥಿತಿಯಲ್ಲಿ ರೈತರು, ಕೃಷಿ ಕೂಲಿಕಾರರಿಗೆ ಸಿಗುತ್ತಿರುವ ಉಚಿತ ವಿದ್ಯುತ್ ಇಲ್ಲವಾದರೆ ಕೃಷಿಯನ್ನು ನಡೆಸಲು ಸಾಧ್ಯವಿಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಕೋಟಿ ಕೋಟಿ ರೈತರು, ಕೂಲಿಕಾರರ ಕುಟುಂಬಗಳು ಬೀದಿಪಾಲಾಗುತ್ತವೆ. ಆಹಾರ ಭದ್ರತೆಗೆ ಧಕ್ಕೆ, ಬಡತನ, ಗ್ರಾಮೀಣ ನಿರುದ್ಯೋಗ, ವಿಪರೀತ ಹೆಚ್ಚಳವಾಗುತ್ತವೆ.

ಇದನ್ನು ಓದಲು ಲಿಂಕ್ ಕ್ಲಿಕ್ ಮಾಡಿ : ರಾಜ್ಯ, ಕೇಂದ್ರ ಸರ್ಕಾರಗಳ ವಿರುದ್ಧ ರಾಜ್ಯಾದ್ಯಂತ ರೈತ ಸಂಘಟನೆಗಳಿಂದ ಪ್ರತಿಭಟನೆ

ಆದರೆ ಕೇಂದ್ರ ಸರ್ಕಾರ, ತಮಿಳುನಾಡು, ಪುದುಚೇರಿ, ಕೇರಳ, ಬಿಹಾರ್, ಜಾರ್ಖಂಡ, ತೆಲಂಗಾಣ, ಆಂಧ್ರಪ್ರದೇಶ ಇತ್ಯಾದಿ ರಾಜ್ಯಗಳು ಹಾಗು ಜನ ಚಳುವಳಿಗಳ ವಿರೋದದ ನಡುವೆಯೂ ಈ ಕಾಯ್ದೆಯನ್ನು ಜಾರಿ ಮಾಡಲು ಪಣತೊಟ್ಟು ನಿಂತಿದೆ. ಸಂವಿಧಾನದ ವಿರುದ್ದವಾಗಿ, ಸಮವರ್ತಿ ಪಟ್ಟಿಯಲ್ಲಿರುವ ‘ವಿದ್ಯುತ್’ ಗೆ ಸಂಬಂಧಿಸಿ, ಹಲವು ರಾಜ್ಯಗಳ ‘ವಿದ್ಯುತ್ ನಿಯಂತ್ರಣ ಆಯೋಗ’ಗಳಲ್ಲಿನ ಸದಸ್ಯರ ಆಯ್ಕೆ, ಕೇಂದ್ರ ಸರ್ಕಾರ ಪ್ರಾತಿನಿಧ್ಯವನ್ನು ಪಡೆಯುವ ವಿಷಯವೂ ಸೇರಿದಂತೆ ರಾಜ್ಯ ಸರ್ಕಾರಗಳ ಹಲವು ಅಧಿಕಾರಗಳನ್ನು ಮೊಟಕು ಮಾಡಿ, ಈ ಕಾಯ್ದೆಯನ್ನು ಜಾರಿ ಮಾಡಿಯೇ ತೀರುತ್ತೇನೆ ಎಂದು ಕೇಂದ್ರ ಸರ್ಕಾರ ಮುಂದುವರೆಯುತ್ತಿದೆ. ಈ ಮೂಲಕ ಸಮಾಜದ ಆರ್ಥಿಕ ಸಾಮಾಜಿಕ ಪರಿವರ್ತನೆಯ ಅಗತ್ಯ ಸೇವೆಯಾಗಿದ್ದ ವಿದ್ಯುತ್‌ನ್ನು ಮಾರಾಟದ ಸರಕನ್ನಾಗಿ ಮಾಡಲು ತುದಿಗಾಲಿನ ಮೇಲೆ ನಿಂತಿದೆ.

ಇದಕ್ಕೆ ಮೂಲ ಕಾರಣ ಬಿಜೆಪಿ ಕೇಂದ್ರ ಸರ್ಕಾರದ ತೀರ ಹತ್ತಿರದ ಮಿತ್ರರಾದ ಅದಾನಿ, ಅಂಬಾನಿಗಳಂತಹ ಕಾರ್ಪೋರೇಟ್ ಕಂಪನಿಗಳನ್ನು ತೃಪ್ತಿ ಪಡಿಸುವುದು. 70 ದಶಕಗಳಿಂದ ಶೇಖರಣೆಗೊಂಡಿರುವ ಲಕ್ಷ ಲಕ್ಷ ಕೋಟಿಗಳ ಆಸ್ತಿಯನ್ನು ಮೂರು ಕಾಸಿಗೆ, ನಾಲ್ಕು ಕಾಸಿಗೆ ಧಾರೆ ಎರೆಯುತ್ತಿದೆ. ಈ ಖಾಸಗೀಕರಣದ ಫಲವಾಗಿ ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗದ ವಿದ್ಯುತ್ ದರಗಳು ಗಗನಕ್ಕೆ ಏರಲಿವೆ. ರೈತರು, ಕೃಷಿ ಕೂಲಿಕಾರರು ಇತ್ಯಾದಿ ಸಾಮಾನ್ಯ ಜನರು ವಿದ್ಯುತ್‌ನ್ನು ಬಳಸಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಲಿದೆ. ಮತ್ತೆ ಬಡವರು `ಕತ್ತಲಿಗೆ’ ತಳ್ಳಲ್ಪಡುತ್ತಾರೆ. ಖಂಡಿತ ಇದು ಅತ್ಯಂತ ಹೇಯ, ದೇಶದ್ರೋಹದ ಕೆಲಸವಾಗಿದೆ. `ದೇಶ ಪ್ರೇಮ’ವನ್ನು ಸಂಪೂರ್ಣ ಗುತ್ತಿಗೆ ಪಡೆದವರಂತೆ ಮಾತನಾಡುವ ಸಂಘ ಪರಿವಾರ, ಅದರ ನಾಯಕತ್ವದ ಬಿಜೆಪಿ ಕೇಂದ್ರ ಸರ್ಕಾರ ಆದಾನಿ, ಅಂಬಾನಿ ದೊರೆಗಳ ಗುಲಾಮರಾಗುತ್ತಿದ್ದಾರೆ. ಹೀಗಾಗಿ ಈ ಕಾಯ್ದೆಯನ್ನು ದೇಶ ಪ್ರೇಮಿಗಳು ಎಲ್ಲರೂ ಉಗ್ರವಾಗಿ ವಿರೋಧಿಸಬೇಕಿದೆ. ಇದಕ್ಕಾಗಿ ದೇಶದಲ್ಲಿ ಈಗಾಗಲೇ ಸುಮಾರು 500ಕ್ಕಿಂತ ಹೆಚ್ಚಿನ ರೈತ ಸಂಘಟನೆಗಳು, ಎಐಕೆಎಸ್‌ಸಿಸಿ ನಾಯಕತ್ವದಲ್ಲಿ ಒಟ್ಟುಗೂಡಿ, ಸಮರವನ್ನು ಸಾರಿವೆ. ಗ್ರಾಮೀಣ ಜನತೆಯಲ್ಲಿ ಜಾಗೃತಿ ಮೂಡಿಸಿ, ಈ ಹೋರಾಟವನ್ನು ಪಕ್ಷಾತೀತ ವಿಶಾಲವಾದ ಸಮರಧೀರ ಹೋರಾಟವನ್ನಾಗಿ ಕಟ್ಟೋಣವೆಂದು ಪ್ರತಿಜ್ಞೆ ಮಾಡಬೇಕಿದೆ.

ಈ ಹೋರಾಟದಲ್ಲಿ ರೈತರು ಏಕಾಂಗಿಯಲ್ಲ, ಇತರೆ ರೈತ, ಕೃಷಿ ಕೂಲಿಕಾರರ ಸಂಘಟನೆಗಳು ಮಾತ್ರವಲ್ಲ ಕಾರ್ಮಿಕ ಸಂಘಟನೆಗಳು, ವಿದ್ಯುತ್ ಇಲಾಖೆಗಳಲ್ಲಿ ದುಡಿಯುತ್ತಿರುವ ನೌಕರರು, ಅಧಿಕಾರಿಗಳು, ಸಣ್ಣ, ಮಧ್ಯಮ ಕೈಗಾರಿಕೆಯ ಮಾಲೀಕರು ಇದರಲ್ಲಿ ಸೇರಿಕೊಳ್ಳಲಿದ್ದಾರೆ.

ಬಿಜೆಪಿಯ ಆಳ್ವಿಕೆಯ ಉತ್ತರ ಪ್ರದೇಶದ ರಾಜ್ಯ ಸರ್ಕಾರ ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ಮುಂದಾದಾಗ ವಿದ್ಯುತ್ ಇಲಾಖೆಯ ನೌಕರರು ಮತ್ತು ಅಧಿಕಾರಿಗಳು ನಡೆಸಿದ ಹೋರಾಟ ಐತಿಹಾಸಿಕವಾದದ್ದು. ರಾಜ್ಯ ಸರ್ಕಾರದ ಜನವಿರೋಧಿ ನೀತಿಯ ವಿರುದ್ಧ ರಾಜ್ಯದ ಪೊಲೀಸ್ ಮತ್ತು ಪ್ಯಾರಮಿಲಿಟರಿ ದೌರ್ಜನ್ಯವನ್ನು ಲೆಕ್ಕಿಸದೆ ರಾಜ್ಯದ ಪ್ರಜಾಸತಾತ್ಮಕ ಶಕ್ತಿಗಳ ಬೆಂಬಲದೊಂದಿಗೆ ನಡೆದ ಹೋರಾಟಕ್ಕೆ ಕೊನೆಗೂ ಬಿಜೆಪಿ ಸರ್ಕಾರ ಮಣಿಯಬೇಕಾಯಿತು. ವಿದ್ಯುತ್ ಖಾಸಗೀಕರಣದ ವಿರುದ್ದದ ಹೋರಾಟದಲ್ಲಿ ಇದು ಮಹತ್ವದ ಬೆಳವಣಿಗೆ,

‘ವಿದ್ಯುತ್ ಕಾಯ್ದೆ (ತಿದ್ದುಪಡಿ)-2020’ ರ ವಿರುದ್ಧ ನಡೆಯುವ ಹೋರಾಟ ಪ್ರತ್ಯೇಕವಾದ ಹೋರಾಟವಲ್ಲ. ಇಡೀ ರೈತಾಪಿ ಕೃಷಿಯನ್ನು ಸರ್ವನಾಶ ಮಾಡಿ, ಕಾರ್ಪೋರೇಟ್ ಕೃಷಿಯನ್ನು ಜಾರಿ ಮಾಡಲು ಹೊರಟಿರುವ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಒಟ್ಟಾರೆ ಚಳುವಳಿಯ ಭಾಗವೇ ಆಗಿದೆ. ಹೀಗಾಗಿ “ಕಾರ್ಪೋರೇಟ್ ಕೃಷಿ”ಯನ್ನು ಹಿಮ್ಮೆಟ್ಟಿಸಿ, ‘ರೈತಾಪಿ ಕೃಷಿ’ಯನ್ನು ರಕ್ಷಿಸಿ, ‘ಸಹಾಕಾರಿ ಕೃಷಿ’ಯನ್ನು ಪ್ರೋತ್ಸಾಹಿಸಿ ಎನ್ನುವುದು ನಮ್ಮ ಕೇಂದ್ರ ಘೋಷಣೆಯಾಗಬೇಕಿದೆ.

ಜನರಿಗೆ ‘ಕರೆಂಟ್ ಶಾಕ್’ ಹೊಡೆಸಿದ ಸರಕಾರ

 

 

 

Donate Janashakthi Media

One thought on “ವಿದ್ಯುತ್ ಕಾಯ್ದೆ (ತಿದ್ದುಪಡಿ)-2020 ರೈತಾಪಿ ಕೃಷಿಯನ್ನು ಸರ್ವನಾಶ ಮಾಡುವ ಹುನ್ನಾರ

Leave a Reply

Your email address will not be published. Required fields are marked *