ವಿಧಾನ ಪರಿಷತ್‌ ಫಲಿತಾಂಶ: ತಲಾ ಎರಡು ಸ್ಥಾನ ಬಿಜೆಪಿ-ಕಾಂಗ್ರೆಸ್‌ ಪಾಲು

ಬೆಂಗಳೂರು: ವಿಧಾನ ಪರಿಷತ್ತಿನ ನಾಲ್ಕು ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಈಗಾಗಲೇ ಮೂರು ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ಒಂದು ಕ್ಷೇತ್ರದ ಮತ ಏಣಿಕೆ ಕಾರ್ಯ ಪ್ರಗತಿಯಲ್ಲಿದೆ.

ರಾಷ್ಟ್ರೀಯ ಪಕ್ಷಗಳಾದ ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಪಶ್ಚಿಮ ಶಿಕ್ಷಕರ ಕ್ಷೇತ್ರ ಹಾಗೂ ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್‌ ಪಕ್ಷವು ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದು, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಜಾತ್ಯಾತೀತ ಜನತಾ ದಳ(ಜೆಡಿಎಸ್‌) ಪಕ್ಷವು ಸ್ಥಾನಗಳಿಸಲು ವಿಫಲವಾಗಿದೆ.

ಸತತ 8ನೇ ಬಾರಿ ಗೆಲವು ಸಾಧಿಸಿದ ಹೊರಟ್ಟಿ

ಜೆಡಿ(ಎಸ್‌) ಪಕ್ಷದಿಂದ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗುತ್ತಿದ್ದ ಬಸವರಾಜ ಹೊರಟ್ಟಿ ಪರಿಷತ್‌ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಬಿಜೆಪಿ ಪಕ್ಷಕ್ಕೆ ಪಕ್ಷಾಂತರಗೊಂಡು ಪಶ್ಷಿಮ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಈ ಬಾರಿ ಪರಿಷತ್‌ ಸದಸ್ಯರಾಗಿ 8 ಬಾರಿ ಆಯ್ಕೆಯಾಗುವ ಮೂಲಕ ಬಸವರಾಜ ಹೊರಟ್ಟಿ ದಾಖಲೆ ನಿರ್ಮಿಸಿದ್ದಾರೆ.

ಮತಗಳಿಕೆ ಪ್ರಮಾಣ ಹೀಗಿವೆ; ಚಲಾವಣೆಯಾದ ಒಟ್ಟು ಮತಗಳಲ್ಲಿ ಸಿಂಧು ಮತಗಳು 14,360 ಹಾಗೂ ಅಸಿಂಧು ಮತಗಳು-1223 ಆಗಿವೆ. ಬಸವರಾಜ ಹೊರಟ್ಟಿ(ಬಿಜೆಪಿ)– 9266, ಬಸವರಾಜ ಗುರಿಕಾರ (ಕಾಂಗ್ರೆಸ್)– 4597, ಶ್ರೀಶೈಲ ಗಡದಿನ್ನಿ (ಜೆಡಿಎಸ್)– 273 ಉಳಿದ ಅಭ್ಯರ್ಥಿಗಳಿಗೆ ಎಂ.ಪಿ.ಕರಿಬಸಪ್ಪ ಮಧ್ಯಾಹ್ನದ– 60, ಕೃಷ್ಣವೇಣಿ– 58, ಪ್ರೊ. ಎಫ್‌.ವಿ.ಕಲ್ಲಣ್ಣಗೌಡರ– 27, ಗೋವಿಂದಗೌಡರ ರಂಗನಗೌಡ– 79 ಪಡೆದುಕೊಂಡಿದ್ದಾರೆ.

ಗೆಲುವು ಸಾಧಿಸಿದ ಬಸವರಾಜ ಹೊರಟ್ಟಿ ‘ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ನಾನು ಸದಾ ಬದ್ದವಾಗಿರುವೆ. ಸಭಾಪತಿ ಆಗಿದ್ದರಿಂದ ಹೋರಾಟ ನಡೆಸಲು ಆಗಿರಲಿಲ್ಲ. ಈಗ ಮತ್ತಷ್ಟು ಹೋರಾಟ ನಡೆಸಲಿದ್ದೇನೆ. ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರಿಗೆ ಕಾಲಕಾಲಕ್ಕೆ ಎದುರಾಗುವ ಸಮಸ್ಯೆಯನ್ನು ಪರಿಹರಿಸುವ ಕೆಲಸ ಮಾಡುತ್ತೇನೆ’ ಎಂದರು.

ಭಾರೀ ಅಂತರದ ಗೆಲುವು-ತಿರಸ್ಕೃತ ಮತಗಳು ಅಧಿಕ

ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಹಣಮಂತ ನಿರಾಣಿ ಗೆಲುವು ದಾಖಲಿಸಿದ್ದಾರೆ. ಅವರು ಚಲಾವಣೆಯಾದ ಒಟ್ಟು 65,922 ಮತಗಳಲ್ಲಿ 44,815 ಮತಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಲೆಕ್ಕಾಚಾರದಲ್ಲಿ ಹಣಮಂತ ನಿರಾಣಿ 44,815 ಮತ ಪಡೆದುಕೊಂಡಿದ್ದರೆ, ಕಾಂಗ್ರೆಸ್‌ನ ಸುನೀಲ್ ಸಂಕ 10,122 ಮತ ಪಡೆದರು. ತಿರಸ್ಕೃತ ಮತಗಳೇ 9,006 ಇದ್ದವು. ತಡರಾತ್ರಿ ವೇಳೆ ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ.

ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರ ಕಿರಿಯ ಸಹೋದರ ಆಗಿರುವ ಹಣಮಂತ ನಿರಾಣಿ, ಈ ಹಿಂದೆಯೂ ಪದವೀಧರ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಸಚಿವ ಮುರುಗೇಶ್‌ ನಿರಾಣಿ ವಾಯುವ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ದಾಖಲೆಯ ಮತಗಳ ಅಂತರದಲ್ಲಿ ವಿಜಯ ಸಾಧಿಸಿದ ಪಕ್ಷದ ಅಭ್ಯರ್ಥಿ ಹಾಗೂ ಸಹೋದರ ಹಣಮಂತ ಆರ್ ನಿರಾಣಿ ಅವರಿಗೆ ಅಭಿನಂದನೆಗಳು ತಿಳಿಸಿದ್ದಾರೆ.

ವಿಧಾನಪರಿಷತ್ ಚುನಾವಣೆಯ ವಾಯುವ್ಯ ಪದವೀಧರ ಕ್ಷೇತ್ರದಿಂದ ಎರಡನೇ ಬಾರಿ ವಿಜಯ ಸಾಧಿಸಿದ ಹಣಮಂತ ನಿರಾಣಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆ ಸಲ್ಲಿಸಿದ್ದಾರೆ. ಗೆಲುವಿಗೆ ಕಾರಣೀಭೂತರಾದ ಕ್ಷೇತ್ರದ ಪ್ರಬುದ್ಧ ಪದವೀಧರ ಮತದಾರರು ಮತ್ತು ಹಗಲಿರುಳು ಶ್ರಮಿಸಿದ ಬಿಜೆಪಿ ಕಾರ್ಯಕರ್ತರು ಹಾಗೂ ಪ್ರಮುಖರಿಗೆ ಧನ್ಯವಾದಗಳು ಎಂದು  ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ಹುಕ್ಕೇರಿ ಜಯ

ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ 5055 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಒಟ್ಟು 21,402 ಮತಗಳು ಚಲಾವಣೆಯಾಗಿದ್ದು, ಅದರಲ್ಲಿ 1,270 ಮತಗಳು ಅಸಿಂಧುವಾಗಿವೆ ಮತ್ತು 20,132 ಸಿಂಧು ಮತಗಳಿದ್ದವು. ಅಭ್ಯರ್ಥಿ ಗೆಲುವಿಗೆ 10,067 ಮತಗಳ ಕೋಟಾ ನಿಗದಿಪಡಿಸಲಾಗಿತ್ತು. ಚಲಾವಣೆಯಾದ ಮತಗಳಲ್ಲಿ ಪ್ರಕಾಶ ಹುಕ್ಕೇರಿ 11,460 ಪ್ರಥಮ ಪ್ರಾಶಸ್ತ್ಯ  ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿಜೆಪಿಯ ಅರುಣ ಶಹಾಪುರ ಅವರನ್ನು 5,055 ಮತಗಳಿಂದ ಸೋಲಿಸಿದರು. ಅರುಣ ಶಹಾಪುರ 6,405 ಮತಗಳನ್ನು ಪಡೆದರು. ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರ ಲೋಣಿ ಕೇವಲ 544 ಮತಗಳನ್ನು ಪಡೆದರು.

ಪಕ್ಷೇತರ ಅಭ್ಯರ್ಥಿಗಳಾದ ಅಪ್ಪಾಸಾಹೇಬ ಕುರಣೆ- 9, ಚಂದ್ರಶೇಖರ ಗುಡಸೆ- 101, ದೇಸಾಯಿ ಜಯಪಾಲ ರಾಜಾರಾಮ- 10, ಬನ್ನೂರು ಎನ್. ಬಿ -1009, ಬಸಪ್ಪ ಮಣಿಗಾರ -39, ಶ್ರೀಕಾಂತ ಪಾಟೀಲ- 19, ಶ್ರೀನಿವಾಸಗೌಡ ಗೌಡರ- 524, ಶ್ರೇನಿಕ್ ಅಣ್ಣಾಸಾಹೇಬ್ ಜಂಗಟೆ -8 ಹಾಗೂ ಚಿಕ್ಕನಾರಗುಂದ ಸಂಗಮೇಶ- 4 ಮತಗಳನ್ನು ಪಡೆದಿದ್ದಾರೆ.

ಮೂರೂ ಮತ ಕ್ಷೇತ್ರಗಳ ಚುನಾವಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರ ನೇತೃತ್ವದಲ್ಲಿ ಬೆಳಗಾವಿ ವಿಭಾಗದ ಏಳೂ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು ಸೇರಿದಂತೆ ನೂರಾರು ಅಧಿಕಾರಿಗಳು ಮತ್ತು ಸಿಬ್ಬಂದಿ ಮತ ಎಣಿಕೆ ಪ್ರಕ್ರಿಯಲ್ಲಿ ಭಾಗವಹಿಸಿದ್ದರು.

ಗೆಲುವಿನ ವಿಶ್ವಾಸದಲ್ಲಿ ಕಾಂಗ್ರೆಸ್‌-ಘೋಷಣೆಯೊಂದೇ ಬಾಕಿ

ದಕ್ಷಿಣ ಪದವೀಧರ ಕ್ಷೇತ್ರಕ್ಕೆ ನಡೆದ ಚುನಾವಣೆ ಮತ ಎಣಿಕೆ ಬಹುತೇಕ ಪೂರ್ಣಗೊಂಡಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳನ್ನು ಒಳಗೊಂಡ ಈ ಕ್ಷೇತ್ರದ ಚುನಾವಣೆಯ ಮತ ಎಣಿಕೆ ಕಾರ್ಯ ಇಂದು(ಜೂನ್‌ 16) ಸಹ ಮುಂದುವರಿದಿತ್ತು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಧು.ಜಿ ಮಾದೇಗೌಡ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಮೈಸೂರು-ಹುಣಸೂರು ರಸ್ತೆಯ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ಮುಂದುವರಿದಿದೆ.

ಪ್ರಾಶಸ್ತ್ಯದ ಮತ ಎಣಿಕೆ ನಿನ್ನೆಯೇ ಮುಕ್ತಾಯಗೊಂಡಿತು ಎಂದು ಚುನಾವಣಾಧಿಕಾರಿ ಜಿ.ಸಿ. ಪ್ರಕಾಶ್ ಹೇಳಿದ್ದಾರೆ. ಒಟ್ಟು 49,700 ಮತಗಳು ಎಣಿಕೆಯಾಗಿದ್ದು, ಇನ್ನೂ 49,000 ಮತ ಎಣಿಕೆ ಬಾಕಿ ಇವೆ ಎಂದು ತಿಳಿಸಿದ್ದಾರೆ.  ಕಾಂಗ್ರೆಸ್: 16,137, ಬಿಜೆಪಿ: 13,179, ಜೆಡಿಎಸ್: 8,512 ಪ್ರಸನ್ನ ಗೌಡ : 3,142, ವಿನಯ್ : 1,890, ಬಿಎಸ್‌ಪಿ: 1,418 , ತಿರಸ್ಕೃತ: 3,718, ಕಾಂಗ್ರೆಸ್ ಅಭ್ಯರ್ಥಿ 2,958 ಮತಗಳ ಮುನ್ನೆಡೆಯಲ್ಲಿವೆ ಎಂದು ಹೇಳಿದರು.

ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಗೆಲುವು ಸಾಧಿಸುವುದು ಬಹುತೇಕ ಪಕ್ಕಾ ಆಗಿದೆ. ಚುನಾವಣಾ ಆಯೋಗದಿಂದ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ. ಎಲ್ಲ ಹಂತದಲ್ಲೂ ಮುನ್ನಡೆ ಕಾಯ್ದುಕೊಂಡಿರುವ ಕಾಂಗ್ರೆಸ್ ಅಭ್ಯರ್ಥಿ, ಇದೇ ಮೊದಲ ಬಾರಿಗೆ ಗೆಲುವಿನ ನಗೆ ಬೀರಿದೆ.  ಬಿಜೆಪಿ ಅಭ್ಯರ್ಥಿ ರವಿಶಂಕರ್ ಸೋಲಿನ ಹಾದಿಯಲ್ಲಿದ್ದಾರೆ. ಜೆಡಿಎಸ್ ಈ ಬಾರಿ ಮೂರನೇ ಸ್ಥಾನಕ್ಕೆ ಕುಸಿದಿದೆ.

ಈ ಸಂದರ್ಭದಲ್ಲಿ ನಮ್ಮ ತಂದೆ ಇರಬೇಕಾಗಿತ್ತು. ಅವರಿಲ್ಲದ ಶೂನ್ಯತೆ ಕಾಡುತ್ತಿದೆ ಎಂದು ತಂದೆ ಜಿ. ಮಾದೇಗೌಡರನ್ನು ನೆನೆದು ಮಧು ಜಿ ಮಾದೇಗೌಡ ಭಾವುಕರಾದರು. ಜೆಡಿಎಸ್ ಅಭ್ಯರ್ಥಿ ಸೋಲಲು ಕಾರಣವಾಗಿದ್ದು, ಶ್ರೀಕಂಠೇಗೌಡ ಅವರೇ. ನಿಖಿಲ್ ಕುಮಾರಸ್ವಾಮಿ ಸೋಲಿಸಿ ಸುಮಲತಾ ಗೆಲ್ಲಿಸಿದ್ದು ಸಹ ಅವರೇ. ಅವರಿಗೆ ಸೋಲುವುದು ಗೊತ್ತಿದ್ದೇ ಚುನಾವಣೆಗೆ ನಿಲ್ಲಲಿಲ್ಲ. ಬಿಜೆಪಿಯ ದುರಾಡಳಿತ, ಹಗರಣಗಳು ಬಿಜೆಪಿ ಸೋಲಿಗೆ ಕಾರಣ. ಇದು ಮುಂದಿನ ವಿಧಾನಸಭಾ ಚುನಾವಣೆಯ ಮೊದಲ‌ ಮೆಟ್ಟಿಲು ಎಂದು ಮೈಸೂರಿನಲ್ಲಿ ಮಧು ಜಿ ಮಾದೇಗೌಡ ಹೇಳಿಕೆ ನೀಡಿದರು.

ಫಲಿತಾಂಶಕ್ಕೂ ಮುನ್ನವೇ ಬಿಜೆಪಿ ಅಭ್ಯರ್ಥಿ ಸೋಲೋಪ್ಪಿಕೊಂಡಿದ್ದಾರೆ. ಇನ್ನೆರಡು ಸುತ್ತು ಮಾತ್ರ ಬಾಕಿಯಿದ್ದು, ಗೆಲುವು ಕಷ್ಟವಿದೆ. ಮತ‌ಎಣಿಕೆ ಕೇಂದ್ರ ಮುಂಭಾಗ ಮೈವಿ ರವಿಶಂಕರ್ ಬೇಸರದ ಮಾತುಗಳನ್ನಾಡಿದರು. ಸತತ ಹಿನ್ನೆಡೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಒಬ್ಬಂಟಿಯಾಗಿದ್ದಾರೆ.

ವಿಧಾನ ಪರಿಷತ್​ನ ನಾಲ್ಕು ಸ್ಥಾನಗಳಿಗೆ ಜೂನ್ 13ರಂದು ಚುನಾವಣಾ ನಡೆದಿತ್ತು, ಫಲಿತಾಂಶ ಜೂನ್‌ 15ರಂದು ಘೋಷಣೆಯಾಗಿತ್ತು. ಒಟ್ಟಾರೆ ಮೂರು ಕ್ಷೇತ್ರಗಳ ಫಲಿತಾಂಶ ಅಧಿಕೃತವಾಗಿ ಘೋಷಣೆಯಾಗಿದ್ದು, ಒಂದು ಕ್ಷೇತ್ರದ ಫಲಿತಾಂಶ ಮತ ಎಣಿಕೆ ಪೂರ್ಣಗೊಂಡಿದೆ. ಅಧಿಕೃತ ಘೋಷಣೆ ಮಾತ್ರ ಆಗಬೇಕಾಗಿದೆ.

​​ವಾಯುವ್ಯ ಪದವೀಧರ ಕ್ಷೇತ್ರದಲ್ಲಿ ಶೇ 59, ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಶೇ 70, ವಾಯುವ್ಯ ಶಿಕ್ಷಕರ ಕ್ಷೇತ್ರದಲ್ಲಿ ಶೇ 80, ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶೇ 84ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಕಾಂಗ್ರೆಸ್​, ಬಿಜೆಪಿ, ಜೆಡಿಎಸ್​​ ಸೇರಿ ಒಟ್ಟು 49 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಾಲ್ಕು ಕ್ಷೇತ್ರಗಳಲ್ಲಿ ಒಟ್ಟು 2,84,992 ಮತದಾರರು ಇದ್ದಾರೆ.

Donate Janashakthi Media

Leave a Reply

Your email address will not be published. Required fields are marked *