ಕಲಬುರಗಿ: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆಯಾಗಲಿದೆ. ಚುನಾವಣೆ ಘೋಷಣೆಯಾಗಿರುವ 25 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ. ಕಾಂಗ್ರೆಸ್ ಪಕ್ಷವು ಸ್ಪರ್ಧಿಸಲಿರುವ ಕ್ಷೇತ್ರಗಳಲ್ಲಿ ಯಾರಾದರೂ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದರೆ, ಅವರನ್ನು ಪಕ್ಷದಿಂದ ಕೂಡಲೇ ಉಚ್ಚಾಟಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ.
‘ಯಾರಾದರೂ ಬಂಡಾಯ ಅಭ್ಯರ್ಥಿಗಳು ಸ್ಪರ್ಧೆ ಮಾಡಿದರೆ ಅವರನ್ನು ಪಕ್ಷದಿಂದ ಕೂಡಲೇ ಉಚ್ಚಾಟಿಸುತ್ತೇವೆ’ ಎಂದು ಅವರು ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನು ಓದಿ: 75 ಸದಸ್ಯ ಬಲದ ವಿಧಾನ ಪರಿಷತ್ನ 25 ಸದಸ್ಯರ ಅಧಿಕಾರಾವಧಿ ಹೊಸ ವರ್ಷದ ಆರಂಭದಲ್ಲಿ ಅಂತ್ಯ
ಬಿಜೆಪಿ ಪಕ್ಷದವರ ಆರೋಪಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಯಾವುದೇ ಬಣವಿಲ್ಲ, ಇರೋದು ಕಾಂಗ್ರೆಸ್ ಒಂದೇ. ನಮ್ಮ ಬಗ್ಗೆ ಬಿಜೆಪಿ ಅವರು ಮಾತನಾಡದಿದ್ದರೆ, ನಿದ್ರೆ ಬರೋದಿಲ್ಲ. ಹೀಗಾಗಿ ಪ್ರತಿನಿತ್ಯ ನಮ್ಮ ಬಗ್ಗೆ ಮಾತನಾಡುತ್ತಾರೆ. ಮಳೆಯಿಂದ ತತ್ತರಿಸಿದವರಿಗೆ ಮೊದಲು ಸರ್ಕಾರ ಪರಿಹಾರ ನೀಡಲಿ, ಅದನ್ನು ಬಿಟ್ಟು ಆರೋಪ ಮಾಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ. ಮಳೆ ಹಾನಿ ಸಂಭವಿಸಿದ ಪ್ರದೇಶದ ಜನರಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಕಾಂಗ್ರೆಸ್ ಪಕ್ಷದಿಂದಲೂ ರೈತರು ಮತ್ತು ಜನರ ನೋವು ಕೇಳುವ ಕೆಲಸ ಮಾಡುತ್ತಿದ್ದೇವೆ ಎಂದರು.
ರಾಜ್ಯ ಗುತ್ತಿಗೆದಾರರಿಂದ ಪ್ರಧಾನಿ ಮೋದಿಗೆ ಪತ್ರ ವಿಚಾರವಾಗಿ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ʻʻಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ನಾವು ಕೂಡ ನಾಮಪತ್ರ ಸಲ್ಲಿಕೆ ಮುಗಿದ ನಂತರ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ದೇಶದ ಅತಿ ಭ್ರಷ್ಟ ಸರ್ಕಾರವಿದ್ದರೆ ಅದು ಕರ್ನಾಟಕದ ಬಿಜೆಪಿ ಸರ್ಕಾರ ಮಾತ್ರʼʼ ಎಂದರು.