ವಿಧಾನ ಪರಿಷತ್ ಚುನಾವಣೆ: 25 ಕ್ಷೇತ್ರಗಳಿಗೆ ಒಟ್ಟು 121 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಬೆಂಗಳೂರು: 25 ಸ್ಥಾನಗಳಿಗೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಭಾರತೀಯ ಜನತಾ ಪಕ್ಷ(ಬಿಜೆಪಿ), ಕಾಂಗ್ರೆಸ್, ಜಾತ್ಯಾತೀತ ಜನತಾದಳ(ಜೆಡಿಎಸ್) ಸೇರಿದಂತೆ ಇನ್ನಿತರ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸೇರಿ ಒಟ್ಟು 121 ಮಂದಿ 215 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಒಟ್ಟು 119 ಮಂದಿ ಪುರುಷರು ಮತ್ತು ಇಬ್ಬರು ಮಹಿಳಾ ಅಭ್ಯರ್ಥಿಗಳಿದ್ದಾರೆ.

ಸ್ಥಳೀಯ ಸಂಸ್ಥೆಗಳ, ಪಟ್ಟಣ ಮತ್ತು ಗ್ರಾಮ ಪಂಚಾಯತ್, ಮುನ್ಸಿಪಾಲಿಟಿ ಮತ್ತು ನಗರ ಪಾಲಿಕೆ ಸದಸ್ಯರು ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಚುನಾವಣೆ ಮತದಾನ ಪ್ರಕ್ರಿಯೆಯು ಡಿಸೆಂಬರ್‌ 10ರಂದು ನಡೆಯಲಿದೆ. ನಿನ್ನೆ ಮಂಗಳವಾರ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿತ್ತು.

ಬಿಜೆಪಿ ಪಕ್ಷದಿಂದ 57, ಕಾಂಗ್ರೆಸ್ ಪಕ್ಷದಿಂದ 56, ಜೆಡಿ(ಎಸ್) ಪಕ್ಷದಿಂದ 17, ಜನತಾ ಪಕ್ಷದಿಂದ 6, ಆಮ್ ಆದ್ಮಿ ಪಕ್ಷದಿಂದ 4, ಜನಹಿತ ಪಕ್ಷದಿಂದ 2, ಜೆಡಿಯು, ಎಸ್‍ಡಿಪಿಐ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, ಕನ್ನಡ ಚಳವಳಿ ಪಕ್ಷ ಹಾಗೂ ರೈತ ಭಾರತ ಪಕ್ಷದಿಂದ ತಲಾ ಒಂದು ನಾಮಪತ್ರ ಸಲ್ಲಿಕೆಯಾಗಿದೆ.

ಬೀದರ್ ಕ್ಷೇತ್ರದಲ್ಲಿ 6, ಗುಲ್ಬರ್ಗ(ಕಲಬುರಗಿ)-7, ವಿಜಯಪುರ(ಬಿಜಾಪುರ)-19, ಬೆಳಗಾವಿ-19, ಉತ್ತರ ಕನ್ನಡ-9, ಧಾರವಾಡ-24, ರಾಯಚೂರು-12, ಬಳ್ಳಾರಿ-8, ಚಿತ್ರದುರ್ಗ-7, ಶಿವಮೊಗ್ಗ-12, ದಕ್ಷಿಣ ಕನ್ನಡ-14, ಚಿಕ್ಕಮಗಳೂರು-8, ಹಾಸನ-8, ತುಮಕೂರು-11, ಮಂಡ್ಯ-9, ಬೆಂಗಳೂರು-7, ಬೆಂಗಳೂರು ಗ್ರಾಮಾಂತರ-7, ಕೋಲಾರ-8, ಕೊಡಗು-5 ಹಾಗೂ ಮೈಸೂರು ಕ್ಷೇತ್ರದಿಂದ 15 ನಾಮಪತ್ರಗಳು ಸಲ್ಲಿಕೆಯಾಗಿವೆ.

ನವೆಂಬರ್‌ 24ರಂದು(ನಾಳೆ) ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ನವೆಂಬರ್‌ 26ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಡಿಸೆಂಬರ್‌ 10ರಂದು ಬೆಳಗ್ಗೆ 8 ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದೆ. ಡಿಸೆಂಬರ್‌ 14ರಂದು ಮತಗಳ ಎಣಿಕೆ ಕಾರ್ಯ ನಡೆದು ಅಂದೇ ಫಲಿತಾಂಶವನ್ನು ಹೊರಬೀಳಲಿದೆ.

ವಿಜಯಪುರ, ಬೆಳಗಾವಿ, ಧಾರವಾಡ, ದಕ್ಷಿಣ ಕನ್ನಡ ಮತ್ತು ಮೈಸೂರು ಸ್ಥಳೀಯ ಸಂಸ್ಥೆಗಳಿಂದ ತಲಾ ಎರಡು ಮತ್ತು ಬೀದರ್, ಕಲಬುರಗಿ, ಉತ್ತರ ಕನ್ನಡ, ರಾಯಚೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ತುಮಕೂರು, ಮಂಡ್ಯ, ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಕೊಡಗು ಕ್ಷೇತ್ರಗಳಿಂದ ತಲಾ ಒಂದು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.

ಮೇಲ್ಮನೆಯಾದ ವಿಧಾನ ಪರಿಷತ್ತಿನ 75 ಸದಸ್ಯ ಬಲದ ಸ್ಥಾನಗಳಲ್ಲಿ ಈಗ ಬಿಜೆಪಿಯ 32 ಸದಸ್ಯರು, ಕಾಂಗ್ರೆಸ್ ನ 29 ಮಂದಿ ಮತ್ತು ಜೆಡಿಎಸ್ ನ 12 ಮಂದಿ ಹಾಗೂ ಒಬ್ಬರು ಸ್ವತಂತ್ರ ಅಭ್ಯರ್ಥಿಯಿದ್ದಾರೆ.

ಸ್ಪರ್ಧೆಯಲ್ಲಿರುವ ಪ್ರಭಾವಿ ಅಭ್ಯರ್ಥಿಗಳು

ಬೆಳಗಾವಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ವಿಜಯಪುರದಿಂದ ಶಾಸಕ ಎಂ.ಬಿ.ಪಾಟೀಲ್ ಸಹೋದರ ಸುನೀಲ್ ಗೌಡ ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷೇತರ ಅಭ್ಯರ್ಥಿಯಾಗಿ ಶಾಸಕ ರಮೇಶ್ ಜಾರಕಿಹೊಳಿ ಸಹೋದರ ಲಖನ್ ಜಾರಕಿಹೊಳಿ,

ಧಾರವಾಡ-ಗದಗ-ಹಾವೇರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸಹೋದರ ಪ್ರದೀಪ್ ಶೆಟ್ಟರ್, ಬಿಜೆಪಿ ಮುಖ್ಯ ಸಚೇತಕ ಮಹಂತೇಶ್ ಕಾವಟಗಿಮಠ ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.

ಮಾಜಿ ಸಚಿವ, ಬಿಜೆಪಿ ನಾಯಕ ಎ.ಮಂಜು ಅವರ ಪುತ್ರ ಡಾ.ಮಂತರ್ ಗೌಡ ಅವರಿಗೆ ಕೊಡಗು ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ.

ಕಾಂಗ್ರೆಸ್‌ನಲ್ಲಿ ಮೇಲ್ಮನೆ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದ ಸಿ.ಎನ್‌.ಮಂಜೇಗೌಡ ಜೆಡಿಎಸ್‌ನ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ನಿಂದ ಬೆಂಗಳೂರು ನಗರ ಕ್ಷೇತ್ರದಿಂದ ಹಾಲಿ ಸದಸ್ಯ ಎಂ.ನಾರಾಯಣಸ್ವಾಮಿ ಬದಲು ಕೆಜಿಎಫ್ ಬಾಬು(ಯೂಸುಫ್ ಶರೀಫ್) ಅವರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿ ಮೂಡಿಸಿದೆ.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿದ್ದ ದಿನೇಶ್ ಗೂಳಿಗೌಡ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧೆಗೆ ಇಳಿದಿದ್ದಾರೆ. ಜೆಡಿಎಸ್‌ ಪಕ್ಷದಿಂದ ಅಪ್ಪಾಜಿಗೌಡ ನಾಮಪತ್ರ ಸಲ್ಲಿಸಿದ್ದಾರೆ.

ಹಾಸನ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಹಾಗೂ ಹೆಚ್​ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ, ಬೆಂಗಳೂರು ನಗರ ಬಿಜೆಪಿ ಅಭ್ಯರ್ಥಿ ಗೋಪಿನಾಥ್ ರೆಡ್ಡಿ ನಾಮಪತ್ರ ಸಲ್ಲಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *