ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಸಾಂಕೇತಿಕ ಪ್ರತಿಭಟನೆಗೆ ಮುಂದಾದ ಕಾಂಗ್ರೆಸ್ ಪಕ್ಷದ ಸದಸ್ಯರು ಕಪ್ಪು ಪಟ್ಟಿ ಧರಿಸಿ ಮುಸ್ಲಿಂ ವಿದ್ಯಾರ್ಥಿನಿಯರ ಹಿಜಾಬ್ ವಿಚಾರ ಹಾಗೂ ರಾಷ್ಟ್ರ ಧ್ವಜದ ವಿಚಾರದಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ಖಂಡಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
ಈಶ್ವರಪ್ಪನವರು ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದಾರೆ.ಇದು ಧ್ವಜ ಸಂಹಿತೆ ಹಾಗೂ ಸಂವಿಧಾನಕ್ಕೆ ವಿರುದ್ಧವಾಗಿದೆ. ಹೀಗಾಗಿ ರಾಜ್ಯಪಾಲರು ಈಶ್ವರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಕಾಂಗ್ರೆಸ್ ಪಕ್ಷವು ಆಗ್ರಹಿಸಿದೆ.
ರಾಜ್ಯಪಾಲರ ಭಾಷಣದ ಸಂದರ್ಭದಲ್ಲಿ ಭಾಗವಹಿಸಿದ ಕಾಂಗ್ರೆಸ್ನ ಎಲ್ಲ ಸದಸ್ಯರು ತೋಳಿಗೆ ಕಪ್ಪು ಪಟ್ಟಿ ಧರಿಸಿ ಕಲಾಪದಲ್ಲಿ ಪಾಲ್ಗೊಂಡಿದ್ದರು. ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕಿ ಖನೀಜ್ ಫಾತಿಮಾ ಹಿಜಾಬ್ ಧರಿಸಿಕೊಂಡೇ ಕಲಾಪದಲ್ಲಿ ಭಾಗವಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಕಳೆದ ಎರಡು ತಿಂಗಳಿಂದ ಗಲಾಟೆ ನಡೆಯುತ್ತಿದೆ. ಶಾಲಾ-ಕಾಲೇಜುಗಳಲ್ಲಿ ಘರ್ಷಣೆ ನಡೆದಿವೆ,
ಸರ್ಕಾರ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕಿತ್ತು. ಆದರೆ ಅಂತಹ ಪ್ರಯತ್ನ ಮಾಡಿಲ್ಲ. ರಾಜ್ಯಪಾಲರ ಕೈಯಲ್ಲಿ ಕೇವಲ ಭಾಷಣ ಮಾಡಿಸಿದೆ ಎಂದಿದ್ದಾರೆ.
ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ ಹೆಣ್ಣು ಮಕ್ಕಳ ಬಗ್ಗೆ ಸರ್ಕಾರ ನಡೆದುಕೊಂಡ ರೀತಿಗೆ ನಾವು ಸಾಂಕೇತಿಕವಾಗಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದ್ದೇವೆ. ಈಶ್ವರಪ್ಪ ರಾಷ್ಟ್ರ ವಿರೋಧಿ ಹೇಳಿಕೆ ನೀಡಿದ್ದಾರೆ. ಕಳೆದ ವರ್ಷ ಕೆಂಪು ಕೋಟೆಯಲ್ಲಿ ಗಣರಾಜ್ಯೋತ್ಸವದಂದೂ ರೈತ ಪ್ರತಿಭಟನಾಕಾರರ ವಿರುದ್ಧ ಕ್ರಮಕೈಗೊಳ್ಳಲಾಗಿತ್ತು. ಅದೇ ರೀತಿ ಈಶ್ವರಪ್ಪನವರ ವಿರುದ್ಧವೂ ಕೇಸ್ ಹಾಕಲಿ ಎಂದು ಸವಾಲೆಸೆದರು.
ಹಿಜಾಬ್ ಧರಿಸದೇ ಇದ್ರೆ ರೇಪ್ ಆಗುತ್ತೆ ಅನ್ನುವ ಜಮೀರ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಾಂಗ್ರೆಸ್ ಪಕ್ಷದ ಶಾಸಕರು ವೈಯಕ್ತಿಕ ಹೇಳಿಕೆ ನೀಡಿದ್ದಾರೆ. ನಾನು ಸಮರ್ಥನೆ ಮಾಡಿಕೊಳ್ಳಲ್ಲ. ಅದು ಅವರ ವೈಯಕ್ತಿಕ ಹೇಳಿಕೆ. ಅವರ ಸಮುದಾಯಕ್ಕೆ ಆಗಿರುವ ನೋವವನ್ನ ಅವರು ಹೇಳಿಕೊಂಡಿದ್ದಾರೆ ಎಂದರು.
ಶಿವಮೊಗ್ಗ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ಡಿ.ಎಸ್. ಅರುಣ್ ಕೇಸರಿ ಶಾಲು ಧರಿಸಿ ಜಂಟಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದರು.