ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭಾಷಣದ ಬಳಿಕ ವಿಧಾನಸಭೆ ಕಲಾಪ ಆರಂಭವಾಗಿದೆ. ವಂದೇ ಮಾತರಂ ಹಾಡಿನ ನಂತರ ಈ ಅವಧಿಯಲ್ಲಿ ನಿಧನರಾದ ಗಣ್ಯರಿಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಂತಾಪ ಸೂಚನೆ ಮಂಡಿಸಿದರು. ಮಾಜಿ ಸಚಿವ ಡಾ. ಜೆ. ಅಲೆಕ್ಸಾಂಡರ್, ಎಂ ಎನ್ ಸಜ್ಜನ್, ಹೆಚ್.ಬಿ ಪಾಟೀಲ್, ಗಾಯಕಿ ಲತಾ ಮಂಗೇಶ್ಕರ್, ಚಂದ್ರಶೇಖರ್ ಪಾಟೀಲ್(ಚಂಪಾ), ಇಬ್ರಾಹಿಂ ಸುತಾರ್, ನ್ಯಾಯಮೂರ್ತಿ ಮಂಜುನಾಥ್ ಅವರಿಗೆ ಸಂತಾಪ ಸೂಚಿಸಲಾಯಿತು.
ಸಂತಾಪ ಸೂಚಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರು, ಡಾ. ಜೆ ಅಲೆಗ್ಸಾಂಡರ್ ಅಪರೂಪದ ಅಧಿಕಾರಿ. ಯಾವುದೇ ಹುದ್ದೆಯಲ್ಲಿದ್ದರೂ, ಹುದ್ದೆಯ ಅಧಿಕಾರಕ್ಕಿಂತ, ಜನರಿಗೆ ಅನುಕೂಲ ಮಾಡಿಕೊಡುವ ಬಗ್ಗೆ ಅಲೋಚಿಸುತ್ತಿದ್ದರು. ಬಹಳ ಅಪರೂಪದ ವ್ಯಕ್ತಿ. ನ್ಯಾಯಸಮ್ಮತ ಆಡಳಿತ ನೀಡಿದವರು. ನಿವೃತ್ತಿ ನಂತರ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು. ಉದ್ಯಮದ ಮೇಲೆ ಹೆಚ್ಚು ಆಸಕ್ತಿ ಇತ್ತು. ನಿವೃತ್ತಿ ಬಳಿಕ ರಾಜಕಾರಣಕ್ಕೆ ಬಂದು ಯಶಸ್ವಿಯಾದರು. ಎಸ್.ಎಂ. ಕೃಷ್ಣ ಅವರ ಅವಧಿಯಲ್ಲಿ ಪ್ರವಾಸೋದ್ಯಮ ಸಚಿವರಾಗಿದ್ದವರು.
ಹೆಚ್.ಬಿ ಪಾಟೀಲ್ ಸಜ್ಜನ ರಾಜಕಾರಣಿ. ಸಹಕಾರಿ ರಂಗದಲ್ಲಿ ದೊಡ್ಡ ಕೆಲಸ ಮಾಡಿದ್ದಾರೆ. ಬಾಗಲಕೋಟೆ ಟೆಕ್ಸ್‌ಟೈಲ್ ತೆಗೆದು ನೂರಾರು ಮಂದಿಗೆ ಉದ್ಯೋಗ ನೀಡುವ ಕೆಲಸ ಮಾಡಿದ್ದಾರೆ ಎಂದು ಸ್ಮರಿಸಿದರು.
ಭಾರತ ರತ್ನ ಪುರಸ್ಕೃತೆ ಲತಾ ಮಂಗೇಶ್ಕರ್ ಅವರ ಬಗ್ಗೆ ಎಷ್ಟು ಮಾತನಾಡಿದರು ಸಾಲದು. ದೇವರ ಅದ್ಭುತ ಸೃಷ್ಟಿಯಲ್ಲಿ ಅವರು ಒಬ್ಬರು. ಅವರ ಶುದ್ಧ ಕಂಠ, ಧ್ವನಿ ಅವರನ್ನ ಎತ್ತರಕ್ಕೆ ಕರೆದೊಯ್ದಿದೆ. ಒಮ್ಮೆ, ಲತಾ ಮಂಗೇಶ್ಕರ್ ಹಾಡನ್ನು ಕೇಳಿದರೆ ಸದಾಕಾಲ ಉಳಿಯುತ್ತಿತ್ತು. ಮತ್ತೊಮ್ಮೆ ಅವರು ಹುಟ್ಟಿಬರಲಿ ಅನ್ನೋ ಆಶಯ ಇದೆ. ಆದರೆ, ಅದು ಸಾಧ್ಯವಿಲ್ಲ. ಅವರು ಒಮ್ಮೆ, ಸಂದರ್ಶನದಲ್ಲಿ ಹೀಗೆ ಹೇಳಿದ್ದರು, ನಾನು ಹಾಡಿನಲ್ಲಿ ಪರ್ಫೆಕ್ಟ್ ಅಂತ ಎಂದೂ ಹೇಳಲಿಲ್ಲ. ಕಲಿಕೆಯಲ್ಲಿ ನಾನೇ ಶ್ರೇಷ್ಠ ಎಂದುಕೊಂಡಾಗ, ಕಲಿಯಲು ಸಾಧ್ಯವಿಲ್ಲ ಅಂತ ಹೇಳಿದ್ದರು. ಐಕಾನಿಕ್ ಹಾಡು ಎ ಮೇರೆ ವತನ್‌ಕಿ ಲೋಗೋ.. ಸೈನಿಕರ ತ್ಯಾಗ ಬಲಿದಾನ ಬಗ್ಗೆ ಗಡಿಗೆ ತೆಗೆದುಕೊಂಡು ಹೋಗುವ ರೀತಿ ಇತ್ತು. ಭಾರತ ರತ್ನ ಪ್ರಶಸ್ತಿಗೆ ಅರ್ಹತೆ ತಂದುಕೊಟ್ಟವರು ಲತಾ ಮಂಗೇಶ್ಕರ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆನೆದರು.