ನವದೆಹಲಿ: ಕೇಂದ್ರ ತನಿಖಾ ದಳ(ಸಿಬಿಐ) ಅಧಿಕಾರಿಗಳು ವಂಚನೆ ಪ್ರಕರಣಕ್ಕೆ ಸಂಬಂಧಿಸಿ ವಿಡಿಯೊಕಾನ್ ಗ್ರೂಪ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೇಣುಗೋಪಾಲ್ ಧೂತ್ ಅವರನ್ನು ಇಂದು ಬಂಧಿಸಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿರುವ ವಿಡಿಯೋಕಾನ್ ಅಧ್ಯಕ್ಷ ವೇಣುಗೋಪಾಲ್ ಧೂತ್ ಅವರನ್ನು ಸಿಬಿಐ ಅಧಿಕಾರಿಗಳು ಕೆಲವು ದಿನಗಳ ಹಿಂದೆ ವಿಚಾರಣೆ ನಡೆಸಿದ್ದರು. ಇಂದು ಮುಂಬೈನಲ್ಲಿ ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿ: ಬಂಡವಾಳಿಗರ 11 ಲಕ್ಷ ಕೋಟಿ ಸಾಲ ಮಾಡುವುದಾದರೆ-ರೈತರು-ದುಡಿಯುವ ಜನರ ಸಾಲ ಮನ್ನಾ ಏಕಿಲ್ಲ
ವಿಡಿಯೋಕಾನ್ ಗ್ರೂಪ್ ಕಂಪನಿ ಮತ್ತು ಐಸಿಐಸಿಐ ಬ್ಯಾಂಕ್ ನಡುವಿನ ಅಕ್ರಮ ಹಣ ವರ್ಗಾವಣೆ ಆರೋಪ ಪ್ರಕರಣದಲ್ಲಿ ಸಿಬಿಐ ಬಂಧಿಸಿದೆ. ಚಂದಾ ಕೊಚ್ಚರ್, ಅವರ ಪತಿ ದೀಪಕ್ ಕೊಚ್ಚಾರ್ ಹಾಗೂ ವೇಣುಗೋಪಾಲ್ ಧೂತ್ ಮೇಲೆ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಐಸಿಐಸಿಐ ಬ್ಯಾಂಕಿನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೆಶಕಿ ಚಂದಾ ಕೊಚ್ಚರ್ ಹಾಗೂ ಅವರ ಪತಿ ದೀಪಕ್ ಕೊಚ್ಚರ್ ಬಂಧನದ ಬೆನ್ನಲ್ಲೇ ಇದೀಗ ವಿಡಿಯೊಕಾನ್ ಮುಖ್ಯಸ್ಥರನ್ನು ಬಂಧಿಸಲಾಗಿದೆ. 2009ರ ಜೂನ್ನಿಂದ 2011ರ ಅಕ್ಟೋಬರ್ ಅವಧಿಯಲ್ಲಿ ವಿಡಿಯೊಕಾನ್ ಗ್ರೂಪ್ ಮತ್ತು ಅದರ ಅಂಗಸಂಸ್ಥೆಗಳಿಗೆ ಐಸಿಐಸಿಐ ಬ್ಯಾಂಕಿನಿಂದ ಅಕ್ರಮವಾಗಿ ಸುಮಾರು 3,250 ಕೋಟಿ ರೂ. ಸಾಲ ಮಂಜೂರು ಮಾಡಲಾಗಿದೆ ಎಂಬ ಆರೋಪಗಳು ದೃಢಪಟ್ಟಿವೆ. ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿಬಿಐ ಪ್ರಕರಣಕ್ಕೆ ಸಂಬಂಧಿಸಿ ಚಂದಾ ಕೊಚ್ಚರ್ ಮತ್ತು ಅವರ ಪತಿಯನ್ನು ಡಿಸೆಂಬರ್ 23ರಂದು ಬಂಧಿಸಿದ್ದರು. ಅವರಿಬ್ಬರೂ ಸದ್ಯ ಸಿಬಿಐ ವಶದಲ್ಲಿದ್ದಾರೆ. ಇವರನ್ನು ಇಂದು ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದ್ದು, ನಂತರ ವಿಚಾರಣೆ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನು ಓದಿ: ರಿಲಯನ್ಸ್ ಕ್ಯಾಪಿಟಲ್‌ನ ಸಾಲದ ಖಾತೆಗಳ ಮಾರಾಟಕ್ಕೆ ಎಲ್‌ಐಸಿ ಸಿದ್ದತೆ
ವಿಡಿಯೋಕಾನ್ ಗ್ರೂಪ್ ಅನಧಿಕೃತವಾಗಿ ಸಾಲ ನೀಡಲಾಗಿದ್ದು, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಹಾಗೂ ಆರ್‌ಬಿಐ ಮಾರ್ಗಸೂಚಿಗಳು ಮತ್ತು ಬ್ಯಾಂಕಿನ ಸಾಲ ನೀತಿಯನ್ನು ಉಲ್ಲಂಘಿಸಿ ಐಸಿಐಸಿಐ ಬ್ಯಾಂಕ್ 3,250 ಕೋಟಿ ರೂಪಾಯಿಗಳ ಸಾಲ ಸೌಲಭ್ಯಗಳನ್ನು ಮಂಜೂರು ಮಾಡಿದ ಆರೋಪ ಎದುರಾಗಿದೆ.
ಇದನ್ನು ಓದಿ: ರಸ್ತೆಯಲ್ಲಿ ಸಾಲ ವಸೂಲಿಗೆ ನಿಂತ ಖಾಸಗಿ ಬ್ಯಾಂಕ್ ಸಿಬ್ಬಂದಿ; ಮಹಿಳೆ ಮೇಲೆ ದರ್ಪ
ವಂಚನೆ ಪ್ರಕರಣಕ್ಕೆ ಸಂಬಂಧಿಸಿ 2018ರಲ್ಲಿ ತನಿಖೆ ಆರಂಭವಾಗಿತ್ತು. ವಿಡಿಯೊಕಾನ್ ಗ್ರೂಪ್ ನ ಸಂಸ್ಥೆಗೆ ಸೇರಿದ ನ್ಯೂಪವರ್ ರಿನ್ಯೂವಬಲ್ಸ್, ಸುಪ್ರೀಂ ಎನರ್ಜಿ, ವಿಡಿಯೋಕಾನ್ ಇಂಟರ್‌ನ್ಯಾಶನಲ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ವಿಡಿಯೋಕಾನ್ ಇಂಡಸ್ಟ್ರೀಸ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿತ್ತು. ಅದೇ ಸಂದರ್ಭದಲ್ಲಿ ಚಂದಾ ಕೊಚ್ಚರ್ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. 2019ರಲ್ಲಿ ಅವರ ಮನೆ ಮತ್ತು ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ