ನುಹ್ ಮತ್ತು ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಇತ್ತೀಚೆಗೆ ಉಂಟಾದ ಕೋಮು ಘರ್ಷಣೆಗಳಿಂದ ಆರು ಜನರು ಸಾವಿಗೀಡಾಗಿದ್ದರು
ನುಹ್ (ಹರಿಯಾಣ): ಸರ್ವ ರಾಷ್ಟ್ರೀಯ ಹಿಂದೂ ಮಹಾಪಂಚಾಯತ್ ಸೋಮವಾರ ‘ಶೋಭಾ ಯಾತ್ರೆ’ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಗಲಭೆ ಪೀಡಿತ ಪ್ರದೇಶ ಮತ್ತು ಪಕ್ಕದ ಪ್ರದೇಶಗಳಲ್ಲಿ ಗಲಭೆ ನಿಗ್ರಹ ವಾಹನಗಳು ಮತ್ತು ಡ್ರೋನ್‌ಗಳೊಂದಿಗೆ ಭಾರೀ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದಾಗ್ಯೂ ಅಧಿಕಾರಿಗಳು ಶೋಭ ಯಾತ್ರೆಗೆ ಅನುಮತಿ ನಿರಾಕರಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರದಂದು ಶಿಕ್ಷಣ ಸಂಸ್ಥೆಗಳು ಮತ್ತು ಬ್ಯಾಂಕ್‌ಗಳನ್ನು ಮುಚ್ಚಲು ನುಹ್ ಜಿಲ್ಲಾಡಳಿತ ಆದೇಶಿಸಿದೆ. ಮೊಬೈಲ್ ಇಂಟರ್ನೆಟ್ ಮತ್ತು ಬೃಹತ್ SMS ಸೇವೆಗಳನ್ನು ಸ್ಥಗಿತಗೊಳಿಸಿದ್ದು, ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದೆ.
ಇದನ್ನೂ ಓದಿ: ಕೋಲಾರದಲ್ಲಿ ಮರ್ಯಾದೆಗೇಡು ಹತ್ಯೆ: ಯುವತಿಯ ತಂದೆ, ಸಂಬಂಧಿಕರ ಬಂಧನ
ಜಿಲ್ಲೆಯ ಎಲ್ಲಾ ಪ್ರವೇಶ ಕೇಂದ್ರಗಳಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಹೊರಗಿನವರು ನುಹ್‌ಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಕಟ್ಟುನಿಟ್ಟಿನ ನಿಗಾ ಇರಿಸಲು ಹರಿಯಾಣ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಅಂತರರಾಜ್ಯ ಮತ್ತು ಅಂತರ ಜಿಲ್ಲಾ ಗಡಿಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ವಿವಿಧ ಹಂತಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳ ಗೋಡೆಯನ್ನು ನಿರ್ಮಿಸಿದ್ದಾರೆ. ನುಹ್‌ಗೆ ಪ್ರವೇಶಿಸುವ ಎಲ್ಲಾ ವಾಹನಗಳನ್ನು ಭದ್ರತಾ ಸಿಬ್ಬಂದಿಗಳು ಸಂಪೂರ್ಣವಾಗಿ ಪರಿಶೀಲಿಸುತ್ತಿದ್ದು, ಗಲಭೆ ನಿಗ್ರಹ ವಾಹನಗಳು ಮತ್ತು ಡ್ರೋನ್‌ಗಳನ್ನು ಸಹ ನಿಯೋಜಿಸಲಾಗಿದೆ.
ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮೆರವಣಿಗೆಯ ವೇಳೆ ನುಹ್ ಮತ್ತು ಅದರ ಅಕ್ಕ-ಪಕ್ಕದ ಪ್ರದೇಶಗಳಲ್ಲಿ ಕೋಮು ಘರ್ಷಣೆಗಳು ಭುಗಿಲೆದ್ದವು. ಈ ಗಲಭೆಯಿಂದಾಗಿ ಇಬ್ಬರು ಗೃಹರಕ್ಷಕ ಇಲಾಖೆ ಸಿಬ್ಬಂದಿ ಮತ್ತು ಮುಸ್ಲಿಂ ಧರ್ಮಗುರು ಸೇರಿದಂತೆ ಆರು ಜನರು ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ‘ವೇತನ ಚೀಟಿ-ಹಾಜರಾತಿ’ ಕಡ್ಡಾಯ ಕೈಬಿಟ್ಟ ಕಲ್ಯಾಣ ಮಂಡಳಿ – ಕಟ್ಟಡ ಕಾರ್ಮಿಕರ ಹೋರಾಟಕ್ಕೆ ಜಯ
ಜುಲೈನಲ್ಲಿ ಕೋಮು ಘರ್ಷಣೆ ನಡೆದ ನಂತರ ಬ್ರಿಜ್ ಮಂಡಲ್ ಶೋಭಾ ಯಾತ್ರೆಯನ್ನು ನಿಲ್ಲಿಸಲಾಗಿತ್ತು. ಹೀಗಾಗಿ ಈ ಯಾತ್ರೆಯನ್ನು ಆಗಸ್ಟ್ 28 ರಂದು ನುಹ್‌ನಲ್ಲಿ ಪುನರಾರಂಭಿಸಲಾಗುವುದು ಎಂದು ಆಗಸ್ಟ್ 13 ರಂದು ಸರ್ವ್ ರಾಷ್ಟ್ರೀಯ ಹಿಂದೂ ಮಹಾಪಂಚಾಯತ್ ಹೇಳಿತ್ತು. ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿರುವ ವಿಎಚ್‌ಪಿ ಮೆರವಣಿಗೆ ನಡೆಸಿಯೆ ತೀರುತ್ತೇವೆ ಎಂದು ಹೇಳಿದೆ. ಆದರೆ ಅಧಿಕಾರಿಗಳು ಯಾತ್ರೆ ನಡೆಸುವಂತಿಲ್ಲ ಎಂದು ಹೇಳಿದ್ದು ಅನುಮತಿ ನಿರಾಕರಿಸಿದ್ದಾರೆ.
ಭಕ್ತರು ಯಾವುದೇ ‘ಯಾತ್ರೆ’ ನಡೆಸದಿರುವಂತೆ ಹಾಗೂ ತಮ್ಮ ನೆರೆಹೊರೆಯಲ್ಲಿರುವ ದೇವಾಲಯಗಳಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಭಾನುವಾರ ಕೇಳಿಕೊಂಡಿದ್ದಾರೆ. ಯಾತ್ರೆಗೆ ಅನುಮತಿ ನೀಡಿಲ್ಲ ಎಂದೂ ಅವರು ಹೇಳಿದ್ದಾರೆ.
1,900 ಹರಿಯಾಣ ಪೊಲೀಸ್ ಸಿಬ್ಬಂದಿ ಮತ್ತು 24 ಕಂಪನಿ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ನುಹ್‌ಗೆ ಪ್ರವೇಶಿಸುವ ಎಲ್ಲಾ ಪ್ರವೇಶ ಕೇಂದ್ರಗಳನ್ನು ಮುಚ್ಚಲಾಗಿದ್ದು, ನಲ್ಹಾರ್ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಸಹ ಮುಚ್ಚಲಾಗಿದೆ. ‘ಶೋಭಾ ಯಾತ್ರೆ’ಗೆ ಕರೆ ನೀಡಿದ ಹಿನ್ನೆಲೆ ಗೊತ್ತುಪಡಿಸಿದ ಸ್ಥಳಗಳಲ್ಲಿ 57 ಡ್ಯೂಟಿ ಮ್ಯಾಜಿಸ್ಟ್ರೇಟ್‌ಗಳನ್ನು ನಿಯೋಜಿಸಿದ್ದಾಗಿ ನುಹ್‌ನ ಉಪ ಆಯುಕ್ತ ಧೀರೇಂದ್ರ ಖಡ್ಗಟಾ ಹೇಳಿದ್ದಾರೆ.
ವಿಡಿಯೊ ನೋಡಿ: ವಿಕ್ರಮ್ ಲ್ಯಾಂಡರ್ನಿಂದ ಬೇರ್ಪಟ್ಟ ಪ್ರಜ್ಞಾನ್ | ಚಂದ್ರನ ಮೇಲ್ಮೈ ಅಧ್ಯಯನ ಆರಂಭ Janashakthi Media