ಬಾಲಿವುಡ್ ನಟ ದಿಲೀಪ್‌ ಕುಮಾರ್‌ ಇನ್ನಿಲ್ಲ

ಮುಂಬೈ: ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್‌ ಕುಮಾರ್‌ (98) ಅವರು ನಿಧನರಾದರು. ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ಪಿ.ಡಿ.ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದ ಶ್ವಾಸಕೋಶತಜ್ಞ ಡಾ.ಜಲಿಲ್‌ ಪಾರ್ಕರ್‌ ಅವರು ನಟನ ಸಾವಿನ ಕುರಿತು ಖಚಿತ ಪಡಿಸಿರುವುದಾಗಿ ಎಎನ್‌ಐ ಟ್ವೀಟಿಸಿದೆ.

ದಿಲೀಪ್‌ ಕುಮಾರ್‌ ಅವರ ಕುಟುಂಬದ ಆಪ್ತ ಫೈಸಲ್‌ ಫಾರೂಕಿ ಅವರು ದಿಲೀಪ್‌ ಅವರ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಸಂದೇಶವನ್ನು ನೀಡಿದ್ದು, ‘ದೇವರಿಂದಲೇ ಬಂದವರು ನಾವು ಹಾಗೂ ಅವರಲ್ಲಿಯೇ ಮರಳುವೆವು ನಾವು’ ಎಂದು ಪ್ರಕಟಿಸಿದ್ದಾರೆ.

ಇತ್ತೀಚೆಗಷ್ಟೇ ದಿಲೀಪ್ ಅವರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ ನಂತರ ಚೇತರಿಸಿಕೊಂಡು ಮನೆಗೆ ಮರಳಿದ್ದರು.  ಪುನಃ ಅನಾರೋಗ್ಯ ಕಾಣಿಸಿಕೊಂಡ ಪರಿಣಾಮ ಆಸ್ಪತ್ರೆ ಸೇರಿದ್ದರು. ಮತ್ತೆ ಆರೋಗ್ಯದಲ್ಲಿ ತೀವ್ರವಾದ ತೊಂದರೆ ಎದುರಾಗಿದ್ದರಿಂದ ಜೂನ್‌ 30ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮುಂಬೈನ ಸಾಂತಾಕ್ರೂಸ್‌ನಲ್ಲಿ ಇಂದು ಸಂಜೆ 5 ಗಂಟೆಗೆ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

ಹಿರಿಯ ನಟ ದಿಲೀಪ್‌ ಕುಮಾರ್‌ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ಸಚಿನ್‌ ಟೆಂಡ್ಯೂಲ್ಕರ್‌, ನಟ ಅಮಿತಾಬ್‌ ಬಚ್ಚನ್‌, ಸಿಪಿಐ(ಎಂ) ಕಾರ್ಯದರ್ಶಿ ಸೀತಾರಾಮ್‌ ಯೆಚೂರಿ, ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಟ ಕಮಲ್‌ ಹಾಸನ್‌, ಸೇರಿದಂತೆ ಹಲವು ಮಂದಿ ಸಂತಾಪ ಸೂಚಿಸಿದ್ದಾರೆ.

ದಿಲೀಪ್ ಕುಮಾರ್‌ ಅವರ ಜೀವನ ಪಯಣ

ಪೇಶಾವರದಲ್ಲಿ 1922ರ ಡಿಸೆಂಬರ್‌ 11ರಂದು ಜನಿಸಿದ ಮೊಹಮ್ಮದ್‌ ಯೂಸುಫ್‌ ಖಾನ್‌ (ದಿಲೀಪ್‌ ಕುಮಾರ್), ನಂತರದಲ್ಲಿ ಮುಂಬೈಗೆ ಸ್ಥಳಾಂತರಗೊಂಡರು. ಅವರ ಕುಟುಂಬದ ಸದಸ್ಯರು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದರು. 1966ರಲ್ಲಿ ನಟಿ ಸಾಯಿರಾ ಬಾನು ಅವರನ್ನು ದಿಲೀಪ್‌ ಕುಮಾರ್‌ ಮದುವೆಯಾದರು.

ಅವರು ಪದ್ಮಭೂಷಣ, ಪದ್ಮವಿಭೂಷಣ ಹಾಗೂ ದಾದಾಸಾಹೇಬ್‌ ಫಾಲ್ಕೆ ಗೌರವಕ್ಕೆ ಭಾಜನರಾಗಿದ್ದರು. ಅವರು ರಾಜ್ಯಸಭೆಯ ಸದಸ್ಯರೂ ಆಗಿದ್ದರು.

ಸಿನಿಮಾ ರಂಗದಲ್ಲಿ ಜ್ವಾರ್ ಭಾಟಾ (1944) ಅವರ ಮೊದಲ ಯಾತ್ರೆ ಆರಂಭವಾಯಿತು. ಬಾಲಿವುಡ್‌ನಲ್ಲಿ ‘ಟ್ರಾಜಿಡಿ ಕಿಂಗ್’ ಎಂದೇ ಕರೆಯುತ್ತಿದ್ದ ದಿಪೀಪ್‌ ಕುಮಾರ್‌ ಅವರು ಐದು ದಶಕಗಳಲ್ಲಿ ಸುಮಾರು 65 ಸಿನಿಮಾಗಳಲ್ಲಿ ನಟಿಸಿದರು. ಅಂದಾಜ್‌ (1949), ಆನ್‌ (1952), ದಾಗ್‌ (1952), ದೇವ್‌ದಾಸ್ (1955), ಆಜಾದ್‌ (1955) ಹಾಗೂ ಐತಿಹಾಸಿಕ ಚಿತ್ರ ಮುಘಲ್‌–ಎ–ಅಜಮ್‌ (1960), ಗಂಗಾ ಜಮುನಾ (1961), ರಾಮ್‌ ಔರ್‌ ಶ್ಯಾಮ್‌ (1967) ದಿಲೀಪ್‌ ಅವರ ಪ್ರಮುಖ ಸಿನಿಮಾಗಳು.

1981ರಲ್ಲಿ ಕ್ರಾಂತಿ ಚಿತ್ರದ ಮೂಲಕ ಮತ್ತೆ ಸಿನಿಮಾ ಪಯಣವನ್ನು ಆರಂಭಿಸಿದರು. ನಂತರದಲ್ಲಿ ಶಕ್ತಿ (1982), ವಿಧಾತ (1982), ಮಶಾಲ್‌ (1984), ಕರ್ಮ (1986) ಹಾಗೂ 1991ರಲ್ಲಿ ರಾಜ್‌ ಕುಮಾರ್‌ ಜೊತೆಗೆ ನಟಿಸಿದ ಸೌದಾಗರ್‌ ಯಶಸ್ವಿ ಸಿನಿಮಾಗಳು. ಕೊನೆಯ ಬಾರಿಗೆ 1998 ರಲ್ಲಿ ‘ಕಿಲಾ’ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಫಿಲ್ಮ್​ಫೇರ್ ಪ್ರಶಸ್ತಿ ಆರಂಭವಾದಾಗ ಅದನ್ನು ಪಡೆದ ಮೊದಲ ವ್ಯಕ್ತಿ ದಿಲೀಪ್ ಕುಮಾರ್ ಅವರು.

Donate Janashakthi Media

Leave a Reply

Your email address will not be published. Required fields are marked *