ಬೆಂಗಳೂರು : ಕೋಲಾರ ಜಿಲ್ಲೆಯ ನರಸಾಪುರದಲ್ಲಿರುವ ತೈವಾನ್ ಮೂಲದ ಐಫೋನ್ ಘಟಕದಲ್ಲಿ ಸರಿಯಾಗಿ ವೇತನ ನೀಡುತ್ತಿಲ್ಲ ಎಂದು ಆರೋಪಿಸಿ ಐಫೋನ್ ಘಟಕದ ಉದ್ಯೋಗಿಗಳು ಪ್ರತಿಭಟನೆ ನಡೆಸಿದ್ದಾರೆ. ನೂರಾರು ಸಂಖ್ಯೆಯಲ್ಲಿ ಐ-ಫೋನ್ ಉತ್ಪಾದನಾ ಘಟಕದ ಮುಂದೆ ಜಮಾವಣೆಗೊಂಡ ಜನರು ಅಲ್ಲಿನ ಪೀಠೋಪಕರಣಗಳು ಸೇರಿದಂತೆ ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ಧ್ವಂಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. . ಭಾರೀ ಪ್ರಮಾಣದಲ್ಲಿ ಗ್ಲಾಸ್‌ಗಳನ್ನೆಲ್ಲಾ ಪುಡಿ ಮಾಡಲಾಗಿದೆ. ಜೊತೆಗೆ ಕಾರುಗಳನ್ನು ಕೂಡ ಜಖಂಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ತೈವಾನ್ ಮೂಲದ ಐ-ಫೋನ್ ಉತ್ಪಾದನಾ ಘಟಕವನ್ನು ವಿಸ್ಟ್ರಾನ್ ಕಾರ್ಪ್ ಮುನ್ನೆಡೆಸುತ್ತಿತ್ತು. ಕಂಪನಿಯು ಸರಿಯಾದ ಸಮಯಕ್ಕೆ ವೇತನ ನೀಡದೆ ಸತಾಯಿಸುತ್ತಿದೆ ಎಂಬುದು ಅಲ್ಲಿನ ನೌಕರರ ಆರೋಪವಾಗಿದೆ. ಕಳೆದ ಎರಡು ಮೂರು ತಿಂಗಳಿಂದ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡದ ಕಾರಣ ಬೆಳ್ಳಂಬೆಳಗ್ಗೆ ನೂರಾರು ಕಾರ್ಮಿಕರು ಕಂಪನಿ ಮುಂದೆ ಜಮಾಯಿಸಿ ಪ್ರತಿಭಟಸಲು ಕಾರಣವಾದ ಅಂಶವಾಗಿದೆ.
ಸ್ಥಳೀಯರಿಗೆ ಗುತ್ತಿಗೆ ಆಧಾರದ ನಾಲ್ಕನೆಯ ದರ್ಜೆಯ ಕೆಲಸಗಳನ್ನು ನೀಡಿ ಹೊರ ರಾಜ್ಯದ ಅಭ್ಯರ್ಥಿಗಳನ್ನು ಖಾಯಂ ಉದ್ಯೋಗ ಅವಕಾಶಗಳನ್ನು ನೀಡುತ್ತಿರುವ ಬಗ್ಗೆ ಕಾರ್ಮಿಕರಲ್ಲಿ ಆರಂಭದಿಂದಲೂ ಅಸಮಾಧಾನವಿತ್ತು. ಇದೀಗ ಸಂಬಳ ಕೂಡ ಸರಿಯಾಗಿ ನೀಡುತ್ತಿರಲ್ಲ ಎಂದು ಕಾರ್ಮಿಕರು ಬೀದಿಗೆ ಇಳಿದಿದ್ದಾರೆ. ಸ್ಥಳೀಯ ಪೊಲೀಸರು ಐ-ಫೋನ್ ಉತ್ಪಾದನಾ ಘಟಕದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸುತ್ತಿದ್ದಾರೆ.