ಕೇರಳ ಸಿಎಂ ಆಯ್ಕೆ ಗೊಂದಲ: ಕಾಂಗ್ರೆಸ್‌ನಲ್ಲಿ ವೇಣುಗೋಪಾಲ್ vs ಸತೀಶನ್ ಘರ್ಷಣೆ

ನವದೆಹಲಿ: ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (UDF) ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ದಾಖಲಿಸಿದ ಬೆನ್ನಲ್ಲೇ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆ ಕಾಂಗ್ರೆಸ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್​ ಪರ ಒಲವು ತೋರಿದ್ದಾರೆ ಎನ್ನಲಾಗುತ್ತಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆಯಲಿರುವ ಅಧಿಕೃತ ಸಭೆಗೂ ಮುನ್ನ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಕೆ.ಸಿ. ವೇಣುಗೋಪಾಲ್​ರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದ್ದು, ಇದೇ ವೇಳೆ ವೇಣುಗೋಪಾಲ್ ವಿರುದ್ಧ ಕೇರಳದ ಹಲವು ಭಾಗಗಳಲ್ಲಿ ಅವಹೇಳನಕಾರಿ ಪೋಸ್ಟರ್‌ಗಳು ಕಾಣಿಸಿಕೊಂಡಿವೆ, ಇದು ಪಕ್ಷದೊಳಗಿನ ಭಿನ್ನಮತವನ್ನು ಬೀದಿಗೆ ತಂದಿದ್ದು, ಈ ಪೋಸ್ಟರ್‌ಗಳ ಹಿಂದೆ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಬೆಂಬಲಿಗರಿದ್ದಾರೆ ಎಂಬ ಆರೋಪವೂ ಸಹ ಕೇಳಿಬಂದಿದೆ.

ಇದನ್ನೂ ಓದಿ: ಆಂಧ್ರ ಪೇಪರ್ ಲಿಮಿಟೆಡ್ ರಾಜಮಂಡ್ರಿಯ ಕಡಿಯಂ ಘಟಕದಲ್ಲಿ ಕಾರ್ಮಿಕ ಮುಷ್ಕರ ತೀವ್ರ

ಸತೀಶನ್ ಮತ್ತು ರಾಹುಲ್ ನಡುವಿನ ಸಂಘರ್ಷ

ಪೋಸ್ಟರ್ ವಿವಾದದ ಕುರಿತಾಗಿ ವಿ.ಡಿ. ಸತೀಶನ್​ರನ್ನು ರಾಹುಲ್ ಗಾಂಧಿ ಪ್ರಶ್ನಿಸಿದಾಗ, ತಾವು ವೇಣುಗೋಪಾಲ್ ಸಿಎಂ ಆಗುವುದನ್ನು ವಿರೋಧಿಸುವುದಾಗಿ ನೇರವಾಗಿಯೇ ತಿಳಿಸಿದ್ದಾರೆ ಎನ್ನಲಾಗಿದೆ. ವೇಣುಗೋಪಾಲ್ ತಮ್ಮ ಅಧಿಕಾರವನ್ನು ಬಳಸಿ ಶಾಸಕರ ಮೇಲೆ ಗುಂಪುಗಾರಿಕೆ ನಡೆಸಲು ಒತ್ತಡ ಹೇರುತ್ತಿದ್ದರು ಎಂದು ಸತೀಶನ್ ಆರೋಪಿಸಿದ್ದು, ನೆನ್ಮಾರ, ಕಜಕೂಟಂ ಮತ್ತು ಚೆರ್ತಲಾದಂತಹ ಕ್ಷೇತ್ರಗಳಲ್ಲಿ ಕೆಸಿವಿ ಹಸ್ತಕ್ಷೇಪವಿಲ್ಲದಿದ್ದರೆ ಪಕ್ಷ ಇನ್ನು ಹೆಚ್ಚಿನ ಸ್ಥಾನ ಗೆಲ್ಲುತ್ತಿತ್ತು ಎಂದು ವಾದಿಸಿದ್ದಾರೆ.

ಕೇರಳ ಕಾಂಗ್ರೆಸ್‌ನ ಪ್ರಬಲ ನಾಯಕರಾದ ವಿ.ಡಿ. ಸತೀಶನ್ ಮತ್ತು ರಮೇಶ್ ಚೆನ್ನಿತ್ತಲಗೆ ರಾಜ್ಯ ಮಟ್ಟದಲ್ಲಿ ಭಾರಿ ಬೆಂಬಲವಿದೆ. ವಿಶೇಷವಾಗಿ, ಮುಸ್ಲಿಂ ಲೀಗ್ (IUML) ಪಕ್ಷವು ಸತೀಶನ್ ಅವರ ನಾಯಕತ್ವಕ್ಕೆ ಒಲವು ತೋರಿದೆ. 140 ಸದಸ್ಯರ ವಿಧಾನಸಭೆಯಲ್ಲಿ ಯುಡಿಎಫ್ 102 ಸ್ಥಾನಗಳೊಂದಿಗೆ (ಕಾಂಗ್ರೆಸ್-63, ಐಯುಎಂಎಲ್-22, ಕೆಇಸಿ-8, ಆರ್‌ಎಸ್‌ಪಿ-3) ಮೂರನೇ ಎರಡರಷ್ಟು ಬಹುಮತ ಹೊಂದಿದೆ. ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರವನ್ನು ಕೆಳಗಿಳಿಸುವಲ್ಲಿ ಸತೀಶನ್ ಹೋರಾಟ ಮತ್ತು ಶ್ರಮ ನಿರ್ಣಾಯಕವಾಗಿತ್ತು ಎಂಬುದು ಅವರ ಬೆಂಬಲಿಗರ ವಾದವಾಗಿದೆ.

ಸದ್ಯ ಪಕ್ಷದ ಹೈಕಮಾಂಡ್ ತಳಮಟ್ಟದ ಬೆಂಬಲವಿರುವ ಸ್ಥಳೀಯ ನಾಯಕರನ್ನು ಆರಿಸಬೇಕೋ ಅಥವಾ ದೆಹಲಿಯ ಪ್ರಭಾವಿ ನಾಯಕರನ್ನು ರಾಜ್ಯಕ್ಕೆ ಕಳುಹಿಸಬೇಕೇ ಎಂಬ ಇಕ್ಕಟ್ಟಿಗೆ ಸಿಲುಕಿದೆ.

ಇದನ್ನೂ ನೋಡಿ: ಪಿಚ್ಚರ್‌ ಪಯಣ – 172 | ‘ಪ್ಯಾಲೆಸ್ಟೀನ್ 36’ – ಮೊದಲ ರಾಷ್ಟ್ರೀಯ ದಂಗೆಯ ಚಾರಿತ್ರಿಕ ಫಿಲಂ | ಎನ್‌ ಕೆ. ವಸಂತರಾಜ್‌

Donate Janashakthi Media

Leave a Reply

Your email address will not be published. Required fields are marked *