ಬೆಂಗಳೂರು | ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಚುನಾವಣೆ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ವೆಂಕಟೇಶ್ ಪ್ರಸಾದ್

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ)ಯ ಆಡಳಿತ ಮಂಡಳಿ ಆಯ್ಕೆ ಚುನಾವಣೆಯಲ್ಲಿ ಅದ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅವರು ತಮ್ಮ ‘ಟೀಂ ಗೇಮ್ ಚೇಂಜರ್ಸ್’ ಬಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಬಹಿರಂಗಗೊಳಿಸಿ ಮಾತನಾಡಿದರು. ವೆಂಕಟೇಶ್ ಪ್ರಸಾದ್ ಬಣಕ್ಕೆ ಭಾರತೀಯ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಕ್ರೀಡೆ, ಆಟಗಾರರ ಅಭ್ಯುದಯಕ್ಕೆ ಬಳಸದೇ ನೂರು ಕೋಟಿ ರೂ ಹಣವನ್ನ ಕ್ರಿಕೆಟ್ ಸಂಸ್ಥೆಯ ಖಾತೆಯಲ್ಲಿರಿಸಿಕೊಂಡರೆ ಪ್ರಯೋಜನವೇನು ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಪ್ರಶ್ನಿಸಿದ್ದಾರೆ.

ಎದುರಾಳಿ ಬಣದಲ್ಲಿರುವ ಮತ್ತೋರ್ವ ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಾಟೀಲ್ ಅವರ ಬಣದ ಈ ಹಿಂದಿನ ಆಡಳಿತಾವಧಿಯನ್ನ ಕಟುವಾಗಿ ಟೀಕಿಸಿದ ಪ್ರಸಾದ್, ಕ್ರಿಕೆಟ್‌ನ ಬೆಳವಣಿಗೆ, ಆಟಗಾರರಿಗೆ ಅತ್ಯುತ್ತಮ ವಾತಾವರಣ ನಿರ್ಮಾಣಕ್ಕಾಗಿಯೇ ನೂರಾರು ಕೋಟಿ ರೂಪಾಯಿ ಹಣವನ್ನ ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನೀಡುತ್ತದೆ. ಆ ಹಣವನ್ನ ಸೂಕ್ತವಾಗಿ ಬಳಸದೇ, ಉಳಿಸಿದ್ದೇವೆ ಎನ್ನುವುದರಲ್ಲಿ ಅರ್ಥವಿಲ್ಲ. ಬ್ರಿಜೇಶ್ ಪಟೇಲ್ ಬೆಂಬಲಿತ ಈ ಹಿಂದಿನ ಆಡಳಿತ ಮಂಡಳಿ ರಾಜ್ಯದ ಬಹುತೇಕ ವಲಯಗಳ ಕ್ರಿಕೆಟ್ ಅಕಾಡೆಮಿ, ಮೈದಾನಗಳನ್ನ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ ಎಂದು ಆರೋಪಿಸಿದರು.

ಇದನ್ನೂ ಓದಿ : ಕೂಲಿ ಕೊಡದೆ ಪರಾರಿಯಾದ ಗಾರ್ಮೆಂಟ್ಸ್‌ ಮಾಲೀಕರ ವಿರುದ್ಧ ಕ್ರಮ: ಪ್ರತಿಭಟನೆ

ಅನಿರೀಕ್ಷಿತವಾಗಿ ಸಂಭವಿಸಿದ ಅವಘಡವೊಂದರ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣ ಅಂತರಾಷ್ಟ್ರೀಯ ಪಂದ್ಯಗಳ ಆತಿಥ್ಯವನ್ನ ಕಳೆದುಕೊಳ್ಳುತ್ತಿದೆ. ರಾಜ್ಯ ತಂಡವಲ್ಲದ ಫ್ರಾಂಚೈಸಿ ಕ್ರಿಕೆಟ್‌ ತಂಡದ ಗೆಲುವನ್ನ ಸಂಭ್ರಮಿಸಲು ಅನುಮತಿ ಕೋರಿದ್ದು ಯಾಕೆ? ಸಂಬಂಧಪಟ್ಟ ಇಲಾಖೆಗಳಿಂದ ಸೂಕ್ತ ಅನುಮತಿ ಸಿಗದೇ ಸಂಭ್ರಮಾಚರಣೆಗೆ ಅವಕಾಶ ನೀಡಿದ್ಯಾಕೆ?. ಅವಘಡದ ಸಂದರ್ಭದಲ್ಲಿ ಆಡಳಿತ ಮಂಡಳಿಯಲ್ಲಿದ್ದ ನಾಲ್ವರು ಮತ್ತೆ ಈ ಸಲದ ಚುನಾವಣೆಗೆ ಸ್ಪರ್ಧಿಸುತ್ತಿದ್ದೀರಿ. ಅದರಲ್ಲಿಯೂ ಕಾಲ್ತುಳಿತ ಪ್ರಕರಣದ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಿದ್ದ ಓರ್ವ ವ್ಯಕ್ತಿ ಈ ಬಾರಿ ಪುನಃ ಪದಾಧಿಕಾರಿ ಹುದ್ದೆಗೆ ಸ್ಪರ್ಧಿಸುತ್ತಿದ್ದಾರೆ. ಮೂರೇ ತಿಂಗಳಿಗೆ ನೈತಿಕತೆ ಮಾಯವಾಯಿತೇ ಎಂದು ಎದುರಾಳಿ ಬ್ರಿಜೇಶ್ ಪಟೇಲ್ ಬಣವನ್ನ ಅವರು ಪ್ರಶ್ನಿಸಿದರು.

 ತಮ್ಮ ಸ್ಪರ್ಧೆಯ ಹಿಂದಿನ ಕಾರಣದ ಕುರಿತು ಮಾತನಾಡಿದ ವೆಂಕಟೇಶ್ ಪ್ರಸಾದ್, ಕರ್ನಾಟಕ ಕ್ರಿಕೆಟ್‌ನ್ನ ಪುನರ್ನಿರ್ಮಿಸುವುದು ಮತ್ತು ಕಳೆದುಹೋದ ಅದರ ವೈಭವವನ್ನು ಪುನಃಸ್ಥಾಪಿಸುವುದು ನಮ್ಮ ಆದ್ಯತೆಯಾಗಿದೆ. ಆ ಪ್ರಯತ್ನದಲ್ಲಿ ಕರ್ನಾಟಕದ ಎಲ್ಲಾ ಕ್ರಿಕೆಟಿಗರು ನಮ್ಮ ಬೆನ್ನಿಗಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಹೆಮ್ಮೆಯನ್ನು ಪುನಃಸ್ಥಾಪಿಸುವುದು, ರಾಜ್ಯಾದ್ಯಂತ ಮೂಲಸೌಕರ್ಯಗಳನ್ನು ನಿರ್ಮಿಸುವುದು ಮತ್ತು ಯುವ ಆಟಗಾರರಿಗೆ ಹಾದಿಯನ್ನು ಬಲಪಡಿಸುವುದು ನಮ್ಮ ಗುರಿಯಾಗಿದೆ.ಮುಂಬರುವ T-20 ವಿಶ್ವಕಪ್‌ನಲ್ಲಿ ಕನಿಷ್ಠ ಕೆಲವು ಪಂದ್ಯಗಳನ್ನಾದರೂ ಆಯೋಜಿಸುವ ಅವಕಾಶ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಲಭ್ಯವಾಗುವಂತೆ ನಾವು ಕಾರ್ಯಪ್ರವೃತ್ತವಾಗಲಿದ್ದೇವೆ” ಎಂದರು.

ಬದಲಾವಣೆಯ ಅಗತ್ಯತೆಯ ಬಗ್ಗೆ ಮಾತನಾಡಿದ ಅನಿಲ್ ಕುಂಬ್ಳೆ, “ನಾವೆಲ್ಲರೂ ಕ್ರಿಕೆಟ್‌ಗಾಗಿ ಇಲ್ಲಿ ಒಟ್ಟುಗೂಡಿದ್ದೇವೆ ಎಂಬುದು ಮುಖ್ಯ. ಈ ಸಂಪೂರ್ಣ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಕ್ಕಾಗಿ ವೆಂಕಿಗೆ ಹ್ಯಾಟ್ಸ್‌ಆಫ್, ಕರ್ನಾಟಕ ಕ್ರಿಕೆಟ್ ಬಳಲುತ್ತಿರುವುದರಿಂದ ನಾವು ಇಲ್ಲಿ ಸೇರಿದ್ದೇವೆ ಮತ್ತು ಬದಲಾವಣೆಗಳನ್ನ ತರಲು ಬಯಸುತ್ತೇವೆ” ಎಂದರು.

ರಾಜ್ಯ ಕ್ರಿಕೆಟ್ ಸಂಸ್ಥೆಯೊಳಗೆ ಬದಲಾವಣೆ ಮತ್ತು ಹೊಣೆಗಾರಿಕೆಯ ಅಗತ್ಯದ ಕುರಿತು ಮಾತನಾಡಿದ ಮಾಜಿ ವೇಗಿ ಜಾವಗಲ್ ಶ್ರೀನಾಥ್ “ವೆಂಕಟೇಶ್ ಹೇಳಿದಂತೆ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ ಬ್ಯಾಕ್‌ಸೀಟ್ ಡ್ರೈವಿಂಗ್ ಸಿಂಡ್ರೋಮ್ ನಿಲ್ಲಬೇಕು. ಕೆಎಸ್‌ಸಿಎಗೆ ಘನತೆ ಮತ್ತು ಗೌರವ ಇದ್ದಾಗ, ಹಿಂದಿನಿಂದ ವಿಷಯಗಳನ್ನು ನಿಯಂತ್ರಿಸುವ ಅಗತ್ಯವಿಲ್ಲ. ಕ್ರಿಕೆಟ್‌ಗೆ ಸಮಗ್ರತೆಯಿಂದ ಸೇವೆ ಸಲ್ಲಿಸುವವರರು ಮರಳುವ ಸಮಯ ಇದು” ಎಂದರು.

ನವೆಂಬರ್ 30ರಂದು ನಡೆಯಲಿರುವ ಕೆಎಸ್‌ಸಿಎ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮತ್ತು ಕರ್ನಾಟಕದ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್, ಕಾರ್ಯದರ್ಶಿ ಸ್ಥಾನಕ್ಕೆ ವಿನಯ್ ಮೃತ್ಯುಂಜಯ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಎ.ವಿ. ಶಶಿಧರ್ ಮತ್ತು ಖಜಾಂಚಿ ಸ್ಥಾನಕ್ಕೆ ಬಿ.ಎನ್.ಮಧುಕರ್ ಅವರು ವೆಂಕಟೇಶ್ ಪ್ರಸಾದ್‌ ಅವರ ಬಣದಿಂದ ಸ್ಪರ್ಧೆಯಲ್ಲಿದ್ದಾರೆ. ಪ್ರಮುಖ ಪದಾಧಿಕಾರಿಗಳ ಜೊತೆಗೆ, ತಂಡವು ಕರ್ನಾಟಕದಾದ್ಯಂತ ತನ್ನ ಸಾಂಸ್ಥಿಕ, ಆಜೀವ ಮತ್ತು ವಲಯ ಸದಸ್ಯರನ್ನು ಸಹ ಘೋಷಿಸಿದೆ.

ಇದನ್ನೂ ನೋಡಿ : ಕಡಲೆಕಾಯಿ ಪರಿಷೆಗೆ ಶೃಂಗಾರಗೊಳ್ಳುತ್ತಿದೆ ಬಸವನಗುಡಿ |17 ರಿಂದ 21 | Janashakthi Media| #kadalekaiparishe

Donate Janashakthi Media

Leave a Reply

Your email address will not be published. Required fields are marked *