ಕರ್ನಾಟಕ ಚುನಾವಣೆ: ಪ್ರಧಾನಿ ಮೋದಿಯನ್ನು ‘ರೋಮ್‌ನ ನೀರೋ’ಗೆ ಹೋಲಿಸಿದ ಮೊಯ್ಲಿ!

ಮಂಗಳೂರು: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ರೋಮ್ ನ ನೀರೋಗೆ ಹೋಲಿಸಿದ್ದಾರೆ. ರೋಮ್ ಹೊತ್ತಿ ಉರಿಯುತ್ತಿದ್ದಾಗ ನೀರೋ ಪಿಟೀಲು ಬಾರಿಸಿದಂತೆ, ಮಣಿಪುರ ರಾಜ್ಯ ಹೊತ್ತಿ ಉರಿಯುತ್ತಿರುವಾಗ ಕರ್ನಾಟಕದಲ್ಲಿ ಮೋದಿ ಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮೊಯ್ಲಿ, ಭಾರತದ ಇತಿಹಾಸದಲ್ಲಿ ಯಾವುದೇ ಪ್ರಧಾನಿ ರಾಜ್ಯ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ಇಷ್ಟು ಸಮಯ ಕಳೆದಿಲ್ಲ. ಚುನಾವಣಾ ಫಲಿತಾಂಶದ ಬಗ್ಗೆ ಪ್ರಧಾನಿ ಎಷ್ಟು ಚಿಂತಿತರಾಗಿದ್ದಾರೆ ಎಂಬುದು ಇದು ತೋರಿಸುತ್ತದೆ. ಮಣಿಪುರ ಹೊತ್ತಿ ಉರಿಯುತ್ತಿದ್ದು, ಇದನ್ನು ನಿಯಂತ್ರಿಸಲು ಬಾಕ್ಸರ್ ಮೇರಿ ಕೋಮ್ ನೆರವು ಕೋರಿದ್ದಾರೆ. ನೀರೋ ಆಳ್ವಿಕೆಯಲ್ಲಿ ರೋಮ್‌ನಲ್ಲಿದ್ದ ಪರಿಸ್ಥಿತಿಯೇ ದೇಶದಲ್ಲೂ ಇದೆ ಎಂದು ಹೇಳಿದರು.

ಇತ್ತೀಚಿನ ಪ್ಯೂ ಸಂಶೋಧನಾ ವರದಿಯ ಸಮೀಕ್ಷೆಯನ್ನು ಉಲ್ಲೇಖಿಸಿದ ಮೊಯ್ಲಿ, ಆ ವರದಿಯಲ್ಲಿ  ಶೇಕಡಾ 50 ಕ್ಕಿಂತ ಹೆಚ್ಚು ಭಾರತೀಯರು ಮಿಲಿಟರಿ ಆಡಳಿತವನ್ನು ಬಯಸುತ್ತಾರೆ ಮತ್ತು ಹೆಚ್ಚಿನ ಮಂದಿ ದೇಶವನ್ನು ತೊರೆಯಲು ಬಯಸುತ್ತಾರೆ. ಇದು ದೇಶ ಮತ್ತು ಜನರಲ್ಲಿ ಸ್ಥಿರತೆ ಇಲ್ಲ ಮತ್ತು ಶಾಂತಿಯಿಂದ ಬದುಕಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಮೊಯ್ಲಿ ಹೇಳಿದರು.

ಇದನ್ನೂ ಓದಿ : ಅಯೋಧ್ಯೆ ರಥಯಾತ್ರೆ ನಡೆಯೋವರೆಗೆ ದೇಶದೊಳಗೆ ಉಗ್ರಗಾಮಿಗಳು ಇರ್ಲಿಲ್ಲ- ವೀರಪ್ಪ ಮೊಯ್ಲಿ

“ಇದು ಮೋದಿ-ಶಾ ಆಳ್ವಿಕೆಯಲ್ಲಿ ನಡೆಯುತ್ತಿದೆ. ಮೋದಿಯವರ ಡಬಲ್ ಇಂಜಿನ್ ಸರ್ಕಾರದ  ಒಂದು ಎಂಜಿನ್ (ಕರ್ನಾಟಕದ) ಕೆಲಸ ಮಾಡುತ್ತಿಲ್ಲ. ಆದ್ದರಿಂದ ಅದನ್ನು ತೆಗೆದುಹಾಕಬೇಕು ಎಂದು ಮೊಯ್ಲಿ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ತಮ್ಮ ನಾಯಕ ಎಂದು ಬಿಂಬಿಸುವ ಮೂಲಕ ಬಿಜೆಪಿ ಚುನಾವಣೆಗೆ ಹೋಗುತ್ತಿದೆ. ಅವರು ಸಿಎಂ ಆಗಿದ್ದಾಗ ಅವರ ಸರಕಾರ ದೇಶದಲ್ಲೇ ಅತ್ಯಂತ ಭ್ರಷ್ಟ ಸರಕಾರ ಎಂದು ಹೇಳಲಾಗುತ್ತಿತ್ತು. ಈಗ ಅವರ ಮುಖ ವನ್ನಿಟ್ಟುಕೊಂಡು ಚುನಾವಣೆಗೆ ಹೋಗುತ್ತಿದ್ದಾರೆ. ಸಿಎಂ ಸಂಪೂರ್ಣ ಮೂಲೆಗೆ ಸರಿದಿದ್ದಾರೆ. ಭ್ರಷ್ಟಾಚಾರದಿಂದ ಬಿಜೆಪಿ ಕರಾವಳಿಯಲ್ಲಿ ಅನೇಕ ಅಭ್ಯರ್ಥಿಗಳನ್ನು ಬದಲಾಯಿಸಿದೆ ಎಂದು ಟೀಕಿಸಿದರು.

ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದರೆ ರಾಜ್ಯದಲ್ಲಿ ಗಲಭೆಯಾಗುತ್ತದೆ ಎಂಬ ಗೃಹ ಸಚಿವ ಅಮಿತ್ ಶಾ ಹೇಳಿಕೆಗೆ ತೀವ್ರ ವಾಗ್ದಾಳಿ ನಡೆಸಿದ ಮೊಯ್ಲಿ, ಇದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಹಾಗಾದರೆ ಏಕೆ ಚುನಾವಣೆ ಬೇಕು ಎಂದು ಪ್ರಶ್ನಿಸಿದರು.

Donate Janashakthi Media

Leave a Reply

Your email address will not be published. Required fields are marked *