ತಿರುವನಂತಪುರಂ: ಕೇರಳದಲ್ಲಿ ಸತತ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಡರಂಗ ಸರಕಾರದಲ್ಲಿ ವೀಣಾ ಜಾರ್ಜ್ ಅವರು ಆರೋಗ್ಯ ಸಚಿವೆಯಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.
ಅರನ್ಮುಲಾ ವಿಧಾನಸಭಾ ಕ್ಷೇತ್ರದಿಂದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದಿಂದ ಎರಡನೇ ಬಾರಿ ಶಾಸಕಿಯಾಗಿ ಆಯ್ಕೆಯಾಗಿರುವ ವೀಣಾ ಜಾರ್ಜ್ ಭೌತವಿಜ್ಞಾನದಲ್ಲಿ ಸ್ನಾತಕೋತ್ತರ, ಬಿ.ಇಡಿ ಪದವಿ ಪಡೆದಿರುವ ಅವರು ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಮೂಲಕ ಚಳುವಳಿಗೆ ಧುಮಿಕಿದವರು.
ಇದನ್ನು ಓದಿ: ಎರಡನೇ ಬಾರಿ ಕೇರಳ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಪಿಣರಾಯಿ ವಿಜಯನ್
ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದರ ಜೊತೆಗೆ, ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಮತ್ತಷ್ಟು ಉತ್ತಮವಾದ ಕಾರ್ಯಕ್ಷಮತೆಯನ್ನು ಪ್ರದರ್ಶಿಸುವ ಹೆಚ್ಚುವರಿ ಸವಾಲನ್ನು ವೀಣಾ ಜಾರ್ಜ್ ಹೊಂದಿದ್ದಾರೆ.
2016 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸಿದರು. 2021ರ ಚುನಾವಣೆಯಲ್ಲಿ ಚುನಾವಣೆಯಲ್ಲಿ 19,000 ಮತಗಳ ಅಂತರದೊಂದಿಗೆ ಮತ್ತೆ ಜಯಶೀಲರಾದರು. ದಕ್ಷಿಣ ಭಾರತದಲ್ಲಿ ಈ ಉನ್ನತ ಹುದ್ದೆಗೇರಿದ ಮೊದಲ ಪತ್ರಕರ್ತೆ ಎಂಬ ಹೆಗ್ಗಳಿಕೆಗೂ ವೀಣಾ ಅವರಿಗೆ ಸಲ್ಲುತ್ತದೆ.
ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಸಂಘಟನೆಯ ಮೂಲಕ ವಿದ್ಯಾರ್ಥಿ ಚಳುವಳಿಯ ಮೂಲಕ ಅವರು ಗುರುತಿಸಿಕೊಂಡಿದ್ದರು.
ಮನೋರಮಾ ನ್ಯೂಸ್ ಮತ್ತು ರಿಪೋರ್ಟರ್ ಟಿವಿ ಸೇರಿದಂತೆ ಪ್ರಮುಖ ಮಲಯಾಳಂ ಚಾನೆಲ್‌ಗಳಲ್ಲಿ ಸುದ್ದಿ ನಿರೂಪಕಿಯಾಗಿ 15 ವರ್ಷಗಳ ಕಾಲ ದೃಶ್ಯ ಮಾಧ್ಯಮದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆಯ್ದ ಪ್ರೇಕ್ಷಕರೊಂದಿಗೆ ಸಂವಹನ ನಡೆಸುತ್ತಿದ್ದ ದೂರದರ್ಶನ ಕಾರ್ಯಕ್ರಮವಾದ “ನಾಮ್ ಮುನ್ನಾಟ್” ನ ಸಹ-ನಿರೂಪಕರಾಗಿದ್ದರು.
ವೀಣಾ ಜಾರ್ಜ್ ಅವರು ಟಿವಿ ಮಾಧ್ಯಮದಲ್ಲಿ ಆಳವಾದ ಪ್ರಶ್ನೆಗಳು ಮತ್ತು ರಾಜಕೀಯ ವಿಶ್ಲೇಷಣೆಗಳಿಂದಾಗಿ ಹೆಸರುವಾಸಿಯಾಗಿದ್ದರು. ಪತ್ರಿಕೋದ್ಯಮ ವಿಭಾಗದಲ್ಲಿ ಹಲವು ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಹೊಸ ಮುಖಗಳಿಗೆ ಅವಕಾಶ ನೀಡುವ ನಿಲುವುನೊಂದಿಗೆ ಸಿಪಿಐ(ಎಂ) ನೇತೃತ್ವದ ಪಿಣರಾಯಿ ವಿಜಯನ್ ಅವರ ಎಡರಂಗ ಸರಕಾರದಲ್ಲಿ 11 ಸಿಪಿಐ (ಎಂ) ನಾಮನಿರ್ದೇಶಿತರು ಮೊದಲ ಬಾರಿಗೆ ಸಚಿವರಾಗಿದ್ದಾರೆ.
ನಾಯಕತ್ವ ಗುಣಗಳು, ಪ್ರಬುದ್ಧತೆಯಿಂದ ಕೂಡಿದ ಸಂವಾದ ಶಕ್ತಿಯಿಂದ ಗಮನ ಸೆಳೆದಿರುವ ವೀಣಾ ಉತ್ತಮ ವಾಗ್ಮಿಯೂ ಆಗಿದ್ದಾರೆ. ಸಂಪುಟದಲ್ಲಿ ಯಾರಿಗೆ ಸ್ಥಾನ ನೀಡಬೇಕು ಎಂಬ ಸಮಾಲೋಚನೆ ನಡೆದಿದ್ದ ಸಂದರ್ಭದಲ್ಲಿ, ಭಾರಿ ಸವಾಲಿನ ಆರೋಗ್ಯ ಖಾತೆಯನ್ನೇ ಇವರಿಗೆ ನೀಡಲಾಗುತ್ತದೆ ಎಂಬ ಚರ್ಚೆಗಳೂ ನಡೆದಿದ್ದವು.
ಹಿಂದಿನ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದ ಶೈಲಜಾ ಟೀಚರ್ ಅವರು ಕೋವಿಡ್ ಸಾಂಕ್ರಾಮಿಕ ರೋಗ ಸೇರಿದಂತೆ ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹವಾದ ಸಾಧನೆಯನ್ನು ಮಾಡಿದ್ದರು. ಅವರನ್ನೇ ಮತ್ತೆ ಮಂತ್ರಿ ಮಾಡಬೇಕೆಂದು ಸಾಕಷ್ಟು ಮಂದಿ ಒತ್ತಾಯಿಸಿದ್ದರು. ಆದರೆ, ಶೈಲಜಾ ಅವರು ಒಳಗೊಂಡು ಬಹುತೇಕರು ಪಕ್ಷದ ತೀರ್ಮಾನವನ್ನು ಗೌರವಿಸಿ ತಮಗಿಂತಲೂ ಉತ್ತಮವಾದ ಆಡಳಿತ ಹೊಸಬರಿಂದ ಸಾಧ್ಯವಾಗಲಿದೆ ಎಂದು ತಿಳಿಸಿದ್ದಾರೆ.
ಸಿಪಿಐ(ಎಂ) ಪಕ್ಷದ ತೀರ್ಮಾನದಂತೆ ಹೊಸ ಮುಖಗಳಿಗೆ ಅವಕಾಶ ನೀಡಿದ್ದು ಅದರಲ್ಲಿ ವೀಣಾ ಜಾರ್ಜ್ ಅವರನ್ನು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಆಯ್ಕೆ ಮಾಡಲಾಗಿದೆ.
ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಡಾ.ಜಾರ್ಜ್ ಜೋಸೆಫ್ ಅವರು ಪ್ರೌಢಶಾಲಾ ಶಿಕ್ಷಕ. ಅವರು ಮಲಂಕರ ಆರ್ಥೋಡಾಕ್ಸ್ ಸಿರಿಯನ್ ಚರ್ಚ್‌ನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.