ಶಿವಮೊಗ್ಗ: ನಗರದಲ್ಲಿ ಶಾಲಾ- ಕಾಲೇಜು ಪುನಾರಂಭ ಆಗಿವೆ. ಬಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯ ಬಳಿಕ ನಡೆದ ಗಲಭೆ ಹಿನ್ನೆಲೆಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ನೀಡಲಾಗಿತ್ತು.
ಒಂದು ವಾರದ ಬಳಿಕ ಶಾಲಾ-ಕಾಲೇಜುಗಳು ಪುನಾರಂಭವಾಗಿದೆ. ಆದರೂ, ಆದರೂ ಪರಿಸ್ಥಿತಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಿರುವುದರಿಂದ ಶಿವಮೊಗ್ಗ ಜಿಲ್ಲಾಡಳಿತ ಮಾರ್ಚ್ 4ರವರೆಗೆ ಸೆಕ್ಷನ್ 144 ವಿಧಿಸಿ ನಿಷೇಧಾಜ್ಞೆ ಮುಂದುವರಿಸಿದೆ.
ಶಾಲಾ-ಕಾಲೇಜು ಪುನಾರಂಭ ಮಾಡುವಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಆರ್. ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಮಾರ್ಚ್ 4ರವರೆಗೆ ನಗರದಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಬೆಳಗ್ಗೆ 6 ರಿಂದ ಸಂಜೆ 7ರ ವರೆಗೆ ವ್ಯಾಪಾರಕ್ಕೆ ಅವಕಾಶ ನೀಡಲಾಗಿದೆ. ಸಂಜೆ 7 ರಿಂದ ಬೆಳಗ್ಗೆ 6 ಗಂಟೆವರೆಗೆ ತುರ್ತು ಸೇವೆಗಳಿಗಷ್ಟೇ ಅನುಮತಿ ನೀಡಿ ಆದೇಶ ನೀಡಲಾಗಿದೆ.
ಫೆಬ್ರವರಿ 20 ರಂದು ಹರ್ಷ ಕೊಲೆ ಮಾಡಿದ್ದರು. ಈಗಾಗಲೇ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಹತ್ಯೆಗೆ ಬಳಸಿದ್ದ ಕಾರು ಸೇರಿದಂತೆ ಇತರೆ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.
ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕೆಂದು ಬಿಜೆಪಿ ನಾಯಕರು ತಮ್ಮ ಸರ್ಕಾರದ ಮೇಲೆಯೇ ಒತ್ತಡ ಹಾಕುತ್ತಿದ್ದಾರೆ. ವಿವಿಧ ಜಿಲ್ಲೆ-ತಾಲೂಕುಗಳಲ್ಲಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದು, ಹರ್ಷ ಹತ್ಯೆಗೆ ಆರೋಪಿಗಳಿಗೆ ಕಠಿಣ ಶಿಕ್ಷಣ ನೀಡಬೇಕು ಹಾಗೂ ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗಳನ್ನು ನಿಷೇಧ ಮಾಡಬೇಕೆಂದು ಒತ್ತಾಯಿಸುತ್ತಿವೆ.