ವನ್ಯ ಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಜಾಥ

ಮೈಸೂರು: 2021ನೇ ಸಾಲಿನ 67ನೇ ವನ್ಯಜೀವಿ ಸಪ್ತಾಹ ಆಚರಣೆಯ ಅಂಗವಾಗಿ ಇಂದು ಮೈಸೂರು ಅರಮನೆಯ ಬಲರಾಮ ಗೇಟಿನ ಬಳಿ ದಸರಾ ಆನೆಗಳು ಹಾಗೂ ಶಾಲಾ ಮಕ್ಕಳೊಂದಿಗೆ ಪರಿಸರ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭ ವನ್ಯ ಜೀವಿ ಸಪ್ತಾಹದ ಅಂಗವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ವನ್ಯಜೀವಿ ಸಂಪತ್ತು ಸಂರಕ್ಷಣೆಗಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ಮೈಸೂರು ವೃತ್ತದ ಸಿಸಿಎಫ್ ಟಿ.ಹೀರಾಲಾಲ್ ಮಾತನಾಡಿ ʻ67ನೇ ವನ್ಯ ಜೀವಿ ಸಪ್ತಾಹವನ್ನು ಆಚರಿಸುತ್ತಿದ್ದೇವೆ. ಇಂದು ಬೆಳಿಗ್ಗೆಯಿಂದ ವನ್ಯ ಪ್ರಾಣಿಗಳ ಪ್ರಾಮುಖ್ಯತೆ, ಸಂರಕ್ಷಣೆ ಇದರ ಬಗ್ಗೆ ಅರಿವು ಮೂಡಿಸಲು ಚಿಕ್ಕದಾಗಿ ಒಂದು ಜಾಥಾವನ್ನು ಮಾಡಿದ್ದೇವೆ ಎಂದರು.

ವನ್ಯಜೀವಿ ಸಪ್ತಾಹ 1957ರಿಂದ ನಡೆಸಲಾಗುತ್ತಿದೆ. ಆಗಿನ ಸರ್ಕಾರ ವನ್ಯಜೀವಿಗಳ ಪ್ರಾಮುಖ್ಯತೆಯನ್ನು ಮನಗಂಡು ಸಪ್ತಾಹ ಆಚರಣೆ ಮಾಡಿದೆ. ಒಂದೊಂದು ಜೀವಿಗೂ ಪ್ರಾಮುಖ್ಯತೆ ನೀಡುವ ಕಾರ್ಯವಾಗಿದೆ. ಈ ವರ್ಷ ಜಲಚರ ಸಂರಕ್ಷಣೆ ಮಾಡುವ ಘೋಷಣೆ ನಡೆಸಿದ್ದೇವೆ. ಶುದ್ಧ ನೀರಿನಲ್ಲಿರತಕ್ಕ ಜಲಚರವನ್ನು ಸಂರಕ್ಷಣೆ ಮಾಡುವುದು.  ಸಿಹಿ ನೀರನ್ನು ಉಳಿಸುವುದೇ ಧ್ಯೇಯವಾಗಿದೆ. ಈ  ಒಂದು ಅಭಿಯಾನದೊಂದಿಗೆ ವನ್ಯ ಜೀವಿ ಸಪ್ತಾಹವನ್ನು ಆಚರಿಸುತ್ತಿದ್ದೇವೆ.

ಮೈಸೂರು ವೃತ್ತ, ಮೈಸೂರು ವೃತ್ತಕ್ಕೆ ಹತ್ತಿರದಲ್ಲಿ ಬಂಡೀಪುರ ಹುಲಿಸಂರಕ್ಷಿತ ಪ್ರದೇಶಗಳು, ನಾಗರಹೊಳೆ ಸಂರಕ್ಷಿತ ಪ್ರದೇಶಗಳು, ಬಿಆರ್‌ಟಿ ಈ ಪ್ರದೇಶದಲ್ಲಿಯೇ ಸರಿಸುಮಾರು 320ಹುಲಿಗಳು ಇವೆ.  ಕರ್ನಾಟಕ ರಾಜ್ಯ ಹುಲಿ ಸಂಖ್ಯೆಯಲ್ಲಿ ಎರಡನೇ ರಾಜ್ಯ. 524ಹುಲಿಗಳಿವೆ. ಇಲ್ಲಿ ಮುನ್ನೂರ ಇಪ್ಪತ್ತು ಹುಲಿಗಳು ವಾಸವಾಗಿರುವುದು ನಮಗೆ ಹೆಮ್ಮೆಯ ವಿಚಾರ. ಬರಿ ಹುಲಿ ಅಂತ ಅಷ್ಟೇ ಅಲ್ಲ, ಎಲ್ಲ ಪ್ರಾಣಿಗಳನ್ನು, ಪಕ್ಷಿಗಳನ್ನು, ಪ್ರಭೇದಗಳನ್ನು ಜಲಚರಗಳನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಚಿಕ್ಕದಾಗಿಯಾದರೂ ಸಂದೇಶ ನೀಡಬೇಕೆಂಬ ದೃಷ್ಟಿಯಲ್ಲಿ ಸಾಂಕೇತಿಕವಾಗಿ ಆಚರಣೆ ಮಾಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭ ಹಿರಿಯ ಅಧಿಕಾರಿ ಜಗತ್ ರಾಮ್,  ಡಿಸಿಎಫ್  ಕರಿಕಾಳನ್, ಕಮಲ‌ಕರಿಕಾಳನ್, ವೈದ್ಯ ರಮೇಶ್ ಸೇರಿದಂತೆ ಇತರೆ‌ ಅಧಿಕಾರಿಗಳು ಹಾಗೂ ಆನೆಗಳ ಮಾವುತರು ಭಾಗವಹಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *