ಬೆಂಗಳೂರು: ಸಿನಿಮಾ ಮಂದಿ ಅದರಲ್ಲಿಯೂ ನಟಿಯರು ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ. ಆದರೆ ಕನ್ನಡ ಚಿತ್ರರಂಗದ ‘ಹುಲಿ’ ಕಿಶೋರ್ ಇದಕ್ಕೆ ತದ್ವಿರುದ್ಧ.
ಸಮಾಜದ ಆಗು-ಹೋಗುಗಳ ಬಗ್ಗೆ ಮೊದಲಿಂದ ಧ್ವನಿ ಎತ್ತುತ್ತಾ, ಕಳೆದ ಹತ್ತು ವರ್ಷಗಳಿಂದ ಬಲಪಂಥೀಯವರ ಕೆಂಗಣ್ಣಿಗೆ ಗುರಿಯಾಗ್ತಾನೇ ಬಂದ ಕಿಶೋರ್ ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಹೌದು, ತೀರಾ ಇತ್ತೀಚೆಗೆ ಪಿಎಂ ಮೋದಿ ಸಂಸತ್ತಿನಲ್ಲಿ ಬಂಕಿಮಚಂದ್ರ ಚಟರ್ಜಿ ಅವರ ವಂದೇ ಮಾತರಂ ಹಾಡಿನ ವಿಚಾರ ಪ್ರಸ್ತಾಪ ಮಾಡಿದ್ದರು. ಕಾಂಗ್ರೆಸ್ ಓಲೈಕೆ ರಾಜಕೀಯಕ್ಕೆ ಮತ್ತು ಮುಸ್ಲಿಂ ಲೀಗ್‌ಗೆ ಮಣಿದು ವಂದೇ ಮಾತರಂ ಗೀತೆಯನ್ನು ತುಂಡರಿಸಿತು ಎಂದು ಆರೋಪ ಮಾಡಿದ್ದರು.
ಇದೇ ವಿಚಾರಕ್ಕೆ ಸಂಸತ್‌ನಲ್ಲಿ ಚರ್ಚೆ ಕಾವೇರಿತ್ತು. ಆಡಳಿತ ರೂಢ ಎನ್‌ಡಿಎ ಸರ್ಕಾರದ ಆರೋಪಕ್ಕೆ ಪ್ರತ್ಯುತ್ತರ ನೀಡುವ ಪ್ರಯತ್ನವನ್ನು ಕಾಂಗ್ರೆಸ್ ಮಾಡಿತ್ತು. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡದ ”ಹುಲಿ” ಕಿಶೋರ್ ಮಾತನಾಡಿದ್ದಾರೆ. ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹಾಗಿದ್ದರೆ ವಂದೇ ಮಾತರಂ ವಿವಾದದ ಬಗ್ಗೆ ಕಿಶೋರ್ ಹೇಳಿದ್ದೇನು..? ಎಂದು ತಿಳಿಯಲು .
ಇದನ್ನೂ ಓದಿ: ಬಾಕಿ ಗೃಹಲಕ್ಷ್ಮಿ ಯೋಜನೆ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಲಿದೆ: ಸಿಎಂ ಸಿದ್ದರಾಮಯ್ಯ
ಕಿಶೋರ್ ಬರಹ
ಜೈ ಶ್ರೀ ರಾಮ್ ನಿಂದ ವಂದೇ ಮಾತರಂ ವರೆಗೆ.. ಇತರರನ್ನು ಪ್ರೀತಿಯಿಂದ ಸ್ವಾಗತಿಸಲು ಬಳಸುತ್ತಿದ್ದ ಅಭಿವ್ಯಕ್ತಿಯನ್ನು ಹೇಗೆ ಸ್ವಾಧೀನಪಡಿಸಿಕೊಂಡು ಅದನ್ನು ಯುದ್ಧ ಘೋಷವಾಗಿ, ಮುಸ್ಲಿಮರ ವಿರುದ್ಧ ದ್ವೇಷದ ಅಸ್ತ್ರವಾಗಿ, ಅಧಿಕಾರ ಹಿಡಿಯುವ ಸುಲಭ ಸಾಧನವಾಗಿ ಪರಿವರ್ತಿಸಲಾಗಿದೆಯೋ ಹಾಗೆಯೇ, ಸ್ವಾತಂತ್ರ್ಯ ಹೋರಾಟದಲ್ಲಿ ಯಾವುದೇ ಪಾತ್ರವಿಲ್ಲದ, ನಿಜವಾದ ದೇಶಭಕ್ತರು ನಿರ್ಮಿಸಿದ ಎಲ್ಲವನ್ನೂ ಮಾರುತ್ತಿರುವ ಅಧಿಕಾರದಲ್ಲಿರುವ ನಿಷ್ಪ್ರಯೋಜಕ ಜನರು, ಈಗ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಬಳಸಿದ ಹಾಡನ್ನು ಕಾಲಾಂತರದಲ್ಲಿ ಕೋಮು ಪಕ್ಷಪಾತದ ಕಾದಂಬರಿ ಆನಂದ ಮಠಕ್ಕೆ ತಳಕು ಹಾಕಿಕೊಂಡರೂ ಸಹ, ಸ್ವಾತಂತ್ರ್ಯ ಹೋರಾಟಕ್ಕೆ ಜೀವ ತುಂಬಿದ ಮತ್ತು ಭಾರತದಾದ್ಯಂತ ಜನರನ್ನು ಒಗ್ಗೂಡಿಸಿದ ಹಾಡನ್ನು ಧಾರ್ಮಿಕ ಆಧಾರದ ಮೇಲೆ ದೇಶವನ್ನು ವಿಭಜಿಸಲು, ತಮ್ಮ ರಾಜಕೀಯ ಲಾಭಕ್ಕೆ ಬಳಸಲು ಪ್ರಯತ್ನಿಸುತ್ತಿದ್ದಾರೆ.
ಕುಸಿಯುತ್ತಿರುವ ರೂಪಾಯಿ, ಆರ್ಥಿಕತೆ ಮತ್ತು ಕುಸಿಯುತ್ತಿರುವ ಪ್ರಜಾಪ್ರಭುತ್ವ ಸಂಸ್ಥೆಗಳು, ನಕಲಿ ಜಿಡಿಪಿ ಮತ್ತು ರೈತರಿಗೆ ನೀಡಿದ ನಕಲಿ ಭರವಸೆಗಳು, ಆರೋಗ್ಯ ಮತ್ತು ನಿರುದ್ಯೋಗ, ಅಮೆರಿಕ ಮತ್ತು ಚೀನಾ, ಮಣಿಪುರ ಮತ್ತು ಲಡಾಖ್, ವಿಜ್ಞಾನಿಗಳು ಮತ್ತು ವಿದ್ವಾಂಸರ ಅಕ್ರಮ ಬಂಧನಗಳು ಮುಂತಾದ ಎಲ್ಲಾ ಅಗತ್ಯ ಮತ್ತು ಗಂಭೀರ ಸಮಸ್ಯೆಗಳನ್ನು ನಿರ್ಲಕ್ಷಿಸಿ. ಈ ಹೊತ್ತಿಗೆ ನಾವು ಅರ್ಥಮಾಡಿಕೊಂಡಿರಬೇಕಿತ್ತು ಈ ಮೂರ್ಖರಿಂದ ಏನನ್ನೂ ನಿಭಾಯಿಸಲು ಸಾಧ್ಯವಿಲ್ಲವೆಂದು… ಅವರು ಮಾಡಬಹುದಾದದ್ದು ಇಷ್ಟೇ ವಿಭಜಿಸು ಇಲ್ಲ ದಿಕ್ಕು ತಪ್ಪಿಸು ಎಂದು ಕಿಶೋರ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದಾರೆ.
ಸದ್ಯ ಕಿಶೋರ್ ಅವರ ಬರಹದಿಂದ ಎಂದಿನಂತೆ ಪರ ವಿರೋಧದ ಚರ್ಚೆ ನಡೆಯುತ್ತಿದೆ. ಇನ್ನುಳಿದಂತೆ ಕೆಲ ದಿನಗಳ ಹಿಂದೆಯಷ್ಟೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ವಿರುದ್ಧ ಕೆಂಡ ಕಾರಿದ್ದರು.
ಶ್ರೀ ಭಾಗವತ್ ಅವರೇ, ಇಂದು ಆ ನಿಮ್ಮನಾಳೆಯ ಮರುದಿನ .. ನಾವು ಹಿಂದೂ ರಾಷ್ಟ್ರವಾಗಿಲ್ಲ.ಆಗಲೂ ಬಯಸುವುದಿಲ್ಲ. ನಿಜವಾದ ಸಮಸ್ಯೆಗಳ ಮೇಲೆ ಗಮನ ಹರಿಸುವುದರ ಬದಲು ಜನರನ್ನು ಕೋಮುವಾದದ ಆಧಾರದ ಮೇಲೆ ವಿಭಜಿಸುವ ಇಂತಹ ಜನಗಳ ಮಾತುಗಳನ್ನು ಕೇಳುತ್ತಾ ಹೋದರೆ, ನಾವು ಖಂಡಿತವಾಗಿಯೂ ಹಿಂದೂ ಅಲ್ಲ ಖಾಯಂ ಹಿಂದುಳಿದ ರಾಷ್ಟ್ರವಾಗುತ್ತೇವೆ ಎಂದು ತಮ್ಮ ಮನದ ಮಾತುಗಳನ್ನು ಹಂಚಿಕೊಂಡಿದ್ದರು.
ಇದನ್ನೂ ನೋಡಿ: ಡಿಸೆಂಬರ್ 10| ಮಾನವ ಹಕ್ಕುಗಳ ದಿನ ; ನಮ್ಮ ದೈನಂದಿನ ಹಕ್ಕುಗಳು Janashakthi Media
