ಬೆಂಗಳೂರು : ಸಿಎಂ ಸಚಿವಾಲಯದ ಅಧಿಕಾರಿ ಎಂದು ವಸೂಲಿಗಿಳಿದಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಉದಯಪ್ರಭು ಬಂಧಿತ ಆರೋಪಿ. ಮೂಲತಃ ಚಿಕ್ಕಬಳ್ಳಾಪುರದವನಾಗಿರುವ ಈತ, ಬೆಂಗಳೂರಿನ ಮೈಲಸಂದ್ರದ ಬಳಿ ವಾಸವಿದ್ದ. ಬಿನ್ನಿಮಿಲ್ ಬಳಿ ಬಾಳೆಕಾಯಿ ಮಂಡಿ ನಡೆಸುತ್ತಿದ್ದ ಉದಯಪ್ರಭು, ಐಎಎಸ್, ಐಪಿಎಸ್, ಡಿವೈಎಸ್ಪಿ ಹೀಗೆ ಎಲ್ಲಾ ಇಲಾಖೆಯಲ್ಲೂ ವರ್ಗಾವಣೆ ಮಾಡಿಸಿಕೊಡಿರುವುದಾಗಿ ಹೇಳಿ ಕೋಟೊ ಕೋಟಿ ವಂಚಿಸುತ್ತಿದ್ದ.
ಜೊತೆಗೆ ಕಾರಿಗೆ ಕರ್ನಾಟಕ ಸರ್ಕಾರ ಎಂಬ ಬೋರ್ಡ್ ಹಾಕಿಕೊಂಡು ಓಡಾಡುತ್ತಿದ್ದ. ಇದರಿಂದ ಅನುಮಾನಗೊಂಡ ಸಿಸಿಬಿ ಪೊಲೀಸರು, ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಈ ವೇಳೆ ಈತನ ವಂಚನೆ ಬಯಲಿಗೆ ಬಂದಿದೆ. ವಿಚಾರಣೆ ವೇಳೆ ತಾನು ಮಾಜಿ ಮುಖ್ಯಮಂತ್ರಿಯೊಬ್ಬರ ತಂಗಿ ಮಗನ ಸ್ನೇಹಿತ ಎಂದು ಹೇಳಿದ್ದು, ಪೊಲೀಸರು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ. ಆರೋಪಿ ಬಳಸುತ್ತಿದ್ದ ನಕಲಿ ಐಡಿ ಕಾರ್ಡ್, ಒಂದು ಇನೋವಾ ಕಾರು ಹಾಗೂ ಒಂದು ಜಾಗ್ವಾರ್ ಕಾರು ವಶಕ್ಕೆ ಪಡೆಯಲಾಗಿದೆ. ಬಂಧಿತನ ಕಾರಿನಲ್ಲಿದ್ದ 1.20 ಲಕ್ಷ ನಗದು, 3 ಐಫೋನ್, 1 ಮ್ಯಾಕ್ಬುಕ್ ವಶಪಡಿಸಲಾಗಿದೆ.
ಕಮಲ್ ಪಂತ್ ಸ್ಪಷ್ಟನೆ : ಬೆಂಗಳೂರು ಸಿಸಿಬಿ ಪೊಲೀಸರು ಸಿಎಂ ಕಚೇರಿಯ ವಿಶೇಷ ಅಧಿಕಾರಿ ಎಂದು ಹೇಳಿಕೊಳ್ಳುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ. ತನ್ನ ಕಾರುಗಳ ಮೇಲೆ ಸರ್ಕಾರದ ಲಾಂಛನ ಹಾಕಿದ್ದ ಆರೋಪಿ, ಬಂಧಿತ ಆರೋಪಿಯ ಬಳಿ ನಕಲಿ ಐಡಿ ಕಾರ್ಡ್ ಸಹ ಸಿಕ್ಕಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಯಾರಾದರೂ ವಂಚನೆಗೊಳಗಾಗಿದ್ದರೆ ದೂರು ನೀಡಬಹುದು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.