ಸಾಗರ : ಸಾಗರದ ವನಶ್ರೀ ವಸತಿ ಶಾಲೆಯಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ದಲಿತ ವಿದ್ಯಾರ್ಥಿನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಮುಖ್ಯಸ್ಥನ ವಿರುದ್ಧ ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ’ (ಪೋಕ್ಸೋ) ಮತ್ತು ‘ಎಸ್‌ಸಿ, ಎಸ್‌ಟಿ ಸಮುದಾಯಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ’ (ಅಟ್ರಾಸಿಟಿ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಸೊರಬ ತಾಲೂಕಿನ ಶಿವಪುರ ಗ್ರಾಮದ ತೇಜಸ್ವಿನಿ (13) ಸಾಗರದ ವನಶ್ರೀ ವಸತಿ ಶಾಲೆಗೆ ಸೇರಿದ್ದಳು. ಶಾಲೆಗೆ ಸೇರಿದ ಐದು ದಿನಗಳ ಬಳಿಕ ವಿದ್ಯಾರ್ಥಿ ಸಾವಿಗೀಡಾಗಿದ್ದಳು. ಶಾಲೆಯ ಮುಖ್ಯಸ್ಥ, ಆರ್‌ಎಸ್‌ಎಸ್ ಮುಖಂಡ ಮಂಜಪ್ಪ ನೀಡಿದ ಕಿರುಕುಳದಿಂದಾಗಿ ವಿದ್ಯಾರ್ಥಿನಿ ಮೃತಳಾಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಸಂಬಂಧ ಎರಡು ಎಫ್‌ಐಆರ್‌ಗಳು ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ. ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ಮೊದಲ ಎಫ್‌ಐಆರ್ ಇದ್ದರೆ, ಪೋಕ್ಸೋ ಮತ್ತು ಅಟ್ರಾಸಿಟಿಗೆ ಸಂಬಂಧಿಸಿದಂತೆ ಎರಡನೇ ಎಫ್‌ಐಆರ್ ಇದೆ.
ವಸತಿ ಶಾಲೆಯಲ್ಲಿದ್ದ ವಿದ್ಯಾರ್ಥಿನಿಯರು ನೀಡಿರುವ ಹೇಳಿಕೆಗಳನ್ನು ಆಧರಿಸಿ ಮತ್ತು ಸಂತ್ರಸ್ತ ಪೋಷಕರು ನೀಡಿದ ದೂರಿನ ಅನ್ವಯ ಪೊಲೀಸರು ಕ್ರಮ ಜರುಗಿಸಿದ್ದಾರೆ. ಶಾಲೆಯ ಮುಖ್ಯಸ್ಥ ಮಂಜಪ್ಪ ಅಶ್ಲೀಲವಾಗಿ ವರ್ತಿಸುತ್ತಿದ್ದನು, ಹೆಣ್ಣು ಮಕ್ಕಳ ದೇಹದ ಖಾಸಗಿ ಭಾಗಗಳನ್ನು ಮುಟ್ಟುತ್ತಿದ್ದನು, ಅಪ್ಪಿಕೊಳ್ಳುತ್ತಿದ್ದನು, ಅವ್ಯಾಚ್ಯವಾಗಿ ಮಾತನಾಡುತ್ತಿದ್ದನು- ಎಂದು ತಮಗಾದ ಹಿಂಸೆಯನ್ನು ಮಕ್ಕಳು ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : ಸಾಗರ : ವಸತಿ ಶಾಲೆ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು – ಮುಗಿಲು ಮುಟ್ಟಿದ ಪೋಷಕರ ಆಕ್ರಂದನ
ಮಂಜಪ್ಪನ ಮೇಲಿನ ಭಯದಿಂದ ಆರೋಗ್ಯ ಕೆಟ್ಟಿದೆ. ಆಸ್ಪತ್ರೆಗೆ ತೋರಿಸದೇ ತಾನೇ ಮಾತ್ರೆ ಮುಲಾಮು ಕಷಾಯ ಕುಡಿಸಿ ಆಸ್ಪತ್ರೆಗೂ ಸೇರಿಸಿಲ್ಲ. ನಮಗೂ ವಿಚಾರ ತಿಳಿಸದೆ ಕೊನೆ ಗಳಿಗೆಯಲ್ಲಿ, ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ನಮ್ಮ ಮಗಳು ಮೃತಪಟ್ಟಿರುತ್ತಾಳೆ” ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. .
ದೂರಿನ ಅನ್ವಯ ಐಪಿಸಿ ಸೆಕ್ಷನ್ 504, 506, 354(ಎ)(2), ಅಟ್ರಾಸಿಟಿ ಕಾಯ್ದೆಯ ಸೆಕ್ಷನ್ 3(1)(ಡಬ್ಲ್ಯ)(ಐ)(ii), 3(2)(ವಿಎ), ಪೋಕ್ಸೋ ಕಾಯ್ದೆಯ ಸೆಕ್ಷನ್ -8, 12 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಆರ್‌ಎಸ್‌ಎಸ್ ಹಿನ್ನೆಲೆ : ವಿದ್ಯಾಲಯದ ಮುಖ್ಯಸ್ಥ ವನಶ್ರೀ ಮಂಜಪ್ಪ (ಎಚ್.ಪಿ.ಮಂಜಪ್ಪ) ಅವರು ಆರ್‌ಎಸ್‌ಎಸ್ ಹಿನ್ನೆಲೆಯವರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಬಿಜೆಪಿ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ, ಕೋಟ ಶ್ರೀನಿವಾಸ ಪೂಜಾರಿಯವರ ಕೈಯಲ್ಲಿ ಸನ್ಮಾನಗೊಂಡಿದ್ದ ಎಂಬ ಫೋಟೊಗಳು ಓಡಾಡುತ್ತಿವೆ. ಸಂಘದ ಜೊತೆಗಿನ ನಂಟಿದ್ದ ಫೋಟೊಗಳು ಕೂಡಾ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿವೆ.