ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಚಾರ್ಜ್ಶೀಟ್ ಸಲ್ಲಿಕೆ; ಮಾಜಿ ಸಚಿವ ಬಿ.ನಾಗೇಂದ್ರ ಪ್ರಮುಖ ಕಿಂಗ್‌ಪಿನ್

ಬೆಂಗಳೂರು : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ(ಇಡಿ) ಮಂಗಳವಾರ ಶಾಸಕರು/ಸಂಸದರ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ.

ಜೈಲು ಪಾಲಾಗಿರುವ ಮಾಜಿ ಸಚಿವ ಬಿ.ನಾಗೇಂದ್ರ ಅವರನ್ನು ಹಗರಣದ ಮಾಸ್ಟರ್ ಮೈಂಡ್ ಎಂದು ಇಡಿ ತನ್ನ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದೆ ಎಂದು ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯ(ಇ.ಡಿ) ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿದ್ದು,  ಬೆಂಗಳೂರಿನ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. ವಿಶೇಷವೆಂದರೆ ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಎಸ್‌ಐಟಿ ಶಿವಮೊಗ್ಗ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಚಾರ್ಜ್‌ಶೀಟ್  ಮಾಜಿ ಸಚಿವ ಬಿ.ನಾಗೇಂದ್ರ ಹೆಸರನ್ನು ಉಲ್ಲೇಖ ಮಾಡದೆ ಕೇವಲ ಅಧಿಕಾರಿಗಳ ಪಾತ್ರ ಕುರಿತು ಉಲ್ಲೇಖ ಮಾಡಿತ್ತು. ಇದಕ್ಕೆ ತದ್ವಿರುದ್ಧವಾಗಿ ಇ.ಡಿ ಮಾಜಿ ಸಚಿವ ಬಿ.ನಾಗೇಂದ್ರ, ಸತ್ಯನಾರಾಯಣ ವರ್ಮ ಅವರುಗಳೇ ಈ ಪ್ರಕರಣದ ಪ್ರಮುಖ ರೂವಾರಿಗಳೆಂಬುದನ್ನು ಪತ್ತೆ ಮಾಡಿದೆ.ಹೈದರಾಬಾದ್ನಲ್ಲಿದ್ದ ಮಧ್ಯವರ್ತಿ ಸತ್ಯನಾರಾಯಣ ವರ್ಮಾ ಜೊತೆ ನಾಗೇಂದ್ರಗೆ ನಿಕಟ ಸಂಪರ್ಕ ಇತ್ತು. ನಾಗೇಂದ್ರನ ಅಣತಿಯಂತೆಯೇ 187 ಕೋಟಿ ರೂ. ಹಗರಣ ನಡೆದಿದೆ.

21 ಕೋಟಿ ರೂ.ಗಳನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಹಣ ವರ್ಗಾವಣೆ ನಡೆದಿದೆ ಎಂದು ಚಾರ್ಜ್ಶೀಟ್ನಲ್ಲಿ ಜಾರಿನಿರ್ದೇಶನಾಲಯ ಉಲ್ಲೇಖಿಸಿದೆ. ನಾಗೇಂದ್ರ ಅವರ ಸೂಚನೆಯಂತೆಯೇ ಅಕೌಂಟ್ ಓಪನ್ ಮಾಡಲಾಗಿದೆ ಎಂದು ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದನಾಭ್ ಹೇಳಿಕೆ ಕೊಟ್ಟಿದ್ದಾರೆ.

ಶಾಂಗ್ರಿಲಾ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ನಾಗೇಂದ್ರ ಬಂದು-ಹೋಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಇದಿಷ್ಟೇ ಅಲ್ಲ, ಶಾಂಗ್ರಿಲಾ ಹೋಟೆಲ್ನಲ್ಲಿ ಮಹಜರು ಪ್ರಕ್ರಿಯೆ ವೇಳೆ ಅನೇಕ ಸಾಕ್ಷಿಗಳು ದೊರೆತಿವೆ.

ಇದನ್ನು ಓದಿ : ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು; ಸಚಿವ ಎಚ್‌.ಕೆ ಪಾಟೀಲ

ನಾಗೇಂದ್ರ, ಪಿಎ ದೇವೇಂದ್ರಪ್ಪ, ನೆಕ್ಕಂಟಿ ನಾಗರಾಜ್, ನಾಗೇಶ್ವರ್ ರಾವ್ ಸಭೆಯಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ನಾಗೇಂದ್ರ ಸೂಚನೆಯಂತೆಯೇ ಹಗರಣದಲ್ಲಿ ಭಾಗಿ ಎಂದು ಆರೋಪಿಗಳು ಹೇಳಿಕೆಕೊಟ್ಟಿದ್ದಾರೆ. ಹಾಗೇ ಮೃತ ಅಧಿಕಾರಿ ಚಂದ್ರಶೇಖರ್ ಡೆತ್ ನೋಟ್ನಲ್ಲಿ ಸಚಿವ ಎಂಬುದು ಉಲ್ಲೇಖವಾಗಿದೆ.

ನಾಗೇಂದ್ರ ಆಪ್ತ ಹರೀಶ್ಗೆ ಪದನಾಭ್ 25 ಲಕ್ಷ ರೂ. ನೀಡಿರುವುದು ಕೂಡ ಬಯಲಾಗಿದೆ. ಹರೀಶ್ ವಿಚಾರಣೆಯಲ್ಲಿ ನಾಗೇಂದ್ರ ಸೂಚನೆಯಂತೆ ಹಣ ಪಡೆದಿರೋ ಬಗ್ಗೆ ಹೇಳಿಕೆ ಕೊಟ್ಟಿದ್ದಾರೆ. ಇಡಿ ದಾಳಿಯಲ್ಲಿ ಅಕ್ರಮ ಹಣ ವರ್ಗಾವಣೆ ಸಂಬಂಧ ಅನೇಕ ದಾಖಲೆಗಳು ಸಿಕ್ಕಿವೆ.

‘ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ನ ಇ.ತುಕಾರಾಂ ಪರವಾಗಿ ಮತದಾರರನ್ನು ಸೆಳೆಯಲು ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ. ಪ್ರತಿ ಮತಗಟ್ಟೆಯಲ್ಲೂ ಹಣ ಹಂಚಲಾಗಿದೆ ಮತ್ತು ಮತದಾರರಿಗೆ ಹಂಚಲು ಕೋಟ್ಯಂತರ ಮೊತ್ತದ ಮದ್ಯ ಖರೀದಿಸಲಾಗಿದೆ. ಮದ್ಯದಂಗಡಿಯ ಪರವಾನಗಿ ಹೊಂದಿರುವ ನಾಲ್ವರಿಗೆ ಈ ಹಣ ಹೋಗಿದೆ’ ಎಂದು ದೋಷಾರೋಪ ಪಟ್ಟಿ ಉಲ್ಲೇಖಿಸಿದೆ.

ವಾಲ್ಮೀಕಿ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನೇಮಿಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಪೊಲೀಸರು 12 ಆರೋಪಿಗಳ ವಿರುದ್ಧ 3ನೇ ಎಸಿಎಂಎಂ ನ್ಯಾಯಾಲಯದಲ್ಲಿ ಆಗಸ್ಟ್ನಲ್ಲಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದರು. ಈ ದೋಷಾರೋಪಪಟ್ಟಿಯಲ್ಲಿ ಮಾಜಿ ಸಚಿವ ನಾಗೇಂದ್ರ , ಬಸನಗೌಡ ದದ್ದಲ್ ಅವರ ಹೆಸರನ್ನು ಉಲ್ಲೇಖಿಸಿರಲಿಲ್ಲ.

ಸತ್ಯಾರಾಯಣ ವರ್ಮಾ, ಸತ್ಯನಾರಾಯಣ ಇಟ್ಕಾರಿ, ವಾಲ್ಮೀಕಿ ನಿಗಮ ಎಂಡಿ ಪದನಾಭ, ಲೆಕ್ಕಾಧಿಕಾರಿ ಪರಶುರಾಮ, ನೆಕ್ಕುಂಟಿ ನಾಗರಾಜ್, ನಾಗೇಶ್ವರ್, ಸಾಯಿ ತೇಜ ಸೇರಿ 12 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು.

ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಕ್ಕೆ ಸಂಬಂಧಿಸಿದ ಎಂಜಿರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಖಾತೆಯಿಂದ 18 ಖಾತೆಗಳಿಗೆ ಬರೋಬ್ಬರಿ 94.73 ಕೋಟಿ ರೂ. ಅಕ್ರಮವಾಗಿ ವರ್ಗಾವಣೆಯಾಗಿತ್ತು. ಈ ಸಂಬಂಧ ತನಿಖೆ ನಡೆಸಲು ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿತ್ತು.

ಹಗರಣ ಸಂಬಂಧ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ಬಿ. ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಸೇರಿದಂತೆ ಅನೇಕರನ್ನು ಎಸ್‌ಐಟಿ ಬಂಧಿಸಿ ವಿಚಾರಣೆ ನಡೆಸಿತ್ತು.

ನಿಗಮದ ಅಧಿಕಾರಿಗಳ ಪ್ರಕಾರ, ಈ ವಿಚಾರ ಅವರಿಗೆ ಗೊತ್ತಿಲ್ಲವಂತೆ. ಆದರೆ ಆರ್ಥಿಕ ವರ್ಷದ ಕೊನೆದ ದಿನವಾದ ಮಾರ್ಚ್ 31 ರಂದು ವಾಲ್ಮೀಕಿ ನಿಗಮದ ಆಡಳಿತ ಮಂಡಳಿ ಸಭೆ (ಬೋರ್ಡ್ ಮೀಟಿಂಗ್) ನಡೆಸಿ187.33 ಕೋಟಿ ರೂ.ಗಳ ಪೈಕಿ 50 ಕೋಟಿ ರೂ.ಗಳನ್ನು 13 ತಿಂಗಳ ಅವಧಿಗೆ ಠೇವಣಿ ಇಡುವ ಠರಾವು ಮಾಡಲಾಯಿತು.

ಆ ಠೇವಣಿ ಮೊತ್ತದ ಗ್ಯಾರಂಟಿ ಆಧಾರದ ಮೇಲೆ 45 ಕೋಟಿ ರೂ.ಗಳನ್ನು ಅದೇ ಸಭೆಯಲ್ಲಿ ತೆಗೆದುಕೊಳ್ಳಲಾಯಿತು. ಅದೇ ದಿನ 9 ಫಲಾನುಭವಿಗಳು ಹೈದರಾಬಾದ್ನ ರತ್ನಾಕರ ಬ್ಯಾಂಕ್ನಲ್ಲಿ ಖಾತೆ ತೆರೆದರು. ಹೆಸರಿಗೆ 9 ಖಾತೆಗಳನ್ನು ತೆರೆದದ್ದು ದೇಶದ ಪ್ರತಿಷ್ಠಿತ ಕಂಪನಿಗಳೇ ಆದರೂ ವಾಸ್ತವವಾಗಿ ಆ ಕಂಪನಿಗಳ ಹೆಸರಲ್ಲಿ ನಕಲಿ ವ್ಯಕ್ತಿಗಳು ಖಾತೆ ತೆರೆದಿದ್ದರೆಂಬ ಆರೋಪವಿದೆ.

ಯಾರಿಗೆ ಎಷ್ಟು ವರ್ಗಾವಣೆ?:
ಸಿಸ್ಟಮ್ ಸರ್ವಿಸ್ ಕಂಪನಿ: 4.55 ಕೋಟಿ
ರಾಮ್ ಎಂಟರ್ಪ್ರೈಸಸ್: 5.05 ಕೋಟಿ
ಸ್ಕಿಲ್ ಮ್ಯಾಪ್ ಟ್ರೈನಿಂಗ್ ಸರ್ವಿಸಸ್: 4.84 ಕೋಟಿ
ಸ್ಯಾಪ್ ಡಿಸೈನ್ ಪ್ರೈ.ಲಿ: 5.15 ಕೋಟಿ
ಜಿ ಎನ್ ಇಂಡಸ್ಟ್ರೀಸ್: 4.42 ಕೋಟಿ
ನೋವೆಲ್ ಸೆಕ್ಯೂರಿಟಿ ಸರ್ವಿಸಸ್: 4.56 ಕೋಟಿ
ಸುಜಲ್ ಎಂಟರ್ಪ್ರೈಸಸ್: 5.63 ಕೋಟಿ
ಗ್ರ್ಯಾಬ್ ಎ ಗ್ರಬ್ ಕಂಪನಿ: 5.88 ಕೋಟಿ
ಅಕಾರ್ಡ್ ಬ್ಯುಸಿನೆಸ್ ಸರ್ವಿಸಸ್: 5.46 ಕೋಟಿ
ಹ್ಯಾಪಿಯೆಸ್ಟ್ ಮೈಂಡ್‌್ಸ ಟೆಕ್ನಾಲಜಿ: 4.53 ಕೋಟಿ
ಮನ್ಹು ಎಂಟರ್ಪ್ರೈಸಸ್: 5.10 ಕೋಟಿ

ಇದನ್ನು ನೋಡಿ : ಕೆಇಎ ಪರೀಕ್ಷೆ ಮುಂದೂಡಿ – ಪರೀಕ್ಷಾರ್ಥಿಗಳ ಆಗ್ರಹJanashakthi Media

Donate Janashakthi Media

Leave a Reply

Your email address will not be published. Required fields are marked *