ವಕೀಲರ ನಡಿಗೆ ರೈತರ ಕಡೆಗೆ ಕಾರ್ಯಕ್ರಮದ ಮೂಲಕ ರೈತರಿಗೆ ಬೆಂಬಲ
ಬೆಂಗಳೂರು, ಫೆ.12 : ದೆಹಲಿಯಲ್ಲಿ ನಡೆಯುತ್ತಿರುವ ರೈತರ ಐತಿಹಾಸಿಕ ಹೋರಾಟ ಬೆಂಬಲಿಸಿ ಸಮಾನ ಮನಸ್ಕ ವಕೀಲರು “ವಕೀಲರ ನಡಿಗೆ ರೈತರ ಕಡೆಗೆ” ಕಾರ್ಯಕ್ರಮ ನಡೆಸುವ ಮೂಲಕ ರೈತರಿಗೆ ಬೆಂಬಲವನ್ನು ನೀಡಿದ್ದಾರೆ.
ಕೇಂದ್ರದ ಬಿ.ಜೆ.ಪಿ ನೇತೃತ್ವದ ಮೋದಿ ಸರ್ಕಾರ ರೂಪಿಸಿರುವ ಕೃಷಿ ವಿರೋಧಿ, ರೈತ ವಿರೋಧಿ ಕಾನೂನುಗಳ ವಾಪಾಸ್ಸಾತಿಗಾಗಿ, ರೈತರ ಹೋರಾಟವನ್ನು ಬೆಂಬಲಿಸಿ ಇಂದು ಬೆಂಗಳೂರಿನ ಸಿವಿಲ್ ಕೋರ್ಟ್ ಆವರಣದಿಂದ ಸಾಂಕೇತಿಕ ಪ್ರತಿಭಟನೆಯನ್ನು ಪ್ರಾರಂಭಿಸಿ ಕರ್ನಾಟಕ ಉಚ್ಛ ನ್ಯಾಯಾಲಯದ ವರೆಗೆ ಸಾಗಿ ಅಲ್ಲಿ ಮಾನವ ಸರಪಳಿ ನಿರ್ಮಿಸುವ ಮುಖೇನ ಅನ್ನದಾತನೊಂದಿಗೆ ವಕೀಲ ಸಮುದಾಯವಿದೆ ಎಂಬ ಘೋಷಣೆಗಳನ್ನು ಮೊಳಗಿಸಿದರು.
ಇದನ್ನೂ ಓದಿ : ರೈತರ ನಿರಂತರ ಪ್ರತಿಭಟನೆಗೆ ವಕೀಲರ ಸಾಥ್
ಕೋವಿಡ್-19 ನಿಂದ ಜನ ಪರದಾಡುತ್ತಿರುವ ಸಂದರ್ಭದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯಾವುದೇ ಚರ್ಚೆ, ವಿಮರ್ಶೆಗಳಿಗೆ, ಅವಕಾಶ ನೀಡದೇ ಜನ ವಿಭಾಗದ ವಿರೋಧವನ್ನು ಲೆಕ್ಕಿಸದೇ ಕಾರ್ಪೊರೇಟ್ ಕಂಪನಿಗಳ ಪರವಾದಂತಹ, ರೈತ-ಕಾರ್ಮಿಕ-ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿವೆ. ಈ ಕಾಯ್ದೆಗಳು ಜಾರಿಯಾದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಅಸ್ಥಿರಗೊಂಡು, ಇಡೀ ದೇಶದ ಜನ ಸಾಮಾನ್ಯರ ಬದುಕಿನ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ವಕೀಲ ವೃತ್ತಿಗೂ ಪೆಟ್ಟು ಬೀಳಲಿದೆ. ಇಂತಹ ಜನವಿರೋಧಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ರೈತ ಮತ್ತು ಜನ ವಿಭಾಗಗಳ ಸಮರಧೀರ ಐತಿಹಾಸಿಕ ಹೋರಾಟ ನಡೆಯುತ್ತಿದ್ದು, ಸದರಿ ಹೋರಾಟವನ್ನು ಹತ್ತಿಕ್ಕಲು ಕೇಂದ್ರ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ಧೋರಣೆಗಳನ್ನು ಅನುಸರಿಸುತ್ತಿದೆ. ರೈತ ವಿರೋಧಿ ಜನ ವಿರೋಧಿ ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂಪಡೆಯಬೇಕೆಂದು ವಕೀಲರು ಆಗ್ರಹಿಸಿದರು.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ದೇಶಾದ್ಯಂತ ಇಂದು ರೈತ ಸಮುದಾಯವು ತನ್ನ ಒಕ್ಕೊರಲ ಆಗ್ರಹದಿಂದ ಕೇಂದ್ರ ಸರ್ಕಾರದ ಕೃಷಿ ವಿರೋಧಿ ನೀತಿಗಳನ್ನು ಪ್ರತಿಭಟಿಸುತ್ತಾ ಬಂದಿದೆ. ಇದಕ್ಕೆ ಮಣಿಯದ ಕೇಂದ್ರ ಸರ್ಕಾರವು ತನ್ನ ಮೊಂಡುತನವನ್ನು ಪ್ರದರ್ಶಿಸುತ್ತಾ ಹಾರಿಕೆಯ ಉತ್ತರಗಳೊಂದಿಗೆ ಅನ್ನದಾತನ ಪ್ರತಿಭಟನೆಯನ್ನು ಕಡೆಗಣಿಸುತ್ತಾ ಬಂದಿದೆ. ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಖಂಡಿಸಿ ಹಾಗೂ ಈ ಕೂಡಲೇ ರೈತ ವಿರೋಧಿ ಕೃಷಿ ಕಾಯ್ದೆಗಳ ವಾಪಸ್ಸಾತಿಗೆ ಸಮಾನ ಮನಸ್ಕ ವಕೀಲರು ಆಗ್ರಹಿಸಿದರು.
ಇದನ್ನೂ ಓದಿ : ರೈತರ ಹೋರಾಟ ಬೆಂಬಲಿಸಿ ಫೆ 12 ರಂದು ವಕೀಲರ ನಡಿಗೆ
ಈ ಹೋರಾಟದಲ್ಲಿ ಹಿರಿಯ ವಕೀಲ ಎಸ್ ಶಂಕರಪ್ಪ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರಾದ ಕಾಂತರಾಜು ಹೆಚ್, ಮಾಜಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೊನ್ನಣ್ಣ, ಹಿರಿಯ ವಕೀಲರಾದ ಬಾಲನ್, ಎ.ಐ.ಎಲ್.ಯು ನ ಜಿಲ್ಲಾಧ್ಯಕ್ಷರಾದ ಹರೀಂದ್ರ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ, ಕಾರ್ಯದರ್ಶಿ ಗಂಗಾಧರಯ್ಯ, ರಾಜ್ಯ ವಕೀಲರ ಪರಿಷತ್ ಸದಸ್ಯ ಶಿವಕುಮಾರ್ ವಕೀಲರಾದ ಟಿ.ಎನ್. ಶಿವಾರೆಡ್ಡಿ, ಶಿವಶಂಕ್ರಪ್ಪ, ಹುಳ್ಳಿ ಉಮೇಶ್, ಶರಣಬಸವ ಮರದ್, ಕಾನೂನು ವಿದ್ಯಾರ್ಥಿಗಳಾದ ಶಿವಕುಮಾರ್ ಮ್ಯಾಗಳಮನಿ, ಭೀಮನಗೌಡ ಸುಂಕೇಶ್ವರಾಳ ಮುಂತಾದವರು ಭಾಗವಹಿಸಿದ್ದರು.