ಬೆಂಗಳೂರು: ವಕೀಲರ ಮೇಲೆ ಪೊಲೀಸರು, ಕೆಲ ಕಕ್ಷಿದಾರರು, ಭೂ ಮಾಫಿಯಾದವರು, ಗೂಂಡಾಗಳು ಸೇರಿದಂತೆ ಕೆಲವರು ಹಲ್ಲೆಗೆ ಮುಂದಾಗುತ್ತಿದ್ದಾರೆ. ಇದರಿಂದ ವಕೀಲರಿಗೆ ರಕ್ಷಣೆ ಇಲ್ಲವಾಗಿದೆ. ಜೀವದ ಹಂಗು ತೊರೆದು ವಕೀಲರು ಕಾರ್ಯನಿರ್ವಹಿಸುತ್ತಿದ್ದರು ರಕ್ಷಣೆ ಇಲ್ಲವಾಗಿದೆ. ಹಾಗಾಗಿ ವಕೀಲರಿಗಾಗಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿ ಅಖಿಲ ಭಾರತ ವಕೀಲರ ಒಕ್ಕೂಟ(ಎಐಎಲ್‌ಯು) ವತಿಯಿಂದ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಬೆಂಗಳೂರು ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಿಂದ ವಿಧಾನಸೌಧ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡರು. ಆದರೆ, ನಗರದ ಮಧ್ಯಭಾಗ, ವಿಧಾನಸೌಧದಿಂದ ಕೂಗಳತೆ ದೂರದಲ್ಲಿರುವ ಕೆ.ಆರ್. ವೃತ್ತದಲ್ಲಿಯೇ ಪ್ರತಿಭಟನಾಕಾರರನ್ನು ಪೊಲೀಸರು ತಡೆದರು. ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿದ್ದ ವಕೀಲರು ರಸ್ತೆಯಲ್ಲಿಯೇ ಧರಣಿ ಕುಳಿತರು.
ಇತ್ತೀಚಿನ ವರ್ಷಗಳಲ್ಲಿ ವಕೀಲರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿವೆ. ಪೋಲೀಸರಿಂದ, ಬಿಲ್ಡರ್ ಗಳಿಂದ ಹಾಗೂ ಇತರರಿಂದ ಈ ಹಲ್ಲೆಗಳು ನಡೆಯುತ್ತಿದೆ. ಅಲ್ಲದೇ ವಕೀಲರ ಕೊಲೆಗಳೂ ಸಹ ನಡೆದಿದ್ದು, ರಕ್ಷಣೆ ಇಲ್ಲದಂತಾಗಿದೆ. ಕಕ್ಷಿದಾರರ ಪರವಾಗಿ ನ್ಯಾಯಾಲಯಗಳಲ್ಲಿ ಪ್ರತಿನಿಧಿಸುತ್ತಾ ಪ್ರಕರಣಗಳ ಸಂಬಂಧ ಪೋಲೀಸ್ ಠಾಣೆ ಸೇರಿದಂತೆ ವಿವಿಧೆಡೆ ಹೋಗಬೇಕಾಗುತ್ತದೆ. ಅಂತಹ ಸಂದರ್ಭಗಳಲ್ಲಿ ವಕೀಲರ ಮೇಲೆ ಹಲ್ಲೆಗಳು ಹಾಗೂ ಕೊಲೆ ಪ್ರಯತ್ನಗಳು ನಡೆದಿವೆ. ಇದರಿಂದ ರಕ್ಷಣೆ ಬೇಕೆಂದು ಆಗ್ರಹಿಸಿದರು.
ಕಳೆದ ಡಿಸೆಂಬರ್ ನಲ್ಲಿ ನಡೆದ ಬೆಳಗಾವಿ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿಯೂ ವಿಧಾನಸೌಧ ಮುತ್ತಿಗೆ ಹಾಕಲಾಯಿತು. ಆ ವೇಳೆ ಪ್ರತಿಭಟನಾ ಧರಣಿ ಸಭೆಗೆ ಆಗಮಿಸಿದ ಕಂದಾಯ ಸಚಿವ ಆರ್ ಅಶೋಕ್, ನಿಮ್ಮ ಬೇಡಿಕೆಗಳನ್ನು ಚರ್ಚಿಸಲಾಗುವುದು. ಇದೇ ಅಧಿವೇಶನದಲ್ಲಿ ಕಾಯ್ದೆ ಜಾರಿ ಸಂಬಂಧ ಚರ್ಚೆಗೆ ತೆಗೆದುಕೊಳ್ಳಲಾಗುವುದು, ಹೋರಾಟವನ್ನು ಹಿಂಪಡೆಯಿರಿ ಎಂದೆಲ್ಲಾ ಭರವಸೆ ನೀಡದರು. ಆದರೆ ಕಾಯ್ದೆ ಜಾರಿಗೆ ಪ್ರಸ್ತಾಪವೇ ಆಗಲಿಲ್ಲ. ಪ್ರಸಕ್ತ ಬಜೆಟ್ ಅಧಿವೇಶನದಲ್ಲಾದರೂ ಕಾಯ್ದೆ ಜಾರಿಗೆ ಮುಂದಾಗಬೇಕೆಂದು ವಕೀಲರ ಸಂಘ ಆಗ್ರಹಿಸಿದೆ.
ಪ್ರತಿಭಟನಾ ಸ್ಥಳಕ್ಕೆ ಸರ್ಕಾರದಿಂದ ಯಾವ ಪ್ರತಿನಿಧಿಗಳೂ ಬಂದು ವಕೀಲರ ಬೇಡಿಕೆ ಪಟ್ಟಿಯನ್ನು ಪಡೆಯದೇ ಇರುವುದು ವಕೀಲರ ಆಕ್ರೋಶಕ್ಕೆ ಕಾರಣವಾಯಿತು. ವಕೀಲರ ವಿರೋಧಿ ರಾಜ್ಯ ಬಿ.ಜೆಪಿ ಸರ್ಕಾರಕ್ಕೆ ಧಿಕ್ಕಾರ ಕೂಗಿ ವಕೀಲರು ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಹೋರಾಟ ಸ್ಥಳಕ್ಕೆ ಆಗಮಿಸಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ ಸುಬ್ಬರೆಡ್ಡಿ, ರಾಜ್ಯ ಬಿಜೆಪಿ ಸರಕಾರದ ಏಜೆಂಟರಂತೆ ಇಡೀ ಹೋರಾಟವನ್ನು ಒಡೆಯುವ ಷಡ್ಯಂತ್ರ ಮಾಡಿದ್ದಾರೆ. ಅಲ್ಲದೆ, ನ್ಯಾಯಯುತವಾಗಿ ಹೋರಾಟ ನಡೆಸುತ್ತಿದ್ದ ವಕೀಲರನ್ನು ದಾರಿ ತಪ್ಪಿಸುವ ಕೆಲಸ ಮಾಡಿ, ಬೆಂಗಳೂರು ವಕೀಲ ಸಂಘದ ಅಧ್ಯಕ್ಷ ಹುದ್ದೆಗೆ ಧಕ್ಕೆ ತಂದಿದ್ದು ಇಡೀ ರಾಜ್ಯದ ವಕೀಲ ಸಮುದಾಯಕ್ಕೆ ಅನ್ಯಾಯ ಎಸಗಿದ್ದಾರೆ ಎಂದು ಪ್ರತಿಭಟನಾಕಾರರು ವಿವೇಕ ಸುಬ್ಬರೆಡ್ಡಿ ವಿರುದ್ಧ ಘೋಷಣೆ ಕೂಗಿ ಅವರನ್ನು ಸ್ಥಳದಿಂದ ಹೊರ ಕಳುಹಿಸಿದರು.
ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗಾಗಿ ಇಡೀ ರಾಜ್ಯದ ವಕೀಲ ಸಮುದಾಯ ದೊಡ್ಡ ಮಟ್ಟದ ಧ್ವನಿ ಎತ್ತಬೇಕು ತಮ್ಮ ಸ್ವಾರ್ಥ ಸಾಧನೆಗಾಗಿ ವಕೀಲರ ಒಗ್ಗಟ್ಟು ಮುರಿಯುವ ಹೇಳಿಕೆಗಳಿಗೆ ಬೆಲೆ ಕೊಡದಿರಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಬೆಂಗಳೂರು ವಕೀಲರ ಸಂಘ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಕೀಲರು ಈ ಹೋರಾಟದಲ್ಲಿ ಭಾಗವಹಿಸಿದ್ದರು. ಈ ವೇಳೆ ಪೊಲೀಸರು ಹಾಗೂ ವಕೀಲರ ನಡುವೆ ಘರ್ಷಣೆ ಸಂಭವಿಸಿದೆ. ಪ್ರತಿಭಟನಾ ನಿರತ ವಕೀಲರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರತಿಭಟನೆಯಲ್ಲಿ ಎಐಎಲ್‌ಯು ದಕ್ಷಿಣ ಭಾರತ ಸಂಚಾಲಕ ರಾಮಚಂದ್ರರೆಡ್ಡಿ, ರಾಜ್ಯ ಅಧ್ಯಕ್ಷ ಎಸ್ ಶಂಕರಪ್ಪ, ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ರಾಜ್ಯ ಮುಖಂಡ ಶರಣ ಬಸವ ಮರದ್, ರಾಜ್ಯ ಉಪಾಧ್ಯಕ್ಷ ಶಿವಶಂಕರಪ್ಪ, ಬೆಂಗಳೂರು ಜಿಲ್ಲಾ ಅಧ್ಯಕ್ಷ ಕೆ ಎನ್ ಹರೀಂದ್ರ, ರಾಜ್ಯ ಸಮಿತಿ ಸದಸ್ಯ ಹುಳ್ಳಿ ಉಮೇಶ್, ನಾರಾಯಣ ಕಾಳೆ(ಹಾವೇರಿ), ಅಮ್ಶದ್(ಹಾಸನ), ಬಸವರಾಜ ಕೋರಿಮಠ(ಹುಬ್ಬಳ್ಳಿ), ಸತೀಶ್ (ಕೋಲಾರ), ನಾಗರಾಜ್ (ಹೊಸಕೋಟೆ), ಕರುಣಾನಿಧಿ(ಹೊಸಪೇಟೆ), ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯ ಕೆ. ಕೋಟೇಶ್ವರ್ ರಾವ್ ಭಾಗವಹಿಸಿದ್ದರು.
ಇಲ್ಲಿ ಕ್ಲಿಕ್ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್ ಗುಂಪು ಸೇರಲು ಈ ಲಿಂಕ್ ಕ್ಲಿಕ್ ಮಾಡಿ