ಹೈದರಾಬಾದ್ : ದೇಶದಾದ್ಯಂತ ಸಾಕಷ್ಟು ಚರ್ಚೆ ಆಕ್ರೋಶಕ್ಕೆ ಕಾರಣವಾಗಿದ್ದ ‘ವಾಕಪಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ’ದ ತೀರ್ಪು 16 ವರ್ಷದ ನಂತರ ಹೊರಬಿದ್ದಿದ್ದು, ಆಂಧ್ರಪ್ರದೇಶದ ವಿಶೇಷ ನ್ಯಾಯಾಲಯ ‘ಅಸಮರ್ಪಕ ತನಿಖೆ’ ಕಾರಣ ನೀಡಿ ಆರೋಪಿಗಳಾದ 21 ಪೊಲೀಸರನ್ನು ಖುಲಾಸೆಗೊಳಿಸಿದೆ.
ಕೊಂಡ್ ಬುಡಕಟ್ಟು ಸಮುದಾಯಕ್ಕೆ ಸೇರಿದ 11 ಮಹಿಳೆಯರ ಮೇಲೆ 21 ಪೊಲೀಸ್ ಸಿಬ್ಬಂದಿ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪವು 2007ರಲ್ಲಿ ಆಂಧ್ರಪ್ರದೇಶದ ಸೀತಾರಾಮ ರಾಜು ಜಿಲ್ಲೆಯ ಅಲ್ಲೂರು ಗ್ರಾಮದಲ್ಲಿ ಕೇಳಿಬಂದಿತ್ತು, ಆದಿವಾಸಿ ಬುಡಕಟ್ಟು ಜನಾಂಗದ ಮೇಲೆ ಅತ್ಯಾಚಾರ ನಡೆಯುತ್ತಿರುವುದರ ಬಗ್ಗೆ ಹಲವು ಪ್ರಗತಿಪರರು ಆಕ್ರೋಶ ವ್ಯಕ್ತಪಡಿಸಿದ್ದರು. ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಆರೋಪಿಗಳಾದ 21 ಪೊಲೀಸ್ ಸಿಬ್ಬಂದಿಯ ಮೇಲೆ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ : ಹತ್ರಾಸ್ ಅತ್ಯಾಚಾರ ಪ್ರಕರಣ : ಒಬ್ಬ ದೋಷಿ, ಉಳಿದ ಮೂವರು ದೋಷ ಮುಕ್ತ ಎಂದ ನ್ಯಾಯಾಲಯ
ಕೋಬಿಂಗ್ ಕಾರ್ಯಾಚರಣೆ ಸಲುವಾಗಿ ‘ಗ್ರೇಹೌಂಡ್ಸ್’ ಎಂಬ ವಿಶೇಷ ಪೊಲೀಸ್ ಪಡೆ ಆಗಸ್ಟ್ 20, 2007ರಂದು ವಾಕಪಲ್ಲಿ ಕುಗ್ರಾಮದಲ್ಲಿ ಟಿಕಾಣಿ ಹೂಡಿತ್ತು. ಈ ವೇಳೆ 11 ಬುಡಕಟ್ಟು ಮಹಿಳೆಯರ ಮೇಲೆ ಪೊಲೀಸರಿಂದ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. 2018ರಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು, ಇಬ್ಬರು ತನಿಖಾಧಿಕಾರಿಗಳು ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ಆದರೆ ನಿಷ್ಪಕ್ಷಪಾತ ತನಿಖೆ ನಡೆಸುವಲ್ಲಿ ಈ ಇಬ್ಬರು ತನಿಖಾಧಿಕಾರಿಗಳು ವಿಫಲರಾಗಿದ್ದು , ಇದೇ ಕಾರಣ ನೀಡಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ(ವಿಶೇಷ ನ್ಯಾಯಾಲಯ) ಗುರುವಾರ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಇದೇ ವೇಳೆ ಅತ್ಯಾಚಾರ ಸಂತ್ರಸ್ತರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ (ಡಿಎಲ್‌ಎಸ್‌ಎ) ಮೂಲಕ ಪರಿಹಾರವನ್ನು ಪಾವತಿಸಲು ನ್ಯಾಯಾಲಯ ಆದೇಶಿಸಿದೆ.
‘ವಾಕಪಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಇದುವರೆಗೂ ಯಾವೊಬ್ಬ ಆರೋಪಿಯು ಬಂಧಿತನಾಗಿಲ್ಲ. 2007ರಲ್ಲಿ ನಡೆದ ಈ ಘಟನೆಯಲ್ಲಿ 11 ಬುಡಕಟ್ಟು ಮಹಿಳೆಯರ ಮೇಲೆ ಅತ್ಯಾಚಾರವಾಗಿತ್ತು. ಎಲ್ಲ 21 ಪೊಲೀಸರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಕೆಲವರು ನಿವೃತ್ತಿಯಾದರೆ, ಕೆಲವರು ಮೃತರಾಗಿದ್ದಾರೆ.ವಾಕಪಲ್ಲಿ ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶ ನೀಡಿರುವುದನ್ನು ನೋಡಿದರೆ ಆರೋಪಿಗಳ ಹೇಳಿಕೆಗಳಲ್ಲಿ ನ್ಯಾಯಾಲಯ ನಂಬಿಕೆ ಇಟ್ಟಿದೆ ಎಂಬಂತೆ ಕಾಣುತ್ತದೆ’ ಎಂದು ಮಾನವ ಹಕ್ಕುಗಳ ವೇದಿಕೆ(ಎಚ್‌ಆರ್‌ಎಫ್) ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.