ಯಲಬುರ್ಗಾ : ಯಲಬುರ್ಗಾ ತಾಲ್ಲೂಕಿನ ವಜ್ರಬಂಡಿ ಗ್ರಾಮದಲ್ಲಿನ ಸರ್ವೆ 17 ರ ಜಮೀನನ್ನು ಪ್ರಭಾವಿ ಬಿಜೆಪಿ ನಾಯಕರೊಬ್ಬರು ಅಕ್ರಮವಾಗಿ ಖರೀದಿ ಮಾಡಿರುವ ಆರೋಪ ಕೇಳಿ ಬಂದಿದೆ.
ಯಲಬುರ್ಗಾ ಕ್ಷೇತ್ರದ ಶಾಸಕ, ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ ರವರ ಅಳಿಯ ಬಸವರಾಜ ರಾಜೂರು ಅಲಿಯಾಸ್ ಗೌರಾ ಬಸವರಾಜ್ ಅಕ್ರಮವಾಗಿ ಆಸ್ತಿ ಖರೀದಿಸಿದ್ದಾರೆ ಎಂದು ಜಮೀನು ಉಳಿಮೆ ಮಾಡುತ್ತಿರುವ ದಲಿತ ಕುಟುಂಬಗಳು ಆರೋಪಿಸಿವೆ. ಕಳೆದ 40 ವರ್ಷದಿಂದ ಸಾಗುವಳಿ ಮಾಡುತ್ತಿರುವ ಹನಮಪ್ಪ ತಂದಿ ಕಳಕಪ್ಪ ಮದ್ಲೂರು ಎನ್ನುವವರು ಕರ್ನಾಟಕ ರಾಜ್ಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ ಆಯೋಗಕ್ಕೆ ದೂರು ಸಲ್ಲಿದ್ದಾರೆ.
ಕಾಂತರಾಜ್ ಆಚಾರ್ ಎಂಬುವವರ ಹೆಸರಿನಲ್ಲಿದ್ದ 18 ಎಕರೆ, 27 ಗುಂಟೆ ಇನಾಮು ಭೂಮಿಯನ್ನು 1984 ರಲ್ಲಿ ಹನುಮ್ಮಪ್ಪನ ತಂದೆ ಕಳಕಪ್ಪರವರು 2300 ರೂ ಗೆ ನೀಡಿ, ಜಮೀನನ್ನು ಖರೀದಿಸಿದ್ದಾರೆ. 1984 ರಿಂದ ಇಲ್ಲಿಯವರೆಗೆ ಸುಮಾರು 37 ವರ್ಷಗಳ ಕಾಲ ಇವರು ಸಾಗುವಳಿ ಮಾಡಿದ್ದಲ್ಲದೆ, ಹೊಲದ ವಾರ್ಷಿಕ ಹಪ್ತಾಹಣವನ್ನು ಕಟ್ಟುತ್ತಾ ಬಂದಿದ್ದಾರೆ. ಅನಕ್ಷರಸ್ಥರಾಗಿದ್ದ ಕಾರಣ ಈ ಜಮೀನನ್ನು ಇವರ ಹೆಸರಿಗೆ ಮಾಡಿಕೊಂಡಿಲ್ಲ. ಇದನ್ನೆ ಬಂಡವಾಳ ಮಾಡಿಕೊಂಡಿರುವ ಸಚಿವರ ಅಳಿಯ ಗೌರಾ ಬಸವರಾಜ ನಕಲಿ ದಾಖಲೆಗಳನ್ನು ಸೃಷ್ಟಿಸಿ ಈ ಜಮೀನನ್ನು ಖರೀದಿ ಮಾಡಿದ್ದಾರೆ. ಆ ಮೂಲಕ ದಲಿತ ಕುಟುಂಬವನ್ನು ಬೀದಿಪಾಲು ಮಾಡಿವೆ ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ ಬೊಮ್ಮನಾಳ ಆರೋಪಿಸಿದ್ದಾರೆ.
ಸಾಗುವಳಿದಾರ ಹನುಮಪ್ಪ ಜನಶಕ್ತಿ ಮೀಡಿಯಾ ಜೊತೆ ಮಾತನಾಡಿ “ನಾವು ಅನಕ್ಷರಸ್ತರು, ಪರಿಶಿಷ್ಟ ಪಂಗಡಕ್ಕೆ ಸೇರಿದವರು” ಎಂಬ ಕಾರಣಕ್ಕಾಗಿ, ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. 40 ವರ್ಷದಿಂದ ಉಳುಮೆ ಮಾಡಿಕೊಂಡು ಬಂದಿರುವ ಭೈಮಿಯನ್ನು ನಮ್ಮಿಂದ ಹೇಗೆ ಕಿತ್ತುಕೊಳ್ಳುತ್ತೀರಿ ಎಂದು ಸಚಿವರ ಅಳಿಯನನ್ನು ಪ್ರಶ್ನಿಸಿದರೆ ” ರಾಜಕೀಯ ಪ್ರಭಾವನ್ನು ಬಳಸಿ ನಮಗೆ ಹಿಂಸೆ ನೀಡುತ್ತಿದ್ದಾರೆ, ಪೋಲೀಸರ ಬಳಿ ಹೋದರೆ ಅವರು ನಮ್ಮನ್ನು ನಿರ್ಲಕ್ಷ್ಯ ಮಾಡುತ್ತಾರೆ, ಸಚಿವರನ್ನು ಎದುರು ಹಾಕಿಕೊಂಡರೆ ನಿಮಗೆ ಊರಲ್ಲಿ ಉಳಿಗಾಲವಿಲ್ಲ ಎಂದು ಹೆದರಿಸುತ್ತಾರೆ, ನಮ್ಮ ಪರವಾಗಿ ಯಾರಾದರು ವಕೀಲರು ಬಂದರೆ ಗೌರಾ ಬಸವರಾಜ್ ಕಡೆಯವರು ಧಮಕಿ ಹಾಕುತ್ತಾರೆ ನಾವು ಯಾರ ಬಳಿ ನ್ಯಾಯ ಕೇಳ ಬೇಕು ಎಂದು ಕಣ್ಣೀರು ಹಾಕಿದರು.
ಕಲ್ಲು ಗಣಿಗಾರಿಕೆ ಲಾಭಿ : ವಜ್ರಬಂಡಿಯಲ್ಲಿ ಹೇರಳವಾಗಿ ಗ್ರ್ಯಾನೈಟ್ ಕಲ್ಲು ಸಿಗುತ್ತಿದೆ. ಆ ಕಾರಣಕ್ಕಾಗಿ ಈ ಭೂಮಿಯನ್ನು ಅಕ್ರಮ ದಾಖಲೆಗಳನ್ನು ಸೃಷ್ಟಿಸಿ ಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಗೌರಾ ಬಸವರಾಜ ಹೆಸರು ಈಗಾಗಲೆ ಕಲ್ಲು ಗಣಿಕಾರಿಕೆಯಲ್ಲಿ ಯಲಬುರ್ಗಾ ಹಾಗೂ ಕುಕನೂರು ಪ್ರದೇಶದಲ್ಲಿ ಹೆಸರು ಮಾಡಿದ ವ್ಯಕ್ತಿ. ತಮ್ಮ ವ್ಯಾಪಾರವನ್ನು ಈ ಭಾಗದಲ್ಲಿ ವಿಸ್ತರಿಸುವ ಕಾರಣದಿಂದ ಹಣದ ಆಸೆ ತೋರಿಸಿ ಈ ರೀತಿ ಭೂಮಿಯನ್ನು ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ರಾಜಕೀಯ ಪ್ರಚೋದನೆ ಕಾರಣದಿಂದ ಈ ರೀತಿ ಕಿತ್ತಾಟ ನಡೆಯುತ್ತಿದೆ. ಸಚಿವರಿಗೆ ಮಸಿ ಬಳಿಯುವ ಉದ್ದೇಶದಿಂದ ಈ ರೀತಿ ಅಪಪ್ರಚಾರ ಮಾಡಲಾಗುತ್ತಿದೆ. ಗೌರಾ ಬಸವರಾಜ ಅಕ್ರಮವಾಗಿ ಜಮೀನು ಪಡೆಯುತ್ತಿದ್ದರೆ ಅವರು ನ್ಯಾಯಾಲಯದ ಮೊರೆ ಹೋಗಬಹುದು ಎಂದು ಹೆಸರು ಹೇಳಲಿಚ್ಚಿಸದ ಸಚಿವರ ಬೆಂಬಲಿಗರೊಬ್ಬರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಖರೀದಿ ಮಾಡಿರುವ ಜಮೀನನ್ನು ಪಟ್ಟಾ ಮಾಡಿಸಿಕೊಂಡಿಲ್ಲ ಎಂಬ ಕಾರಣಕ್ಕಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡುತ್ತಿರುವ ಪ್ರಕರಣವನ್ನು ತನಿಖೆ ಮಾಡಬೇಕಿದೆ. ದಲಿತ ಕುಟುಂಬಕ್ಕೆ ನ್ಯಾಯ ನೀಡಲು ಸ್ವತಃ ಸಚಿವರೆ ಮುಂದಾಗಬೇಕಿದೆ.