ಬೆಂಗಳೂರು: ಭಾನುವಾರ(ಮೇ 08) ಸುರಿದ ಭಾರೀ ಗಾಳಿ ಮಳೆಗೆ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿಯ ಒಂದು ಭಾಗ ಕುಸಿದು ಬಿದ್ದಿದ್ದು, ‘ಇದು 40% ಕಮಿಷನ್ ಪಡೆದು ಮಾಡಿದ ಕಳಪೆ ಕಾಮಗಾರಿಗೆ ಸಾಕ್ಷಿ’ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷವು ‘ಕಳೆದ 2 ತಿಂಗಳ ಹಿಂದೆ ಹೆಚ್‌ಎಸ್‌ಆರ್ ಲೇಔಟ್ ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದ್ದ ವಾಜಪೇಯಿ ಕ್ರೀಡಾಂಗಣದ ಛಾವಣಿ ಒಂದೆರಡು ಮಳೆಗೆ ಕುಸಿದು ಬಿದ್ದಿದೆ, 40% ಕಮಿಷನ್ ತೆಗೆದುಕೊಂಡು 2 ತಿಂಗಳಿಗೆ 4 ಕೋಟಿ ವ್ಯಯಿಸಿ ಮಾಡಿದ ಕಳಪೆ ಕಾಮಗಾರಿಗೆ ಇದು ಸಾಕ್ಷಿ’ ಎಂದು ಟೀಕಿಸಿದೆ.
‘ಬಿಜೆಪಿ 40% ಕಮಿಷನ್ ಸರ್ಕಾರ ಎಂದು ಅವರ ಕಳಪೆ ಕೆಲಸಗಳೇ ಹೇಳುತ್ತಿವೆ’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಬೊಮ್ಮನಹಳ್ಳಿ ವಾರ್ಡ್ ವ್ಯಾಪ್ತಿಯ ಎಚ್‌ಎಸ್ ಆರ್ ಬಡಾವಣೆಯಲ್ಲಿ ಸುಮಾರು 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದ 3.5 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಮಾರ್ಚ್ 1ರಂದು ಮುಖ್ಯಮಂತ್ರಿಗಳು ಉದ್ಘಾಟಿಸಿದ್ದರು.
ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಬಿಬಿಎಂಪಿಯಿಂದ ಸುಮಾರು 3.25 ಕೋಟಿ ವೆಚ್ಚದಲ್ಲಿ ನಾಲ್ಕು ಗ್ಯಾಲರಿ, ವಾಲಿಬಾಲ್, ಕಬಡ್ಡಿ, ಬ್ಯಾಸ್ಕೆಟ್ ಬಾಲ್ ಕೋರ್ಚ್, 10 ಫ್ಲಡ್ ಲೈಟ್‌ಗಳನ್ನು ನಿರ್ಮಿಸಲಾಗಿತ್ತು. ನಾಲ್ಕು ಗ್ಯಾಲರಿಗಳ ಪೈಕಿ ಎರಡು ಗ್ಯಾಲರಿಗಳು ಭಾರೀ ಗಾಳಿ ಮಳೆಗೆ ನೆಲಕ್ಕುರುಳಿದವು. ಕಬ್ಬಿಣದ ಸರಳುಗಳು ಗ್ಯಾಲರಿ ಹಿಂಭಾಗದಲ್ಲಿ ನಿಲ್ಲಿಸಲಾದ ವಾಹನಗಳ ಮೇಲೆ ಬಿದ್ದಿದವು.
ಆರೋಪಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೊಮ್ಮನಹಳ್ಳಿ ವಲಯದ ವಿಶೇಷ ಆಯುಕ್ತ ಡಾ ಕೆ.ಹರೀಶ್ ಕುಮಾರ್ ಅವರು, ಗುತ್ತಿಗೆದಾರ ಎಂ.ನಾಗರಾಜು ಕ್ರೀಡಾಂಗಣದ ಕಾಮಗಾರಿ ಮಾಡಿದ್ದರು. ನಿರ್ವಹಣೆ ಅವಧಿ ಇನ್ನು ಬಾಕಿದೆ. ಹಾಗಾಗಿ, ಗುತ್ತಿಗೆದಾರರಿಂದಲೇ ಗ್ಯಾಲರಿ ಮರು ನಿರ್ಮಾಣ ಮಾಡಿಸಲಾಗುವುದು. ಗ್ಯಾಲರಿ ಮರು ನಿರ್ಮಾಣಕ್ಕೆ 15ರಿಂದ 20 ಲಕ್ಷ ವೆಚ್ಚವಾಗಲಿದೆ. ಬಿಬಿಎಂಪಿ ಮತ್ತು ಸರ್ಕಾರಕ್ಕೆ ಯಾವುದೇ ಹೊರ ಆಗದಂತೆ ಗುತ್ತಿಗೆದಾರರಿಂದಲೇ ಮರು ನಿರ್ಮಾಣ ಮಾಡಿಸಲಾಗುವುದು ಎಂದಿದ್ದಾರೆ.