ಮಂಗಳೂರು: ರಾಜ್ಯದ ವೈದ್ಯರು ಸಾಮಾಜಿಕ ಮಾಧ್ಯಮಗಳಲ್ಲಿ ಮತೀಯ ಅಸಹನೆಯನ್ನು ಹರಡುವಲ್ಲಿ ಸಕ್ರಿಯರಾಗಿರುವುದು ತನ್ನ ಗಮನಕ್ಕೆ ಬಂದಿದೆ, ವೈದ್ಯರು ಯಾರಾದರೂ ಅಂಥ ದುಷ್ಕೃತ್ಯಗಳಲ್ಲಿ ಭಾಗಿಯಾದರೆ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಕರ್ನಾಟಕ ವೈದ್ಯಕೀಯ ಪರಿಷತ್ತು (ಕೆಎಂಸಿ) ಸುತ್ತೋಲೆಯನ್ನು ಹೊರಡಿಸಿ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜನಪ್ರಿಯ ವೈದ್ಯ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಕಳೆದ ಐದಾರು ವರ್ಷಗಳಿಂದ ವೈದ್ಯರ ಖಾಸಗಿ ವಾಟ್ಸಪ್ ಬಳಗಗಳಲ್ಲಿ ವಿಷ ಕಾರುವಿಕೆಯು ಸತತವಾಗಿ ನಡೆಯುತ್ತಿದ್ದಾಗ ಎಲ್ಲರೊಂದಾಗಿ ಚಿಕಿತ್ಸೆ ನೀಡಿದ್ದರೆ ಕೆಎಂಸಿ ಹೀಗೆ ಬಹಿರಂಗವಾಗಿ ಸುತ್ತೋಲೆ ಹೊರಡಿಸುವ ಅಗತ್ಯವೇ ಬರುತ್ತಿರಲಿಲ್ಲ. ತುಂಬಾ ತಡವಾಗಿ ಸುತ್ತೋಲೆ ಹೊರಡಿಸಿ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ ಎಂದರು.
ಉತ್ತರ ಕರ್ನಾಟಕದ ವೈದ್ಯರೊಬ್ಬರು ಮತೀಯ ದ್ವೇಷದ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿದ್ದನ್ನು ವಿರೋಧಿಸಿ ಸಾಮಾಜಿಕ ಕಾರ್ಯಕರ್ತರೊಬ್ಬರು ಕೆಎಂಸಿಗೆ ದೂರು ನೀಡಿದ ನಂತರದಲ್ಲಿ ಸುತ್ತೋಲೆ ಹೊರಡಿಸಲೇ ಬೇಕಾಗಿ ಬಂದಿದೆ. ಅದೂ ಅತ್ಯಂತ ತಡವಾಗಿ ಎಂದಿದ್ದಾರೆ.
ರಾಜ್ಯದ ಅನೇಕ ಹಿರಿಯ ವೈದ್ಯರಿದ್ದ ವಾಟ್ಸಪ್ ಬಳಗವೊಂದರಲ್ಲಿ 2017ರ ಡಿಸೆಂಬರ್ ತಿಂಗಳಿನಲ್ಲಿ, ಬಳಿಕ 2018ರ ಸೆಪ್ಟೆಂಬರ್ ತಿಂಗಳಿನಲ್ಲಿ ಬರೆದದ್ದನ್ನು ಇಲ್ಲಿ ನೆನಪಿಸಬಹುದಾಗಿದೆ. ಇಂಥ ಪ್ರತಿರೋಧವು ಬಳಗದವರಿಗೆ ಇಷ್ಟವಾಗಲಿಲ್ಲ, ವಿಷ ಉಗುಳುವಿಕೆಯೇ ಹೆಚ್ಚು ಸಹ್ಯವಾಯಿತು. ಹೆಚ್ಚಿನ ಬಳಗಗಳಿಂದ ನನ್ನನ್ನು ಹೊರಹಾಕಲಾಯಿತು, ಕೆಲವನ್ನು ನಾನೇ ತೊರೆದೆ ಎಂದು ಶ್ರೀನಿವಾಸ ಕಕ್ಕಿಲ್ಲಾಯ ನೆನಪಿಸಿಕೊಂಡಿದ್ದಾರೆ.
ಹೆಚ್ಚಿನ ವಾಟ್ಸಪ್ ಬಳಗಗಳ ಗತಿಯು ಇಂದು ಇದುವೇ ಆಗಿದೆ. ಅಲ್ಲಿ ಯಾವುದೇ ತಡೆಯಿಲ್ಲದೆ ವಿಷವುಗುಳಿ ಅಭ್ಯಾಸವಾದವರು ಇತರ ಸಾಮಾಜಿಕ ಮಾಧ್ಯಮಗಳಲ್ಲೂ ಹಾಗೆಯೇ ಮಾಡುತ್ತಿರುವುದು ಸಾಮಾನ್ಯವಾಗುತ್ತಿದೆ. ಹಾಗಾಗಿ ವೈದ್ಯರೊಳಗಿರುವ ಮತೀಯ ವಿಷವು ಜನಸಾಮಾನ್ಯರಿಗೂ ಕಾಣಿಸುವಂತಾಗಿದೆ. ಈಗ ಈ ವಿಷವುಗುಳುವಿಕೆಯು ಭೀಕರವಾಗಿದೆ ಎನ್ನುವುದನ್ನು ಕೆಎಂಸಿ ಹೊರಡಿಸಿರುವ ಈ ಸುತ್ತೋಲೆಯಿಂದ ತಿಳಿದುಬರುತ್ತದೆ. ವಿಷವಿಲ್ಲದ ವೈದ್ಯರು ಈಗಲಾದರೂ ಎಚ್ಚೆತ್ತುಕೊಂಡು ಮದ್ದರೆಯದಿದ್ದರೆ ಇದು ವೈದ್ಯವೃತ್ತಿಗೇ ಮಾರಕವಾಗಲಿದೆ ಎಂದರು.