ನವದೆಹಲಿ: ಕೋವಿಡ್ ಲಸಿಕೆಗಳನ್ನು ಉತ್ಪಾದಕರಿಂದ ಖಾಸಗಿ ಆಸ್ಪತ್ರೆಗಳು ನೇರವಾಗಿ ಖರೀದಿಸುವಂತಿಲ್ಲ ಎಂದು ಹೇಳಿರುವ ಕೇಂದ್ರ ಸರ್ಕಾರವು ಲಸಿಕೆಗಳನ್ನು ಕೋವಿನ್ ಆ್ಯಪ್ ಮೂಲಕವೇ ಖರೀದಿ ಮಾಡುವಂತೆ ಸೂಚನೆ ನೀಡಿದೆ.
ಈ ಯೋಜನೆಯು ನಾಳೆ (ಜುಲೈ 1) ಯಿಂದ ದೇಶದಲ್ಲಿ ಜಾರಿಗೆ ಬರಲಿದ್ದು, ಕೋವಿಡ್-19 ಲಸಿಕೆಗಳನ್ನು ಎಲ್ಲಾ ಖಾಸಗಿ ಆಸ್ಪತ್ರೆಗಳು ಕೋವಿನ್‌ನಲ್ಲಿ ಖಾಸಗಿ ಕೋವಿಡ್ ವ್ಯಾಕ್ಸಿನೇಷನ್ ಸೆಂಟರ್ (ಪಿಸಿವಿಸಿ) ಆಗಿ ನೋಂದಾಯಿಸಿಕೊಳ್ಳಬೇಕು. ಈಗಾಗಲೇ ಹೆಚ್ಚಿನ ಆಸ್ಪತ್ರೆಗಳು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡಿವೆ. ಆದಷ್ಟು ಶೀಘ್ರದಲ್ಲಿ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಇದನ್ನು ಓದಿ: ಕೋವಿಡ್ ಲಸಿಕೆ : ಬಿಗಿಯಾಗುತ್ತಿರುವ ಪೇಟೆಂಟ್ ಎಂಬ ನೇಣಿನ ಕುಣಿಕೆ
ಪೋರ್ಟಲ್ ಮೂಲಕ ವಿದ್ಯುನ್ಮಾನವಾಗಿ ಹಣ ಪಾವತಿಸಿದ ನಂತರ ಈ ಲಸಿಕೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಪೂರೈಸಲು ಕೇಂದ್ರ ಆರೋಗ್ಯ ಸಚಿವಾಲಯ ಅನುಕೂಲ ಮಾಡುತ್ತದೆ. ಈ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ.
ಲಸಿಕೆಗಾಗಿ ಸರ್ಕಾರದಿಂದ ಅನುಮೋದನೆ ಪಡೆಯುವ ಅಗತ್ಯವಿಲ್ಲ ಎಂದು ಹೇಳಿರುವ ಆರೋಗ್ಯ ಸಚಿವಾಲಯವು ಖಾಸಗಿ ಆಸ್ಪತ್ರೆಗಳು ಪೋರ್ಟಲ್‌ನಲ್ಲಿ ಖರೀದಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ಯಶಸ್ವಿಯಾಗಿ ಸಲ್ಲಿಸಿದರೆ ಸಾಕು ಎಂದು ಸ್ಪಷ್ಟನೆ ನೀಡಿದೆ.
ನಿಬಂಧನೆಗಳು
ಪಿಸಿವಿಸಿಗಳು ಕೋವಿಶೀಲ್ಡ್ ಅಥವಾ ಕೊವಾಕ್ಸಿನ್‌ಗೆ ನಾಲ್ಕು ಕಂತುಗಳವರೆಗೆ ಆರ್ಡರ್ ಬುಕ್ ಮಾಡಬಹುದು. ಆರ್ಡರ್ ಬುಕ್ ಮಾಡಿದ ಮೂರು ದಿನಗಳಲ್ಲಿ ಹಣ ಪಾವತಿ ಮಾಡಬೇಕು, ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಮೋಡ್ ಮೂಲಕ ಮಾತ್ರ ಪಾವತಿ ಸ್ವೀಕರಿಸಲಾಗುತ್ತದೆ ಎಂಬ ಅಂಶವನ್ನು ಸ್ಪಷ್ಟಪಡಿಸಲಾಗಿದೆ.
ಸೀರಮ್ ಇನ್‌ಸ್ಟಿಟ್ಯೂಟ್‌ನ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ಗೆ ಮಾತ್ರ ಬೇಡಿಕೆಯ ಆರ್ಡರ್ ಬುಕ್ ಮಾಡಿಕೊಳ್ಳಲಿದೆ.