ನವದೆಹಲಿ: ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಗೊಂಡಿದೆ. ಇದರೊಂದಿಗೆ ಈ ರಾಜ್ಯಗಳಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಈಗ ಈ ಐದೂ ರಾಜ್ಯಗಳಲ್ಲಿ ಆರೋಗ್ಯ ಸಚಿವಾಲಯವು ನೀಡಲಿರುವ ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರವನ್ನು ತೆಗೆದುಹಾಕಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಲಸಿಕೆ ಪ್ರಮಾಣಪತ್ರದಿಂದ ಪ್ರಧಾನಿ ಮೋದಿ ಅವರ ಭಾವಚಿತ್ರವನ್ನು ತೆಗೆದುಹಾಕಲು ಕೇಂದ್ರ ಆರೋಗ್ಯ ಸಚಿವಾಲಯವು ಕೋವಿನ್ ಪ್ಲಾಟ್‌ಫಾರ್ಮ್‌ನಲ್ಲಿ ಅಗತ್ಯ ಫಿಲ್ಟರ್‌ಗಳನ್ನು ಹಾಕುತ್ತದೆ.
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಮಣಿಪುರ ಮತ್ತು ಗೋವಾ ವಿಧಾನಸಭಾ ಚುನಾವಣೆಗಳು ಫೆಬ್ರವರಿ 10 ರಿಂದ ಮಾರ್ಚ್ 7 ರವರೆಗೆ ಏಳು ಹಂತಗಳಲ್ಲಿ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ ಎಂದು ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದೆ. ಚುನಾವಣಾ ವೇಳಾಪಟ್ಟಿ ಪ್ರಕಟವಾಗುವುದರೊಂದಿಗೆ ಸರಕಾರ, ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳಿಗೆ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.
“ಮಾದರಿ ನೀತಿ ಸಂಹಿತೆ ಜಾರಿಯಿಂದಾಗಿ, ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಕೋವಿಡ್ -19 ಲಸಿಕೆ ಪ್ರಮಾಣಪತ್ರಗಳಿಂದ ಪ್ರಧಾನಿಯವರ ಭಾವಚಿತ್ರವನ್ನು ತೆಗೆದುಹಾಕಲು ಆರೋಗ್ಯ ಸಚಿವಾಲಯವು ಕೋವಿನ್ ವೇದಿಕೆಯಲ್ಲಿ ಅಗತ್ಯ ಫಿಲ್ಟರ್‌ಗಳನ್ನು ಸ್ಥಾಪಿಸುತ್ತದೆ” ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಈ ಹಿಂದೆಯೂ ಇದೇ ರೀತಿ ಜಾರಿಯಲ್ಲಿತ್ತು
ಮಾರ್ಚ್ 2021ರಲ್ಲಿ, ಕೆಲವು ರಾಜಕೀಯ ಪಕ್ಷಗಳ ದೂರುಗಳ ನೀಡಿದ ನಂತರ ಚುನಾವಣಾ ಆಯೋಗದ ಸಲಹೆಯ ಮೇರೆಗೆ ಆರೋಗ್ಯ ಸಚಿವಾಲಯವು ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಇದೇ ರೀತಿಯ ಕ್ರಮಗಳನ್ನು ತೆಗೆದುಕೊಂಡಿತು.