ಬೆಂಗಳೂರು : ಬೆಂಗಳೂರು ಕಾರ್ಮಿಕ ಉಪ ವಿಭಾಗಗಳ ವ್ಯಾಪ್ತಿಯಲ್ಲಿ ಕೊವೀಡ್ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ನೀಡಿರುವ ವರ್ಕ ಆರ್ಡರ್ ನ್ನು ಕೂಡಲೇ ರದ್ದುಪಡಿಸಬೇಕೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(CWFI) ಆಗ್ರಹಪಡಿಸಿದೆ.
ಇತ್ತೀಚೆಗೆ ರಾಜ್ಯದಲ್ಲಿ ಇರುವ 30 ಲಕ್ಷ ಕಟ್ಟಡ ಹಾಗೂ 10 ಲಕ್ಷ ವಲಸೆ ಕಾರ್ಮಿಕರಿಗೆ ಕೊವೀಡ್ ಲಸಿಕೆ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಕಟ್ಟಡ ಕಾರ್ಮಿಕ ಮಂಡಳಿ ಪ್ರತಿ ಡೋಸ್ ಗೆ ರೂ 780 ದರವನ್ನು ನಿಗದಿಪಡಿಸಿತ್ತು. ಇದನ್ನು ವಿರೋಧಿಸಿ ಕಟ್ಟಡ ಕಾರ್ಮಿಕ ಸಂಘಟನೆಗಳು ತೀವ್ರ ಹೋರಾಟವನ್ನು ನಡೆಸಿದ್ದವು. ಕಟ್ಟಡ ಕಾರ್ಮಿಕ ಕಲ್ಯಾಣಕ್ಕಾಗಿ ಮೀಸಲಿಟ್ಟ ಸೆಸ್ ಹಣವನ್ನು ರಾಜ್ಯದ 400 ಖಾಸಗಿ ಆಸ್ಪತ್ರೆಗಳಿಗೆ ನೀಡುವ ತೀರ್ಮಾನ ಕೈ ಬಿಡುವಂತೆ ಆಗ್ರಹಿಸಿ, ಸಚಿವರನ್ನು, ವಿಪಕ್ಷ ನಾಯಕರನ್ನ, ಅಧಿಕಾರಿಗಳನ್ನು
ಭೇಟಿ ಮಾಡಿ ಮನವಿ ಸಲ್ಲಿಸಿಲಾಗಿತ್ತು.
ಇದನ್ನು ಓದಿ: ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯ 700 ಕೋಟಿ ರೂ ಖಾಸಗಿ ಆಸ್ಪತ್ರೆಗೆ
ಕಾರ್ಮಿಕರ ಹೋರಾಟದಿಂದ ಕಲ್ಯಾಣ ಮಂಡಳಿ ತನ್ನ ತೀರ್ಮಾನದಿಂದ ಹಿಂದೆ ಸರಿದಿದ್ದು ಎಲ್ಲ ಕಟ್ಟಡ ಮತ್ತು ವಲಸೆ ಕಾರ್ಮಿಕರಿಗೂ ಸರ್ಕಾರದ ವತಿಯಿಂದಲೇ ಉಚಿತ ಲಸಿಕೆ ನೀಡುವುದಾಗಿ ಘೋಷಣೆ ಮಾಡಿತು. ಇದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ತಿಳಿಸಿದ್ದಾರೆ.
ಆದರೆ ಈಗಾಗಲೇ ಬೆಂಗಳೂರು ಆರು ಕಾರ್ಮಿಕ ಉಪವಿಭಾಗ ವ್ಯಾಪ್ತಿಯಲ್ಲಿ 2ಲಕ್ಷ ಲಸಿಕೆಗಳನ್ನು ನೀಡಲು ಮಂಡಳಿಯಿಂದ ರೂ 15.60 ಕೋಟಿ ಯ ವರ್ಕ ಆರ್ಡರನ್ನು ನೀಡಲಾಗಿದೆ. ಮಂಡಳಿಯಿಂದ ನೀಡಲಾದ ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಕೆ.ಮಹಾಂತೇಶ್ ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಮನೆ ಚಲೋ : ಕೊವೀಡ್ 19 ಸಂಕಷ್ಟಕ್ಕೀಡಾದ ಕಟ್ಟಡ ಕಾರ್ಮಿಕ ಕುಟುಂಬಕ್ಕೆ ಪರಿಹಾರ ನೀಡುವ ನೆಪದಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ವ್ಯಯ ಮಾಡಲಾಗಿದೆ. ಕಾರ್ಮಿಕ ಸಚಿವರು, ಮಂಡಳಿ ಅಧಿಕಾರಿಗಳು, ಕಾರ್ಮಿಕ ಅಧಿಕಾರಿಗಳು ವ್ಯಾಪಕ ಭ್ರಷ್ಟಾಚಾರ ನಡೆಸಿದ್ದಾರೆ. ಇದರ ವಿರುದ್ದ ಮತ್ತು ಮಂಡಳಿಯ ಎಲ್ಲ ಸೌಲಭ್ಯಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಸೆಪ್ಟೆಂಬರ್ 20 ರಂದು ಮುಖ್ಯಮಂತ್ರಿ ಮನೆ ಚಲೋ ಹೋರಾಟವನ್ನು ಇತರೆ ಕಾರ್ಮಿಕ ಸಂಘಗಳ ಜತೆ ಸೇರಿ ಸಂಘಟಿಸಲಾಗಿದೆ ಎಂದು ಫೆಡರೇಷನ್ ತಿಳಿಸಿದೆ.