ಮಲೆನಾಡ ಕಾರ್ಮಿಕ ನಾಯಕ ವಿ . ಸುಕುಮಾರ್ – ಅಭಿನಂದನಾ ಕಾರ್ಯಕ್ರಮ | ಜುಲೈ 26

6 ದಶಕಗಳು ತೋಟಕಾರ್ಮಿಕ ಚಳುವಳಿಯನ್ನ ಮುನ್ನಡೆಸಿದ ವಿ. ಸುಕುಮಾರ್ ಅವರಿಗೆ ಈಗ 80 ವರ್ಷ
ಮಲೆನಾಡು ಎಂದರೆ ಇಲ್ಲಿಯ ಅಚ್ಚ ಹಸಿರು, ಪ್ರಕೃತಿ ಸೌಂದರ್ಯ, ಕಾಫಿ ತೋಟಗಳು ಈ ಸೌಂದರ್ಯವನ್ನು ಸವಿಯಲು ಕಣ್ಣೆರಡು ಸಾಲದು. ಈ ಪ್ರಕೃತಿ ಸೌಂದರ್ಯದ ಜೊತೆಗೆ ಬಿಸಿಬಿಸಿ ಕಾಫಿ ಕೈಯಲ್ಲಿದ್ದರೆ ಸ್ವರ್ಯಕ್ಕೆ ಕಿಚ್ಚು ಹಚ್ಚಿದಂತೆಯೇ ಲೆಕ್ಕ. ಕಾಫಿ ಎನ್ನುವುದು ಇಲ್ಲಿ ಮಾತ್ರವಲ್ಲ ಜಗತ್ತಿನ ಎಲ್ಲೆಡೆಗಳಲ್ಲೂ ಒಂದು ಪ್ರಮುಖ ಪಾನೀಯವಾಗಿದೆ. ಅದರಲ್ಲೂ ಸ್ನೇಹ ಬೆಸೆಯಲು, ಮಾತು ಮುಂದುವರೆಸಲು ಎಲ್ಲಕ್ಕಿಂತ ಮುಖ್ಯವಾಗಿ ಬೆಳಗೆದ್ದ ಕೂಡಲು ಒಂದು ಲೋಟ ಕಾಫಿ ಇಲ್ಲದೇ ಬದುತೇಕರ ದಿನಚರಿಗಳು ಆರಂಭವಾಗುವುದಿಲ್ಲ.

-ಹೆಚ್. ಆರ್. ನವೀನ್‌ ಕುಮಾರ್

ಇಷ್ಟನ್ನೆಲ್ಲಾ ಹೇಳಲು ಒಂದು ಕಾರಣವಿದೆ. ನಾವು ಪ್ರತಿ ದಿನ ಕುಡಿಯುವ ಕಾಫಿ, ಬೆಟ್ಟದಿಂದ ನಮ್ಮ ಬಟ್ಟಲಿಗೆ ಬರುವ ಹಿಂದಿನ ಕಥೆ ಅತ್ಯಂತ ರೋಚಕವಾದದ್ದು. ಮಾತ್ರವಲ್ಲ ಇದರ ಹಿಂದೆ ಸಾವಿರಾರು ಕೈಗಳ ಶ್ರಮ ಅಡಗಿರುತ್ತದೆ. ಕಾಫಿಯನ್ನು ತೋಟಗಳಲ್ಲಿ ಬೆಳಯುವಾಗಿನಿಂದ ಹಿಡಿದು ಅದನ್ನು ಸಂಸ್ಕರಿಸಿ ಪುಡಿ ರೂಪದಲ್ಲಿ ನಮ್ಮ ಮನೆಗೆ ಬರುವವರೆಗಿನ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರ ಬದುಕು, ಬೆಳಗೆದ್ದು ಎಸಿ ರೂಂನಲ್ಲಿ ಕುಳಿತು ಕಾಫಿ ಹೀರುವವರಿಗೆ ಸುಲಭದಲ್ಲಿ ಅರ್ಥವಾಗುವುದಿಲ್ಲ. ಅದಕ್ಕಾಗಿ ಅದರ ಹಿನ್ನೆಲೆಯನ್ನು ಸ್ವಲ್ಪ ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಬೇಕಿದೆ.

ಈಗ ನಾನು ಯಾರ ಬಗ್ಗೆ ಮಾತನಾಡಲು ಹೊರಟಿದ್ದೇನೆಂಬುದು ನಿಮಗೆ ಅಂದಾಜಾಗಿರುತ್ತದೆ. ಹೌದು ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬಗ್ಗೆಯೇ, ಅದೇ ಸಂದರ್ಭದಲ್ಲಿ ಅವರನ್ನು ಮನುಷ್ಯರಂತೆ ಕಾಣಲು, ಅವರಿಗೂ ದುಡಿಮೆಯ ಪಾಲನ್ನು ದಕ್ಕಿಸಿಕೊಡಲು ಹೋರಾಡಿದ ಕಾರ್ಮಿಕ ಚಳುವಳಿ ಮತ್ತು ಅದರ ನಾಯಕರ ಬಗ್ಗೆಯೂ ಮಾತನಾಡಲು ಹೊರಟಿದ್ದೇನೆ. ಇನ್ನ ಹೆಚ್ಚು ಲಂಬಿಸದೇ ನೇರವಾಗಿ ವಿಷಯಕ್ಕೆ ಬರುತ್ತೇನೆ.

ಇದನ್ನೂ ಓದಿ: ಜನರಿಗೆ ಮನೆ ಇಲ್ಲದೆ ಇನ್ನೂ ಗುಡಿಸಲಿನಲ್ಲೇ ವಾಸ; ನಾಗಲಕ್ಷ್ಮಿ ಚೌಧರಿ ಅಸಮಾಧಾನ 

ಕರ್ನಾಟಕದ ಮಲೆನಾಡು ಪ್ರದೇಶಗಳಾದ ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಕಾಫಿಯನ್ನು ಹೆಚ್ಚು ಬೆಳೆಯಲಾಗುತ್ತದೆ. ದೇಶದ ಶೇಖಡ 70 ರಷ್ಟು ಕಾಫಿ ಉತ್ಪಾದನೆ ಈ ಮೂರು ಜಿಲ್ಲೆಗಳಲ್ಲಿಯೇ ನಡೆಯುತ್ತದೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ಕಾಫಿಯನ್ನು ಉತ್ಪಾದನೆ ಮಾಡಲು ಅಷ್ಟೇ ದೊಡ್ಡ ಪ್ರಮಾಣದ ಮಾನವ ಸಂಪನ್ಮೂಲವೂ ಬೇಕು. ಅದಕ್ಕಾಗಿ ಈ ಮೂರು ಜಿಲ್ಲೆಗಳಲ್ಲಿ ಕಾಫಿ ಉದ್ಯಮದ ಮೇಲೆ ಅವಲಂಬಿತರಾಗಿ ಲಕ್ಷಾಂತರ ಕಾರ್ಮಿಕರು ದುಡಿಯುತ್ತಿದ್ದಾರೆ.

ಕರ್ನಾಟಕಕ್ಕೆ ಬಾಬಾಬುಡನ್ ಸಂತ ವಿದೇಶದಿಂದ 7 ಬೀಜಗಳನ್ನು ತಂದು ಚಿಕ್ಕಮಗಳೂರು ಜಿಲ್ಲೆಯ ಬಾಬಾಬುಡನ್ ಗಿರಿಯಲ್ಲಿ ನೆಟ್ಟು ಮೊದಲಿಗೆ ಕಾಫಿಯನ್ನು ಅಭಿವೃದ್ದೀಪಡಿಸಿದ ಎಂಬ ಮಾತಿದೆ. ಆನಂತರ ಸ್ಥಳೀಯ ಭೂಮಾಲಕರು ಮತ್ತು ಬ್ರಿಟೀಷರು ಈ ಭಾಗದಲ್ಲಿ ಕಾಫಿ ತೋಡಗಳನ್ನು ಅಭಿವೃದ್ಧಿಪಡಿಸಿದರು. ಅಕ್ಷರಶಹ ಕಾಡೇ ಆಗಿರುತ್ತಿದ್ದ ಕಾಫಿ ತೋಡಗಳಲ್ಲಿ ಕೆಲಸ ಮಾಡುವುದೆಂದರೆ ಅದು ಅತ್ಯಂತ ಸವಾಲಿನ ಕೆಲಸ, ಇಂತಹ ಅಪಾಯಕಾರಿ ಕೆಲಸಗಳಿಗೆ ಸ್ಥಳೀಯರು ಬರುತ್ತಿರಲಿಲ್ಲ ಜೊತೆಗೆ ಇವರಿಗೆ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಅನುಭವವೂ ಇರುತ್ತಿರಲಿಲ್ಲ. ಇಂತಹ ಸಂದರ್ಭದಲ್ಲಿ ಕೇರಳ, ತಮಿಳುನಾಡು ಮತ್ತು ಮಂಗಳೂರು ಭಾಗಗಳಿಂದ ಜನರನ್ನು ಕರೆತಂದು ತೋಟಗಳಲ್ಲಿ ಕೆಲಸ ಮಾಡಿಸುತ್ತಿದ್ದರು.

ಆರಂಭದ ಕಾಲಘಟ್ಟದಲ್ಲಿ ಗುಲಾಮರಿಗಿಂದ ಕ್ಕೆಟ್ಟಾದಾಗಿ ಈ ಕಾರ್ಮಿಕರಿಂದ ದುಡಿಸಿಕೊಳ್ಳಲಾಗುತ್ತಿತ್ತು. ಇವರ ದುಡಿಮೆಗೆ ಸರಿಯಾದ ಕೂಲಿ ಇರುತ್ತಿರಲಿಲ್ಲ, ಕೂಲಿಯೇ ಇಲ್ಲದ ಮೇಲೆ ಇನ್ನು ಇತರೆ ಸೌಲಭ್ಯಗಳನ್ನು ಕೇಳುವಂತೆಯೇ ಇಲ್ಲ. ಇಂತಹ ಸಂದರ್ಭದಲ್ಲಿ ಸಕಲೇಶಪುರದ ಟಾಟಾ ಟೀ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡು ಮೂಲದ ಕಾರ್ಮಿಕರು ಮಾಲೀಕರ ಶೋಷಣೆಯನ್ನು ಸಹಿಸಲಾರದೆ ಸಂಘಕಟ್ಟಿಕೊಳ್ಳಬೇಕೆಂಬ ನಿರ್ಧರಕ್ಕೆ ಬಂದು, ಆಗ ಕೋಲಾರದ ಕೆಜಿಎಫ್‌ನಲ್ಲಿ ಕಮ್ಯೂನಿಸ್ಟ್ ಶಾಸಕರಾಗಿದ್ದ ಕೆ.ಎಸ್.ವಾಸನ್ ಅವರನ್ನು ಸಂಪರ್ಕಿಸಿ 1956 ರಲ್ಲಿ “ಕರ್ನಾಟಕ ಪ್ರೆವೆನ್ಸಿಯಲ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್” ಸ್ಥಾಪಿಸಿಕೊಳ್ಳುತ್ತಾರೆ. ಇಲ್ಲಿಂದ ಮಲೆನಾಡು ಭಾಗದಲ್ಲಿ ಕೆಂಬಾವುಟದ ನೇತೃತ್ವದ ಕಾರ್ಮಿಕ ಚಳುವಳಿ ಆರಂಭವಾಗುತ್ತದೆ.

ಇಂತಹ ಒಂದು ಚಳುವಳಿಯನ್ನು 6 ದಶಕಗಳ ಕಾಲ ಮುನ್ನಡೆಸಿದ ಪ್ರಮುಖ ನಾಯಕರಲ್ಲಿ ವಿ.ಸುಕುಮಾರ್‌ರವರು ಪ್ರಮುಖರು. ಸುಕುಮಾರ್ ಅವರ ತಂದೆ ವೇಲಾಯುದ್ಧನ್ ಕೇರಳದಿಂದ ಚಿಕ್ಕಮಗಳೂರಿನ ತೋಟಗಳಿಗೆ ಕಾರ್ಮಿಕರನ್ನು ಕರೆತಂದು ಕೆಲಸಕ್ಕೆ ಬಿಡುತ್ತಿರುತ್ತಾರೆ. ಆನಂತರ ಅಲ್ಲಿಯೇ ನೆಲೆನಿಂತು ಮೇಸ್ತಿç ಕೆಲಸವನ್ನು ಮುಂದುವರೆಸುತ್ತಾರೆ. ವೇಲಾಯುಧನ್ ಮತ್ತು ವಳ್ಳಿಯಮ್ಮ ದಂಪತಿಗಳಿಗೆ 1945 ನವೆಂಬರ್ 11 ರಂದು ಹುಟ್ಟಿದವರೇ ಸುಕುಮಾರ್. ತಮ್ಮ ಬಾಲ್ಯ ಮತ್ತು ವಿದ್ಯಾಭ್ಯಾಸವನ್ನು ತೋಟ ಕಾರ್ಮಿಕರ ನಡುವೆಯೇ ಚಿಕ್ಕಮಗಳೂರಿನ ಮಹಲ್ ಪ್ರದೇಶದಲ್ಲಿ ಪೂರೈಸುವ ಸುಕುಮಾರ್‌ರವರು ತೋಟಕಾರ್ಮಿಕರ ಕಷ್ಟಗಳನ್ನು ನೋಡುತ್ತಲೇ ಬೆಳೆದರು.

ಅವರು ವಾಸವಾಗಿದ್ದ ಪಕ್ಕದ ತೋಟದಲ್ಲಿ ನಡೆಯುವ ಒಂದು ಗಲಾಟೆಯಿಂದಾಗಿ 1964 ರಲ್ಲಿ ಇವರಿಗೆ ಕೆಂಬಾವುಟದ ತೋಟಕಾರ್ಮಿಕರ ಸಂಪರ್ಕ ಸಿಕ್ಕಿ ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ತಮ್ಮ ಇಡೀ ಜೀವನವನ್ನು ಕಾರ್ಮಿಕರ ಹೇಳಿಗೆಗಾಗಿಯೇ ಮುಡಿಪಿಟ್ಟಿದ್ದಾರೆ. ಈಗ 80 ವರ್ಷಗಳನ್ನು ಪೂರೈಸಿರುವ ಸಂದರ್ಭದಲ್ಲಿ ಇದೇ ಜುಲೈ 26 ರಂದು “ಮಲೆನಾಡ ಕಾರ್ಮಿಕ ನಾಯಕ ಕಾಮ್ರೇಡ್ ವಿ.ಸುಕುಮಾರ್ ಅಭಿನಂದನೆ” ಕಾರ್ಯಕ್ರಮ ಹಾಸನದಲ್ಲಿ ಆಯೋಜನೆಗೊಂಡಿದೆ. ಇದೇ ಸಂದರ್ಭದಲ್ಲಿ ಸುಕುಮಾರ್ ಅವರ ಹೋರಾಟದ ಬದುಕು ಮತ್ತು ಪ್ಲಾಂಟೇಷನ್ ಕಾರ್ಮಿಕ ಚಳುವಳಿಯ ಇತಿಹಾಸವನ್ನು ಒಳಗೊಂಡ ಪುಸ್ತಕವನ್ನೂ ಬಿಡುಗಡೆ ಮಾಡಲಾಗುತ್ತಿದೆ.

ಸುಕುಮಾರ್‌ರವರೇ ಹೇಳಿಕೊಳ್ಳುವಂತೆ ಅತ್ಯಂತ ಹೀನಾಯವಾಗಿ ಹಂದಿಗೂಡುಗಳಿಗಿಂತ ಕೆಟ್ಟದಾಗಿರುವ ಗುಡಿಸಲುಗಳಲ್ಲಿ ಉಳಿದು ತೋಟದ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸಂಘಟಿತರಾಗಿ ಹತ್ತು ಹಲವು ಸಮರಧೀರ ಹೋರಾಟಗಳನ್ನು ನಡೆಸಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವಂತಾದ ಮೇಲೆ ಅವರ ಬದುಕು ಇರುವುದರಲ್ಲಿ ಸ್ವಲ್ಪ ಉತ್ತಮವಾಯಿತು. ಮಾತ್ರವಲ್ಲ ಮಾಲೀಕರು ಎಂದರೆ ಅವರನ್ನು ಕತ್ತೆತ್ತಿಯೂ ಸಹ ನೋಡದ ಕಾರ್ಮಿಕರು, ಕಾರ್ಮಿಕರನ್ನು ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಿದ್ದ ಮಾಲೀಕರು, ಸಂಘಟಿತ ಹೋರಾಟದ ನಂತರ ಒಂದೇ ಟೇಬಲಿನ ಮೇಲೆ ಅದೇ ಕಾರ್ಮಿಕರೆದುರು ಕುಳಿತು ಮಾತುಕತೆ ಮಾಡಬೇಕಾದ ಒಂದು ಸಂದರ್ಭವನ್ನು ನಿರ್ಮಾಣ ಮಾಡುವುದರಲ್ಲಿ ಸಿಐಟಿಯು ನೇತೃತ್ವದ ತೋಟ ಕಾರ್ಮಿಕರ ಸಂಘ ಮತ್ತು ಅದರ ನಾಯಕತ್ವ ನೀಡಿದ್ದ ಸುಕುಮಾರ್ ಸೇರಿದಂತೆ ಹಲವರ ಪರಿಶ್ರಮ ಕಾರ್ಮಿಕರಿಗೆ ಆತ್ಮಭಲವನ್ನು ಹೆಚ್ಚಿಸಿತು.

ಕಾರ್ಮಿಕರ ಸಂಬಳ ಸವಲತ್ತುಗಳು ಮಾತ್ರವಲ್ಲದೆ ಅವರ ದಿನನಿತ್ಯದ ಬದುಕಿನ ಅಗತ್ಯಗಳನ್ನು ಪೂರೈಲು ಮತ್ತು ಘನತೆಯ ಬದುಕನ್ನು ರೂಪಿಸಲು ಹಲವು ಹೋರಾಟಗಳನ್ನು ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಲೀಕರು ಮತ್ತು ಅವರ ಗೂಂಡಾಗಳಿಂದ ತೀರ್ವತರವಾದ ದಾಳಿಗಳನ್ನು ಸುಕುಮಾರ್ ಮತ್ತು ಸಂಘಡಿಗರು ಎದುರಿಸಿದ್ದಾರೆ. ಇಷ್ಟೆಲ್ಲಾ ಆದರೂ ಕಾರ್ಮಿಕರ ಪರವಾಗಿ ಅಚಲವಾದ ದೃಡತೆ ಬರಲು ನನ್ನ ಮೇಲೆ ಕಮ್ಯೂನಿಸ್ಟ್ ಸಿದ್ದಾಂತ ಮತ್ತು ಆ ಚಳುವಳಿಯ ಪ್ರಭಾವವೇ ಕಾರಣವೆಂದು ಸುಕುಮಾರ್ ಅವರೇ ಹೇಳಿದ್ದಾರೆ.

ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ತೋಟಕಾರ್ಮಿಕರನ್ನು ಸಂಘಟಿಸುವುದರ ಜೊತೆಗೆ ಕಾಫಿ ಕ್ಯೂರಿಂಗ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮತ್ತು ಇತರೆ ಸಂಕಷ್ಟದಲ್ಲಿರುವ ಎಲ್ಲಾ ರೀತಿಯ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ನ್ಯಾಯಕೊಡಿಸುವ ಮೂಲಕ ನಿಜವಾದ ಮಲೆನಾಡ ಕಾರ್ಮಿಕ ನಾಯಕರಾಗಿ ಸುಕುಮಾರ್ ರೂಪಗೊಂಡರು.

ಕರ್ನಾಟಕ ಪ್ರೆವೆನ್ಸಿಯಲ್ ಪ್ಲಾಂಟೇಷನ್ ಕಾರ್ಮಿಕರ ಪ್ರಧಾನ ಕಾರ್ಯರ್ದರ್ಶಿ, ಅಧ್ಯಕ್ಷರು, ಆಲ್ ಇಂಡಿಯಾ ಫ್ಲಾಂಟೇಷನ್ ವರ್ಕರ್ಸ್ ಫೆಡರೇಷನ್‌ನ ಉಪಾಧ್ಯಕ್ಷರಾಗಿ ಸಿಐಟಿಯುವಿನ ಅಖಿಲ ಭಾರತ ಜನರಲ್ ಕೌನ್ಸಿಲ್ ಸದಸ್ಯರಾಗಿ 1964 ರಿಂದ ಇಲ್ಲಿಯವರೆಗೂ ಸಿಪಿಐಎಂನ ಸದಸ್ಯರಾಗಿ, ಮಲೆನಾಡು ಪ್ರದೇಶ ಸಮಿತಿಯ ಪಕ್ಷದ ಕಾರ್ಯದರ್ಶಿಯಾಗಿ, ರಾಜ್ಯ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

ಜಾಗತೀಕರಣ, ಉದಾರೀಕರಣ ನೀತಿಗಳಿಂದಾಗಿ ಕೃಷಿ ಆಧುನೀಕರಣಗೊಳ್ಳುತ್ತಿದೆ, ಆಲೋಚನಾ ವಿಧಾನಗಳು ಬದಲಾಗುತ್ತಿವೆ, ಜೀವನ ಶೈಲಿ ಬದಲಾಗುತ್ತಿದೆ. ಆದರೆ ತೋಟಕಾರ್ಮಿಕರ ಬದುಕು ಮತ್ತು ಅವರ ಕೆಲಸ ಇನ್ನೂ ಸರಿಸುಮಾರು ಹಾಗೇ ಇದೆ. ಶಿವರಾಮಕಾರಂತರು ತಮ್ಮ ಕಾದಂಬರಿ ಚೋಮನ ದುಡಿಯಲ್ಲಿ ಕಟ್ಟಿಕೊಟ್ಟಿರುವ ತೋಟ ಕಾರ್ಮಿಕರ ಸ್ಥಿತಿಯನ್ನು ಒಮ್ಮೆ ಎಲ್ಲರೂ ಓದಬೇಕು. ಈ ಕಾರ್ಮಿಕರನ್ನು ಖಾಯಂ ಆಗಿ ನೇಮಕ ಮಾಡಿಕೊಳ್ಳದೇ ಗುತ್ತಿಗೆ ಆಧಾರದಲ್ಲಿ ಆಧುನಿಕ ಜೀತಪದ್ದತಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ.

ಇಂತಹ ಹತ್ತು ಹಲವು ಸವಾಲುಗಳನ್ನು, ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದಕ್ಕಾಗಿ ಚಳುವಳಿಯನ್ನು ರೂಪಿಸಲು ಸುಕುಮಾರ್ ಅವರ 80 ನೇ ವರ್ಷಚರಣೆಯ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಲಾಗುತ್ತಿದೆ. ಅವರ ಅನುಭವಗಳ ಆಧಾರದಲ್ಲಿ ಮುಂದಿನ ಯುವ ತಲೆಮಾರು ಜನಚಳುವಳಿಗಳಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ಶೋಷಣಾ ಮುಕ್ತ ಸಮಾಜದ ನಿರ್ಮಾಣಕ್ಕೆ ದುಡಿಯುತ್ತಾರೆ ಎಂದು ಆಶಿಸೋಣ.

ಇದನ್ನೂ ನೋಡಿ: ಪರಿಸರ ಜಾಗೃತಿ | ‘ಪ್ಲಾಸ್ಟಿಕ್ ಬಳಕೆಯಿಂದ ಜೀವರಾಶಿಗೆ ಅಪಾಯ‘ Janashakthi Media

Donate Janashakthi Media

Leave a Reply

Your email address will not be published. Required fields are marked *